ಧುರಂಧರ್ 2 ಸೇರಿ ಹಲವು ಸೂಪರ್ ಹಿಟ್ ಸಿನಿಮಾಗಳು ಆಸ್ಕರ್ 2027 ಪ್ರಶಸ್ತಿ ರೇಸ್‌ನಲ್ಲಿ ಕಾಣಿಸಿಕೊಳ್ಳಲು ವಿಫಲವಾಗಿದೆ. ಆದರೆ ಭಾರತದ ಪ್ರಾದೇಶಿಕ ಭಾಷೆಯ ಗೊಂಧಾಲ್ ಸಿನಿಮಾ ಆಸ್ಕರ್ ರೇಸ್‌ನಲ್ಲಿ ಕಾಣಿಸಿಕೊಂಡಿದೆ.

ನವದೆಹಲಿ (ಸೆ.18) ಸಿನಿಮಾ ಕ್ಷೇತ್ರದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಆಸ್ಕರ್ 2027ರ ಪ್ರಕ್ರಿಯೆಗಳು ಶುರುವಾಗಿದೆ. ವಿಶ್ವಾದ್ಯಂತ ತೆರೆಕಂಡ ಅತ್ಯುತ್ತಮ ಸಿನಿಮಾಗಳನ್ನು ಶಾರ್ಟ್ ಲಿಸ್ಟ್ ಮಾಡಿ ಆಸ್ಕರ್ ಪ್ರಶಸ್ತಿ ಸ್ಪರ್ಧೆ ಪಟ್ಟಿಗೆ ಸೇರಿಸಲಾಗುತ್ತದೆ. ಬಳಿಕ ಸಿನಿಮಾ ತಜ್ಞರು, ಜ್ಯೂರಿ ಸೇರಿದಂತೆ ದೊಡ್ಡ ತಂಡ ಆಸ್ಕರ್ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಈ ಬಾರಿ ಭಾರತದ ಕೆಲ ಸಿನಿಮಾಗಳು ಆಸ್ಕರ್ ರೇಸ್‌ನಲ್ಲಿ ಕಾಣಿಸಿಕೊಳ್ಳಲಿದೆ ಅನ್ನೋ ವಿಶ್ವಾಸ ಮೂಡಿಸಿತ್ತು. ಧುರಂಧರ್ 2 ಸೇರಿದಂತೆ ಕೆಲ ಸಿನಿಮಾಗಳು ಆಸ್ಕರ್ 2027 ರೇಸ್‌ನಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಭಾರತದ ಗೊಂಧಾಲ್ ಸಿನಿಮಾ ಆಸ್ಕರ್ 2027ಗೆ ಅಧಿಕೃತ ಎಂಟ್ರಿಕೊಟ್ಟಿದೆ.

99ನೇ ಆಸ್ಕರ್ ಪ್ರಶಸ್ತಿ ರೇಸ್‌ನಲ್ಲಿ ಭಾರತದ ಗೊಂಧಾಲ್

ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಮಹತ್ವದ ಘೋಷಣೆ ಮಾಡಿದೆ. ಮರಾಠಿ ಸಿನಿಮಾ ಗೊಂಧಾಲ್ ಆಸ್ಕರ್ ರೇಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದೆ ಎಂದು ಫೆಡರೇಶನ್ ಹೇಳಿದೆ. ಮರಾಠಿ ಭಾಷೆ ಸಿನಿಮಾ ಗೊಂಧಾಲ್ , ಭಾರತದ 56ನೇ ಫಿಲ್ಮ್ ಫೆಸ್ಟಿವಲ್‌ನಲ್ಲಿ ಅತ್ಯುತ್ತಮ ನಿರ್ದೇಶನಕ್ಕಾಗಿ ಸಿಲ್ವರ್ ಪಿಕಾಕ್ ಪ್ರಶಸ್ತಿ ಪಡೆದಿತ್ತು. 17ನೇ ಬೆಂಗಳೂರು ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿತ್ತು. ಇದೀಗ ಆಸ್ಕರ್ ರೇಸ್‌ಗೆ ಆಯ್ಕೆಯಾಗುವ ಮೂಲಕ ಮತ್ತೊಂದು ಮೈಲಿಗಲ್ಲು ಮುಡಿಗೇರಿಸಿದೆ.

ಮಹಾರಾಷ್ಟ್ರದ ಗ್ರಾಮೀಣ ಹಾಗೂ ಮಹಾರಾಷ್ಟ್ರದಿಂದ ವಲಸೆ ಬಂದು ಕರ್ನಾಟಕ ಸೇರಿದಂತೆ ಹಲವು ಭಾಗದಲ್ಲಿ ನೆಲೆಸಿರುವ ಸಮುದಾಯ ಗೊಂಧಾಲ್ ಆಚರಣೆ ಮಾಡುತ್ತದೆ. ಸಾಂಪ್ರದಾಯಿಕ ಆಚರಣೆಯನ್ನೇ ಮೂಲವಾಗಿಟ್ಟುಕೊಂಡು ಸೈಕಲಾಜಿಕಲ್, ಹಾಗೂ ಸಾಂಸ್ಕೃತಿಕ ಥ್ರಿಲ್ಲರ್ ಕಥಾವಸ್ತುವಿನಲ್ಲಿ ಈ ಸಿನಿಮಾ ಮೂಡಿಬಂದಿದೆ. ರಾತ್ರಿಯಿಡಿ ನಡೆಯುವ ಧಾರ್ಮಿಕ ಹಾಗೂ ಜಾನಪದ ಆಚರಣೆಯ ಸುತ್ತ ಹೆಣೆದಿರುವ ಈ ಕತೆ ಸಮಾಜ, ಸಮುದಾಯ ಹಾಗೂ ಪ್ರಸ್ತುತ ಬದುಕಿನ ಹಲವು ಚಿತ್ರಣಗಳನ್ನು ಕಟ್ಟಿಕೊಡುತ್ತದೆ.

ಗೊಂಧಾಲ್ ಸಿನಿಮಾವನ್ನು ಆಸ್ಕರ್ ಪ್ರಶಸ್ತಿ ರೇಸ್‌ಗೆ ಸಲ್ಲಿಕೆ ಮಾಡಲಾಗಿದೆ. ಡಿಸೆಂಬರ್ 15, 2026ರಂದು ಅಕಾಡೆಮಿ ಆಸ್ಕರ್ ಶಾರ್ಟ್‌ಲಿಸ್ಟ್ ಘೋಷಣೆಯಾಗಲಿದೆ. 99ನೇ ಆಸ್ಕರ್ ಸಿನಿಮಾ ಸಮಾರಂಭ ಮಾರ್ಚ್ 14, 2027ರಂದು ನಡೆಯಲಿದೆ. ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಅದ್ಧೂರಿ ಸಮಾರಂಭ ನಡೆಯಲಿದೆ.

ಗೊಂಧಾಲ್ ಸಿನಿಮಾ ನವೆಂಬರ್ 14, 2025ರಲ್ಲಿ ಮಹಾರಾಷ್ಟ್ರದಲ್ಲಿ ಬಿಡುಗಡೆಯಾಗಿತ್ತು. ಚಿತ್ರಮಂದಿರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಪ್ರತಿ ಸಿನಿಮಾ ಫೆಸ್ಟಿವಲ್‌ನಲ್ಲಿ ಗೊಂಧಾಲ್ ಸಿನಿಮಾ ಒಂದಲ್ಲಾ ಒಂದು ಪ್ರಶಸ್ತಿ ಗೆದ್ದುಕೊಂಡಿದೆ. ಬೆಂಗಳೂರು, ಪುಣೆ, ಥರ್ಡ್ ಏಷ್ಯನ್ ಸೇರಿದಂತೆ ಹಲವು ಫಿಲ್ಲ್ ಫೆಸ್ಟಿವಲ್ ಪ್ರಶಸ್ತಿ ಗೆದ್ದುಕೊಂಡಿದೆ.