ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಎಚ್‌ಎಎಲ್ ನಿರ್ಮಿತ ಎಲ್‌ಸಿಎ ತೇಜಸ್, ಎಚ್‌ಟಿಟಿ-40 ವಿಮಾನಗಳನ್ನು ವಾಯುಸೇನೆಗೆ ಮತ್ತು ಧ್ರುವ ಎನ್‌ಜಿ ಹೆಲಿಕಾಪ್ಟರ್‌ಗಳನ್ನು ಪವನ್ ಹಂಸ ಸಂಸ್ಥೆಗೆ ಹಸ್ತಾಂತರಿಸಿದರು. ಇದು ರಕ್ಷಣಾ ಕ್ಷೇತ್ರದಲ್ಲಿ ಭಾರತದ ಸ್ವಾವಲಂಬನೆ ಮತ್ತು ಆತ್ಮನಿರ್ಭರತೆಯತ್ತ ಮಹತ್ವದ ಹೆಜ್ಜೆಯಾಗಿದೆ.
ಬೆಂಗಳೂರು ಸೆ.19: ಎಚ್‌ಎಎಲ್ ನಿರ್ಮಿತ ಎರಡು ಸೀಟುಗಳ ಎಲ್‌ಸಿಎ ತೇಜಸ್ ಟ್ರೈನರ್ ವಿಮಾನ ಮತ್ತು ಎಚ್‌ಟಿಟಿ-40 ಬೇಸಿಕ್ ಟ್ರೈನರ್ ವಿಮಾನಗಳನ್ನು ಭಾರತೀಯ ವಾಯುಸೇನೆಗೆ ಹಾಗೂ ಧ್ರುವ ಎನ್‌ಜಿ ಹೆಲಿಕಾಪ್ಟರ್‌ಗಳನ್ನು ಪವನ್ ಹಂಸ ಸಂಸ್ಥೆಗೆ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಹಸ್ತಾಂತರಿಸಿದರು.
ವಾಯುಸೇನೆಗೆ ಬಲ ತುಂಬಿದ ಎಚ್‌ಎಎಲ್‌ನ ಆ ಹೊಸ ಅಸ್ತ್ರಗಳಾವುವು?
ಎಚ್‌ಎಎಲ್‌ನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ವಿಮಾನ ಹಾಗೂ ಹೆಲಿಕಾಪ್ಟರ್‌ಗಳನ್ನು ಹಸ್ತಾಂತರಿಸುವ ಮುನ್ನ ನಡೆದ ಪೂಜೆ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವರೊಂದಿಗೆ ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಉಪಸ್ಥಿತರಿದ್ದರು. ದೇಶದ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ದೇಶಿಯ ವಿಮಾನ ಹಾಗೂ ಹೆಲಿಕಾಪ್ಟರ್‌ಗಳ ಬಳಕೆಯು ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಲಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ರಾಜನಾಥ್ ಸಿಂಗ್, ಭಾರತವು ದೇಶೀಯವಾಗಿ ಅತ್ಯಾಧುನಿಕ ಉಪಕರಣಗಳನ್ನು ತಯಾರಿಸುತ್ತಿದ್ದು, ರಕ್ಷಣಾ ಕ್ಷೇತ್ರದಲ್ಲಿ ‘ಆತ್ಮನಿರ್ಭರತೆ’ಯತ್ತ ದೃಢವಾಗಿ ಮುನ್ನಡೆಯುತ್ತಿದೆ. ರಕ್ಷಣಾ ವಲಯದ ಸಾರ್ವಜನಿಕ ಉದ್ದಿಮೆಗಳಿಗೆ (ಡಿಪಿಎಸ್‌ಯು) ಅಭಿವೃದ್ಧಿ ಹೊಂದಲು ಅವಕಾಶ ನೀಡುವುದು ಮಾತ್ರವಲ್ಲದೆ, ಖಾಸಗಿ ಉದ್ಯಮಗಳಿಗೂ ಸಮಾನ ಅವಕಾಶಗಳನ್ನು ಒದಗಿಸಿ ಪ್ರೋತ್ಸಾಹಿಸಲು ಕ್ರಮಗಳನ್ನು ಕೈಗೊಂಡಿದ್ದೇವೆ ಎಂದರು.
ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಅಗತ್ಯ
ಸಾರ್ವಜನಿಕ ಮತ್ತು ಖಾಸಗಿ ವಲಯಗಳನ್ನು ಸ್ಪರ್ಧಿಗಳಾಗಿ ನೋಡದೆ, ಸಹಯೋಗಿಗಳಾಗಿ ನೋಡಬೇಕಾದ ಅಗತ್ಯವಿದೆ. ಏರೋಸ್ಪೇಸ್ ವಲಯದಲ್ಲಿ ಬೆಳವಣಿಗೆ ಸಾಧಿಸಲು ಸಾರ್ವಜನಿಕ-ಖಾಸಗಿ ವಲಯಗಳ ನಡುವೆ ಹೆಚ್ಚಿನ ಸಮನ್ವಯದ ಅಗತ್ಯವಿದೆ. ಒಟ್ಟಾಗಿ ಕೆಲಸ ಮಾಡುವ ಮೂಲಕ, ನಾವು ಭಾರತದ ಏರೋಸ್ಪೇಸ್ ಕ್ಷೇತ್ರದ ಬೆಳವಣಿಗೆಯನ್ನು ಚುರುಕುಗೊಳಿಸಬಹುದು. ಕೃತಕ ಬುದ್ಧಿಮತ್ತೆ, ಡ್ರೋನ್, ಎಲೆಕ್ಟ್ರಾನಿಕ್ ಯುದ್ಧ ತಂತ್ರಜ್ಞಾನ, ಸೈಬರ್ ತಂತ್ರಜ್ಞಾನಗಳು ಮತ್ತು ಮುಂದಿನ ತಲೆಮಾರಿನ ತಂತ್ರಜ್ಞಾನಗಳ ಬಗ್ಗೆ ಸಂಶೋಧನೆಗಳಿಗೆ ಒತ್ತು ನೀಡಬೇಕು ಎಂದು ರಾಜನಾಥ ಸಿಂಗ್ ಹೇಳಿದರು. ಕಾರ್ಯಕ್ರಮದಲ್ಲಿ ಭಾರತೀಯ ವಾಯುಸೇನೆಯ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.


