ಸ್ವಾತಂತ್ರ್ಯ ದಿನಾಚರಣೆಯಂದು ಬೆಂಗಳೂರಿನಲ್ಲಿ ಎಚ್‌ಎಂಟಿ ವಾಚ್‌ಗಳು ಒಂದೇ ದಿನಕ್ಕೆ ₹35 ಲಕ್ಷದ ದಾಖಲೆ ಮೊತ್ತಕ್ಕೆ ಮಾರಾಟವಾಗಿವೆ. ವಿಶೇಷ ಆವೃತ್ತಿಯ ಕೈಗಡಿಯಾರಗಳಿಗಾಗಿ ಜನರು ಕಿಲೋಮೀಟರ್‌ಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಖರೀದಿಸಿದ್ದು, ಈ ಅಭೂತಪೂರ್ವ ಪ್ರತಿಕ್ರಿಯೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹರ್ಷ ವ್ಯಕ್ತಪಡಿಸಿದ್ದಾರೆ.

ಹಾಸನ: ಸ್ವಾತಂತ್ರ್ಯ ದಿನಾಚರಣೆಯಂದು ಬೆಂಗಳೂರಲ್ಲಿ ಬರೋಬ್ಬರಿ 2 ಕಿ.ಮೀ ಸರದಿ ನಿಂತು ದೇಶದಲ್ಲೇ ಹೆಸರುವಾಸಿಯಾಗಿರುವ ಎಚ್‌ಎಂಟಿ (ಹಿಂದೂಸ್ತಾನ್ ಮಷಿನ್ ಟೂಲ್ಸ್) ಕೈಗಡಿಯಾರಗಳನ್ನು ಜನರು ಖರೀದಿಸಿದ್ದರಿಂದ ಒಂದೇ ದಿನಕ್ಕೆ ₹35 ಲಕ್ಷ ಸಂಗ್ರಹವಾಗಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ತಿಳಿಸಿದ್ದಾರೆ.

ಕಿಲೋ ಮಿಟರ್‌ಗಟ್ಟಲೇ ಸರತಿ ಸಾಲಲ್ಲಿ ನಿಂತು ಜನರು ವಾಚ್ ಖರೀದಿ

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಕೇಂದ್ರ ಸಚಿವನಾದ ಮೇಲೆ ಸಂಸ್ಥೆಗೆ ಒಂದು ಕಾಯಕಲ್ಪ ನೀಡಿದ್ದೇನೆ. ಎಚ್‌ಎಂಟಿಯನ್ನು ಬೆಳೆಸಿ ಉಳಿಸಲು ಎಲ್ಲರ‌ ಸಹಕಾರವನ್ನ ಬಯಸುತ್ತೇನೆ. ಆ.15ರಂದು ಕಿಲೋ ಮಿಟರ್‌ಗಟ್ಟಲೇ ಸರತಿ ಸಾಲಲ್ಲಿ ನಿಂತು ಜನರು ವಾಚ್ ಖರೀದಿಸಿದ್ದಕ್ಕೆ ಆಭಾರಿಯಾಗಿದ್ದೇನೆ ಎಂದರು.

80ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಎಚ್‌ಎಂಟಿಯು ವಿಶೇಷ ಆವೃತ್ತಿಯ ಕೆಲ ಅಪರೂಪದ ಕೈಗಡಿಯಾರಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಅಂದು ವಾಚುಗಳ ಖರೀದಿಗೆ ಮುಗಿಬಿದ್ದ ಗ್ರಾಹಕರನ್ನು ನೋಡಿ ನನಗೇ ಆಶ್ಚರ್ಯವಾಯಿತು ಎಂದರು.

ಎಚ್‌ಎಂಟಿ ವಾಚ್‌ ದಾಖಲೆ ಪ್ರಮಾಣದಲ್ಲಿ ಮಾರಾಟ

ಸ್ವಾತಂತ್ರ್ಯ ದಿನಾಚರಣೆಯಂದು ಎಚ್‌ಎಂಟಿ ವಾಚ್‌ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿದ್ದು, ಅಂದು ಜನರು ಕ್ಯೂನಲ್ಲಿ ನಿಂತು ವಾಚ್‌ ಖರೀದಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಇದರಿಂದಾಗಿ ಎಚ್.ಡಿ.ಕುಮಾರಸ್ವಾಮಿ ಹರ್ಷ ವ್ಯಕ್ತಪಡಿಸಿದ್ದಾರೆ.