ಹಿರಿಯ ನಟ ಅನಂತ್ ನಾಗ್ ಅವರು 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದರು. ಡಾ. ರಾಜ್‌ಕುಮಾರ್ ನಂತರ ಈ ಪ್ರಶಸ್ತಿ ಪಡೆದ ಎರಡನೇ ಕನ್ನಡ ನಟ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಈ ವೇಳೆ ಮಾತನಾಡಿದ ಅವರು, ತಮ್ಮ 50 ವರ್ಷಗಳ ಸಿನಿಪಯಣದ ಯಶಸ್ಸನ್ನು ಚಿತ್ರರಂಗದ ಎಲ್ಲಾ ಕಾರ್ಮಿಕರಿಗೆ ಅರ್ಪಿಸಿದರು.

ಅಹಮಾದಾಬಾದ್: ಕನ್ನಡ ಹಿರಿಯ ನಟ ಅನಂತ್ ನಾಗ್ ಅವರು 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದರು. ಹಿರಿಯ ನಟ ಅನಂತ್ ನಾಗ್ ಅವರು ಇಂದು ಗುಜರಾತ್‌ನ ಏಕ್ತಾ ನಗರದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ 2024ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸುವ ಸಂದರ್ಭದಲ್ಲಿ ನೆರೆದಿದ್ದ ಎಲ್ಲಾ ಗಣ್ಯರು ಎದ್ದು ನಿಂತು ಗೌರವ ಸೂಚಿಸಿದರು. ಐದು ದಶಕಗಳಿಗೂ ಹೆಚ್ಚು ಕಾಲದ ತಮ್ಮ ವೃತ್ತಿಜೀವನದಲ್ಲಿ ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಗೌರವಿಸಿ ಪ್ರಶಸ್ತಿಯನ್ನು ನೀಡಲಾಗಿದೆ. ಇದರೊಂದಿಗೆ 1995ರಲ್ಲಿ ಡಾ. ರಾಜ್‌ಕುಮಾರ್ ಅವರು ಈ ಪ್ರಶಸ್ತಿಗೆ ಭಾಜನರಾದ ನಂತರ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ಎರಡನೇ ಕನ್ನಡ ನಟ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ.

ನಟನೆ ವೃತ್ತಿ ಎಂದು ಹೇಳುವುದಿಲ್ಲ

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅನಂತ್ ನಾಗ್ ಅವರು, ನಾನು ಇಂತಹ ಸಭೆಗಳಿಗೆ ಹೆಚ್ಚಾಗಿ ಹೋಗಿಲ್ಲ. ಆದರೆ ಇಂದು ನಿಮ್ಮೆಲ್ಲರೊಂದಿಗೆ ಇರುವುದು ನನಗೆ ಬಹಳ ಸಂತಸ ತಂದಿದೆ. ನನ್ನ ಬಾಲ್ಯದಲ್ಲಿ ನಾನು 12 ವರ್ಷದವರೆಗೂ ಆಶ್ರಮ, ಮಠದಲ್ಲಿ ಬೆಳೆದೆ. ನಂತರ ನನ್ನನ್ನು ಮುಂಬೈಗೆ ಕಳುಹಿಸಲಾಯಿತು. ಅಲ್ಲಿ ಬಂಗಾಳದ ಕವಿ ಚೈತನ್ಯ ಮಹಾಪ್ರಭು ಅವರ ನಾಟಕದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. ಅಲ್ಲಿಂದ ನನ್ನ ನಟನಾ ಪಯಣ ಆರಂಭವಾಯಿತು. ಆದರೆ ಇದನ್ನು ವೃತ್ತಿ ಎಂದು ಹೇಳುವುದು ಸರಿಯಲ್ಲ. ಏಕೆಂದರೆ ಆಗ ಭವಿಷ್ಯದಲ್ಲಿ ಏನಾಗುತ್ತದೆ ಎದು ಯಾರಿಗೂ ತಿಳಿದಿರಲಿಲ್ಲ ಎಂದರು.

ಈ ಪ್ರಶಸ್ತಿ ಸಿಕ್ಕಿರುವುದು ನನಗೆ ಒಬ್ಬನಿಗೆ ಅಲ್ಲ. ಈ ಗೌರವ ನನ್ನೊಂದಿಗೆ 50-55 ವರ್ಷ ನಟನಾ ಪ್ರಯಣದಲ್ಲಿ ಕೆಲಸ ಮಾಡಿದ ಎಲ್ಲರಿಗೂ ಸೇರಿದೆ. ನಿರ್ಮಾಪಕರು, ನಿರ್ದೇಶಕರು, ಸಂಭಾಷಣೆಕಾರರು, ಹಾಡುಗಾರರು, ಮೇಕಪ್, ಪ್ರೊಡಕ್ಷನ್ ಮ್ಯಾನೇಜರ್ಗಳು, ಸಹಾಯಕರು, ಸಹಾಯಕ ನಿರ್ದೇಶಕರು ಹಾಗೂ ನಿರಂತರವಾಗಿ ಶ್ರಮಿಸಿದ ಎಲ್ಲರಿಗೂ ಸೇರಿದೆ ಎಂದು ಪ್ರಶಸ್ತಿಯನ್ನು ಅರ್ಪಿಸಿದರು.

ಕಳೆದ 50 ವರ್ಷಗಳಲ್ಲಿ ಇತರ ಭಾಷೆಗಳ ಚಿತ್ರಗಳಲ್ಲಿ ಆಹ್ವಾನ ಬಂದಿತ್ತು. ನಾನು ಅಲ್ಲಿಗೆ ಕರ್ನಾಟಕದ ರಾಯಭಾರಿ ಆಗಿ ಹೋದೆ. ಅಲ್ಲಿ ನನ್ನ ನಟನೆಯ ಪ್ರತಿಭೆಗೆ ಗೌರವಿಸಿದರು. ಹೀಗಾಗಿ ಇತರ ಭಾಷೆಗಳಲ್ಲಿಯೂ ಹಲವು ಚಿತ್ರಗಳಲ್ಲಿ ನಟಿಸಿದ್ದೆ. ಆದರೆ ಅತ್ಯುತ್ತಮ ಅವಕಾಶಗಳು ಕರ್ನಾಟಕದಲ್ಲಿ ಸಿಕ್ಕಿದೆ. ಅದು ನನ್ನ ಕನ್ನಡದಲ್ಲಿ ದೊರೆತಿದ್ದು ಸಂತಸ. ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ಹೆಸರಿನಲ್ಲಿ ಸಿನಿಮಾ ಕೂಡ ಬಂದಿದೆ. ಕರ್ನಾಟಕ ನನಗೆ ಕರ್ಮ ಭೂಮಿ. ನನ್ನ ಪ್ರತಿಭೆಗೆ ಅಪೂರ್ವ ಅವಕಾಶಗಳು ಕರ್ನಾಟಕದಲ್ಲಿ ಸಿಕ್ಕಿತು. ಕಳೆದ ವರ್ಷ ಪದ್ಮ ಭೂಷಣ ಪ್ರಶಸ್ತಿಯನ್ನು ರಾಷ್ಟ್ರಪತಿ ಮುರ್ಮು ಅವರ ಕೈಯಿಂದ ಸ್ವೀಕರಿಸಿದ್ದೆ, ಈ ವರ್ಷ ಇಷ್ಟು ದೊಡ್ಡ ಗೌರವ ಸ್ವೀಕರಿಸುತ್ತಿದ್ದು ಸಂತಸ ತಂದಿದೆ ಎಂದು ಹೇಳಿದರು.