ಅನಂತ್ ನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಗೌರವ ಸ್ವೀಕರಿಸಿದ ಹಿರಿಯ ನಟನಿಗೆ ರಿಷಬ್ ಶೆಟ್ಟಿ ಅಭಿನಂದನೆ.

ಐದು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಿರಿಯ ನಟ ಅನಂತ್ ನಾಗ್ ಅವರ ಸಿನಿ ಪಯಣಕ್ಕೆ ಇದೀಗ ಅತ್ಯುನ್ನತ ಗೌರವದ ಗರಿ ಮೂಡಿದೆ. ಕನ್ನಡ ಮಾತ್ರವಲ್ಲದೆ ಹಿಂದಿ ಸೇರಿದಂತೆ ವಿವಿಧ ಭಾರತೀಯ ಭಾಷೆಗಳ ಸಿನಿಮಾಗಳಲ್ಲಿ ತಮ್ಮ ಅಭಿನಯದ ಮೂಲಕ ಗುರುತಿಸಿಕೊಂಡಿರುವ ಅನಂತ್ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಗುಜರಾತ್‌ನ ಏಕ್ತಾ ನಗರದಲ್ಲಿ ಸೆಪ್ಟೆಂಬರ್ 22ರಂದು ನಡೆದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅನಂತ್ ನಾಗ್ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಿದರು. 78 ವರ್ಷದ ಹಿರಿಯ ನಟನ ಐದು ದಶಕಗಳಿಗೂ ಮೀರಿದ ಸಿನಿ ಸೇವೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ.

'ನನ್ನ ಪಾಲಿಗೆ ದೊಡ್ಡ ಗೌರವ'

ಅನಂತ್ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಚಿತ್ರರಂಗದ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದರು. ಇದೀಗ ಪ್ರಶಸ್ತಿ ಸ್ವೀಕರಿಸುವ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳಿಂದಲೂ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕೂಡ ಅನಂತ್ ನಾಗ್ ಅವರ ಈ ಸಾಧನೆಯನ್ನು ವಿಶೇಷವಾಗಿ ಸಂಭ್ರಮಿಸಿದ್ದಾರೆ.

'ಚಿಕ್ಕವಯಸ್ಸಿನಲ್ಲಿ ನೆಲದ ಮೇಲೆ ಕುಳಿತು TV ಯಲ್ಲಿ ನಿಮ್ಮನ್ನು ನೋಡಿಕೊಂಡು ಬೆಳೆದ ನನಗೆ , ನಿಮ್ಮನ್ನು ನಿರ್ದೇಶನ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪಾಲಿಗೆ ದೊಡ್ಡ ಗೌರವ. ಅಂತಹ ನನ್ನ ನೆಚ್ಚಿನ ಕಲಾವಿದರು ಗೌರವಾನ್ವಿತ ರಾಷ್ಟ್ರಪತಿಗಳಿಂದ ಸಿನಿಮಾ ರಂಗದ ಅತ್ಯುನ್ನತ ಪ್ರಶಸ್ತಿಯಾದ " ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿದ್ದು " ಪ್ರತಿಯೊಬ್ಬ ಅಭಿಮಾನಿಗೂ ಸಂತೋಷ ಮನತುಂಬಿ ಬರುವಂತಹ ಕ್ಷಣ' ಎಂದು ಗೌರವ ವ್ಯಕ್ತಪಡಿಸಿದ್ದಾರೆ.

ವೇದಿಕೆಯಲ್ಲಿ ಅನಂತ್ ನಾಗ್; ನೆನಪಾದ ಐದು ದಶಕಗಳ ಸಿನಿ ಪಯಣ

ಅನಂತ್ ನಾಗ್ ಅವರನ್ನು ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಆಹ್ವಾನಿಸುವ ಮುನ್ನ, ಅವರ ಸಿನಿಮಾ ಹಾಗೂ ಕಿರುತೆರೆ ಕ್ಷೇತ್ರದ ಸುದೀರ್ಘ ಕೊಡುಗೆಯನ್ನು ಪರಿಚಯಿಸುವ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಹಲವು ವರ್ಷಗಳ ಅಭಿನಯ ಪಯಣ, ವಿಭಿನ್ನ ಭಾಷೆಗಳ ಸಿನಿಮಾಗಳಲ್ಲಿನ ಕೆಲಸ ಹಾಗೂ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಈ ಮೂಲಕ ಸ್ಮರಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಅನಂತ್ ನಾಗ್, ಈ ಗೌರವ ತಮ್ಮ ಪಾಲಿಗೆ ವಿಶೇಷ ಕ್ಷಣ ಎಂದು ಹೇಳಿಕೊಂಡರು. ಸಮಾರಂಭದಲ್ಲಿ ಭಾಗಿಯಾಗಿರುವುದು ದೊಡ್ಡ ಗೌರವವಾಗಿದ್ದು, ಈ ಕ್ಷಣದ ಮಹತ್ವವನ್ನು ಅರಿತುಕೊಳ್ಳಲು ಪ್ರಯತ್ನಿಸುತ್ತಿರುವುದಾಗಿ ಅವರು ಭಾವುಕರಾಗಿ ಹೇಳಿದರು.

ರಂಗಭೂಮಿಯಿಂದ ಬೆಳ್ಳಿತೆರೆಗೆ...

ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಂಡ ಅನಂತ್ ನಾಗ್, ತಮ್ಮ ನಟನಾ ಬದುಕಿನಲ್ಲಿ ರಂಗಭೂಮಿ ವಹಿಸಿದ ಪ್ರಮುಖ ಪಾತ್ರದ ಕುರಿತು ಮಾತನಾಡಿದರು. ರಂಗಭೂಮಿಯ ಅನುಭವವೇ ತಮ್ಮ ಅಭಿನಯದ ಆರಂಭಿಕ ಹಂತಕ್ಕೆ ಭದ್ರ ಬುನಾದಿ ಹಾಕಿತು ಎಂಬುದನ್ನು ಅವರು ವಿವರಿಸಿದರು.

ಬಳಿಕ ತಮ್ಮ ವೃತ್ತಿಜೀವನದಲ್ಲಿ ಕನ್ನಡ ಚಿತ್ರರಂಗ ನೀಡಿದ ಅವಕಾಶಗಳ ಬಗ್ಗೆಯೂ ಅವರು ಮಾತನಾಡಿದರು. ಹಲವು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದರೂ, ಕರ್ನಾಟಕದಲ್ಲಿ ತಮಗೆ ದೊರೆತ ಅವಕಾಶಗಳು ವಿಭಿನ್ನವಾಗಿದ್ದವು ಎಂದು ಅನಂತ್ ನಾಗ್ ಹೇಳಿದರು. ಕನ್ನಡದ ಹೊಸ ಅಲೆಯ ಚಿತ್ರಗಳು, ಕಲಾತ್ಮಕ ಸಿನಿಮಾಗಳು ಹಾಗೂ ವಾಣಿಜ್ಯ ಚಿತ್ರಗಳ ವಿಭಿನ್ನ ವಾತಾವರಣ ತಮ್ಮನ್ನು ಬೆಂಗಳೂರಿನಲ್ಲೇ ನೆಲೆಸುವಂತೆ ಮಾಡಿತು ಎಂದು ಹೇಳಿದ ಅವರು, ಬೆಂಗಳೂರನ್ನು ತಮ್ಮ ‘ಕರ್ಮಭೂಮಿ’ ಎಂದು ಬಣ್ಣಿಸಿದರು.

ಕನ್ನಡ ಚಿತ್ರರಂಗದ ಹೆಮ್ಮೆಯ ಕ್ಷಣ

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್ ಅವರ ಕ್ಷಣ ಇದೀಗ ಕನ್ನಡ ಚಿತ್ರರಂಗದ ಪಾಲಿಗೆ ಮತ್ತೊಂದು ಸ್ಮರಣೀಯ ಅಧ್ಯಾಯವಾಗಿದೆ. ರಂಗಭೂಮಿಯಿಂದ ಆರಂಭವಾಗಿ ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳ ಚಿತ್ರರಂಗದಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ಸಾಗಿದ ಅವರ ಪಯಣಕ್ಕೆ ಈ ಗೌರವ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ. ಇನ್ನು ಅನಂತ್ ನಾಗ್ ಪ್ರಶಸ್ತಿ ಸ್ವೀಕರಿಸುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಹಿರಿಯ ನಟನ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ತಮ್ಮದೇ ರೀತಿಯಲ್ಲಿ ಸಂಭ್ರಮ ಹಂಚಿಕೊಳ್ಳುತ್ತಿದ್ದಾರೆ.