ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?
ಈ ಕೆಲ್ಸದ ಒತ್ತಡದಲ್ಲಿ ಒಂದು ದಿನ ರಜೆ ಸಿಕ್ಕಿದ್ರೆ ಸಾಕು ಅನ್ನಿಸ್ತಿರುತ್ತೆ. ಮಕ್ಕಳಿಂದ ಹಿಡಿದು ದೊಡ್ಡವರವೆರೆಗೆ ಬಹುತೇಕ ಎಲ್ಲರಿಗೂ ರಜೆ ಅಂದ್ರೆ ಮಜಾ. ಆದ್ರೆ ಕೆಲವರಿಗೆ ರಜೆ ಅಂತ್ರೆ ತಲೆನೋವು. ಅವರು ಹಾಲಿಡೇ ಡಿಪ್ರೆಶನ್ (Holiday Depression) ಗೆ ಒಳಗಾಗ್ತಾರೆ.

ಹಾಲಿಡೇ ಡಿಪ್ರೆಷನ್ ಅಂದ್ರೇನು?
ಕೆಲ್ಸಕ್ಕೆ, ಶಾಲೆಗೆ ರಜೆ ಸಿಕ್ಕಿದ್ರೆ ಅದನ್ನು ಖುಷಿಯಿಂದ ಎಂಜಾಯ್ ಮಾಡೋ ಬದಲು ಕೆಲವರು ನೋವು, ಒಂಟಿತನಕ್ಕೆ ಒಳಗಾಗ್ತಾರೆ. ಅದನ್ನು ಹಾಲಿಡೇ ಡಿಪ್ರೆಷನ್ ಅಂತ ಕರೆಯಲಾಗುತ್ತೆ. ರಜಾ ದಿನಗಳಲ್ಲಿ ಒಂಟಿಯಾಗಿರುವವರು ಮಾತ್ರವಲ್ಲ ಕುಟುಂಬಸ್ಥರ ಜೊತೆಗಿರುವವರು ಕೂಡ ಈ ಖಿನ್ನತೆಗೆ ಒಳಗಾಗ್ತಾರೆ.
ಹಾಲಿಡೇ ಡಿಪ್ರೆಷನ್ ಗೆ ಕಾರಣ
ಹಾಲಿಡೇ ಡಿಪ್ರೆಷನ್ ಗೆ ನಾನಾ ಕಾರಣವಿದೆ. ವ್ಯಕ್ತಿ ಎಲ್ಲಿದ್ದಾನೆ, ಯಾವ ಸ್ಥಿತಿಯಲ್ಲಿದ್ದಾನೆ ಎಂಬುದು ಕೂಡ ಮುಖ್ಯವಾಗುತ್ತದೆ. ಅನೇಕರ ಕೌಟುಂಬಿಕ ಜೀವನ ಚೆನ್ನಾಗಿರೋದಿಲ್ಲ. ರಜಾ ದಿನಗಳಲ್ಲಿ ಮನೆಯವರ ಜೊತೆ ಹೆಚ್ಚಿನ ಸಮಯ ಕಳೆಯಬೇಕಾಗುತ್ತದೆ. ಇದು ಅವರ ಬೇಸರವನ್ನು ಹೆಚ್ಚಿಸುತ್ತದೆ. ಸಂಬಂಧವನ್ನು ಮತ್ತಷ್ಟು ಹದಗೆಡಿಸುವ ಸಾಧ್ಯತೆ ಇರುತ್ತದೆ.
ಆರ್ಥಿಕ ಒತ್ತಡ
ರಜೆಯಲ್ಲಿ ಕಾಡುವ ಖಿನ್ನತೆಗೆ ಇನ್ನೊಂದು ಕಾರಣ ಅಂದ್ರೆ ಆರ್ಥಿಕ ಸ್ಥಿತಿ. ರಜೆ ಬರ್ತಿದ್ದಂತೆ ಖರ್ಚು ಹೆಚ್ಚಾಗುತ್ತದೆ. ಪ್ರವಾಸ, ಮದುವೆ, ಪಾರ್ಟಿಗಳಿಗೆ ಜನರು ಭೇಟಿ ನೀಡ್ತಾರೆ. ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದವರು ಇವೆಲ್ಲವನ್ನು ನಿಭಾಯಿಸಲಾಗದೆ ಒತ್ತಡಕ್ಕೆ ಒಳಗಾಗ್ತಾರೆ.
ಸಾಮಾಜಿಕ ಜಾಲತಾಣಗಳ ಪ್ರಭಾವ
ಇತ್ತೀಚಿನ ದಿನಗಳಲ್ಲಿ ಜನರು ಬೇರೆಯವರ ಜೊತೆ ತಮ್ಮನ್ನು ಹೋಲಿಕೆ ಮಾಡಿಕೊಳ್ಳೋದು ಹೆಚ್ಚಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸ್ನೇಹಿತರು, ಸಂಬಂಧಿಕರು ಹಾಕುವ ಪ್ರವಾಸ ಅಥವಾ ಜಾಲಿ ಡೇಗಳ ಫೋಟೋ, ವಿಡಿಯೋ ಇವರ ಮನಸ್ಸನ್ನು ಘಾಸಿಗೊಳಿಸುತ್ತದೆ. ನಮ್ಮಿಂದ ಇದೆಲ್ಲ ಸಾಧ್ಯವಿಲ್ಲ ಎನ್ನುವ ನೋವು ಕಾಡುತ್ತದೆ.
ಒಂಟಿತನ
ಇನ್ನು ಕೆಲವರಿಗೆ ರಜಾ ದಿನಗಳಲ್ಲಿಯೂ ತಮ್ಮ ಕುಟುಂಬಸ್ಥರನ್ನು ಭೇಟಿಯಾಗಲು ಸಾಧ್ಯವಾಗೋದಿಲ್ಲ. ಕುಟುಂಬಸ್ಥರಿಂದ ಬೇರೆಯಾಗಿರುವ ಜನರಿಗೆ ರಜೆ ಉಸಿರುಗಟ್ಟಿಸಿದ ಅನುಭವ ನೀಡುತ್ತದೆ. ಏನು ಮಾಡಿದ್ರೂ ಸಮಯ ದೂಡೋದು ಕಷ್ಟವಾಗುತ್ತದೆ. ಒಂಟಿತನ ಅವರನ್ನು ಡಿಪ್ರೆಷನ್ ಗೆ ನೂಕುತ್ತದೆ.
ಕಳೆದುಕೊಂಡವರ ನೆನಪು
ಸಾಮಾನ್ಯವಾಗಿ ಕೆಲ್ಸದ ದಿನಗಳಲ್ಲಿ ಜನರು ಬ್ಯುಸಿ. ನಿತ್ಯದ ಕೆಲ್ಸದಲ್ಲಿ ಸಮಯ ಕಳೆದಿದ್ದು ಅರಿವಿಗೆ ಬರೋದಿಲ್ಲ. ಅದೇ ರಜಾ ದಿನಗಳಲ್ಲಿ ಮನೆಯಲ್ಲಿ ಖಾಲಿ ಕುಳಿತಾಗ ಕಳೆದುಕೊಂಡವರ ನೆನಪು ಕಾಡುತ್ತದೆ. ಆಪ್ತರ ನೆನಪು ಅವರನ್ನು ನೋವಿಗೆ ನೂಕುತ್ತದೆ.
ಸುಸ್ತು – ಜವಾಬ್ದಾರಿ ಹೊರೆ
ಅನೇಕರು ರಜಾ ದಿನಗಳಲ್ಲಿ ಸಾಮಾನ್ಯ ದಿನಗಳಿಗಿಂತ ಹೆಚ್ಚು ಬ್ಯುಸಿಯಾಗಿರ್ತಾರೆ. ಹಬ್ಬ, ಪಾರ್ಟಿಗಳಿಗೆ ತಯಾರಿ, ಸಂಬಂಧಿಕರ ಭೇಟಿ, ಮಾರ್ಕೆಟ್ ಸುತ್ತಾಟ, ಅಡುಗೆ ಹೀಗೆ ನಾನಾ ಕೆಲಸಗಳು ಅವರನ್ನು ಬೇಸರಗೊಳಿಸುತ್ತದೆ. ಸುಸ್ತು ಕಾಡುತ್ತದೆ.
ಖಿನ್ನತೆ ಲಕ್ಷಣ
ಎಲ್ಲರ ಮಧ್ಯೆ ಇದ್ರೂ ಕಾಡುವ ಒಂಟಿತನ. ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಸಕ್ತಿಯಿಲ್ಲದಿರುವುದು, ಸದಾ ಕಾಡುವ ದುಃಖ, ನೋವು. ಕುಟುಂಬಸ್ಥರು, ಸ್ನೇಹಿತರ ಜೊತೆ ಮಾತನಾಡಲು ಕಿರಿಕಿರಿ. ಅಸಹನೆ, ಕೋಪ. ಅತಿಯಾದ ಹಸಿವು, ಅತೀ ಕಡಿಮೆ ಹಸಿವು, ನಿದ್ರಾಹೀನತೆ, ಅತಿಯಾದ ನಿದ್ರೆ, ನಿತ್ಯದ ಕೆಲ್ಸ ಮಾಡಲಾಗದ ಸ್ಥಿತಿ. ಯಾವುದೇ ವ್ಯಕ್ತಿ ಅಥವಾ ವಿಷ್ಯದ ಬಗ್ಗೆ ಏಕಾಗ್ರತೆ ಕೊರತೆ ಇವೆಲ್ಲವೂ ಹಾಲಿಡೇ ಡಿಪ್ರೆಷನ್ ಲಕ್ಷಣಗಳಾಗಿವೆ.
ಹಾಲಿಡೇ ಡಿಪ್ರೆಷನ್ ಗೆ ಪರಿಹಾರ
ನಿಮ್ಮಲ್ಲಿಯೇ ಪರಿಹಾರವಿದೆ. ಸೋಶಿಯಲ್ ಮೀಡಿಯಾದಿಂದ ದೂರವಿದ್ದು, ಸೂಕ್ತ ದಿನಚರಿ ಪಾಲನೆ ಮಾಡ್ತಾ, ನಿತ್ಯ ವ್ಯಾಯಾಮ ಮಾಡ್ತಾ, ಕಿರಿಕಿರಿ ಎನ್ನಿಸುವ ಸಂಬಂಧಿಕರು – ಸ್ನೇಹಿತರ ಮಧ್ಯೆ ಗಡಿ ಎಳೆದು, ವಾಸ್ತವನ್ನು ಒಪ್ಪಿಕೊಂಡು ನಡೆಯಬೇಕು. ಅಗತ್ಯ ಎನ್ನಿಸಿದ್ರೆ ತಜ್ಞರ ಸಲಹೆ ಪಡೆಯಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

