ಪಶ್ಚಿಮ ಘಟ್ಟಗಳಲ್ಲಿನ ನಿರಂತರ ಮಳೆಯಿಂದಾಗಿ ಬೆಳಗಾವಿಯ ಹಿಡಕಲ್ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ, ಜಲಾಶಯದ 10 ಗೇಟ್‌ಗಳನ್ನು ತೆರೆದು ಘಟಪ್ರಭಾ ನದಿಗೆ 5 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದ್ದು, ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಬೆಳಗಾವಿ: ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಕಳೆದ ಒಂದು ತಿಂಗಳಿನಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಹುಕ್ಕೇರಿ ತಾಲೂಕಿನ ಹಿಡಕಲ್ ಗ್ರಾಮದ ಸಮೀಪದ ಹಿಡಕಲ್ ಜಲಾಶಯ ಭರ್ತಿಯಾಗಿದೆ. ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಸೋಮವಾರದಿಂದ ಜಲಾಶಯದ ಎಲ್ಲ 10 ಗೇಟ್‌ಗಳನ್ನು ತೆರೆದು, ಒಟ್ಟು 5 ಸಾವಿರ ಕ್ಯೂಸೆಕ್ ನೀರನ್ನು ಘಟಪ್ರಭಾ ನದಿಗೆ ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ಘಟಪ್ರಭಾ ನದಿ ಪಾತ್ರದಲ್ಲಿ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆ ಇರುವುದರಿಂದ ನದಿ ಪಾತ್ರದ ಜನರು ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
51 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ
ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳ ಜನರ ಜೀವನಾಡಿಯಾಗಿರುವ ಘಟಪ್ರಭಾ ನದಿಗೆ ಹಿಡಕಲ್ ಜಲಾಶಯ ಪ್ರಮುಖ ನೀರಿನ ಮೂಲವಾಗಿದೆ. ಸುಮಾರು 51 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯ ಈ ಬಾರಿ ಮಳೆ ವಿಳಂಬವಾದ ಹಿನ್ನೆಲೆಯಲ್ಲಿ ಭರ್ತಿಯಾಗಲು ತಡವಾಗಿತ್ತು.
ಕುಡಿಯುವ ನೀರಿನ ಆತಂಕ ದೂರ
ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ಘಟಪ್ರಭಾ ನದಿ ಹಾಗೂ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿ ಇದೀಗ ಜಲಾಶಯ ಭರ್ತಿಯಾಗಿದೆ. ಇದರಿಂದ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಎದುರಾಗಬಹುದಾಗಿದ್ದ ಕುಡಿಯುವ ನೀರಿನ ಆತಂಕವೂ ದೂರವಾಗಿದೆ. ನದಿ ಪಾತ್ರದಲ್ಲಿರುವ ಗ್ರಾಮಗಳ ಜನರು, ರೈತರು ಹಾಗೂ ಜಾನುವಾರುಗಳನ್ನು ನದಿಗೆ ಇಳಿಸದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.


