ಬಿಜೆಪಿ ತನ್ನ ನೂತನ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿಯಲ್ಲಿ ಇಬ್ಬರು ಪ್ರಮುಖ ಮುಸ್ಲಿಂ ನಾಯಕರಿಗೆ ಸ್ಥಾನ ನೀಡಿದೆ. ಅಲಿಗಢ ಮುಸ್ಲಿಂ ವಿವಿ ಮಾಜಿ ಉಪಕುಲಪತಿ ತಾರಿಕ್ ಮನ್ಸೂರ್ ಮತ್ತು ತಳಮಟ್ಟದ ಸಂಘಟಕ ಕುನ್ವರ್ ಬಾಸಿತ್ ಅಲಿ ಅವರಿಗೆ ಪ್ರಮುಖ ಜವಾಬ್ದಾರಿಗಳನ್ನು ವಹಿಸಲಾಗಿದೆ. ಈ ನೇಮಕವು ಮುಸ್ಲಿಂ ಸಮುದಾಯ, ವಿಶೇಷವಾಗಿ ಪಸ್ಮಾಂಡ ಮುಸ್ಲಿಮರನ್ನು ತಲುಪುವ ಬಿಜೆಪಿಯ ಹೊಸ ತಂತ್ರದ ಭಾಗವಾಗಿದೆ.
ಬಿಜೆಪಿ ಅಧ್ಯಕ್ಷ ನಿತಿನ್ ನವೀನ್ ಅವರು ಘೋಷಿಸಿರುವ ನೂತನ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿಯಲ್ಲಿ ಉತ್ತರ ಪ್ರದೇಶದ ಇಬ್ಬರು ಪ್ರಮುಖ ಮುಸ್ಲಿಂ ನಾಯಕರಿಗೆ ಪ್ರಮುಖ ಜವಾಬ್ದಾರಿಗಳನ್ನು ನೀಡಲಾಗಿದ್ದು, ಇದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಶಹನವಾಜ್ ಹುಸೇನ್ ಅಥವಾ ಮುಖ್ತಾರ್ ಅಬ್ಬಾಸ್ ನಖ್ವಿ ಅವರ ಬದಲು, ಶೈಕ್ಷಣಿಕ ಹಾಗೂ ಸಂಘಟನಾ ಹಿನ್ನೆಲೆಯ ಈ ಇಬ್ಬರು ಮುಖಗಳಿಗೆ ನವೀನ್ ಪಡೆಯಲ್ಲಿ ದೊಡ್ಡ ಜವಾಬ್ದಾರಿ ಸಿಕ್ಕಿದೆ. ಆ ಇಬ್ಬರು ನಾಯಕರು ಯಾರು ಮತ್ತು ಪಕ್ಷದಲ್ಲಿ ಅವರ ಪಾತ್ರವೇನು ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ.
ಪ್ರೊಫೆಸರ್ (ಡಾ.) ತಾರಿಕ್ ಮನ್ಸೂರ್!
ಯಾರೀತ?; ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (AMU) ಮಾಜಿ ಉಪಕುಲಪತಿ (VC) ಹಾಗೂ ಪ್ರಸ್ತುತ ಉತ್ತರ ಪ್ರದೇಶ ವಿಧಾನ ಪರಿಷತ್ (MLC) ಸದಸ್ಯ.
ನೀಡಿರುವ ಪಾತ್ರ; ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ (National Vice-President).
ಪಕ್ಷದಲ್ಲಿದ್ದ ಮುಖ್ಯ ಕಾರ್ಯ: ತಾರಿಕ್ ಮನ್ಸೂರ್ ಅವರನ್ನು ಬಿಜೆಪಿಯ ಪ್ರಮುಖ ಬೌದ್ಧಿಕ ಮುಖ (Intellectual Face) ಎನ್ನಲಾಗುತ್ತದೆ. ಮುಖ್ಯವಾಗಿ ಮುಸ್ಲಿಂ ಸಮುದಾಯದಲ್ಲಿ, ಅದರಲ್ಲೂ ಹಿಂದುಳಿದ 'ಪಸ್ಮಾಂಡ ಮುಸ್ಲಿಂ' ಸಮುದಾಯದ ನಡುವೆ ಬಿಜೆಪಿಯ ತಲುಪುವಿಕೆಯನ್ನು (Outreach) ಬಲಪಡಿಸುವಲ್ಲಿ ಮನ್ಸೂರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿದ್ದ ಇವರ ಪ್ರಭಾವವನ್ನು ಬಳಸಿಕೊಂಡು ಬುದ್ಧಿಜೀವಿ ಮುಸ್ಲಿಂ ವರ್ಗವನ್ನು ಪಕ್ಷದತ್ತ ಸೆಳೆಯುವುದು ಇವರ ಜವಾಬ್ದಾರಿಯಾಗಿದೆ.
ಕುನ್ವರ್ ಬಾಸಿತ್ ಅಲಿ!
ಯಾರೀತ?; ಮೀರತ್ ಜಿಲ್ಲೆಯ ಕಾಯಸ್ತ್ ಬಡ್ಡ ಮೂಲದ ನಾಯಕ. ಪ್ರಸ್ತುತ ಉತ್ತರ ಪ್ರದೇಶ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನೀಡಿರುವ ಪಾತ್ರ; ನೂತನ ತಂಡದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಉಸ್ತುವಾರಿ / ಜವಾಬ್ದಾರಿ.
ಪಕ್ಷದಲ್ಲಿದ್ದ ಮುಖ್ಯ ಕಾರ್ಯ; ಬಾಸಿತ್ ಅಲಿ ಅವರು ತಳಮಟ್ಟದ ಸಂಘಟನೆಗೆ ಹೆಸರಾದವರು. 'ಕ್ವಾಮಿ ಚೌಪಾಲ್', 'ಮೋದಿ ಮಿತ್ರ' ಅಭಿಯಾನಗಳು ಹಾಗೂ ಮದರಸಾ ಮತ್ತು ದರ್ಗಾಗಳಲ್ಲಿ ಯೋಗ ತರಬೇತಿಯಂತಹ ವಿನೂತನ ಕಾರ್ಯಕ್ರಮಗಳ ಮೂಲಕ ಮುಸ್ಲಿಂ ಯುವಕರು ಮತ್ತು ಮಹಿಳೆಯರನ್ನು ಬಿಜೆಪಿಯತ್ತ ತರುವಲ್ಲಿ ಯಶಸ್ವಿಯಾಗಿದ್ದಾರೆ. ತಳಮಟ್ಟದಲ್ಲಿ ಅಲ್ಪಸಂಖ್ಯಾತ ಸಮುದಾಯ ಮತ್ತು ಸರ್ಕಾರದ ಕಲ್ಯಾಣ ಯೋಜನೆಗಳ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುವುದು ಇವರ ಮುಖ್ಯ ಪಾತ್ರ.
ಬಿಜೆಪಿ ರೂಪಿಸಿತಾ ಹೊಸ ಯೋಜನೆ!
ಈ ನೇಮಕದ ಹಿಂದಿನ ರಾಜಕೀಯ ತಂತ್ರವೇನು?ಮುಂದಿನ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ಕೇವಲ ಭಾವನಾತ್ಮಕ ರಾಜಕೀಯ ಮಾಡುವುದಕ್ಕಿಂತ ಪ್ರೊಫೆಸರ್ ತಾರಿಕ್ ಮನ್ಸೂರ್ ಅವರಂತಹ 'ಬುದ್ಧಿಜೀವಿ ಮುಖ' ಮತ್ತು ಕುನ್ವರ್ ಬಾಸಿತ್ ಅಲಿ ಅವರಂತಹ 'ಗ್ರೌಂಡ್ ಲೆವೆಲ್ ಕನೆಕ್ಟರ್' ನಾಯಕರನ್ನು ಮುಂದೆ ತರುವ ಮೂಲಕ ಮುಸ್ಲಿಂ ಸಮುದಾಯದಲ್ಲಿ ತನ್ನ ಮತಬ್ಯಾಂಕ್ ವಿಸ್ತರಿಸಲು ಬಿಜೆಪಿ ಯೋಜನೆ ರೂಪಿಸಿದೆ.


