ರಾಜ್ಯದ ಬೊಕ್ಕಸಕ್ಕೆ ₹1,000 ಕೋಟಿ ಆದಾಯ ತರುವ ನಿರೀಕ್ಷೆಯಲ್ಲಿದ್ದ ಬಾರ್ ಲೈಸನ್ಸ್‌ಗಳ ಇ-ಹರಾಜು ಯೋಜನೆ ವಿಫಲವಾಗಿದೆ. ಹರಾಜಿಗಿಟ್ಟ 569 ಲೈಸನ್ಸ್‌ಗಳ ಪೈಕಿ ಕೇವಲ 120 ಮಾರಾಟವಾಗಿದ್ದು, ಸರ್ಕಾರಕ್ಕೆ ಅಂದಾಜು ₹125 ಕೋಟಿ ಮಾತ್ರ ಲಭಿಸಿದೆ. ಇದಕ್ಕೆ ಕಾರಣವೇನು? ಉದ್ಯಮಿಗಳು ದೂರ ಉಳಿಯಲು ಕಾರಣಗಳು ತಿಳಿಯಿರಿ.

ಬೆಂಗಳೂರು (ಆ.18): ರಾಜ್ಯದ ಬೊಕ್ಕಸಕ್ಕೆ ಭರ್ಜರಿ ಆದಾಯ ತಂದುಕೊಡುವ ‘ಮದ್ಯ ಮಾರಾಟ’ದ ಮೇಲಿನ ಸರ್ಕಾರದ ನಿರೀಕ್ಷೆಗಳು ಈ ಬಾರಿ ಸಂಪೂರ್ಣ ತಲೆಕೆಳಗಾಗಿವೆ. ಅಬಕಾರಿ ಇಲಾಖೆಯು ರಾಜ್ಯಾದ್ಯಂತ ಬಾಕಿ ಉಳಿದಿದ್ದ ಬಾರ್ ಲೈಸನ್ಸ್‌ಗಳನ್ನು ಇ-ಹರಾಜು (E-Auction) ಮೂಲಕ ಮಾರಾಟ ಮಾಡಿ ಒಂದು ಸಾವಿರ ಕೋಟಿ ರೂ. ಆದಾಯ ಬಾಚಿಕೊಳ್ಳಲು ಹಾಕಿದ್ದ ಬೃಹತ್ ಯೋಜನೆಗೆ ಉದ್ಯಮಿಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪರಿಣಾಮವಾಗಿ, ಬರೋಬ್ಬರಿ ₹1,000 ಕೋಟಿ ರಾಜಸ್ವ ನಿರೀಕ್ಷೆಯಲ್ಲಿದ್ದ ರಾಜ್ಯ ಸರ್ಕಾರಕ್ಕೆ ಲಭಿಸಿದ್ದು ಕೇವಲ ಅಂದಾಜು ₹125 ಕೋಟಿ ಮಾತ್ರ!

ಲೆಕ್ಕಾಚಾರ ಉಲ್ಟಾಪಲ್ಟಾ: ಅಂಕಿ-ಅಂಶಗಳ ವಿವರ:

  • ಅಬಕಾರಿ ಇಲಾಖೆಯು ಜುಲೈ 24 ರಿಂದ ಜುಲೈ 31 ರವರೆಗೆ ರಾಜ್ಯಾದ್ಯಂತ ಬಾರ್ ಲೈಸನ್ಸ್‌ಗಳ ಇ-ಹರಾಜು ಪ್ರಕ್ರಿಯೆಯನ್ನು ನಡೆಸಿತ್ತು.
  • ಹರಾಜಿಗಿಟ್ಟಿದ್ದ ಒಟ್ಟು ಬಾರ್ ಲೈಸನ್ಸ್‌ಗಳು: 569
  • ಮಾರಾಟವಾದ ಲೈಸನ್ಸ್‌ಗಳ ಸಂಖ್ಯೆ: ಕೇವಲ 120
  • ಖರೀದಿಯಾಗದೆ ಉಳಿದ ಲೈಸನ್ಸ್‌ಗಳು: 449
  • ಸರ್ಕಾರದ ನಿರೀಕ್ಷಿತ ಆದಾಯ: ₹1,000 ಕೋಟಿ
  • ಹರಾಜಿನಿಂದ ಬಂದ ನೈಜ ಆದಾಯ: ಕೇವಲ ₹125 ಕೋಟಿ (ಅಂದಾಜು)

ಯಾವೆಲ್ಲಾ ಬಾರ್ ಲೈಸನ್ಸ್‌ಗಳನ್ನು ಹರಾಜಿಗಿಡಲಾಗಿತ್ತು?

ರಾಜ್ಯದಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ವಿವಿಧ ವರ್ಗದ ಲೈಸನ್ಸ್‌ಗಳನ್ನು ಸರ್ಕಾರ ಹರಾಜಿಗೆ ಇಟ್ಟಿತ್ತು:

ವಿವಿಧ ಕೋಟಾದಡಿ ವಿತರಣೆಯಾಗದೆ ಬಾಕಿ ಉಳಿದಿದ್ದ ಪರವಾನಗಿಗಳು.

ನಿಯಮ ಉಲ್ಲಂಘಿಸಿ ಸ್ಥಗಿತಗೊಂಡಿದ್ದ ಮತ್ತು ಮುಟ್ಟುಗೋಲು ಹಾಕಿಕೊಂಡ ಲೈಸನ್ಸ್‌ಗಳು.

ನಿಗದಿತ ಅವಧಿಯಲ್ಲಿ ನವೀಕರಣಗೊಳ್ಳದ (Unrenewed) ಮತ್ತು ರದ್ದುಗೊಂಡ ಪರವಾನಗಿಗಳು.

ಮಂಜೂರಾಗಿದ್ದರೂ ಪ್ರಾರಂಭವಾಗದೆ ಹಿಂಪಡೆಯಲಾಗಿದ್ದ (Withdrawn/Cancelled) ಲೈಸನ್ಸ್‌ಗಳು.

ಬಾರ್ ಲೈಸನ್ಸ್ ಖರೀದಿಗೆ ಉದ್ಯಮಿಗಳ ನಿರಾಸಕ್ತಿ ಏಕೆ?

ಅಬಕಾರಿ ಇಲಾಖೆಯ ಮೂಲಗಳ ಪ್ರಕಾರ, ಸರ್ಕಾರ ನಿಗದಿಪಡಿಸಿದ್ದ ಹೆಚ್ಚಿನ ಠೇವಣಿ ಮೊತ್ತ, ನಿರ್ಬಂಧಿತ ಷರತ್ತುಗಳು, ಕಠಿಣ ನಿಯಮಾವಳಿಗಳು ಹಾಗೂ ಪ್ರಸ್ತುತ ಮಾರುಕಟ್ಟೆಯಲ್ಲಿ ಮದ್ಯ ಮಾರಾಟ ವ್ಯವಹಾರದಲ್ಲಿನ ಸ್ಪರ್ಧೆಯು ಉದ್ಯಮಿಗಳು ಹಿಂದೇಟು ಹಾಕಲು ಪ್ರಮುಖ ಕಾರಣವಾಗಿದೆ. ಪ್ರಮುಖ ವಾಣಿಜ್ಯ ನಗರಗಳ ಕೆಲವೇ ಲೈಸನ್ಸ್‌ಗಳಿಗೆ ಮಾತ್ರ ಬಿಡ್ ಬಂದಿದ್ದು, ಗ್ರಾಮೀಣ ಹಾಗೂ ಸಣ್ಣ ಪಟ್ಟಣಗಳ ಲೈಸನ್ಸ್‌ಗಳನ್ನು ಯಾರೂ ಮುಟ್ಟಿಲ್ಲ ಎನ್ನಲಾಗಿದೆ.

ಒಟ್ಟಾರೆಯಾಗಿ, ಖಜಾನೆ ತುಂಬಿಸಿಕೊಳ್ಳಲು ಅಬಕಾರಿ ಇಲಾಖೆ ಹೆಣೆದಿದ್ದ ಮಾಸ್ಟರ್ ಪ್ಲಾನ್ ಸಂಪೂರ್ಣ ಹಳ್ಳ ಹಿಡಿದಿದ್ದು, ಉಳಿದ 449 ಲೈಸನ್ಸ್‌ಗಳ ಭವಿಷ್ಯವೇನು ಎಂಬ ಬಗ್ಗೆ ಸರ್ಕಾರ ಮುಂದಿನ ದಿನಗಳಲ್ಲಿ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.