ನೂರಾರು ಕೋಟಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾಗಳು ನಿಜಕ್ಕೂ ನಿರ್ಮಾಪಕರಿಗೆ ನಿರೀಕ್ಷಿತ ಲಾಭ ತರುತ್ತಿವೆಯಾ ಎಂಬ ಚರ್ಚೆ ಶುರುವಾಗಿದೆ. ಸ್ಟಾರ್ ಪವರ್ ಮತ್ತು ಭಾರೀ ಬಜೆಟ್‌ಗಿಂತ ಕಂಟೆಂಟ್‌ಗೆ ಪ್ರೇಕ್ಷಕರು ಹೆಚ್ಚು ಆದ್ಯತೆ ನೀಡುತ್ತಿರುವುದು.

ಸಿನಿರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಅಂದಾಕ್ಷಣ ದೊಡ್ಡ ಬಜೆಟ್, ಸ್ಟಾರ್ ಹೀರೋ, ಅದ್ಧೂರಿ ಮೇಕಿಂಗ್ ಹಾಗೂ ಭರ್ಜರಿ ನಿರೀಕ್ಷೆಗಳು ಕಣ್ಣ ಮುಂದೆ ಬರುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಸಿನಿಮಾಗಳು ನಿಜಕ್ಕೂ ತಮ್ಮ ಹೆಸರಿಗೆ ತಕ್ಕಂತೆ ಮೋಡಿ ಮಾಡುತ್ತಿವೆಯಾ? ಇಲ್ಲವೇ ಬರೀ ಬಜೆಟ್ ಮತ್ತು ಹೈಪ್‌ಗೆ ಸೀಮಿತವಾಗುತ್ತಿವೆಯಾ? ಎಂಬ ಚರ್ಚೆ ಶುರುವಾಗಿದೆ.

ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ, ಎರಡು-ಮೂರು ವರ್ಷಗಳ ಕಾಲ ಸಾವಿರಾರು ಮಂದಿ ಕೆಲಸ ಮಾಡಿ ರೂಪಿಸುವ ಸಿನಿಮಾಗಳ ಮೇಲೆ ಪ್ರೇಕ್ಷಕರು ಕೂಡ ಭಾರೀ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಆದರೆ ಸಿನಿಮಾ ರಿಲೀಸ್ ಆದ ಬಳಿಕ ನಿರೀಕ್ಷಿತ ಮಟ್ಟದ ಕಂಟೆಂಟ್ ಸಿಗದೇ ಹೋದಾಗ ಪ್ರೇಕ್ಷಕರಿಗೆ ನಿರಾಸೆಯಾಗುತ್ತಿದೆ. ಮತ್ತೊಂದೆಡೆ, ಕಡಿಮೆ ಬಜೆಟ್‌ನಲ್ಲಿ ಕಡಿಮೆ ಅವಧಿಯಲ್ಲಿ ತಯಾರಾಗುವ ರೀಜನಲ್ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿರುವುದು ಗಮನ ಸೆಳೆಯುತ್ತಿದೆ.

ಬಜೆಟ್‌ಗಿಂತ ಕಂಟೆಂಟ್ ಮುಖ್ಯ!

ಒಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ನಿರ್ದೇಶಕರು ಹಾಗೂ ನಿರ್ಮಾಪಕರು ಸಾಕಷ್ಟು ಸಮಯ, ಹಣ ಮತ್ತು ಶ್ರಮ ಹಾಕಬೇಕಾಗುತ್ತದೆ. ಆದರೆ ಇಷ್ಟೆಲ್ಲಾ ಹೂಡಿಕೆ ಮಾಡಿದರೂ ಅದಕ್ಕೆ ತಕ್ಕ ಪ್ರತಿಫಲ ಸಿಗುತ್ತಿದೆಯಾ ಎಂಬ ಪ್ರಶ್ನೆ ಈಗ ಎದುರಾಗಿದೆ. ಸಿನಿಮಾದ ಕಂಟೆಂಟ್‌ಗಿಂತ ಅದರ ಬಜೆಟ್, ಸ್ಟಾರ್ ಕಾಸ್ಟ್ ಮತ್ತು ಪ್ಯಾನ್ ಇಂಡಿಯಾ ಇಮೇಜ್‌ಗೆ ಹೆಚ್ಚು ಒತ್ತು ನೀಡಿದರೆ ಕೊನೆಗೆ ನಷ್ಟವೇ ಎದುರಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಅದರಲ್ಲೂ ತೆಲುಗು ಚಿತ್ರರಂಗದಲ್ಲಿ ಕಳೆದ ಕೆಲವು ವರ್ಷಗಳಿಂದ ಈ ಟ್ರೆಂಡ್ ಹೆಚ್ಚಾಗುತ್ತಿದೆ ಎಂಬ ಚರ್ಚೆಯೂ ಇದೆ.

ಸ್ಟಾರ್ ಹೀರೋ ಡೇಟ್ಸ್ ಸಿಕ್ಕರೆ ಸಿನಿಮಾ ಶುರು?

ಸ್ಟಾರ್ ಹೀರೋ ಡೇಟ್ಸ್ ಸಿಕ್ಕಿವೆ ಎಂಬ ಕಾರಣಕ್ಕೆ ಬಲವಾದ ಕಥೆ ಹಾಗೂ ಸ್ಕ್ರಿಪ್ಟ್ ಸಿದ್ಧವಾಗುವ ಮೊದಲೇ ಕೆಲವು ಪ್ಯಾನ್ ಇಂಡಿಯಾ ಪ್ರಾಜೆಕ್ಟ್‌ಗಳು ಆರಂಭವಾಗುತ್ತಿವೆ ಎಂಬ ಟಾಕ್ ಇದೆ. ಆದರೆ ಸಿನಿಮಾ ದೊಡ್ಡದಾಗಿರಬೇಕೆಂಬ ಉದ್ದೇಶಕ್ಕಿಂತ, ಕಥೆ ಮತ್ತು ಕಂಟೆಂಟ್ ಸ್ಟ್ರಾಂಗ್ ಆಗಿರಬೇಕೆಂಬುದು ಮುಖ್ಯ ಎಂಬುದನ್ನು ಇತ್ತೀಚಿನ ಫಲಿತಾಂಶಗಳು ತೋರಿಸುತ್ತಿವೆ.

ಸೋತ ಪ್ಯಾನ್ ಇಂಡಿಯಾ ಸಿನಿಮಾಗಳು!

ಇತ್ತೀಚಿನ ವರ್ಷಗಳಲ್ಲಿ ಸಲಾರ್, ಗೇಮ್ ಚೇಂಜರ್, ವಾರ್ 2, ದಿ ರಾಜಾ ಸಾಬ್, ಆದಿಪುರುಷ್, ಟಾಕ್ಸಿಕ್ ಸೇರಿದಂತೆ ಹಲವು ಭಾರೀ ನಿರೀಕ್ಷೆಯ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಕಾಣಲಿಲ್ಲ. ಇದೇ ಸಮಯದಲ್ಲಿ ಕಡಿಮೆ ಅವಧಿಯಲ್ಲಿ ನಿರ್ಮಾಣಗೊಂಡು, ಕಥೆ ಮತ್ತು ಕಂಟೆಂಟ್‌ಗೆ ಹೆಚ್ಚು ಒತ್ತು ನೀಡಿದ ರೀಜನಲ್ ಸಿನಿಮಾಗಳು ಪ್ರೇಕ್ಷಕರನ್ನು ಸೆಳೆಯುತ್ತಿವೆ. ಹೀಗಾಗಿ ಪ್ಯಾನ್ ಇಂಡಿಯಾ ಎಂಬ ಟ್ಯಾಗ್‌ಗಿಂತ ಸಿನಿಮಾದಲ್ಲಿರುವ ಕಂಟೆಂಟ್‌ಗೇ ಪ್ರೇಕ್ಷಕರು ಹೆಚ್ಚು ಬೆಲೆ ಕೊಡುತ್ತಿದ್ದಾರೆ ಎಂಬುದು ಮತ್ತೊಮ್ಮೆ ಸಾಬೀತಾಗುತ್ತಿದೆ.

ಹಾಗಾದರೆ ಇನ್ನು ನೂರಾರು ಕೋಟಿ ಬಜೆಟ್, ವರ್ಷಗಳ ಸಮಯ ಮತ್ತು ಭಾರೀ ಪ್ರಮೋಷನ್‌ಗಳ ನಡುವೆಯೂ ಪ್ಯಾನ್ ಇಂಡಿಯಾ ಸಿನಿಮಾಗಳಿಂದ ನಿರ್ಮಾಪಕರಿಗೆ ನಿಜಕ್ಕೂ ನಿರೀಕ್ಷಿತ ಮಟ್ಟದ ಲಾಭ ಸಿಗುತ್ತಿದೆಯಾ? ಅಥವಾ ಇನ್ನು ಮುಂದೆ ಸ್ಟಾರ್ ಪವರ್‌ಗಿಂತ ಕಂಟೆಂಟ್‌ಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕಾದ ಸಮಯ ಬಂದಿದೆಯಾ? ಎಂಬ ಪ್ರಶ್ನೆ ಇದೀಗ ಸಿನಿರಂಗದಲ್ಲಿ ಚರ್ಚೆಯಾಗುತ್ತಿದೆ.