ದಿವಂಗತ ರಿಯಲ್ ಸ್ಟಾರ್ ನಟ ಶ್ರೀಹರಿ ಅವರ ಪತ್ನಿ ಹಾಗೂ ಹಿರಿಯ ನಟಿ ಡಿಸ್ಕೋ ಶಾಂತಿ ಆಸ್ಪತ್ರೆ ಬೆಡ್‌ನಲ್ಲಿ ಕಾಣಿಸಿಕೊಂಡಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
ದಿವಂಗತ ರಿಯಲ್ ಸ್ಟಾರ್ ನಟ ಶ್ರೀಹರಿ ಅವರ ಪತ್ನಿ, ಹಿರಿಯ ನಟಿ ಡಿಸ್ಕೋ ಶಾಂತಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎನ್ನುವ ಸುದ್ದಿ ಇದೀಗ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಇತ್ತೀಚೆಗೆ ಅವರು ಆಸ್ಪತ್ರೆಯ ಬೆಡ್‌ನಲ್ಲಿ ಕಾಣಿಸಿಕೊಂಡಿರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೋ ನೋಡಿದ ಸಿನಿ ಅಭಿಮಾನಿಗಳು ಹಾಗೂ ನೆಟ್ಟಿಗರು, ‘ಡಿಸ್ಕೋ ಶಾಂತಿಗೆ ಏನಾಯ್ತು?’ ಎಂದು ಕಂಗಾಲಾಗಿದ್ದಾರೆ.
ಡಿಸ್ಕೋ ಶಾಂತಿ ಆಸ್ಪತ್ರೆಗೆ ದಾಖಲಾಗಿರುವ ಫೋಟೋಗಳು ವೈರಲ್ ಆಗುತ್ತಿದ್ದಂತೆ ಅವರ ಆರೋಗ್ಯದ ಬಗ್ಗೆ ಹಲವು ಚರ್ಚೆಗಳು ಶುರುವಾಗಿದ್ದವು. ಆದರೆ ಈ ಬಗ್ಗೆ ಸ್ವತಃ ಡಿಸ್ಕೋ ಶಾಂತಿಯೇ ಅಪ್‌ಡೇಟ್ ನೀಡಿದ್ದಾರೆ. ಆಸ್ಪತ್ರೆ ಬೆಡ್‌ನಲ್ಲಿರುವ ಫೋಟೋವನ್ನು ಹಂಚಿಕೊಂಡಿರುವ ಅವರು, ‘ಈಗ ನಾನು ಚೆನ್ನಾಗಿದ್ದೇನೆ. ಮನೆಗೂ ತಲುಪಿದ್ದೇನೆ’ ಎಂದು ತಿಳಿಸಿದ್ದಾರೆ.
ಆದರೆ ತಮಗೆ ಇದ್ದಕ್ಕಿದ್ದಂತೆ ಏನಾಯಿತು, ಯಾವ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಾಗಬೇಕಾಯಿತು ಎಂಬುದನ್ನು ಮಾತ್ರ ಡಿಸ್ಕೋ ಶಾಂತಿ ಬಹಿರಂಗಪಡಿಸಿಲ್ಲ. ಸದ್ಯ ಅವರು ಆರೋಗ್ಯವಾಗಿದ್ದು ಮನೆಗೆ ಮರಳಿದ್ದಾರೆ ಎನ್ನುವುದು ಅಭಿಮಾನಿಗಳಿಗೆ ಕೊಂಚ ನೆಮ್ಮದಿ ತಂದಿದೆ. ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಹಲವರು ಆರೋಗ್ಯದ ಬಗ್ಗೆ ಮತ್ತಷ್ಟು ಕಾಳಜಿ ವಹಿಸುವಂತೆ ಸಲಹೆ ನೀಡಿದ್ದಾರೆ.
90ರ ದಶಕದಲ್ಲಿ ಸ್ಪೆಷಲ್ ಸಾಂಗ್ ಅಂದ್ರೆ ಡಿಸ್ಕೋ ಶಾಂತಿ!
ಡಿಸ್ಕೋ ಶಾಂತಿ ಎಂದಾಕ್ಷಣ 90ರ ದಶಕದ ಸಿನಿಪ್ರಿಯರಿಗೆ ನೆನಪಾಗುವುದು ಅವರ ಅದ್ಭುತ ಡ್ಯಾನ್ಸ್ ಹಾಗೂ ಸ್ಪೆಷಲ್ ಸಾಂಗ್‌ಗಳು. ನಾಯಕಿಯಾಗಿ ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡದಿದ್ದರೂ, ಅದಕ್ಕಿಂತಲೂ ಹೆಚ್ಚಿನ ಜನಪ್ರಿಯತೆ ಹಾಗೂ ಅಭಿಮಾನಿ ಬಳಗವನ್ನು ಅವರು ಸಂಪಾದಿಸಿದ್ದರು.
ವಿಶೇಷವಾಗಿ 90ರ ದಶಕದಲ್ಲಿ ಸಿನಿಮಾದಲ್ಲಿ ಸ್ಪೆಷಲ್ ಸಾಂಗ್ ಇದೆ ಎಂದರೆ ಅಲ್ಲಿ ಡಿಸ್ಕೋ ಶಾಂತಿ ಇರಲೇಬೇಕು ಎನ್ನುವಷ್ಟರ ಮಟ್ಟಿಗೆ ಅವರ ಕ್ರೇಜ್ ಇತ್ತು. ‘ಬಂಗಾರು ಕೋಡಿಪೆಟ್ಟ’ ಸೇರಿದಂತೆ ಹಲವು ಸೂಪರ್‌ಹಿಟ್ ಹಾಡುಗಳಲ್ಲಿ ಅವರು ಸ್ಟಾರ್ ಹೀರೋಗಳಿಗೆ ಸರಿಸಮನಾಗಿ ಸ್ಟೆಪ್ ಹಾಕಿ ಗಮನ ಸೆಳೆದಿದ್ದರು.
ಶ್ರೀಹರಿಯನ್ನು ಪ್ರೀತಿಸಿ ಮದುವೆಯಾಗಿದ್ದ ಡಿಸ್ಕೋ ಶಾಂತಿ
ಡಿಸ್ಕೋ ಶಾಂತಿ ಅವರು ಖ್ಯಾತ ನಟ ಹಾಗೂ ರಿಯಲ್ ಸ್ಟಾರ್ ಶ್ರೀಹರಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಮದುವೆಯ ಬಳಿಕ ಅವರು ಸಿನಿಮಾಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಿದರು. 2013ರಲ್ಲಿ ಶ್ರೀಹರಿ ನಿಧನರಾದ ಬಳಿಕವಂತೂ ಸಂಪೂರ್ಣವಾಗಿ ಚಿತ್ರರಂಗದಿಂದ ದೂರ ಉಳಿದರು. ಸದ್ಯ ತಮ್ಮ ಇಬ್ಬರು ಮಕ್ಕಳನ್ನೇ ಕೇಂದ್ರವಾಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ ಡಿಸ್ಕೋ ಶಾಂತಿ. ಇದೇ ವೇಳೆ ಶ್ರೀಹರಿ ಅವರ ಹಿರಿಯ ಪುತ್ರ ಮೇಘಾಂಶ್ ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವುದು ಗೊತ್ತೇ ಇದೆ.
ಸಿನಿಮಾ ರಂಗದಲ್ಲಿ ಬ್ಯುಸಿಯಾಗಿರುವ ಮೇಘಾಂಶ್
ಶ್ರೀಹರಿ ಅವರ ಹಿರಿಯ ಪುತ್ರ ಮೇಘಾಂಶ್, ಕೆಲವು ವರ್ಷಗಳ ಹಿಂದೆ ‘ರಾಜ್‌ದೂತ್’ ಸಿನಿಮಾದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ಬಳಿಕ ‘ಕೋತಿಕೊಮ್ಮಚ್ಚಿ’ ಸಿನಿಮಾದಲ್ಲೂ ನಟಿಸಿದ್ದರು. ಸದ್ಯ ಮೇಘಾಂಶ್ ಕೈಯಲ್ಲಿ ಹಲವು ಪ್ರಾಜೆಕ್ಟ್‌ಗಳಿದ್ದು, ‘ಸ್ಟೂಡೆಂಟ್’, ‘ಆಸ್ಮಾನ್’ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ ಎನ್ನಲಾಗಿದೆ. ಇನ್ನು ಡಿಸ್ಕೋ ಶಾಂತಿ ಆಸ್ಪತ್ರೆಯಿಂದ ಮನೆಗೆ ಮರಳಿರುವ ಸುದ್ದಿ ಅಭಿಮಾನಿಗಳಿಗೆ ಸಮಾಧಾನ ತಂದಿದ್ದು, ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳಲಿ ಎಂದು ಸಿನಿಪ್ರಿಯರು ಹಾರೈಸುತ್ತಿದ್ದಾರೆ.


