ಮೋಹಕ ತಾರೆ ರಮ್ಯಾ ಅಲಿಯಾಸ್ ದಿವ್ಯಾ ಸ್ಪಂದನಾ ಈಗ ಎಲ್ಲಿದ್ದಾರೆ? ನಟಿಯಿಂದ ಸಂಸದೆಯಾಗಿ, ಈಗ ನಿರ್ಮಾಪಕಿಯಾಗಿರುವ ಅವರ ಹೊಸ ಜೀವನ, ಸಿನಿಮಾ ಕಂಬ್ಯಾಕ್ ಹಾಗೂ ಮುಂದಿನ ಯೋಜನೆಗಳ ಮಾಹಿತಿ ಇಲ್ಲಿದೆ.
ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿ. ನಂತರ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಸಂಸದೆಯಾದವರು. ಸಿನಿಮಾ ಮತ್ತು ರಾಜಕೀಯ ಎರಡೂ ಕ್ಷೇತ್ರಗಳಲ್ಲೂ ತಮ್ಮದೇ ಛಾಪು ಮೂಡಿಸಿದ್ದ ದಿವ್ಯಾ ಸ್ಪಂದನಾ, ಕನ್ನಡಿಗರಿಗೆ ಹೆಚ್ಚು ಪರಿಚಿತವಾಗಿರುವುದು ಮೋಹಕ ತಾರೆ ‘ರಮ್ಯಾ’ ಎಂದೇ. ಆದರೆ ಈಗ ರಮ್ಯಾ ಅವರ ಜೀವನಶೈಲಿ ಸಿನಿಮಾ ಹಾಗೂ ರಾಜಕೀಯದ ಆ ಎರಡೂ ಹಂತಗಳಿಗಿಂತ ಸಂಪೂರ್ಣ ವಿಭಿನ್ನವಾಗಿದೆ.
ಚಿತ್ರರಂಗದಿಂದಲೂ, ಸಕ್ರಿಯ ಚುನಾವಣಾ ರಾಜಕೀಯದಿಂದಲೂ ಅವರು ಸಂಪೂರ್ಣ ದೂರವಾಗಿಲ್ಲ. ಆದರೆ ಹಿಂದೆ ಇದ್ದಷ್ಟು ಸಕ್ರಿಯವಾಗಿ ಎರಡೂ ಕ್ಷೇತ್ರಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಸದ್ಯ ದಿವ್ಯಾ ಸ್ಪಂದನಾ ಅವರ ಗಮನ ಚಿತ್ರ ನಿರ್ಮಾಣ, ಆಯ್ದ ನಟನೆಯ ಅವಕಾಶಗಳು ಹಾಗೂ ಸಾಮಾಜಿಕ ವಿಚಾರಗಳ ಕುರಿತ ಸಾರ್ವಜನಿಕ ಜಾಗೃತಿ ಕಡೆಗೆ ಹೆಚ್ಚು ನೆಟ್ಟಿದೆ.
ಕನ್ನಡದ ಸ್ಟಾರ್ ನಟಿಯಿಂದ ಸಂಸದೆಯವರೆಗೆ!
ದಿವ್ಯಾ ಸ್ಪಂದನಾ ‘ಅಭಿ’ ಸಿನಿಮಾದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಪುನೀತ್ ರಾಜ್‌ಕುಮಾರ್ ಜೊತೆಗಿನ ಈ ಸಿನಿಮಾ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಉತ್ತಮ ಗುರುತನ್ನು ತಂದುಕೊಟ್ಟಿತು. ನಂತರ ಸಾಲು ಸಾಲು ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನ ಪ್ರಮುಖ ನಾಯಕಿಯರಲ್ಲಿ ಒಬ್ಬರಾಗಿ ಹೊರಹೊಮ್ಮಿದರು. ಕನ್ನಡ ಮಾತ್ರವಲ್ಲದೆ ತಮಿಳು ಚಿತ್ರರಂಗಕ್ಕೂ ಕಾಲಿಟ್ಟ ಅವರು, ‘ಪೊಲ್ಲಾಧವನ್’, ‘ವಾರಣಂ ಆಯಿರಂ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಅಲ್ಲಿಯೂ ಗಮನ ಸೆಳೆದರು.
ಸಿನಿಮಾ ವೃತ್ತಿಜೀವನ ಉತ್ತುಂಗದಲ್ಲಿದ್ದ ಸಮಯದಲ್ಲೇ 2012ರಲ್ಲಿ ಯೂತ್ ಕಾಂಗ್ರೆಸ್ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದರು. 2013ರಲ್ಲಿ ನಡೆದ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆದ್ದು ಸಂಸದೆಯಾದರು. ಆದರೆ 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಇದೇ ಕ್ಷೇತ್ರದಲ್ಲಿ ಸೋಲು ಕಂಡರು. ಬಳಿಕ 2017ರಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಸಾಮಾಜಿಕ ಜಾಲತಾಣ ಹಾಗೂ ಡಿಜಿಟಲ್ ಕಮ್ಯುನಿಕೇಷನ್ಸ್ ವಿಭಾಗದ ಪ್ರಮುಖ ಜವಾಬ್ದಾರಿಯನ್ನು ವಹಿಸಿಕೊಂಡರು.
ಆದರೆ 2019ರ ಲೋಕಸಭಾ ಚುನಾವಣೆಯ ಬಳಿಕ ಅವರ ಹೈ-ಪ್ರೊಫೈಲ್ ರಾಜಕೀಯ ಪಾತ್ರಕ್ಕೆ ತೆರೆ ಬಿತ್ತು. ಆ ಬಳಿಕ ಸಕ್ರಿಯ ರಾಜಕೀಯದಿಂದ ಕೆಲಕಾಲ ದೂರ ಉಳಿದ ಅವರು, 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕರಾಗಿ ಮತ್ತೆ ಕಾಣಿಸಿಕೊಂಡರು. ಆದರೆ ಪೂರ್ಣಪ್ರಮಾಣದ ಚುನಾವಣಾ ರಾಜಕೀಯಕ್ಕೆ ಮರಳಿಲ್ಲ.
ನಟಿಯಾಗಿ ಅಲ್ಲ.. ನಿರ್ಮಾಪಕಿಯಾಗಿ ಮತ್ತೆ ಸಿನಿಮಾ ಲೋಕಕ್ಕೆ!
ರಾಜಕೀಯದಿಂದ ಸ್ವಲ್ಪ ದೂರವಾದ ಬಳಿಕ ದಿವ್ಯಾ ಸ್ಪಂದನಾ ಮತ್ತೆ ಸಿನಿಮಾದತ್ತ ಮುಖ ಮಾಡಿದರು. ಆದರೆ ಈ ಬಾರಿ ಕ್ಯಾಮೆರಾ ಮುಂದೆ ನಾಯಕಿಯಾಗಿ ಅಲ್ಲ.. ಕ್ಯಾಮೆರಾ ಹಿಂದಿನ ನಿರ್ಮಾಪಕಿಯಾಗಿ!
ಅವರು AppleBox Studios ಎಂಬ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದರು. ಈ ಬ್ಯಾನರ್ ಅಡಿಯಲ್ಲಿ ರಾಜ್ ಬಿ. ಶೆಟ್ಟಿ ನಿರ್ದೇಶನದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾವನ್ನು ನಿರ್ಮಿಸಿದರು. ಇದರ ಜೊತೆಗೆ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದರು. ಹಲವು ವರ್ಷಗಳ ಬಳಿಕ ರಮ್ಯಾ ಅವರನ್ನು ತೆರೆ ಮೇಲೆ ಕಂಡ ಅಭಿಮಾನಿಗಳಿಗೆ ಈ ಸಣ್ಣ ಪಾತ್ರವೂ ವಿಶೇಷವಾಗಿತ್ತು.
ರಮ್ಯಾ ಮತ್ತೆ ಹೀರೋಯಿನ್ ಆಗಿ ಬರ್ತಾರಾ?
ರಮ್ಯಾ ಮತ್ತೆ ಪೂರ್ಣ ಪ್ರಮಾಣದ ನಾಯಕಿಯಾಗಿ ಸಿನಿಮಾಗೆ ಕಂಬ್ಯಾಕ್ ಮಾಡುತ್ತಾರೆ ಎಂಬ ಚರ್ಚೆ ಹಲವು ವರ್ಷಗಳಿಂದ ನಡೆಯುತ್ತಲೇ ಇದೆ. ಅಭಿಮಾನಿಗಳೂ ಅವರ ರೀ-ಎಂಟ್ರಿಗಾಗಿ ಕಾದಿದ್ದಾರೆ. ಆದರೆ ಕೇವಲ ತೆರೆ ಮೇಲೆ ಕಾಣಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಸಿನಿಮಾ ಮಾಡಲು ತಾವು ಸಿದ್ಧರಿಲ್ಲ ಎಂಬುದನ್ನು ರಮ್ಯಾ ಸ್ಪಷ್ಟಪಡಿಸಿದ್ದಾರೆ.
2025ರಲ್ಲಿ ‘Cinema Express’ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಕಂಬ್ಯಾಕ್ ಕುರಿತು ಮಾತನಾಡಿದ್ದ ಅವರು, 'ನನ್ನ ಕಂಬ್ಯಾಕ್ ಇನ್ನೂ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯೇ. ಸ್ಕ್ರಿಪ್ಟ್‌ಗಳನ್ನು ಕೇಳುತ್ತಿದ್ದೇನೆ. ಶೀಘ್ರದಲ್ಲೇ ಸೂಕ್ತವಾದ ಕಥೆ ಸಿಗುತ್ತದೆ ಎಂಬ ನಿರೀಕ್ಷೆಯಿದೆ' ಎಂದು ಹೇಳಿದ್ದರು. ಅಲ್ಲದೆ, ತಮಗೆ ಬಲವಾದ ಕಥೆ ಮತ್ತು ಉತ್ತಮವಾಗಿ ಬರೆಯಲ್ಪಟ್ಟ ಪಾತ್ರಗಳೇ ಮುಖ್ಯ. ಹಾಗಾಗಿ ಸಿನಿಮಾಗಳ ಆಯ್ಕೆಯಲ್ಲಿ ತಾವು ಸಾಕಷ್ಟು ಚೂಸಿ ಆಗಿರುವುದಾಗಿ ಅವರು ತಿಳಿಸಿದ್ದಾರೆ.
ಸಿನಿಮಾ, ರಾಜಕೀಯದಾಚೆಗೂ ರಮ್ಯಾ ಫೋಕಸ್!
ಇತ್ತೀಚಿನ ದಿನಗಳಲ್ಲಿ ದಿವ್ಯಾ ಸ್ಪಂದನಾ ಸಿನಿಮಾ ಮತ್ತು ರಾಜಕೀಯ ಮಾತ್ರವಲ್ಲದೆ ಸಾಮಾಜಿಕ ವಿಚಾರಗಳ ಕುರಿತೂ ತಮ್ಮ ಧ್ವನಿಯನ್ನು ಬಳಸುತ್ತಿದ್ದಾರೆ. ವಿಶೇಷವಾಗಿ ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದ ಮೆನೋಪಾಸ್ ಹಾಗೂ ಪೆರಿಮೆನೋಪಾಸ್ ಕುರಿತು ಜಾಗೃತಿ ಮೂಡಿಸುವ ಕೆಲಸದಲ್ಲಿ ಅವರು ಮಾತನಾಡಿದ್ದಾರೆ. ಮಹಿಳೆಯರ ಆರೋಗ್ಯ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂಬ ಸಂದೇಶವನ್ನೂ ನೀಡಿದ್ದಾರೆ.
ಹಾಗಾದರೆ ದಿವ್ಯಾ ಸ್ಪಂದನಾ ಈಗ ಎಲ್ಲಿದ್ದಾರೆ?
ಒಂದು ಕಾಲದಲ್ಲಿ ನಿರಂತರವಾಗಿ ಸಿನಿಮಾಗಳಲ್ಲಿ ಕಾಣಿಸಿಕೊಂಡ ಸ್ಟಾರ್ ನಟಿ.. ನಂತರ ಸಂಸದೆಯಾಗಿ ರಾಜಕೀಯದಲ್ಲಿ ಸದ್ದು ಮಾಡಿದ ನಾಯಕಿ.. ಇವೆರಡೂ ಹಂತಗಳಿಂದ ರಮ್ಯಾ ಇದೀಗ ಸ್ವಲ್ಪ ದೂರ ಸರಿದಿದ್ದಾರೆ. ಆದರೆ ಚಿತ್ರರಂಗವನ್ನು ಸಂಪೂರ್ಣವಾಗಿ ಬಿಟ್ಟಿಲ್ಲ. ನಿರ್ಮಾಪಕಿಯಾಗಿ ಸಿನಿಮಾ ಲೋಕದ ಜೊತೆಗಿನ ನಂಟನ್ನು ಮುಂದುವರಿಸಿದ್ದಾರೆ. ಸೂಕ್ತವಾದ, ಬಲವಾದ ಪಾತ್ರ ಸಿಕ್ಕರೆ ಮತ್ತೆ ನಟನೆಯತ್ತ ಬರಲು ಬಾಗಿಲು ತೆರೆದಿಟ್ಟಿದ್ದಾರೆ. ಜೊತೆಗೆ ಸಾಮಾಜಿಕ ವಿಚಾರಗಳ ಕುರಿತೂ ತಮ್ಮ ಧ್ವನಿಯನ್ನು ಮುಂದುವರಿಸುತ್ತಿದ್ದಾರೆ. ಹೀಗಾಗಿ ರಮ್ಯಾ ಅವರ ಜೀವನದಲ್ಲಿ ಸಿನಿಮಾ ಮತ್ತು ರಾಜಕೀಯದ ಅಧ್ಯಾಯಗಳು ಮುಗಿದಿಲ್ಲ.. ಬದಲಾಗಿ ಹೊಸ ರೂಪದಲ್ಲಿ ಮುಂದುವರಿಯುತ್ತಿವೆ ಎನ್ನಬಹುದು.


