ಯಶ್ ಅವರನ್ನು ಯಾಕೆ ನಿರ್ದೇಶನಕ್ಕೆ ಆರಿಸಿಕೊಂಡರು ಅನ್ನುವುದಷ್ಟೇ ಆ ಹೊತ್ತಿನ ಕುತೂಹಲ. ಸಿನಿಮಾ ತಡವಾಗುತ್ತಿದ್ದಂತೆ ಊಹಾಪೋಹಗಳು ಕೇಳಿಬಂದವು. ಯಶ್ ಇಡೀ ಸಿನಿಮಾವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದಾರೆ.

- ಜೋಗಿ

ದೊಡ್ಡವರಿಗೋಸ್ಕರ ಒಂದು ಅದ್ಭುತ ರಮ್ಯ ಕತೆ.. -ಹೀಗೊಂದು ಸಾಲು ಕಾಣಿಸಿಕೊಳ್ಳುತ್ತಿದ್ದಂತೆ ಮಾತು ಶುರುವಾಯಿತು. ಮೊದಲ ಟೀಸರ್ ನೋಡುತ್ತಿದ್ದಂತೆ ಮಾತುಕತೆ ಕಾವೇರಿತು. ತಬಾಹಿ ಹಾಡು ಬರುತ್ತಿದ್ದಂತೆ ಅದನ್ನು ನೋಡಲಿಕ್ಕೆಂದೇ ಎಲ್ಲರೂ ದೊಡ್ಡವರಾದರು. ಟ್ರೇಲರ್ ಬರುವ ಹೊತ್ತಿಗೆ ದೊಡ್ಡವರ ಸಂಖ್ಯೆ ಹೆಚ್ಚಾಯಿತು. ‘ಟಾಕ್ಸಿಕ್’ ಶುರುವಾದಾಗ ಇದ್ದ ನಿರೀಕ್ಷೆಗಳನ್ನೆಲ್ಲ ಟಾಕ್ಸಿಕ್‌ ಚಿತ್ರದ ಟ್ರೇಲರ್ ಸುಳ್ಳು ಮಾಡಿದೆ. ಗೀತು ಮೋಹನದಾಸ್ ನಿರ್ದೇಶನದಲ್ಲಿ ಯಶ್ ನಟಿಸುತ್ತಾರೆ ಅನ್ನುವುದು ಅಂಥ ರೋಚಕ ಸುದ್ದಿಯೇನೂ ಆಗಿರಲಿಲ್ಲ. ಎರಡು ಸಾಧಾರಣ ಬಜೆಟ್ಟಿನ ಬ್ರಿಜ್ ಸಿನಿಮಾಗಳನ್ನಷ್ಟೇ ಗೀತು ಮೋಹನದಾಸ್ ನಿರ್ದೇಶಿಸಿದ್ದರು.

ಯಶ್ ಅವರನ್ನು ಯಾಕೆ ನಿರ್ದೇಶನಕ್ಕೆ ಆರಿಸಿಕೊಂಡರು ಅನ್ನುವುದಷ್ಟೇ ಆ ಹೊತ್ತಿನ ಕುತೂಹಲ. ಸಿನಿಮಾ ತಡವಾಗುತ್ತಿದ್ದಂತೆ ಊಹಾಪೋಹಗಳು ಕೇಳಿಬಂದವು. ಯಶ್ ಇಡೀ ಸಿನಿಮಾವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ನಿರ್ದೇಶಕರಿಗೆ ಸ್ವಾತಂತ್ರ್ಯ ಇಲ್ಲ. ಕತೆಯನ್ನು ತಿದ್ದಿದ್ದಾರೆ, ಚಿತ್ರಕತೆ ತಾವೇ ಬರೆಯುತ್ತಿದ್ದಾರೆ ಎಂದೆಲ್ಲ ಗುಲ್ಲಾಯಿತು. ರಾಯನನ್ನು ಪರಿಚಯಿಸಿದ ಮೊದಲ ಟ್ರೇಲರ್‌ ಬರುತ್ತಿದ್ದಂತೆ ‘ಟಾಕ್ಸಿಕ್’ ಸಣ್ಣವರನ್ನೆಲ್ಲ ದೊಡ್ಡವರನ್ನಾಗಿ ಮಾಡಿತು. ನೋಡುತ್ತಿರುವುದು ದೊಡ್ಡವರ ಕತೆಯೆಂಬುದು ಲೋಕಕ್ಕೆ ಗೊತ್ತಾಯಿತು.

ಯಶ್ ಕೂಡ ತನ್ನ ಗಡಿಗಳನ್ನು ಮೀರುತ್ತಾ ಹೋದದ್ದು ಹೀಗೆಯೇ. ಅವರ ಮೊದಲ ಸಿನಿಮಾ 2007ರಲ್ಲಿ ಬಿಡುಗಡೆಯಾದಾಗ, ಯಶ್ ಹೆಸರು ನಾಲ್ಕನೆಯದೋ ಐದನೆಯದೋ ಆಗಿತ್ತು. ಹತ್ತು ವರ್ಷಗಳ ನಂತರ ‘ಕೆಜಿಎಫ್‌’ ಬರುವ ಹೊತ್ತಿಗೆ ಯಶ್ ಹೆಸರೊಂದೇ ಇಡೀ ಚಿತ್ರವನ್ನು ಗೆಲ್ಲಿಸಲು ಸಾಕಾಗಿತ್ತು. ‘ಕೆಜಿಎಫ್’ ಕೂಡ ಯಶ್ ಚಿತ್ರರಂಗದಲ್ಲಿ ಸಾಗಿ ಬಂದ ದಾರಿಯನ್ನು ಪ್ರತಿಬಿಂಬಿಸುವಂತೆ, ಯಶ್ ಜೀವನಕತೆಯ ಪುಟಗಳಂತೆ ಇತ್ತು. ನಮ್ಮ ಕಣ್ಣೆದುರೇ ಇದ್ದ ಈ ಜಂಬದ ಹುಡುಗ ಎಲ್ಲಿಯ ತನಕ ಹೋಗುತ್ತಾನೋ ನೋಡೋಣ ಅಂತ ಮಾತಾಡುತ್ತಿದ್ದವರತ್ತ ಯಶ್ ತಿರುಗಿಯೂ ನೋಡಲಿಲ್ಲ. ತನ್ನ ಗುರಿ ಇದ್ಯಾವುದೂ ಅಲ್ಲ ಅಂತ ಯಾರೂ ತುಳಿಯದ ದಾರಿಯಲ್ಲಿ, ತನ್ನದೇ ದಾರಿ ಮಾಡಿಕೊಂಡು ನಡೆದು ಹೋದರು.

ಅಲ್ಲಿಯ ತನಕ ಕನ್ನಡ ಚಿತ್ರರಂಗದಲ್ಲಿ ಸ್ಪರ್ಧೆಯಿದ್ದದ್ದು ಇಲ್ಲಿಯೇ ನಟಿಸುತ್ತಿದ್ದ ಸ್ಟಾರುಗಳ ನಡುವೆ. ಸ್ಟಾರ್ ವಾರ್ ಅಂದರೆ ಒಬ್ಬ ನಟನ ಸಿನಿಮಾ ಬಿಡುಗಡೆ ಆಗುತ್ತಿದ್ದಂತೆ ಮತ್ತೊಬ್ಬ ನಟನ ಅಭಿಮಾನಿಗಳು ಗದ್ದಲ ಎಬ್ಬಿಸುವುದು ಎಂದಷ್ಟೇ ಅಂದುಕೊಂಡಿದ್ದರು. ‘ಟಾಕ್ಸಿಕ್’ ಚಿತ್ರದ ಟೀಸರ್‌ನಲ್ಲಿ ಗದ್ದಲ ಮಾಡುತ್ತಿರುವ ಎಲ್ಲರ ನಡುವೆ ಹೆಗಲ ಮೇಲೊಂದು ಗನ್ ಇಟ್ಟುಕೊಂಡು ನಡೆದು ಹೋಗುವ ರಾಯನಂತೆ, ಯಶ್ ಕನ್ನಡ ಚಿತ್ರರಂಗದ ಸೀಮೆಯನ್ನು ದಾಟಿಬಿಟ್ಟರು. ಇವತ್ತಲ್ಲ ನಾಳೆ ವಾಪಸ್ ಬರ್ತಾರೆ ಬಿಡಿ ಅಂತ ಹೇಳಿದವರ ಮಾತು ಕಿವಿಗೆ ಬೀಳದಷ್ಟು ಯಶ್ ದೂರ ಹೋಗಿಬಿಟ್ಟಿದ್ದರು. ಎಲ್ಲರೂ ಯಶ್ ದೊಡ್ಡವರಿಗಾಗಿ ಸಿನಿಮಾ ಮಾಡಿದ್ದಾರಲ್ಲ ಅಂತ ಮಾತಾಡುವ ಹೊತ್ತಿಗೆ ಯಶ್ ನಿಜಕ್ಕೂ ದೊಡ್ಡವರೇ ಆಗಿಬಿಟ್ಟಿದ್ದಾರೆ.

ಕನ್ನಡ ಚಿತ್ರರಂಗ ತನ್ನ ಹೋಮ್ ಪಿಚ್‌ನಲ್ಲೇ ಆಟವಾಡಲು ಹಿಂಜರಿಯುತ್ತಿರುವ ಹೊತ್ತಿಗೆ ಯಶ್ ಅಂತಾರಾಷ್ಟ್ರೀಯ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಟಾಕ್ಸಿಕ್ ಕನ್ನಡ ಮೊದಲ ಗ್ಲೋಬಲ್ ಚಿತ್ರವಾಗಿ ಹೊರಹೊಮ್ಮುತ್ತಿದೆ. ಸರಿಯಾಗಿ ಏಳು ವರ್ಷಗಳ ಹಿಂದೆ ಮಾತಾಡುತ್ತಾ ಯಶ್ ಹೇಳಿದ್ದರು. ‘ನನಗಿರುವುದು ಒಂದೇ ಆಸೆ. ಕನ್ನಡದ ಗಡಿಯನ್ನು ವಿಸ್ತರಿಸಬೇಕು. ನಾವು ಯಾರು ಅನ್ನುವುದನ್ನು ವಿಶ್ವಕ್ಕೆ ತೋರಿಸಬೇಕು. ನನ್ನ ಸ್ಪರ್ಧೆ ಇರುವುದು ನಮ್ಮ ನಮ್ಮ ನಡುವೆ ಅಲ್ಲವೇ ಅಲ್ಲ. ನನ್ನ ಉದ್ದೇಶ ಬೇರೆಯೇ ಇದೆ’. ಅವರು ಸುಳ್ಳು ಹೇಳಿರಲಿಲ್ಲ. ‘ಟಾಕ್ಸಿಕ್’ 12000 ಪ್ಲಸ್ ಸ್ಕ್ರೀನುಗಳಲ್ಲಿ ತೆರೆ ಕಾಣುತ್ತಿದೆ. ಲಯನ್ಸ್-ಗೇಟ್ ‘ಟಾಕ್ಸಿಕ್‌’ನ ಇಂಗ್ಲಿಷ್ ವರ್ಷನ್ ಹಂಚಿಕೆ ಮಾಡುತ್ತಿದೆ. ನಿರ್ಮಾಣದಲ್ಲೂ ಭಾಗಿಯಾಗಿರುವ ಯಶ್ ಅಂತಾರಾಷ್ಟ್ರೀಯ ಹಂಚಿಕೆದಾರರ ಜತೆ ಮಾತಾಡುತ್ತಿದ್ದಾರೆ.

ಯಶ್ ಹೇಳುವುದು ಒಂದೇ ಮಾತು

‘ನನ್ನ ನಾಲ್ಕೂವರೆ ವರ್ಷಗಳನ್ನು ಈ ಸಿನಿಮಾಕ್ಕೆ ಕೊಟ್ಟಿದ್ದೇನೆ. ನಿರ್ದೇಶಕರ ಕನಸಿಗೆ ಜತೆಯಾಗಿ ನಿಂತಿದ್ದೇನೆ. ಅವರ ಕ್ರಿಯೇಟಿವ್ ಜರ್ನಿಗೆ ಬೆಂಬಲವಾಗಿದ್ದೇನೆ. ಅವರು ಸಿನಿಮಾವನ್ನು ಅವರಿಗೆ ಬೇಕಾದಂತೆ ಕಟ್ಟಿದ್ದಾರೆ. ನಾನು ಮೊದಲಿನಿಂದಲೂ ಹಾಗೆಯೇ ಇದ್ದವನು. ಯಾರೇ ದೊಡ್ಡ ಕನಸು ಕಂಡರೂ ನಾನು ಅವರಿಗೆ ಬೆಂಬಲವಾಗಿ ನಿಂತುಬಿಡುತ್ತೇನೆ.’

ಹಿಂತಿರುಗಿ ನೋಡಿದರೆ ಯಶ್ ಮೊದಲಿನಿಂದಲೂ ಹಾಗೇ ಇದ್ದವರು ಅನ್ನುವುದು ಗೊತ್ತಾಗುತ್ತದೆ. ಅವರು ಉದ್ದಕ್ಕೂ ಹೊಸ ನಿರ್ದೇಶಕರ ಜತೆಗೇ ಸಿನಿಮಾ ಮಾಡುತ್ತಾ ಬಂದವರು. ಕತೆಯನ್ನೂ ಎಲ್ಲಕ್ಕಿಂತ ಹೆಚ್ಚು ನಂಬಿದವರು. ಒಂದು ಸಿನಿಮಾ ಶುರುವಾದ ನಂತರ ಇಡೀ ಜಗತ್ತನ್ನೇ ಮರೆತು ಅದರಲ್ಲೇ ಮುಳುಗಿ ಹೋದವರು. ತನಗೆ ಸಂಬಂಧಿಸದ ಸಂಗತಿಗಳನ್ನು ಯಾವತ್ತೂ ಮಾತಾಡದೇ ಉಳಿದವರು. ತನ್ನ ದಾರಿಯನ್ನು ತಾನೇ ಹುಡುಕಿಕೊಳ್ಳುವವರು. ಸೆಲ್ಫ್ ಮೇಡ್ ಶೆಹಜಾದ ಅನ್ನುವ ತನ್ನ ಹಾಡಿನ ಸಾಲನ್ನು ಬದುಕಿದವರು.

‘ಟಾಕ್ಸಿಕ್’ ದೊಡ್ಡವರಿಗಾಗಿ ಇರುವ ಸಿನಿಮಾ ಅಂತ ಚಿತ್ರತಂಡ ಹೇಳಿಕೊಂಡಿದೆ. ಟ್ರೇಲರ್‌ ಕತೆಯನ್ನು ಕಿಂಚಿತ್ತೂ ಬಿಟ್ಟುಕೊಟ್ಟಿಲ್ಲ. ಅಲ್ಲಿ ಬರುವ ಪಾತ್ರಗಳ ವರ್ಚಸ್ಸು, ಆರ್ತನಾದ, ಆತಂಕ, ಸಂಕಟ ಮತ್ತು ಸಂಭ್ರಮಗಳನ್ನು ನೋಡಿದರೆ ಪ್ರತಿಯೊಂದು ಪಾತ್ರಕ್ಕೂ ಅದರಲ್ಲೇ ಆದ ಜೀವನರೇಖೆ ಇರುವಂತೆ ಕಾಣುತ್ತದೆ. ಟ್ರೇಲರ್ ಬರುವ ಹೊತ್ತಿಗೆ ಮೊದಲ ಟೀಸರ್‌ನಲ್ಲಿ ಭಯದಿಂದ ಓಡಿ ಬರುತ್ತಿದ್ದ ಮಕ್ಕಳ ಮುಖ ಮರೆತುಹೋಗಿದೆ. ಚಿತ್ರದಲ್ಲಿ ಎಷ್ಟೊಂದು ಮಕ್ಕಳಿದ್ದಾರೆ ಅಂದರೆ ಇದು ದೊಡ್ಡವರ ಕತೆಯಷ್ಟೇ ಆಗಿರಲು ಸಾಧ್ಯವಿಲ್ಲ. ಫೇರಿ ಟೇಲ್ ಅಂದರೆ ಮಕ್ಕಳಿಗಾಗಿ ಇರುವ ಕತೆ. ಇದು ದೊಡ್ಡವರಿಗಾಗಿ ಇರುವ ಮಕ್ಕಳ ಕತೆ. ಎಷ್ಟೋ ಸಲ ದೊಡ್ಡವರಿಗೆ ಬೇಕಾದ ನೀತಿ ಮಕ್ಕಳ ಕತೆಯಲ್ಲೇ ಇರುತ್ತದೆ. ‘ಟಾಕ್ಸಿಕ್’ ಚಿತ್ರದ ಕುತೂಹಲ ಉಳಿದಿರುವುದು ನೋಡಿರುವ ಟ್ರೇಲರ್‌ನಲ್ಲಿ ಕಂಡ ದೃಶ್ಯಗಳಿಂದ ಅಲ್ಲ, ಗೀತು ಮೋಹನ್‌ದಾಸ್ ಎಂಬ ಪ್ರಜ್ಞಾವಂತ ಹೆಣ್ಣುಮಗಳು ನಮ್ಮ ಜಗತ್ತನ್ನು ಹೇಗೆ ಬೆಚ್ಚಿ ಬೀಳಿಸುವ ಸತ್ಯಗಳನ್ನು ಹೇಳುವ ಮೂಲಕ ಕದಲಿಸುತ್ತಾಳೆ ಎಂಬುದರ ಮೇಲೆ.