ಬಾಲಿವುಡ್ ನಟಿಯರಾದ ಐಶ್ವರ್ಯಾ ರೈಯಿಂದ ಹಿಡಿದು ಕತ್ರಿನಾ ಕೈಫ್‌ವರೆಗೆ ಬಾಡಿ ಶೇಮಿಂಗ್ ಅನ್ನೋದು ನಿರಂತರವಾಗಿ ನಡೀತಾನೇ ಇದೆ. ಸೋಶಿಯಲ್ ಮೀಡಿಯಾದಲ್ಲಿ ದೇಹದ ತೂಕ ಇಟ್ಟುಕೊಂಡು ಜನರನ್ನು ಅಳೆಯುವ ಈ ಕೆಟ್ಟ ಮನಸ್ಥಿತಿ ಬಗ್ಗೆ ನಾವಿಲ್ಲಿ ಚರ್ಚೆ ಮಾಡೋಣ.

ಬಾಲಿವುಡ್ ನಟಿ ಕತ್ರಿನಾ ಕೈಫ್, ತಮ್ಮ ಪತಿ ಮತ್ತು ಮಗನ ಜೊತೆ ಮುಂಬೈನಲ್ಲಿ ನಡೆದ ಗಣೇಶ ಚತುರ್ಥಿ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಕ್ಯಾಮರಾ ಕಣ್ಣಿಗೆ ಬಿದ್ದ ಕತ್ರಿನಾ ಕೈಫ್, ಕ್ಷಣಾರ್ಧದಲ್ಲಿ ಬ್ರೇಕಿಂಗ್ ನ್ಯೂಸ್ ಆದರು. ಮದುವೆಗೂ ಮುನ್ನ ಜೀರೋ ಸೈಜ್‌ನಲ್ಲಿದ್ದ ಅವರು, ಈಗ ದಪ್ಪಗಾಗಿದ್ದನ್ನು ನೋಡಿ ನೆಟ್ಟಿಗರು ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ಅವರ ಹಳೆಯ ಫೋಟೋಗಳನ್ನು ಈಗಿನ ಫೋಟೋಗಳ ಜೊತೆ ಹೋಲಿಕೆ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ.

ನಟಿಯರನ್ನೇ ಬಿಡದ ಬಾಡಿ ಶೇಮಿಂಗ್

ನಟಿ ಕತ್ರಿನಾ ಕೈಫ್ ಅವರ ದೇಹದಲ್ಲಾದ ಬದಲಾವಣೆ ಬಗ್ಗೆ ಈಗ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಇದು ಕೇವಲ ಕತ್ರಿನಾಗೆ ಮಾತ್ರ ಆಗಿಲ್ಲ. ಇದಕ್ಕೂ ಮುನ್ನ 'ಕಾನ್ಸ್ 2026' (Cannes 2026) ಚಲನಚಿತ್ರೋತ್ಸವದಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ಅವರನ್ನು ಕೂಡ ಇದೇ ರೀತಿ ಟ್ರೋಲ್ ಮಾಡಲಾಗಿತ್ತು. ದಪ್ಪಗಾಗುವುದು ಅಂದರೆ ಕೆಲವರಿಗೆ ಯಾಕಿಷ್ಟು ಕೀಳಾಗಿ ಕಾಣುತ್ತೆ? ದೇಹದ ತೂಕ ಹೆಚ್ಚಿರುವವರನ್ನು ಯಾಕೆ ಟ್ರೋಲ್ ಮಾಡ್ತಾರೆ? ಈ ಮನಸ್ಥಿತಿಗೆ ಕಾರಣವೇನು?

ದಪ್ಪಗಿದ್ದರೆ ತಪ್ಪೇನು?

ನಟಿ ಕತ್ರಿನಾ ಕೈಫ್ ಸಣ್ಣಗಿದ್ದಾಗ ಅವರ ಸೌಂದರ್ಯವನ್ನು ಹೊಗಳಿದ ಅದೇ ಜನ, ಈಗ ಅವರು ದಪ್ಪಗಾದ ತಕ್ಷಣ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಇದು ಯಾಕೆ ಹೀಗಾಗುತ್ತಿದೆ? ದಪ್ಪಗಿರುವವರನ್ನು ಸಮಾಜ ಯಾಕೆ ಹೀಗೆ ಗೇಲಿ ಮಾಡುತ್ತದೆ?

ಸಮಾಜ ವಿಜ್ಞಾನದಲ್ಲಿ ಇದನ್ನು 'ಫ್ಯಾಟ್‌ಫೋಬಿಯಾ' (Fatphobia) ಅಂತ ಕರೆಯುತ್ತಾರೆ. ಇದು ಕೇವಲ ವೈಯಕ್ತಿಕ ದ್ವೇಷವಲ್ಲ. ಒಬ್ಬರ ದೇಹದ ಗಾತ್ರವನ್ನು ಇಟ್ಟುಕೊಂಡು ಅವರನ್ನು ಕೀಳಾಗಿ ನೋಡುವ ಒಂದು ಕೆಟ್ಟ ವ್ಯವಸ್ಥೆ ಇದು. ಇದಕ್ಕೆ ಮುಖ್ಯ ಕಾರಣ, ಭಾರತೀಯ ಸಿನಿಮಾ ಮತ್ತು ನಾಟಕಗಳಲ್ಲಿ ದಪ್ಪಗಿರುವವರನ್ನು ಕಾಮಿಡಿ ಪೀಸ್ ಆಗಿ ಬಳಸುವುದು. 2025ರಲ್ಲಿ ಮಲಯಾಳಂ ಸಿನಿಮಾ ಬಗ್ಗೆ ಬಂದ ಒಂದು ರಿಪೋರ್ಟ್ ಈ ವಿಚಾರವನ್ನು ಸ್ಪಷ್ಟವಾಗಿ ಹೇಳಿದೆ.

ದಪ್ಪಗಿರುವ ಪಾತ್ರಗಳನ್ನು ಕಾಮಿಡಿಗಾಗಿ ತೋರಿಸುವುದರಿಂದ, ಆ ಸಿನಿಮಾಗಳನ್ನು ನೋಡಿ ಬೆಳೆಯುವ ಜನ ನಿಜ ಜೀವನದಲ್ಲೂ ದಪ್ಪಗಿರುವವರನ್ನು ಗೇಲಿ ಮಾಡಲು ಕಲಿತುಬಿಡುತ್ತಾರೆ. ಭಾರತೀಯ ಸಮಾಜದಲ್ಲಿ ಈ 'ಬಾಡಿ ಶೇಮಿಂಗ್' (Body shaming) ಸಂಸ್ಕೃತಿಯನ್ನು ಹುಟ್ಟುಹಾಕಿದ್ದೇ ಸಿನಿಮಾಗಳು ಮತ್ತು ನಾಟಕಗಳು. ಇದು ಕೇವಲ ದೇಹದ ತೂಕಕ್ಕೆ ಮಾತ್ರ ಸೀಮಿತವಾಗಿಲ್ಲ, ವಿಕಲಚೇತನರನ್ನು ಗೇಲಿ ಮಾಡುವುದಕ್ಕೂ ಸಾಕಷ್ಟು ಉದಾಹರಣೆಗಳನ್ನು ಕೊಡಬಹುದು.

ಭಾರತದಲ್ಲಿ ಬೊಜ್ಜಿನ ಸಮಸ್ಯೆ

ಒಂದು ಅಧ್ಯಯನದ ಪ್ರಕಾರ, ಭಾರತದಲ್ಲಿ ದೇಹದ ತೂಕ ಹೆಚ್ಚಿರುವವರ ಪೈಕಿ ಶೇ. 71ರಷ್ಟು ಜನರಿಗೆ ತಮ್ಮ ತೂಕವನ್ನು ನೆನೆದು ತಮ್ಮ ಮೇಲೆಯೇ ಅಸಹ್ಯವಿದೆ. ಶೇ. 74.6ರಷ್ಟು ಜನ ತಮ್ಮ ತೂಕದ ಬಗ್ಗೆ ಯೋಚಿಸಿ ಖಿನ್ನತೆಗೆ ಒಳಗಾಗಿದ್ದಾರೆ. ಅರ್ಧಕ್ಕಿಂತ ಹೆಚ್ಚು ಜನ ತಮ್ಮನ್ನು ತಾವೇ ದ್ವೇಷಿಸಿಕೊಳ್ಳುತ್ತಾರೆ. ಶೇ. 50ರಷ್ಟು ಜನ, ದೇಹದ ತೂಕ ಕಡಿಮೆ ಮಾಡಿಕೊಳ್ಳುವವರೆಗೆ ತಮಗೆ ಸಮಾಜದಲ್ಲಿ ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲ ಎಂದು ನಂಬಿದ್ದಾರೆ.

ದಪ್ಪಗಿರುವವರನ್ನು ಸಮಾಜ ಸೋಮಾರಿಗಳು, ದುರ್ಬಲರು ಅಥವಾ ಇಚ್ಛಾಶಕ್ತಿ ಇಲ್ಲದವರು ಅಂತಲೇ ನೋಡುತ್ತದೆ. ಈ ಸಮಸ್ಯೆ ಕೇವಲ ಹೊರಗಡೆ ಮಾತ್ರವಲ್ಲ, ಕೆಲಸ ಮಾಡುವ ಆಫೀಸ್‌ಗಳಲ್ಲೂ ಇದೆ. ಆಫೀಸ್‌ನಲ್ಲಿ ಜೊತೆಗಿರುವ ಸಹೋದ್ಯೋಗಿಗಳು ಕೂಡ ಇದೇ ಮನಸ್ಥಿತಿಯಲ್ಲಿರುತ್ತಾರೆ. ದೆಹಲಿಯಲ್ಲಿರುವ ಬಹುರಾಷ್ಟ್ರೀಯ ಕಂಪನಿ (MNC) ಉದ್ಯೋಗಿಗಳ ಬಳಿ ನಡೆಸಿದ ಅಧ್ಯಯನದಲ್ಲಿ, ದೇಹದ ತೂಕವನ್ನು ಗೇಲಿ ಮಾಡುವುದು ದೊಡ್ಡ ಮಟ್ಟದ ಮಾನಸಿಕ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂದು ತಿಳಿದುಬಂದಿದೆ. ಇದರಿಂದಾಗಿ ದಪ್ಪಗಿರುವವರು ಇತರರೊಂದಿಗೆ ಸಹಜವಾಗಿ ಬೆರೆಯಲು ಹಿಂದೇಟು ಹಾಕುತ್ತಾರೆ.

2001ರಲ್ಲಿ, ಯೇಲ್ ವಿಶ್ವವಿದ್ಯಾಲಯದ ಸಂಶೋಧಕರಾದ ರೆಬೆಕಾ ಪುಲ್ ಮತ್ತು ಕೆಲ್ಲಿ ಬ್ರೌನೆಲ್ ಒಂದು ಸತ್ಯವನ್ನು ಬಹಿರಂಗಪಡಿಸಿದರು. ದಪ್ಪಗಿರುವವರು ಕೆಲಸ, ಶಿಕ್ಷಣ ಮತ್ತು ವೈದ್ಯಕೀಯ ಚಿಕಿತ್ಸೆಗಳಲ್ಲಿ ದೊಡ್ಡ ಮಟ್ಟದ ತಾರತಮ್ಯವನ್ನು ಎದುರಿಸುತ್ತಾರೆ ಎಂದು ಅವರು ಹೇಳಿದರು. ಶೇ. 28ರಷ್ಟು ಶಿಕ್ಷಕರು, ಒಬ್ಬ ವ್ಯಕ್ತಿ ದಪ್ಪಗಿರುವುದು ತುಂಬಾ ಕೆಟ್ಟ ವಿಚಾರ ಎಂದು ನಂಬಿದ್ದಾರೆ. ಶೇ. 24ರಷ್ಟು ನರ್ಸ್‌ಗಳು, ದಪ್ಪಗಿರುವ ರೋಗಿಗಳನ್ನು ನೋಡಿ ಮುಖ ಸಿಂಡರಿಸುತ್ತಾರೆ.

ವೈದ್ಯಕೀಯ ಕ್ಷೇತ್ರದಲ್ಲೂ ತಾರತಮ್ಯ

ಇದರಲ್ಲಿ ಅತ್ಯಂತ ಆಘಾತಕಾರಿ ವಿಚಾರ ಅಂದರೆ, ದಪ್ಪಗಿರುವವರು ವೈದ್ಯರ ಬಳಿ ಹೋಗುವುದಕ್ಕೇ ಹಿಂದೇಟು ಹಾಕುತ್ತಾರೆ. ವೈದ್ಯರು ತಮ್ಮನ್ನು ಗೇಲಿ ಮಾಡಬಹುದು ಎಂಬ ಭಯದಲ್ಲಿ ಹಲವರು ಚಿಕಿತ್ಸೆಯನ್ನೇ ತೆಗೆದುಕೊಳ್ಳುವುದಿಲ್ಲ. ಇದರಿಂದಾಗಿ ಅವರು ದೊಡ್ಡ ಮಟ್ಟದ ಖಿನ್ನತೆಗೆ ಒಳಗಾಗುತ್ತಾರೆ.

ದಪ್ಪಗಿರುವವರ ಜೊತೆ ಹೇಗೆ ನಡೆದುಕೊಳ್ಳಬೇಕು?

ಮಗು ಹುಟ್ಟಿದ ಮೇಲೆ ಯಾವುದೇ ಮಹಿಳೆಗೆ ದೇಹದ ತೂಕ ಹೆಚ್ಚಾಗುವುದು ತುಂಬಾ ಸಹಜವಾದ ವಿಚಾರ. ಅದಕ್ಕಾಗಿ ಅವರನ್ನು ಟ್ರೋಲ್ ಮಾಡುವುದು ಅಥವಾ ಆ ಮಹಿಳೆ ಕ್ಷಮೆ ಕೇಳುವಂತಹ ಪರಿಸ್ಥಿತಿ ನಿರ್ಮಾಣ ಮಾಡುವುದು ತಪ್ಪು. ಯಾವುದೇ ಅಂಜಿಕೆ ಇಲ್ಲದೆ ಅವರು ವೈದ್ಯರ ಬಳಿ ಹೋಗುವಂತಹ ವಾತಾವರಣವನ್ನು ನಾವು ನಿರ್ಮಾಣ ಮಾಡಬೇಕು. ಆಫೀಸ್‌ನಲ್ಲಾಗಲಿ ಅಥವಾ ಕೆಲಸ ಮಾಡುವ ಜಾಗದಲ್ಲಾಗಲಿ, ಒಬ್ಬರ ಊಟದ ತಟ್ಟೆಯ ಬಗ್ಗೆಯಾಗಲಿ ಅಥವಾ ದೇಹದ ಗಾತ್ರದ ಬಗ್ಗೆಯಾಗಲಿ ಯಾರೂ ಕಮೆಂಟ್ ಮಾಡಬಾರದು. ಅವರ ಬೆನ್ನ ಹಿಂದೆ ಪಿಸುಗುಡುವುದು, ಎದುರುಗಡೆ ಗೇಲಿ ಮಾಡುವುದು ಮಾಡಬಾರದು. ಶಾಲೆಗಳಲ್ಲಿ ಬಾಡಿ ಶೇಮಿಂಗ್‌ಗೆ ಹೆದರಿ ಮಕ್ಕಳು ಅಳುವ ಪರಿಸ್ಥಿತಿ ಬದಲಾಗಬೇಕು. ಕಾಲ ಬದಲಾದಂತೆ ನಮ್ಮ ಯೋಚನಾ ಲಹರಿಯೂ ಬದಲಾಗಬೇಕು.