Reba Monica John Baby Girl: ʻರತ್ನನ್‌ ಪ್ರಪಂಚʼ ಸಿನಿಮಾ ಮೂಲಕ ಕನ್ನಡಿಗರ ಮನಗೆದ್ದ ನಟಿ ರೆಬಾ ಮೋನಿಕಾ ಜಾನ್. ತಮಿಳಿನಲ್ಲಿ ವಿಜಯ್ ಜೊತೆ ನಟಿಸಿದ್ದ ‘ಬಿಗಿಲ್’ ಚಿತ್ರದ ಪಾತ್ರ ಕೂಡ ರೆಬಾಗೆ ದೊಡ್ಡ ಹೆಸರು ತಂದುಕೊಟ್ಟಿತ್ತು.

ʻರತ್ನನ್‌ ಪ್ರಪಂಚʼ ಸಿನಿಮಾ ಮೂಲಕ ಕನ್ನಡಿಗರ ಮನಗೆದ್ದ ನಟಿ ರೆಬಾ ಮೋನಿಕಾ ಜಾನ್. ತಮಿಳಿನಲ್ಲಿ ವಿಜಯ್ ಜೊತೆ ನಟಿಸಿದ್ದ ‘ಬಿಗಿಲ್’ ಚಿತ್ರದ ಪಾತ್ರ ಕೂಡ ರೆಬಾಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. ರೆಬಾ ಮೊದಲ ಬಾರಿಗೆ ಕ್ಯಾಮರಾ ಮುಂದೆ ಬಂದಿದ್ದು ಒಂದು ಟೆಲಿವಿಷನ್ ಶೋ ಮೂಲಕ. 2022ರಲ್ಲಿ ಅವರು ಜೋಮನ್ ಜೋಸೆಫ್ ಅವರನ್ನು ಮದುವೆಯಾಗಿದ್ದರು.

ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಈ ಹಿಂದೆ ತಿಳಿಸಿದ್ದರು. ಈಗ, ತಮಗೆ ಹೆಣ್ಣು ಮಗು ಜನಿಸಿರುವ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಜುಲೈ 22ರಂದು ಇವರಿಗೆ ಮಗಳು ಹುಟ್ಟಿದ್ದಾಳೆ. ಈ ಹೊಸ ಸನ್ನಿವೇಶಕ್ಕೆ ಹೊಂದಿಕೊಳ್ಳುತ್ತಿದ್ದ ಕಾರಣ, ಈ ಖುಷಿ ಸುದ್ದಿಯನ್ನು ಹಂಚಿಕೊಳ್ಳಲು ತಡವಾಯಿತು ಎಂದು ರೆಬಾ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

"ಹಲೋ ವರ್ಲ್ಡ್, ನಮ್ಮ ಪುಟ್ಟ ರಾಜಕುಮಾರಿ ಇಲ್ಲಿದ್ದಾಳೆ.... ಕಿಯಾರಾ ಜೋಸೆಫ್... ನಮ್ಮ ಬದುಕಿಗೆ ಬೆಳಕಾಗಿ ಬಂದ ನಮ್ಮ ಮಗಳು... ಕಳೆದ ಕೆಲವು ದಿನಗಳಿಂದ ನಾವು ಜೀವನದ ಈ ಹೊಸ ಹಂತವನ್ನು ಅರ್ಥಮಾಡಿಕೊಳ್ಳುತ್ತಾ, ನಮ್ಮ ಈ ಪುಟ್ಟ ದೇವತೆಯನ್ನು ಹತ್ತಿರದಿಂದ ತಿಳಿಯುತ್ತಾ, ಪ್ರತಿ ಕ್ಷಣವನ್ನೂ ಆನಂದಿಸುತ್ತಿದ್ದೆವು."

ಪ್ರೀತಿ ಮತ್ತು ಆಶೀರ್ವಾದ ಇರಲಿ

"ಒಂದು ಜೀವವನ್ನು ತನ್ನ ದೇಹದೊಳಗೆ ಬೆಳೆಸುವ ಶಕ್ತಿ ಮಹಿಳೆಯ ದೇಹಕ್ಕಿದೆ ಎನ್ನುವುದು ನಿಜಕ್ಕೂ ಒಂದು ಅದ್ಭುತ. ಕಳೆದ ಒಂಬತ್ತು ತಿಂಗಳು ಅವಳು ನನಗೆ ಪ್ರೀತಿ ಮತ್ತು ಕಾಳಜಿಯನ್ನು ಮಾತ್ರ ನೀಡಿದ್ದಾಳೆ. ಈಗ ಅವಳು ನಮ್ಮ ಕೈಯಲ್ಲಿದ್ದಾಳೆ. ಇನ್ನು ಮುಂದೆ ನಮ್ಮ ಕಣ್ಣುಗಳ ಮೂಲಕ ಅವಳಿಗೆ ಈ ಜಗತ್ತನ್ನು ತೋರಿಸಲು ಮತ್ತು ನಾವೆಲ್ಲರೂ ಸೇರಿ ಸಾಕಷ್ಟು ನೆನಪುಗಳನ್ನು ಸೃಷ್ಟಿಸಲು ಕಾಯುತ್ತಿದ್ದೇವೆ. ಜೀವನದ ಈ ಹೊಸ ಅಧ್ಯಾಯಕ್ಕೆ ಕಾಲಿಡುತ್ತಿರುವ ನಮ್ಮ ಮೂವರಿಗೂ ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಇರಲಿ," ಎಂದು ರೆಬಾ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಸಿನಿಮಾ ರಂಗದ ಗಣ್ಯರು ಸೇರಿದಂತೆ ಅನೇಕರು ಈ ಜೋಡಿಗೆ ಶುಭಾಶಯ ತಿಳಿಸಿ ಕಾಮೆಂಟ್ ಮಾಡುತ್ತಿದ್ದಾರೆ.