ಸಿನಿರಂಗದಲ್ಲಿ ಸಿನಿಮಾ ಟ್ರೆಂಡ್ ಬದಲಾಗುತ್ತಿದ್ದು, ಮಾಸ್‌, ಲವ್‌ ಹಾಗೂ ಆ್ಯಕ್ಷನ್ ಕಥೆಗಳ ಜೊತೆಗೆ ಮೈಥಾಲಾಜಿಕಲ್ ಮತ್ತು ಡಿವೋಶನಲ್ ಸಿನಿಮಾಗಳತ್ತ ಸ್ಟಾರ್ ಹೀರೋಗಳು ಮುಖ ಮಾಡುತ್ತಿದ್ದಾರೆ.

ಸಿನಿರಂಗದಲ್ಲಿ ಸ್ಟಾರ್ ಹೀರೋಗಳು ಇದೀಗ ರೂಟ್ ಬದಲಾಯಿಸುತ್ತಿರುವಂತೆ ಕಾಣುತ್ತಿದೆ. ಮಾಸ್‌, ಲವ್‌, ಆ್ಯಕ್ಷನ್ ಸಿನಿಮಾಗಳ ಜೊತೆಜೊತೆಗೆ ಪೌರಾಣಿಕ ಹಾಗೂ ಭಕ್ತಿ ಪ್ರಧಾನ ಕಥೆಗಳತ್ತವೂ ತೆಲುಗು ಚಿತ್ರರಂಗದ ದೊಡ್ಡ ಸ್ಟಾರ್‌ಗಳು ಹೆಜ್ಜೆ ಇಡುತ್ತಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಟ್ರೆಂಡ್ ಬದಲಾಗುತ್ತಿರುವ ಬೆನ್ನಲ್ಲೇ, ಮುಂದಿನ ದಿನಗಳಲ್ಲಿ ಪ್ರೇಕ್ಷಕರನ್ನು ಭಕ್ತಿಯ ಲೋಕಕ್ಕೆ ಕರೆದೊಯ್ಯುವ ಹಾಗೂ ಪುರಾಣದ ಕಥೆಗಳನ್ನು ಅದ್ಧೂರಿಯಾಗಿ ತೆರೆಗೆ ತರುವ ಪ್ರಯತ್ನಗಳು ಹೆಚ್ಚಾಗುತ್ತಿವೆ. ಹಾಗಾದರೆ ಯಾವ ಸ್ಟಾರ್ ಹೀರೋ ಯಾವ ಮೈಥಾಲಾಜಿಕಲ್ ಅಥವಾ ಡಿವೋಶನಲ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ? ಮುಂದಿನ ಕೆಲವು ವರ್ಷಗಳಲ್ಲಿ ಯಾವ ರೀತಿಯ ಸಿನಿಮಾಗಳ ಹವಾ ಬೀಸಲಿದೆ?

ದೇವರ ಕಥೆಗಳಿಗೆ ಪ್ಯಾನ್ ಇಂಡಿಯಾ ಟಚ್

ಸ್ಟಾರ್ ಹೀರೋಗಳು ದೇವರ ಕಥೆಗಳು, ಫ್ಯಾಂಟಸಿ ಅಂಶಗಳು ಹಾಗೂ ಪೌರಾಣಿಕ ಹಿನ್ನೆಲೆಯ ಕಥೆಗಳ ಮೂಲಕ ಪ್ಯಾನ್ ಇಂಡಿಯಾ ಪ್ರೇಕ್ಷಕರನ್ನು ಸೆಳೆಯಲು ಸಜ್ಜಾಗುತ್ತಿದ್ದಾರೆ. ಮುಂದಿನ ಎರಡು-ಮೂರು ವರ್ಷಗಳಲ್ಲಿ ತೆಲುಗು ಬಾಕ್ಸ್ ಆಫೀಸ್‌ನಲ್ಲಿ ಮೈಥಾಲಾಜಿಕಲ್ ಸಿನಿಮಾಗಳದ್ದೇ ದೊಡ್ಡ ಸದ್ದು ಕೇಳಿಬರುವ ಸಾಧ್ಯತೆ ಕಾಣುತ್ತಿದೆ.

ಚಿರಂಜೀವಿಯ ‘ವಿಶ್ವಂಭರ’

ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ವಿಶ್ವಂಭರ’ ಸಿನಿಮಾ ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿದೆ. ಸೋಷಿಯೊ-ಫ್ಯಾಂಟಸಿ ಜೊತೆಗೆ ಪೌರಾಣಿಕ ಅಂಶಗಳನ್ನು ಒಳಗೊಂಡಿರುವ ಈ ಸಿನಿಮಾವನ್ನು 2027ರ ಸಂಕ್ರಾಂತಿ ವೇಳೆಗೆ ಬಿಡುಗಡೆ ಮಾಡುವ ಯೋಜನೆಯಲ್ಲಿ ಚಿತ್ರತಂಡ ಇದೆ ಎನ್ನಲಾಗಿದೆ. ಅದ್ಧೂರಿ ಸೆಟ್‌ಗಳು, ಫ್ಯಾಂಟಸಿ ಲೋಕ ಹಾಗೂ ಪೌರಾಣಿಕ ಹಿನ್ನೆಲೆಯೊಂದಿಗೆ ಸಿನಿಮಾ ಮೂಡಿಬರುತ್ತಿರುವುದರಿಂದ ‘ವಿಶ್ವಂಭರ’ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ರಾಜಮೌಳಿ-ಮಹೇಶ್ ಬಾಬು ‘ವಾರಣಾಸಿ’

ಇತ್ತ ಎಸ್‌.ಎಸ್‌. ರಾಜಮೌಳಿ ಮತ್ತು ಮಹೇಶ್ ಬಾಬು ಕಾಂಬಿನೇಷನ್‌ನ ‘ವಾರಣಾಸಿ’ ಸಿನಿಮಾದ ಮೇಲೂ ದೇಶಾದ್ಯಂತ ಭಾರೀ ಕುತೂಹಲವಿದೆ. ರಾಮಾಯಣದ ಪ್ರಮುಖ ಘಟ್ಟವೊಂದನ್ನು ಸಿನಿಮಾದಲ್ಲಿ ಅದ್ಧೂರಿಯಾಗಿ ತೆರೆಗೆ ತರುವ ಯೋಜನೆ ಇದೆ ಎನ್ನಲಾಗಿದ್ದು, ಈ ಭಾಗದಲ್ಲಿ ಮಹೇಶ್ ಬಾಬು ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿಯನ್ನು ಚಿತ್ರತಂಡ ಈಗಾಗಲೇ ಹಂಚಿಕೊಂಡಿದೆ. ಸುಮಾರು 20 ನಿಮಿಷಗಳ ಈ ಎಪಿಸೋಡ್ ಸಿನಿಮಾದ ಪ್ರಮುಖ ಹೈಲೈಟ್‌ಗಳಲ್ಲಿ ಒಂದಾಗಲಿದೆ ಎನ್ನಲಾಗುತ್ತಿದೆ.

‘ಜೈ ಹನುಮಾನ್’ ಮೇಲೆ ಹೆಚ್ಚಿದ ನಿರೀಕ್ಷೆ

ರಿಷಬ್ ಶೆಟ್ಟಿ ನಟನೆಯ ಪ್ರಶಾಂತ್ ವರ್ಮಾ ಅವರ ಸಿನಿಮ್ಯಾಟಿಕ್ ಯೂನಿವರ್ಸ್‌ನಿಂದ ಬರಲಿರುವ ‘ಜೈ ಹನುಮಾನ್’ ಕೂಡ ಸದ್ಯದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿದೆ. ಹನುಮಂತನ ಸುತ್ತಮುತ್ತ ಸಾಗುವ ಈ ಕಥೆ ಹಾಗೂ ಸಿನಿಮಾದ ಪೌರಾಣಿಕ ಹಿನ್ನೆಲೆ ಪ್ರೇಕ್ಷಕರ ಗಮನ ಸೆಳೆದಿದೆ. ಅದರಲ್ಲೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರವನ್ನು ದೊಡ್ಡ ಪ್ರಮಾಣದಲ್ಲಿ ತರುವ ಪ್ರಯತ್ನ ನಡೆಯುತ್ತಿರುವುದರಿಂದ ನಿರೀಕ್ಷೆಗಳು ಇನ್ನಷ್ಟು ಹೆಚ್ಚಾಗಿವೆ.

ಪ್ರಭಾಸ್‌ನ ‘ಕಲ್ಕಿ 2’

ರೆಬೆಲ್ ಸ್ಟಾರ್ ಪ್ರಭಾಸ್ ಕೂಡ ಮೈಥಾಲಾಜಿಕಲ್ ಟಚ್ ಇರುವ ಕಥೆಗಳ ಮೂಲಕ ಗ್ಲೋಬಲ್ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ. ‘ಕಲ್ಕಿ 2898 ಎಡಿ’ ಮೂಲಕ ಭಾರತೀಯ ಸಿನಿಮಾರಂಗದಲ್ಲಿ ಹೊಸ ರೀತಿಯ ಪ್ರಯೋಗಕ್ಕೆ ವೇದಿಕೆ ಸಿದ್ಧಪಡಿಸಿದ ಪ್ರಭಾಸ್, ಇದೀಗ ‘ಕಲ್ಕಿ ಪಾರ್ಟ್ 2’ಗಾಗಿ ಸಜ್ಜಾಗುತ್ತಿದ್ದಾರೆ. 2027ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಲ್ಲಿರುವ ಈ ಮೈಥಾಲಾಜಿಕಲ್ ಸೈನ್ಸ್ ಫಿಕ್ಷನ್ ಸಿನಿಮಾದ ಮೇಲೂ ದೊಡ್ಡ ಮಟ್ಟದ ನಿರೀಕ್ಷೆ ಇದೆ.

ಇನ್ನೂ ಹಲವು ಡಿವೋಶನಲ್ ಸಿನಿಮಾಗಳು ಕ್ಯೂನಲ್ಲಿ

ಸ್ಟಾರ್ ಹೀರೋಗಳ ಸಿನಿಮಾಗಳಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ಹಲವು ಡಿವೋಶನಲ್ ಮತ್ತು ಮೈಥಾಲಾಜಿಕಲ್ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ‘ರಾಮಾಯಣ’, ‘ಮಹಾಕಾಳಿ’, ‘ಮಹಾವತಾರ್’ ಸೇರಿದಂತೆ ಹಲವು ಸಿನಿಮಾಗಳು ಭಾರೀ ಪ್ರಮಾಣದ ವಿ.ಎಫ್.ಎಕ್ಸ್. ಹಾಗೂ ಅದ್ಧೂರಿ ದೃಶ್ಯಗಳೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗುತ್ತಿವೆ. ಹೈ-ಎಂಡ್ ವಿ.ಎಫ್.ಎಕ್ಸ್‌, ಪೌರಾಣಿಕ ಕಥೆಗಳು ಹಾಗೂ ಪ್ಯಾನ್ ಇಂಡಿಯಾ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣವಾಗುತ್ತಿರುವ ಈ ಸಿನಿಮಾಗಳು ಥಿಯೇಟರ್‌ನಲ್ಲಿ ಯಾವ ರೀತಿಯ ಅನುಭವ ನೀಡಲಿವೆ ಎಂಬುದು ಈಗ ಕುತೂಹಲದ ವಿಚಾರ.

ಇನ್ನು ಮುಂದಿನ ಎರಡು-ಮೂರು ವರ್ಷಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಮಾಸ್‌, ಆ್ಯಕ್ಷನ್ ಹಾಗೂ ಲವ್‌ಸ್ಟೋರಿಗಳ ಜೊತೆಗೆ ದೇವರು, ಪುರಾಣ ಮತ್ತು ಮೈಥಾಲಾಜಿಕಲ್ ಕಥೆಗಳದ್ದೂ ದೊಡ್ಡ ಹವಾ ಬೀಸುವಂತೆ ಕಾಣುತ್ತಿದೆ. ಸ್ಟಾರ್ ಹೀರೋಗಳು ಪೌರಾಣಿಕ ಪಾತ್ರಗಳತ್ತ ಮುಖ ಮಾಡಿರುವುದು ಚಿತ್ರರಂಗದ ಹೊಸ ಟ್ರೆಂಡ್‌ಗೆ ಮುನ್ನುಡಿ ಬರೆಯುತ್ತಿದೆಯೇ ಎಂಬುದನ್ನು ಕಾದು ನೋಡಬೇಕಿದೆ.