ಬೆಂಗಳೂರಿನ ಬನಶಂಕರಿ ಬಸ್ ಟರ್ಮಿನಲ್ ಜಂಕ್ಷನ್‌ನಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಸಮಗ್ರ ಸರ್ವೇ ನಡೆಸಲು ಸೂಚಿಸಲಾಗಿದೆ.
ಬೆಂಗಳೂರು: ಬನಶಂಕರಿ ಬಸ್ ಟರ್ಮಿನಲ್ ಜಂಕ್ಷನ್‌ನಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ಬನಶಂಕರಿ ಹಾಗೂ ಸುಬ್ರಮಣ್ಯಪುರ ನಡುವೆ ರಸ್ತೆ ಅಗಲೀಕರಣಕ್ಕಾಗಿ ದಕ್ಷಿಣ ಪಾಲಿಕೆ ಆಯುಕ್ತರು ಹಾಗೂ ಸಂಚಾರ ವಿಭಾಗದ ಜಂಟಿ ಆಯುಕ್ತರು ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದರು.
ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ. ಎನ್. ರಮೇಶ್ ಹಾಗೂ ನಗರದ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಬನಶಂಕರಿ ಜಂಕ್ಷನ್ ಸುತ್ತಲಿನ ರಸ್ತೆಗಳಿಗೆ ಭೇಟಿ ನೀಡಿ ಸರ್ವೇ ನಡೆಸಲು ಅಧಿಕಾರಿಗಳಿಗೆ ಸೂಚಿಸಿದರು.
ಟರ್ಮಿನಲ್‌ನ ಹಿಂಭಾಗದಲ್ಲಿ ಪರ್ಯಾಯ ರಸ್ತೆ ಮಾರ್ಗ
ಸುಬ್ರಹ್ಮಣ್ಯಪುರದಿಂದ ಬನಶಂಕರಿ ಕಡೆಗೆ ಆಗಮಿಸುವ ವಾಹನಗಳಿಗೆ ಬನಶಂಕರಿ ಬಿಎಂಟಿಸಿ ಬಸ್ ಟರ್ಮಿನಲ್‌ನ ಹಿಂಭಾಗದಲ್ಲಿ ಪರ್ಯಾಯ ರಸ್ತೆ ಮಾರ್ಗ ಕಲ್ಪಿಸುವ ಕುರಿತು ಚರ್ಚಿಸಲಾಯಿತು. ಇದೇ ಸಂದರ್ಭದಲ್ಲಿ ರಸ್ತೆ ಅಗಲೀಕರಣದಿಂದಾಗಿ ರಸ್ತೆ ಸಂಪರ್ಕ ಹಾಗೂ ಸಂಚಾರದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ವಿವಿಧ ಇಲಾಖೆಗಳ ಸಮನ್ವಯಕ್ಕೆ ಸೂಚನೆ
ಸಾರ್ವಜನಿಕ ಹಿತಾಸಕ್ತಿ ಪರಿಗಣಿಸಿ ಈ ಯೋಜನೆಯ ಕಾರ್ಯಸಾಧ್ಯತೆಯನ್ನು ಸಮಗ್ರವಾಗಿ ಪರಿಶೀಲಿಸಿ, ಅಗತ್ಯ ತಾಂತ್ರಿಕ ಮಾಹಿತಿ ಸಂಗ್ರಹಿಸುವುದರ ಜೊತೆಗೆ ಬೆಂಗಳೂರು ಸಂಚಾರ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಮುಂದಿನ ಅಗತ್ಯ ಕ್ರಮ ಕೈಗೊಳ್ಳುವಂತೆ ಆಯುಕ್ತ ಕೆ. ಎನ್. ರಮೇಶ್ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಡಿಸಿಪಿ ಗೋಪಾಲ್ ಎಂ. ಬ್ಯಾಕೋಡ್ ಹಾಗೂ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ದಟ್ಟಣೆಗೆ ಮುಕ್ತಿ ನೀಡಲು ಕಾರ್ ಪೂಲಿಂಗ್ ಇನ್ನು ಅಧಿಕೃತ? ಸರ್ಕಾರಕ್ಕೆ ಬಿಟಿಪಿ 5 ಪ್ರಮುಖ ಪ್ರಸ್ತಾವನೆ!


