ಬಿಗ್‌ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ, ತಮಗೂ ಗಿಲ್ಲಿ ನಟನಿಗೂ ಇರುವ ಸಂಬಂಧದ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಂದ ಬೇಸತ್ತಿದ್ದಾರೆ. 'ಕ್ರಷ್' ಇದೆಯೇ ಎಂಬ ಪ್ರಶ್ನೆಗೆ, ಮೀನಿನ ಸಾಂಬಾರಿಗೆ ಮಸಾಲೆ ಅರೆಯುವುದನ್ನು 'ಕ್ರಷ್' ಎನ್ನುತ್ತೇವೆ ಎಂದು ಉತ್ತರಿಸಿ, ಸ್ನೇಹವನ್ನು ಕೇವಲ ಪ್ರೀತಿಯ ದೃಷ್ಟಿಯಿಂದ ನೋಡುವವರಿಗೆ ಖಡಕ್ ತಿರುಗೇಟು ನೀಡಿದ್ದಾರೆ.
ಒಂದು ಷೋ ಅಥವಾ ಸೀರಿಯಲ್ಗಳಲ್ಲಿ ಒಂದು ಜೋಡಿ ಫೇಮಸ್ ಆಯ್ತು ಎಂದಾಕ್ಷಣ, ಅವರಿಬ್ಬರ ಮಧ್ಯೆ ಸಂಬಂಧ ತಂದು, ಅದನ್ನು ಅಸಹ್ಯ ಎನ್ನುವಷ್ಟರಮಟ್ಟಿಗೆ ಮುಂದಕ್ಕೆ ಕರೆದುಕೊಂಡು ಹೋಗುವ ದೊಡ್ಡ ವರ್ಗವೇ ಇದೆ. ಗಂಡು-ಹೆಣ್ಣು ಒಟ್ಟಿಗೆ ಇದ್ದರೆ ಸಾಕು, ಅವರಿಗೆ ಮುಜುಗರ ಆಗುವಂಥ ಪ್ರಶ್ನೆ ಕೇಳುವ ಚಾಳಿ ಹಲವರದ್ದು. ಕೆಲವೊಮ್ಮೆ ಎಐ ಫೋಟೋದ ಮೂಲಕ, ಆ ನಟ-ನಟಿಯರಿಗೆ ಅಸಹ್ಯ ಆಗುವಂಥ ಚಿತ್ರಗಳನ್ನು ತಾವೇ ಚಿತ್ರಿಸುವುದು ಉಂಟು. ಸ್ನೇಹವನ್ನು ಕೂಡ ಬರೀ ಲವರ್ಸ್ ದೃಷ್ಟಿಯಲ್ಲಿಯೇ ನೋಡುವ ಮನಸ್ಥಿತಿಯವರು ಹಲವರು. ಅವರ ತಲೆಯಲ್ಲಿ ತುಂಬಿರುವುದು ಇಂಥ ವಿಚಾರಗಳೇ. ಅದಕ್ಕಾಗಿ ಎಲ್ಲಿಯಾದರೂ, ಸೆಲೆಬ್ರಿಟಿಗಳು ಕಂಡಾಗ ಬೇರೊಬ್ಬರ ಹೆಸರು ಹೇಳಿ ಸಂಬಂಧಗಳ ಬಗ್ಗೆ ಕೇಳುತ್ತಾ ಅವರಿಗೆ ಮುಜುಗರ ಮಾಡುತ್ತಾರೆ.
ಅದೇ ರೀತಿ, ಬಿಗ್‌ಬಾಸ್ 12ರಲ್ಲಿ ಸದ್ದು ಮಾಡಿದ್ದ ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿಗೂ ಇಂಥದ್ದೇ ಪ್ರಶ್ನೆಗಳು ಎದುರಾಗುತ್ತವೆ. ತಮಗೆ ಗಿಲ್ಲಿ ನಟನಂಥ ಹುಡುಗ ಬೇಕು ಎಂದು ರಕ್ಷಿತಾ (Bigg Boss Rakshita Shetty) ಹೇಳಿದ ಮಾತುಗಳನ್ನೇ ಇಟ್ಟುಕೊಂಡು, ಆಕೆ ಹೋದಲ್ಲಿ, ಬಂದಲ್ಲಿ ಗಿಲ್ಲಿ ನಟನ ಪ್ರಶ್ನೆ ಕೇಳಲಾಗುತ್ತದೆ. ಆದರೆ ತುಳುನಾಡಿನ ಈ ಬೆಡಗಿ ಪ್ರತಿಬಾರಿಯೂ ತನ್ನದೇ ಆದ ರೀತಿಯಲ್ಲಿ ಪ್ರಶ್ನೆ ಕೇಳಿದವರನ್ನು ಕಕ್ಕಾಬಿಕ್ಕಿ ಮಾಡುವುದು ಉಂಟು. ಇದೀಗ ಅಂಥದ್ದೇ ಇನ್ನೊಂದು ಪ್ರಶ್ನೆಗೆ ಉತ್ತರಿಸಿರುವ ರಕ್ಷಿತಾ, ಪ್ರಶ್ನೆ ಕೇಳಿದವರು ಮುಟ್ಟಿಕೊಳ್ಳುವ ಹಾಗೆ ಮಾಡಿದ್ದಾರೆ.
ಮೀನಿನ ಸಾಂಬಾರ್ ಮಾಡುವಾಗ...
ನಿಮಗೆ ಗಿಲ್ಲಿಯ ಮೇಲೆ ಕ್ರಷ್ ಇದ್ಯಾ ಎನ್ನುವ ಪ್ರಶ್ನೆ ಎದುರಾಗಿದೆ. ಇದರಿಂದ ಗರಂ ಆದ ರಕ್ಷಿತಾ ಕ್ರಷ್ ಎಂದ್ರೆ ಏನು ಎಂದು ಪ್ರಶ್ನಿಸಿದ್ದಾರೆ. ಕ್ರಷ್ ಎಂದರೆ ಜಸ್ಟ್ ಇಷ್ಟ ಆಯ್ತು ಅಂತ ಅಷ್ಟೇ ಎಂದು ಉತ್ತರ ಬಂತು. ಅದಕ್ಕೆ ರಕ್ಷಿತಾ ಶೆಟ್ಟಿ, ನಮ್ಮ ಕಡೆ ಮೀನಿನ ಸಾಂಬಾರು ಮಾಡುವಾಗ ಎಲ್ಲಾ ಮಸಾಲೆ ಹಾಕಿ ಅದನ್ನು ಪುಡಿ ಪುಡಿ ಮಾಡ್ತೇವೆ, ಅದಕ್ಕೆ ಕ್ರಷ್ ಅಂತೇವೆ, ನೀವು ಹೇಳ್ತಿರೋದು ನನಗೆ ಅರ್ಥ ಆಗ್ತಿಲ್ಲಾ ಎಂದಾಗ, ಪುನಃ ಅಲ್ಲಿದ್ದೋರು ಸುಮ್ಮನೇ ಇಷ್ಟ ಆಯ್ತು ಎಂದಿದ್ದಾರೆ.
ಇಷ್ಟ ಎಂದ್ರೆ ಏನರ್ಥ?
ಅದಕ್ಕೆ ರೊಚ್ಚಿಗೆದ್ದ ರಕ್ಷಿತಾ, ಇಷ್ಟ ಆಯ್ತು ಅಂದರೆ ಏನು, ನನಗೆ ಎಲ್ಲರೂ ಇಷ್ಟ ಆಗ್ತಾರೆ. ಅಣ್ಣ-ತಂಗಿ ಸಂಬಂಧದಲ್ಲೂ ಇಷ್ಟ ಇದೆ. ಸ್ನೇಹದಲ್ಲೂ ಇಷ್ಟ ಇದೆ. ಗಂಡ-ಹೆಂಡತಿನೂ ಇಷ್ಟ ಪಡ್ತಾರೆ. ಅದರಲ್ಲಿ ಏನಿದೆ ಎಂದು ಸ್ನೇಹ ಎನ್ನೋದನ್ನು ಬರೀ ಕಾಮುಕ ದೃಷ್ಟಿಯಿಂದಲೇ ನೋಡುವವರಿಗೆ ತಿರುಗೇಟು ನೀಡಿ, ಅವರ ಬಾಯಿ ಮುಚ್ಚಿಸಿದ್ದಾರೆ ರಕ್ಷಿತಾ ಶೆಟ್ಟಿ. ಬೆಂಕಿ ಉತ್ತರ ಇದು ಎಂದು ಕಮೆಂಟ್ಸ್ ಸುರಿಮಳೆಯೇ ಸುರಿಯುತ್ತಿದೆ. ಎಲ್ಲವೂ ಒಂದು ಹಂತಕ್ಕೆ ಚೆಂದ. ಪದೇ ಪದೇ ಅದೇ ಪ್ರಶ್ನೆ ಕೇಳಿ ಸೆಲೆಬ್ರಿಟಿಗಳನ್ನು ಮುಜುಗರ ಉಂಟು ಮಾಡಬೇಡಿ, ನಿಮ್ಮ ಈ ಬುದ್ಧಿ ಪದೇಪದೇ ತೋರಿಸಬೇಡಿ ಎಂದೆಲ್ಲಾ ಕಮೆಂಟ್ಸ್ ಸುರಿಮಳೆಯಾಗುತ್ತಿದೆ.


