ಮದುವೆ, ಜೀವನ ಸಂಗಾತಿ ಮತ್ತು ಮಾತೃತ್ವದ ಬಗ್ಗೆ ನಟಿ ಶ್ರುತಿ ಹಾಸನ್ ಮುಕ್ತವಾಗಿ ಮಾತನಾಡಿದ್ದಾರೆ. ಸೋಹಾ ಅಲಿ ಖಾನ್ ನಡೆಸಿಕೊಡುವ ‘ಆಲ್ ಅಬೌಟ್ ಹರ್’ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಶ್ರುತಿ, ಜೀವನದಲ್ಲಿ ಸಂಗಾತಿ ಬೇಕಾದರೂ ಮದುವೆಯೇ ಅನಿವಾರ್ಯವಲ್ಲ ಎಂದು ಹೇಳಿದ್ದಾರೆ.

ನಟಿ ಶ್ರುತಿ ಹಾಸನ್ ತಮ್ಮ ವೈಯಕ್ತಿಕ ಜೀವನದ ವಿಚಾರಗಳ ಬಗ್ಗೆ ಎಂದಿಗೂ ಮುಕ್ತವಾಗಿ ಮಾತನಾಡುವವರಲ್ಲಿ ಒಬ್ಬರು. ಮದುವೆ, ಜೀವನ ಸಂಗಾತಿ ಹಾಗೂ ಮಾತೃತ್ವದ ಕುರಿತ ಅವರ ನೇರ ನುಡಿಗಳು ಇದೀಗ ಮತ್ತೆ ಚರ್ಚೆಗೆ ಗ್ರಾಸವಾಗಿವೆ. ಬಾಲಿವುಡ್ ನಟಿ ಸೋಹಾ ಅಲಿ ಖಾನ್ ನಡೆಸಿಕೊಡುವ ‘ಆಲ್ ಅಬೌಟ್ ಹರ್’ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದ ಶ್ರುತಿ ಹಾಸನ್, ಮದುವೆಯೇ ಜೀವನದ ಏಕೈಕ ಚೌಕಟ್ಟು ಅಲ್ಲ ಎಂಬ ತಮ್ಮ ನಿಲುವನ್ನು ಸ್ಪಷ್ಟವಾಗಿ ಹಂಚಿಕೊಂಡಿದ್ದಾರೆ.

‘ಜೀವನದಲ್ಲಿ ಸಂಗಾತಿ ಬೇಕು, ಆದರೆ ಮದುವೆಯೇ ಅನಿವಾರ್ಯವಲ್ಲ’

ತಮ್ಮ ಜೀವನದಲ್ಲಿ ಒಬ್ಬ ಅರ್ಥಮಾಡಿಕೊಳ್ಳುವ ಸಂಗಾತಿ ಇರಬೇಕು ಎಂಬುದು ನಿಜ. ಆದರೆ ಆ ಸಂಬಂಧಕ್ಕೆ ಸಮಾಜ ರೂಪಿಸಿರುವ ಮದುವೆಯ ಚೌಕಟ್ಟಿನೊಳಗೆ ಬರಲೇಬೇಕು ಎಂಬ ನಿಯಮವನ್ನು ತಾವು ಒಪ್ಪುವುದಿಲ್ಲ ಎಂದು ಶ್ರುತಿ ಹೇಳಿದ್ದಾರೆ. ಈ ಹಿಂದೆ ತಮ್ಮ ಜೀವನದಲ್ಲೂ ಮದುವೆಯ ಹಂತದವರೆಗೆ ಹೋಗಿದ್ದ ಸಂದರ್ಭವೊಂದಿತ್ತು. ಆದರೆ ಸಾಕಷ್ಟು ಯೋಚಿಸಿದ ಬಳಿಕ ಆ ನಿರ್ಧಾರದಿಂದ ಹಿಂದೆ ಸರಿದಿದ್ದಾಗಿ ಅವರು ಬಹಿರಂಗಪಡಿಸಿದ್ದಾರೆ.

ಮದುವೆ ಎನ್ನುವುದು ಕೇವಲ ಕಾನೂನುಬದ್ಧ ದಾಖಲೆಗಳಿಗೆ ಸಹಿ ಹಾಕುವುದರಿಂದ ಅಥವಾ ದೊಡ್ಡ ಸಮಾರಂಭ ನಡೆಸುವುದರಿಂದ ಸಾಬೀತಾಗುವ ಸಂಬಂಧವಲ್ಲ. ಪರಸ್ಪರ ಗೌರವ, ಪ್ರೀತಿ ಮತ್ತು ಪ್ರತಿದಿನ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಜೊತೆಯಾಗಿ ಸಾಗುವುದೇ ನಿಜವಾದ ಬಾಂಧವ್ಯ ಎಂದು ಶ್ರುತಿ ಅಭಿಪ್ರಾಯಪಟ್ಟಿದ್ದಾರೆ.

‘ಮದುವೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಬದಲು...’

ಸಂಪ್ರದಾಯಗಳನ್ನು ಗೌರವಿಸುವುದಾಗಿ ಹೇಳಿರುವ ಶ್ರುತಿ, ಮದುವೆಯ ಹೆಸರಿನಲ್ಲಿ ಅದ್ಧೂರಿತನಕ್ಕಾಗಿ ಅಪಾರ ಹಣ ಖರ್ಚು ಮಾಡುವುದರ ಬಗ್ಗೆ ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮದುವೆ ಸಮಾರಂಭಕ್ಕಾಗಿ ವ್ಯರ್ಥವಾಗಿ ಖರ್ಚು ಮಾಡುವ ದೊಡ್ಡ ಮೊತ್ತವನ್ನು ಸಂಕಷ್ಟದಲ್ಲಿರುವವರಿಗೆ ಅಥವಾ ಸಮಾಜಕ್ಕೆ ಉಪಯೋಗವಾಗುವ ಒಳ್ಳೆಯ ಕೆಲಸಗಳಿಗೆ ಬಳಸಿದರೆ ಹೆಚ್ಚು ಅರ್ಥಪೂರ್ಣವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.

ಮಕ್ಕಳ ವಿಚಾರದಲ್ಲಿ ಹಿಂದೆ ಕಾಡಿದ್ದ ಆತಂಕ

ಇದೇ ಪಾಡ್‌ಕಾಸ್ಟ್‌ನಲ್ಲಿ ಶ್ರುತಿ ಹಾಸನ್ ತಮ್ಮ ಆರೋಗ್ಯ ಹಾಗೂ ಮಾತೃತ್ವದ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದಾರೆ. ಹಿಂದೆ ಪಿಸಿಓಎಸ್‌ನ ಕೆಲವು ಲಕ್ಷಣಗಳಿಂದಾಗಿ ಮುಂದೆ ಗರ್ಭಧಾರಣೆ ಕಷ್ಟವಾಗಬಹುದು ಎಂಬ ಆತಂಕ ತಮ್ಮನ್ನು ಕಾಡಿತ್ತು ಎಂದು ಶ್ರುತಿ ತಿಳಿಸಿದ್ದಾರೆ. ಈ ಕಾರಣದಿಂದ ಮಕ್ಕಳ ವಿಚಾರ ಬಂದಾಗಲೆಲ್ಲಾ ಮನಸ್ಸಿನಲ್ಲಿ ಭಯ ಮತ್ತು ಚಿಂತೆ ಮೂಡುತ್ತಿತ್ತು ಎಂದು ಅವರು ಹೇಳಿದ್ದಾರೆ.

ಆದರೆ ಇತ್ತೀಚೆಗೆ ತಮ್ಮ ಗೈನಕಾಲಜಿಸ್ಟ್‌ರನ್ನು ಭೇಟಿಯಾಗಿ ಚರ್ಚಿಸಿದ ಬಳಿಕ ಆ ಆತಂಕ ದೂರವಾಗಿದೆ ಎಂದು ಶ್ರುತಿ ತಿಳಿಸಿದ್ದಾರೆ. ತಾಯಿಯಾಗಬೇಕೆಂಬ ಸಹಜ ಆಸೆ ತಮ್ಮಲ್ಲೂ ಇದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಮಾತೃತ್ವಕ್ಕೆ ಮದುವೆಯೇ ಏಕೈಕ ದಾರಿ ಅಲ್ಲ’

ಮಕ್ಕಳನ್ನು ಹೊಂದಲು ಮದುವೆಯೇ ಕಡ್ಡಾಯ ಪೂರ್ವಾಪೇಕ್ಷೆ ಅಲ್ಲ ಎಂಬುದು ಶ್ರುತಿ ಹಾಸನ್ ಅವರ ಸ್ಪಷ್ಟ ಅಭಿಪ್ರಾಯ. ಮದುವೆಯಾಗದೇ ತಾಯಿಯಾಗುವ ಆಯ್ಕೆ ಅಥವಾ ಮಗುವನ್ನು ದತ್ತು ಪಡೆದು ಬೆಳೆಸುವ ಆಯ್ಕೆ ಸೇರಿದಂತೆ ಇಂದಿನ ಕಾಲದಲ್ಲಿ ಮಾತೃತ್ವವನ್ನು ಸ್ವೀಕರಿಸಲು ಹಲವು ಮಾರ್ಗಗಳಿವೆ ಎಂದು ಅವರು ಹೇಳಿದ್ದಾರೆ. ತಮ್ಮ ಜೀವನದಲ್ಲಿ ಅಂತಹ ಆಯ್ಕೆಗಳ ಬಗ್ಗೆಯೂ ಮುಕ್ತ ಮನಸ್ಸಿನಿಂದ ಯೋಚಿಸುವುದಾಗಿ ಶ್ರುತಿ ತಿಳಿಸಿದ್ದಾರೆ.

ಇನ್ನು ಮದುವೆ ಮತ್ತು ಮಾತೃತ್ವದ ಬಗ್ಗೆ ಶ್ರುತಿ ಹಾಸನ್ ಹಂಚಿಕೊಂಡಿರುವ ಈ ನೇರ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿವೆ. ವೈಯಕ್ತಿಕ ಬದುಕಿನ ಆಯ್ಕೆಗಳ ಕುರಿತು ಅವರು ವ್ಯಕ್ತಪಡಿಸಿರುವ ಅಭಿಪ್ರಾಯಕ್ಕೆ ನೆಟ್ಟಿಗರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.