- Home
- Astrology
- Festivals
- ದೇವರಿಗೆ ಇಡುವ ನೈವೇದ್ಯ ಆರತಿ ಬಳಿಕ ತೆಗೆಯಬೇಕಾ? ರಾತ್ರಿಯಿಡಿ ಇಡಬೇಕಾ, ಶಾಸ್ತ್ರ ಹೇಳುವುದೇನು?
ದೇವರಿಗೆ ಇಡುವ ನೈವೇದ್ಯ ಆರತಿ ಬಳಿಕ ತೆಗೆಯಬೇಕಾ? ರಾತ್ರಿಯಿಡಿ ಇಡಬೇಕಾ, ಶಾಸ್ತ್ರ ಹೇಳುವುದೇನು?
ದೇವರಿಗೆ ನೈವೇದ್ಯ ಇಟ್ಟು ಪೂಜೆ ಮಾಡಲಾಗುತ್ತದೆ. ಆರತಿ ಬಳಿಕ ಈ ನೈವೇದ್ಯವನ್ನು ತೆಗೆಯಬೇಕಾ ಅಥವಾ ರಾತ್ರಿಯಿಡಿ ಇಡಬೇಕಾ? ಪ್ರಸಾದವಾಗಿ ಹಂಚಲು ಶಾಸ್ತ್ರಗಳು ಹೇಳುವುದೇನು? ಗೊಂದಲಗಳಿಗೆ ಇಲ್ಲಿದೆ ಉತ್ತರ.

ಆರತಿ ಬಳಿಕ ನೈವೇದ್ಯ ಯಾವಾಗ ತೆಗೆಯಬೇಕು
ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಪ್ರತಿ ಗಲ್ಲಿ ಗಲ್ಲಿಯಲ್ಲಿ ಗಣೇಶನ ಕೂರಿಸಲಾಗುತ್ತದೆ. ಮನೆ ಮನೆಗಳಲ್ಲೂ ಗಣೇಶನ ಕೂರಿಸಿ ಬಳಿ ವಿಸರ್ಜನೆಗಳು ನಡೆಯುತ್ತದೆ. ಗಣೇಶ ಹಬ್ಬ, ದೀಪಾವಳಿ, ನವರಾತ್ರಿ ಸೇರಿದಂತೆ ಸಾಲು ಸಾಲು ಹಬ್ಬಗಳು ಆಗಮಿಸುತ್ತಿದೆ. ಪ್ರತಿ ಹಬ್ಬ, ಪೂಜೆ ಸಂದರ್ಭದಲ್ಲಿ ಕೆಲವರಿಗೆ ಗೊಂದಲಗಳು ಸೃಷ್ಟಿಯಾಗುತ್ತದೆ. ಮನೆಯಲ್ಲಿ ಪೂಜೆಯನ್ನು ಮನೆಯ ಸದಸ್ಯರೇ ಮಾಡುತ್ತಾರೆ. ಈ ವೇಳೆ ತಮಗೆ ಗೊತ್ತಿರುವ, ಕುಟುಂಬಗಳು, ಹಿರಿಯರು ಪಾಲಿಸಿದ ಸಂಪ್ರದಾಯ ಮುಂದುವರಿಸುತ್ತಾರೆ. ಹಲವು ಬಾರಿ ಇಲ್ಲೇ ಗೊಂದಲಗಳು ಸೃಷ್ಟಿಯಾಗುತ್ತಿದೆ. ಈ ಪೈಕಿ ದೇವರಿಗೆ ನೈವೇದ್ಯ ಅರ್ಪಿಸಿದ ಬಳಿಕ ಯಾವಾಗ ತೆಗೆಯಬೇಕು, ಆರತಿ ಆದ ಬಳಿಕ, ಆರತಿ ಆದ 10 ನಿಮಿಷ ಅಥವಾ ರಾತ್ರಿಯಿಡಿ ಇಡಬೇಕಾ ಅನ್ನೋ ಗೊಂದಲ ಸಹಜ.
ಮನೆಯ ಪೂಜೆ ಸಮಯ
ಪ್ರತಿ ಹಬ್ಬ ಅಥವಾ ಮನೆಯ ವಿಶೇಷ ಪೂಜೆ ಸಂದರ್ಭದಲ್ಲಿ ಮನೆಯ ಸದಸ್ಯರು ಉತ್ತಮ ಘಳಿಗೆಯಲ್ಲಿ ಮಾಡುತ್ತಾರೆ. ಅಥವಾ ತಾವು ಪಾಲಿಸಿಕೊಂಡು ಬಂದ ಸಂಪ್ರದಾಯದ ಪ್ರಕಾರ ಮಾಡುತ್ತಾರೆ. ಇಲ್ಲಿ ನಿರ್ದಿಷ್ಟ ಸಮಯ, ಕಾಲಮಿತಿ ಇರುವುದಿಲ್ಲ. ದೇವರಿಗೆ ನೈವೇದ್ಯ ಅರ್ಪಿಸಿ ಪೂಜೆ, ಆರತಿ ಬಳಿಕ ತೆಗೆಯುತ್ತಾರೆ. ಪ್ರಸಾದವಾಗಿ ಹಂಚುತ್ತಾರೆ. ಇದು ಬಹುತೇಕರ ಮನೆಯ ಪದ್ಧತಿ.
ಶಾಸ್ತ್ರಗಳಲ್ಲಿ ಹೇಳಿರುವುದೇನು
ಶಾಸ್ತ್ರಗಳಲ್ಲಿ ನೀವು ಭಕ್ತಿಯಿಂದ, ಪ್ರೀತಿಯಿಂದ ಅರ್ಪಿಸುವ ಯಾವುದೇ ವಸ್ತು ದೇವರಿಗೆ ನೈವೇದ್ಯ. ಇದನ್ನು ದೇವರಿಗೆ ಅರ್ಪಿಸಿ, ಪೂಜೆ ಸಲ್ಲಿಸಿದ ಬಳಿಕ ತೆಗೆಯಬಹುದು. ನೀವು ಪ್ರೀತಿಯಿಂದ ಅರ್ಪಿಸುವ ವಸ್ತುವನ್ನು ದೇವರು ಸಂಪ್ರೀತನಾಗಿ ಸ್ವೀಕರಿಸುವುದೇ ನೈವೇದ್ಯ. ಭಗವದ್ಗೀತೆಯ ಶ್ಲೋಕದಲ್ಲಿ ಈ ಕುರಿತು ಸ್ಪಷ್ಟನೆ ಇದೆ.
ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ
ಶ್ಲೋಕದಲ್ಲಿರುವಂತೆ ಎಲೆ, ಹೂವು, ಹಣ್ಣು, ನೀರು ಸೇರಿದಂತೆ ಭಕ್ತನು ಭಕ್ತಿಪೂರ್ವಕವಾಗಿ ಅರ್ಪಿಸುವ ಯಾವುದೇ ವಸ್ತು ನೈವೇದ್ಯವಾಗುತ್ತದೆ. ಈ ಮೂಲಕ ಶ್ಲೋಕ ಸ್ಪಷ್ಟವಾಗಿ ನಿಮ್ಮ ಭಕ್ತಿ ಪ್ರಧಾನ ಎಂದು ಹೇಳುತ್ತದೆ.
ಶ್ರೀಮದ್ ಭಾಗವತ ಪುರಾಣ ಹೇಳುವುದೇನು
ಶ್ರೀಮದ್ ಭಾಗವತ ಪುರಾಣದಲ್ಲಿ ನೈವೇದ್ಯ ಅರ್ಪಣೆ ಕುರಿತ ಉಲ್ಲೇಖವಿದೆ. ದೇವರ ವಿಗ್ರಹ ಪೂಜೆ ವೇಳೆ 11ನೇ ಸ್ಕಂದದ 27ನೇ ಅಧ್ಯಾಯದಲ್ಲಿ ಹಾಲು, ತುಪ್ಪ, ಮೊಸರು, ಬೆಲ್ಲ, ಮೋದಕ ಅರ್ಪಿಸುವ ಕುರಿತು ಉಲ್ಲೇಖಿಸಲಾಗಿದೆ. ಭಗವದ್ಗೀತೆಯ 3ನೇ ಅಧ್ಯಾಯದಲ್ಲಿ ದೇವರಿಗೆ ಅರ್ಪಿಸಿದ ನೈವೇದ್ಯವನ್ನು ಬಳಿಕ ಪ್ರಸಾದ ರೂಪದಲ್ಲಿ ಹಂಚುವ ಕುರಿತು ಉಲ್ಲೇಖವಿದೆ. ನೀವು ನೈವೇದ್ಯವನ್ನು ದೇವರಿಗೆ ಅರ್ಪಿಸಿ ಬಳಿಕ ಪೂಜೆ ನಡೆಯುತ್ತದೆ. ಆರತಿ ಬಳಿಕ ಅಥವಾ ಪೂಜೆ ಬಳಿಕ ಇದೇ ನೈವೇದ್ಯವನ್ನು ತೆಗೆದು ಎಲ್ಲರಿಗೂ ಪ್ರಸಾದವಾಗಿ ಹಂಚಬೇಕು. ಇದುರಿಂದ ಪೂಜಾ ಫಲ ಹೆಚ್ಚುತ್ತದೆ ಎಂಬ ಉಲ್ಲೇಖಗಳಿವೆ.
ರಾತ್ರಿಯಿಡಿ ಇಡುವುದು ಉತ್ತಮವಲ್ಲ
ನೈವೇದ್ಯಗಳನ್ನು ರಾತ್ರಿಯಿಡಿ ಇಡುವ ಪದ್ಧತಿ ಉತ್ತಮವಲ್ಲ. ದೇವರಿಗೆ ಅರ್ಪಿಸಿದ ನೈವೇದ್ಯವನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ಹಂಚಿದರೆ ಫಲ ಹೆಚ್ಚು. ಇನ್ನು ಹಾಲು, ತುಪ್ಪ ಸೇರಿದಂತೆ ಹಲವು ವಸ್ತುಗಳು, ಅಥವಾ ಅದರಿಂದ ಮಾಡಿದ ನೈವೇದ್ಯಗಳು ರಾತ್ರಿಯಿಡಿ ಇಟ್ಟರೆ ಹಾಳಾಗುತ್ತದೆ. ಮರುದಿನ ಚೆಲ್ಲಬೇಕಾಗುತ್ತದೆ. ದೇವರ ನೈವೇದ್ಯವನ್ನು ಯಾವ ಭಕ್ತನೂ ಸೇವಿಸದೆ ಚೆಲ್ಲುವುದು ಉತ್ತಮವಲ್ಲ. ಇನ್ನು ರೆಫ್ರಿಜರೇಟರ್‌ನಲ್ಲಿ ಇಟ್ಟು ಮರು ದಿನ ಬಳಕೆ ಮಾಡುವುದು ಉತ್ತಮ ಪದ್ಧತಿಯಲ್ಲ. ಹೀಗಾಗಿ ಪೂಜೆ ಬಳಿಕ ನೈವೇದ್ಯ ಪ್ರಸಾದ ರೂಪದಲ್ಲಿ ಹಂಚುವುದು ಉತ್ತಮ.

