ಹಿರಿಯ ಪತ್ರಕರ್ತ ರಜತ್ ಶರ್ಮಾ ಅವರ 'ಆಪ್ ಕೀ ಅದಾಲತ್' ಕಾರ್ಯಕ್ರಮದಲ್ಲಿ ನಟ ಯಶ್ ಭಾಗವಹಿಸಿದ್ದರು. ಈ ವೇಳೆ, ಶಾರುಖ್ ಖಾನ್ ಅವರ 'ಜೀರೋ' ಚಿತ್ರದ ಜೊತೆ 'ಕೆಜಿಎಫ್' ಚಿತ್ರವನ್ನು ಬಿಡುಗಡೆ ಮಾಡಿದ್ದರ ಹಿಂದಿನ ಕಾರಣವನ್ನು ಕೇಳಿದಾಗ ಯಶ್ ವಿಚಲಿತರಾದರು. ರಜತ್ ಶರ್ಮಾ ಅವರ ಮಾತಿಗೆ ಯಶ್ ನಿರುತ್ತರರಾದ ಪ್ರಸಂಗವನ್ನು ಈ ಲೇಖನ ವಿವರಿಸುತ್ತದೆ.

ಭಾರತದ ಅತ್ಯಂತ ಹೆಸರುವಾಸಿಯಾಗಿರುವ, ಅದರಲ್ಲಿಯೂ ಸಕಾರಾತ್ಮಕವಾದ ಅಂಶಗಳು ಇರುವ ಬೆರಳೆಣಿಕೆಯಷ್ಟು ರಿಯಾಲಿಟಿ ಷೋಗಳಲ್ಲಿ ಒಂದು ಹಿರಿಯ ಪತ್ರಕರ್ತ ರಜತ್​ ಶರ್ಮಾ ಅವರು ನಡೆಸಿಕೊಡುವ ಆಪ್​ ಕೀ ಅದಾಲತ್ (Aap Ki Adalat). ಇದರಲ್ಲಿ ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರು ಬಂದಿದ್ದಾರೆ. ಆ ಸೀಟಿನಲ್ಲಿ ಈಗ ಕುಳಿತವರು ನಟ ಯಶ್​. ಈ ಹಾಟ್​ ಸೀಟ್​ನಲ್ಲಿ ಕುಳಿತ ಕನ್ನಡದ ಮೊದಲ ಸೆಲೆಬ್ರಿಟಿ ಎನ್ನುವ ಹೆಗ್ಗಳಿಕೆ ಅವರದ್ದು. ಈ ಷೋನಲ್ಲಿ ರಜತ್​ ಶರ್ಮಾ (Rajat Sharma) ಅವರು ಕೇಳಿದ ಹಲವು ಪ್ರಶ್ನೆಗಳಿಗೆ ಯಶ್​ ಅವರು ಉತ್ತರಿಸಿದ್ದಾರೆ. ತಮ್ಮ ಸಿನಿಮಾ ಜರ್ನಿ, ಪರ್ಸನಲ್​ ಲೈಫ್​ ಎಲ್ಲವುಗಳ ಮೇಲೆ ನಟ ಬೆಳಕು ಚೆಲ್ಲಿದ್ದಾರೆ.

ಇದರಲ್ಲಿ ಒಂದು ಕುತೂಹಲದ ಪ್ರಶ್ನೆಯನ್ನು ಯಶ್​ ಅವರಿಗೆ ಕೇಳಲಾಗಿದೆ. ಅಷ್ಟಕ್ಕೂ ರಜತ್​ ಶರ್ಮಾ ಅವರು ಯಾವುದೇ ಸೆಲೆಬ್ರಿಟಿ ಈ ಸೀಟಿಗೆ ಬರುವಾಗ, ಅವರ ಪೂರ್ವಪರ ಎಲ್ಲವನ್ನೂ ಸಾಕಷ್ಟು ಅಧ್ಯಯನ ಮಾಡಿರುತ್ತಾರೆ. ಅವರ ಪ್ರತಿಯೊಂದು ವಿಷಯಗಳನ್ನೂ ಅಧ್ಯಯನ ಮಾಡಿ, ಕೆಲವೊಮ್ಮೆ ಮಾತಿನಲ್ಲಿ ಸಿಲುಕಿಸಿಬಿಡುತ್ತಾರೆ. ಅವರು ಕೇಳುವ ಪ್ರಶ್ನೆಗೆ ಎಷ್ಟೋ ಮಂದಿ ಉತ್ತರಿಸಲು ಆಗದೇ ಚಡಪಡಿಸುವುದೂ ಇದೆ. ಆದರೆ ಯಶ್​ ಅವರು ಎಲ್ಲಾ ಪ್ರಶ್ನೆಗಳಿಗೂ ಫಟಾಫಟ್​ ಉತ್ತರ ಕೊಟ್ಟರೂ, ಈ ಒಂದು ಪ್ರಶ್ನೆ ಕೇಳಿದಾಗ, ಸ್ವಲ್ಪ ಸಮಯ ವಿಚಲಿತರಾದರು.

ಶಾರುಖ್​ ಖಾನ್​ ಕುರಿತು ಪ್ರಶ್ನೆ

ಅದೇ ನಟ ಶಾರುಖ್​ ಖಾನ್​ (Shah rukh Khan) ಕುರಿತ ಪ್ರಶ್ನೆ. ನಿಮಗೆ ಶಾರುಖ್​ ಖಾನ್​ ಅಂದ್ರೆ ತುಂಬಾ ಇಷ್ಟವಾಗಿತ್ತಲ್ವಾ ಎಂದಾಗ ಯಶ್​, ಕೂಡಲೇ ಈಗಲೂ ಇಷ್ಟ ಎಂದು ನಕ್ಕರು. ಅದಕ್ಕೆ ರಜತ್​ ಶರ್ಮಾ ಅವರು, ನನಗೆ ತಿಳಿದಿರುವ ಪ್ರಕಾರ, ನೀವು ಶಾರುಖ್​ ಖಾನ್​ ಅವರನ್ನು ಮೀಟ್​ ಮಾಡಲು ಡೇಟ್​ ಕೇಳಿದ್ದರಂತೆ. ಆದರೆ ಅವರು ಕೊಟ್ಟಿರಲಿಲ್ಲವಂತೆ ಎಂದಾಗ ಯಶ್​ ನಕ್ಕರು. ಅಲ್ಲಿಗೇ ಸುಮ್ಮನಾಗದ ರಜತ್​ ಶರ್ಮಾ ಅವರು, ನೀವು ಇದೇ ಕಾರಣಕ್ಕೆ, ಶಾರುಖ್​ ಖಾನ್​ ಅವರ ಚಿತ್ರಕ್ಕೇ ಠಕ್ಕರ್​ ಕೊಟ್ಟಿರಿ ಎನ್ನೋದು ನಿಜನಾ ಎಂದು ಯಶ್​ ಸ್ವಲ್ಪ ಗಲಿಬಿಲಿಗೊಂಡರು. ಅದಕ್ಕೆ ರಜತ್​ ಶರ್ಮಾ ಅವರು, ನೀವು ಅದಕ್ಕಾಗಿಯೇ ಶಾರುಖ್​ ಅವರ ಜೀರೋ ಫಿಲ್ಮ್​ ರಿಲೀಸ್​ ಆದಾಗಲೇ, ನಿಮ್ಮ ಕೆಜಿಎಫ್​ ಚಿತ್ರವನ್ನೂ ರಿಲೀಸ್​ ಮಾಡಿ ಠಕ್ಕರ್​ ಕೊಟ್ಟಿರಂತೆ ಹೌದಾ ಎಂದು ಪ್ರಶ್ನಿಸಿದರು.

ಯಶ್​ ನಿರುತ್ತರ!

ಇದಕ್ಕೆ ಜೋರಾಗಿ ನಕ್ಕ ಯಶ್​ ಅವರು, ಹಾಗೇನೂ ಇಲ್ಲ. ನಮ್ಮದು ಚಿಕ್ಕ ಫಿಲ್ಮ್​, ಶಾರುಖ್​ ಸರ್​ ಅವರದ್ದು ದೊಡ್ಡ ಫಿಲ್ಮ್​. ಠಕ್ಕರ್​ ಏನೂ ಇಲ್ಲ ಎಂದಾಗ, ರಜತ್​ ಶರ್ಮಾ ಅವರು ಅಷ್ಟೇ ಕೂಲಾಗಿ, ನಿಮ್ಮ ಸಿನಿಮಾ 250 ಕೋಟಿ ಗಳಿಸಿತು, ಅವರ ಸಿನಿಮಾ ನೂರು ಕೋಟಿ ಗಳಿಸಿತು ಎಂದಾಗ ಯಶ್​ ನಿರುತ್ತರರಾದರು.