ಖಾಸಗಿ ಕಂಪನಿಯ ಕಡತ ವಿಲೇವಾರಿ ಮಾಡಲು ಪತ್ನಿಯ ಮೂಲಕ 10 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಯನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. 15 ಲಕ್ಷಕ್ಕೆ ಬೇಡಿಕೆಯಿಟ್ಟು 10 ಲಕ್ಷಕ್ಕೆ ಡೀಲ್ ಕುದುರಿಸಿದ್ದ 2020ರ ಬ್ಯಾಚ್‌ನ ಐಸಿಎಎಸ್ ಅಧಿಕಾರಿ ಸಂದೀಪ್ ಸದ್ಯ ಸಿಬಿಐ ಬಲೆಗೆ ಬಿದ್ದಿದ್ದಾನೆ.

ನವದೆಹಲಿ: ಖಾಸಗಿ ಕಂಪನಿಯೊಂದರ ಕಡತ ವಿಲೇವಾರಿ ಮಾಡಲು 10 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಅಧಿಕಾರಿಯನ್ನು ಸಿಬಿಐ (CBI) ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ. ವಿಶೇಷವೆಂದರೆ ಈ ಅಧಿಕಾರಿ ತನ್ನ ಪತ್ನಿಯ ಮೂಲಕ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಯಾರೀ ಅಧಿಕಾರಿ?

ಬಂಧಿತ ಅಧಿಕಾರಿಯನ್ನು 2020ರ ಬ್ಯಾಚ್‌ನ ಇಂಡಿಯನ್ ಸಿವಿಲ್ ಅಕೌಂಟ್ಸ್ ಸರ್ವಿಸ್ (ICAS) ಅಧಿಕಾರಿ ಸಂದೀಪ್ ಎಂದು ಗುರುತಿಸಲಾಗಿದೆ. ಇವರು ವಾರ್ತಾ ಮತ್ತು ಪ್ರಸಾರ ಸಚಿವಾಲಯದಲ್ಲಿ ಆಂತರಿಕ ಹಣಕಾಸು ಸಲಹೆಗಾರ (IFA) ಹಾಗೂ ಡೆಪ್ಯುಟಿ ಕಂಟ್ರೋಲರ್ ಆಫ್ ಅಕೌಂಟ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಸಂದೀಪ್ ಅವರು ಖಾಸಗಿ ಕಂಪನಿಯೊಂದರ ಗುತ್ತಿಗೆ ನವೀಕರಣಕ್ಕೆ (Renewal file) ಸಂಬಂಧಿಸಿದ ಕಡತವನ್ನು ವಿಲೇವಾರಿ ಮಾಡಲು ಉದ್ಯಮಿಯೊಬ್ಬರಿಂದ 15 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ನಂತರ ಮಾತುಕತೆ ನಡೆಸಿ 10 ಲಕ್ಷ ರೂಪಾಯಿ ನೀಡಲು ಒಪ್ಪಿಗೆ ಸೂಚಿಸಲಾಗಿತ್ತು. ಹಣ ನೀಡದಿದ್ದರೆ ಕಡತವನ್ನು ವಿಲೇವಾರಿ ಮಾಡದೆ ವಿಳಂಬ ಮಾಡುವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಲಂಚದ ಹಣಕ್ಕೆ ಬೇಡಿಕೆಯಿಟ್ಟ ಬಗ್ಗೆ ಉದ್ಯಮಿಯು ಸಿಬಿಐಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಮಂಗಳವಾರ ಸಿಬಿಐ ಅಧಿಕಾರಿಗಳು ಸಾಕ್ಷಿ ಸಮೇತ ಬಲೆ ಬೀಸಿದ್ದರು. ಸಂದೀಪ್ ಅವರ ಸೂಚನೆಯಂತೆ ಅವರ ಪತ್ನಿಯು ಲಂಚದ 10 ಲಕ್ಷ ರೂಪಾಯಿ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ನಡೆಸಿ ಹಣವನ್ನು ವಶಪಡಿಸಿಕೊಂಡಿದ್ದಾರೆ. ತಾನು ನೇರವಾಗಿ ಹಣ ಪಡೆದರೆ ಸಿಕ್ಕಿಬೀಳುವ ಭಯದಿಂದ ಸಂದೀಪ್ ತನ್ನ ಪತ್ನಿಯ ಮೂಲಕ ಹಣ ಪಡೆಯುವ ಪ್ಲಾನ್ ಮಾಡಿದ್ದರು. ಆದರೆ ಸಿಬಿಐ ಹದ್ದಿನ ಕಣ್ಣು ಈ ತಂತ್ರವನ್ನೂ ವಿಫಲಗೊಳಿಸಿದೆ. ಸದ್ಯ ಸಂದೀಪ್ ಅವರನ್ನು ಬಂಧಿಸಲಾಗಿದ್ದು, ಅವರ ಪತ್ನಿಯ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ. ಈ ಘಟನೆಯು ಕೇಂದ್ರ ಸಚಿವಾಲಯದ ಉನ್ನತ ಮಟ್ಟದ ಅಧಿಕಾರಿಗಳಲ್ಲಿ ಭ್ರಷ್ಟಾಚಾರ ಎಷ್ಟರ ಮಟ್ಟಿಗೆ ಬೇರೂರಿದೆ ಎಂಬುದಕ್ಕೆ ಕನ್ನಡಿ ಹಿಡಿದಿದೆ.