ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದ ನಿರೀಕ್ಷಿತ ಫಲಿತಾಂಶ ಸಿಗದ ಬಳಿಕ ಇದೀಗ ರಾಕಿಂಗ್ ಸ್ಟಾರ್ ಯಶ್‌ ಅವರ ಮುಂದಿನ ದೊಡ್ಡ ಭರವಸೆ ‘ರಾಮಾಯಣ’ ಸಿನಿಮಾದ ಮೇಲಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾದಲ್ಲಿ ಯಶ್‌ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ನಿರ್ಮಾಪಕರಾಗಿಯೂ ಭಾಗವಾಗಿದ್ದಾರೆ.

ಸಾಮಾನ್ಯವಾಗಿ ದೊಡ್ಡ ಸಿನಿಮಾ ಸೋತರೆ ಸ್ಟಾರ್ ಹೀರೋಗಳಿಗೆ ಅಷ್ಟೇನೂ ದೊಡ್ಡ ನಷ್ಟವಾಗುವುದಿಲ್ಲ. ಮತ್ತೊಂದು ಸಿನಿಮಾ ಹಿಟ್ ಕೊಟ್ಟರೆ ಪರಿಸ್ಥಿತಿ ಮತ್ತೆ ಮೊದಲಿನಂತೆಯೇ ಆಗಿಬಿಡುತ್ತದೆ. ಆದರೆ ರಾಕಿಂಗ್ ಸ್ಟಾರ್ ಯಶ್‌ ವಿಚಾರದಲ್ಲಿ ಸನ್ನಿವೇಶ ಸ್ವಲ್ಪ ಭಿನ್ನ. ಕಾರಣ, ಯಶ್‌ ಕೇವಲ ನಟನಾಗಿ ಮಾತ್ರವಲ್ಲದೆ ನಿರ್ಮಾಪಕರಾಗಿಯೂ ಸಕ್ರಿಯರಾಗಿದ್ದಾರೆ. ಹೀಗಾಗಿ ಒಂದು ಸಿನಿಮಾ ಫ್ಲಾಪ್ ಆದರೆ ಅದರ ಪರಿಣಾಮವೂ ದೊಡ್ಡ ಮಟ್ಟದಲ್ಲೇ ಇರುತ್ತದೆ.

ಇದೀಗ ‘ಟಾಕ್ಸಿಕ್’ ಸಿನಿಮಾದ ಸೋಲು ಯಶ್‌ಗೆ ಶಾಕ್ ನೀಡಿದ್ದು, ಅವರ ಎಲ್ಲಾ ನಿರೀಕ್ಷೆಗಳು ‘ರಾಮಾಯಣ’ ಸಿನಿಮಾದ ಮೇಲೆಯೇ ನೆಟ್ಟಿವೆ. ಅದರಲ್ಲೂ ಯಶ್‌ ನಿರ್ವಹಿಸಿರುವ ರಾವಣನ ಪಾತ್ರದ ಮೇಲೆ ಭಾರೀ ನಿರೀಕ್ಷೆ ಮೂಡಿದೆ. ಹಾಗಾದರೆ ‘ರಾಮಾಯಣ’ ಯಶ್‌ಗೆ ಮತ್ತೆ ಗೆಲುವು ತಂದುಕೊಡುತ್ತಾ?

‘ಟಾಕ್ಸಿಕ್’ ಯಶ್‌ಗೆ ಕೊಟ್ಟ ಶಾಕ್!

‘ಟಾಕ್ಸಿಕ್’ ಸಿನಿಮಾದ ಮೂಲಕ ಭಾರತೀಯ ಚಿತ್ರರಂಗದ ಹಲವು ದಾಖಲೆಗಳನ್ನು ಮುರಿಯುವ ಕನಸು ಕಂಡಿದ್ದ ಯಶ್‌ಗೆ ನಿರೀಕ್ಷೆಗೂ ಮೀರಿದ ಶಾಕ್ ಸಿಕ್ಕಿದೆ. ಸಿನಿಮಾ ಬಿಡುಗಡೆಯಾದ ಮೊದಲ ದಿನದಿಂದಲೇ ಮಿಶ್ರ ಪ್ರತಿಕ್ರಿಯೆಗಳು ಕೇಳಿಬಂದಿದ್ದು, ಎರಡನೇ ದಿನಕ್ಕೇ ಚಿತ್ರದ ಫಲಿತಾಂಶದ ಬಗ್ಗೆ ಟ್ರೇಡ್ ವಲಯದಲ್ಲಿ ಚರ್ಚೆಗಳು ಜೋರಾಗಿದ್ದವು.

ಆದರೆ ‘ಟಾಕ್ಸಿಕ್’ನಲ್ಲಿ ಯಶ್‌ ಕೇವಲ ನಾಯಕನಲ್ಲ. ಸಿನಿಮಾದ ನಿರ್ಮಾಪಕರಲ್ಲೂ ಒಬ್ಬರು. ಹೀಗಾಗಿ ಚಿತ್ರದ ಫಲಿತಾಂಶ ಅವರ ಮೇಲೆ ನಟನಾಗಿ ಮಾತ್ರವಲ್ಲ, ನಿರ್ಮಾಪಕರಾಗಿಯೂ ಪರಿಣಾಮ ಬೀರುವಂತಾಗಿದೆ. ಸಾಮಾನ್ಯವಾಗಿ ಯಶ್‌ ಅವರಂತಹ ಸ್ಟಾರ್ ನಟನಿಗೆ ಒಂದು ಸಿನಿಮಾ ಸೋತರೂ ಮತ್ತೊಂದು ಸಿನಿಮಾ ಹಿಟ್ ಆದರೆ ವೃತ್ತಿಜೀವನದಲ್ಲಿ ದೊಡ್ಡ ಬದಲಾವಣೆಯಾಗುವುದಿಲ್ಲ. ಆದರೆ ನಿರ್ಮಾಪಕರಾಗಿಯೂ ಹಣ ಹೂಡಿಕೆ ಮಾಡಿರುವ ಕಾರಣ ‘ಟಾಕ್ಸಿಕ್’ ಸೋಲು ಯಶ್‌ಗೆ ಆರ್ಥಿಕವಾಗಿಯೂ ಹೊಡೆತ ನೀಡಿರುವ ಸಾಧ್ಯತೆ ಇದೆ.

KVN ಜೊತೆ ಸೇರಿ ನಿರ್ಮಿಸಿದ್ದ ಯಶ್

ಕಂಟೆಂಟ್ ಮೇಲಿನ ವಿಶ್ವಾಸದಿಂದ ಯಶ್‌ ಅವರು KVN ಪ್ರೊಡಕ್ಷನ್ಸ್ ಜೊತೆಗೂಡಿ ‘ಟಾಕ್ಸಿಕ್’ ಸಿನಿಮಾವನ್ನು ನಿರ್ಮಿಸಿದ್ದರು. ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿದೆ ಎಂಬ ನಿರೀಕ್ಷೆಯೂ ಇತ್ತು. ಆದರೆ ಬಿಡುಗಡೆಯ ಬಳಿಕ ನಿರೀಕ್ಷಿತ ಫಲಿತಾಂಶ ಸಿಗದ ಕಾರಣ ಇದೀಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಹೀಗಾಗಿ ಯಶ್‌ ಅವರ ಮುಂದಿನ ದೊಡ್ಡ ಭರವಸೆ ‘ರಾಮಾಯಣ’ ಸಿನಿಮಾದ ಮೇಲಿದೆ.

ರಾವಣನಾಗಿ ಯಶ್‌.. ‘ರಾಮಾಯಣ’ ಮೇಲೆ ಎಲ್ಲರ ಕಣ್ಣು!

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದಲ್ಲಿ ಯಶ್‌ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ ಈ ಸಿನಿಮಾದಲ್ಲೂ ಯಶ್‌ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಚಿತ್ರದಲ್ಲಿ ರಣಬೀರ್ ಕಪೂರ್‌ನಂತಹ ದೊಡ್ಡ ಸ್ಟಾರ್ ನಟ ನಾಯಕನಾಗಿ ಇದ್ದರೂ, ‘ರಾಮಾಯಣ’ ಸಿನಿಮಾದ ಪ್ರಮುಖ ಆಕರ್ಷಣೆಗಳಲ್ಲಿ ಯಶ್‌ ನಿರ್ವಹಿಸುತ್ತಿರುವ ರಾವಣನ ಪಾತ್ರವೂ ಒಂದಾಗಿದೆ. ಹೀಗಾಗಿ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಾಗಲು ಯಶ್‌ ಅವರ ಪಾತ್ರವೂ ಪ್ರಮುಖ ಕಾರಣವಾಗಿದೆ.

‘ರಾಮಾಯಣ’ ಹಿಟ್ ಆದರೆ ‘ಟಾಕ್ಸಿಕ್’ ನಷ್ಟ ಮರೆತುಬಿಡ್ತಾರಾ ಯಶ್?

ಇದೀಗ ಯಶ್‌ ಅವರ ಅಭಿಮಾನಿಗಳಷ್ಟೇ ಅಲ್ಲದೆ ಇಡೀ ಭಾರತೀಯ ಸಿನಿಮಾ ಪ್ರೇಕ್ಷಕರು ‘ರಾಮಾಯಣ’ದತ್ತ ಕಣ್ಣಿಟ್ಟಿದ್ದಾರೆ. ದೀಪಾವಳಿ ವೇಳೆಗೆ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಚಿತ್ರ ಹೇಗೆ ಮೂಡಿಬರಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಒಂದು ವೇಳೆ ‘ರಾಮಾಯಣ’ ದೊಡ್ಡ ಹಿಟ್ ಆದರೆ, ‘ಟಾಕ್ಸಿಕ್’ನಿಂದ ಉಂಟಾದ ಹೊಡೆತವನ್ನು ಯಶ್‌ ಮತ್ತೊಂದು ದೊಡ್ಡ ಗೆಲುವಿನ ಮೂಲಕ ಸರಿದೂಗಿಸಿಕೊಳ್ಳುವ ಸಾಧ್ಯತೆಯಿದೆ. ಅದರಲ್ಲೂ ರಾವಣನ ಪಾತ್ರ ಯಶ್‌ ಅವರ ವೃತ್ತಿಜೀವನದಲ್ಲಿ ಮತ್ತೊಂದು ಮೈಲಿಗಲ್ಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ‘ಟಾಕ್ಸಿಕ್’ ಸೋಲಿನ ಬಳಿಕ ಇದೀಗ ಯಶ್‌ ಅವರ ಎಲ್ಲಾ ಭರವಸೆ ‘ರಾಮಾಯಣ’ದ ಮೇಲಿದೆ. ರಾವಣನಾಗಿ ರಾಕಿಂಗ್ ಸ್ಟಾರ್ ಯಾವ ರೀತಿಯಲ್ಲಿ ಮಿಂಚಲಿದ್ದಾರೆ ಎಂಬುದೇ ಸದ್ಯದ ದೊಡ್ಡ ಕುತೂಹಲ!