ರಾಮ್ ಚರಣ್ ನಟನೆಯ 'ಪೆದ್ದಿ' ಸಿನಿಮಾದ 'ಹೆಲ್ಲಲ್ಲಲ್ಲೋ' ಹಾಡು ಬಿಡುಗಡೆಯಾಗಿದೆ. ಎ.ಆರ್. ರೆಹಮಾನ್ ಸಂಗೀತ ನೀಡಿರುವ ಈ ಹಾಡಿನಲ್ಲಿ ರಾಮ್ ಚರಣ್ ಜೊತೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕೂಡ ಹೆಜ್ಜೆ ಹಾಕಿದ್ದಾರೆ.
ಸೂಪರ್‌ಸ್ಟಾರ್ ರಾಮ್ ಚರಣ್ ನಾಯಕರಾಗಿ ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ 'ಪೆದ್ದಿ'ಯಿಂದ ಹೊಸ ಹಾಡೊಂದು ಹೊರಬಂದಿದೆ. 'ಹೆಲ್ಲಲ್ಲಲ್ಲೋ' ಅನ್ನೋ ಟೈಟಲ್‌ನ ಈ ಹಾಡು, ಅಭಿಮಾನಿಗಳನ್ನು ಹುಚ್ಚೆಬ್ಬಿಸುವಂತಹ ಫಾಸ್ಟ್ ಬೀಟ್‌ನಲ್ಲಿದೆ. ಎ.ಆರ್. ರೆಹಮಾನ್ ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರ 2026ರ ಜೂನ್ 4 ರಂದು ವಿಶ್ವಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

ಕೇರಳ ಮತ್ತು ತಮಿಳುನಾಡಿನಲ್ಲಿ ಥಿಂಕ್ ಸ್ಟುಡಿಯೋಸ್ ಈ ಸಿನಿಮಾದ ಮಲಯಾಳಂ ಮತ್ತು ತಮಿಳು ವರ್ಷನ್‌ಗಳನ್ನು ವಿತರಿಸಲಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬುಚಿ ಬಾಬು ಸಾನಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ಇದನ್ನು ನಿರ್ಮಿಸುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಈ ಬಿಗ್ ಬಜೆಟ್ ಚಿತ್ರವನ್ನು ಅರ್ಪಿಸುತ್ತಿವೆ. ಈ ಹಾಡಿನ ಮುಖ್ಯ ಹೈಲೈಟ್ ಅಂದ್ರೆ ನಾಯಕ ರಾಮ್ ಚರಣ್, ಶ್ರುತಿ ಹಾಸನ್ ಮತ್ತು ಜಾನ್ವಿ ಕಪೂರ್ ಅವರ ಭರ್ಜರಿ ಡ್ಯಾನ್ಸ್.
ಅಷ್ಟೇ ಅಲ್ಲ, ನಮ್ಮ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕೂಡ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ರಾಮ್ ಚರಣ್ ಮತ್ತು ಶಿವಣ್ಣ ಇದೇ ಮೊದಲ ಬಾರಿಗೆ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿರುವುದು ವಿಶೇಷ. ಜಾನಿ ಮಾಸ್ಟರ್ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಎ.ಆರ್. ರೆಹಮಾನ್ ಸಂಗೀತದಲ್ಲಿ ಈ ಹಿಂದೆ ಬಿಡುಗಡೆಯಾಗಿದ್ದ ಎರಡು ಹಾಡುಗಳು ಈಗಾಗಲೇ ವಿಶ್ವಾದ್ಯಂತ ಸೂಪರ್ ಹಿಟ್ ಆಗಿವೆ. ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಟ್ರೇಲರ್ ಕೂಡ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್ ಆಗಿ, ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಗಳಿಸಿತ್ತು.
ಚಿತ್ರದ ಹೈಲೈಟ್ ಏನು?
ರಾಮ್ ಚರಣ್ ಈ ಚಿತ್ರದಲ್ಲಿ 'ಪೆದ್ದಿ' ಎಂಬ ಶೀರ್ಷಿಕೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬೃಹತ್ ಕ್ಯಾನ್ವಾಸ್‌ನಲ್ಲಿ ತಯಾರಾದ ಈ ಚಿತ್ರದಲ್ಲಿ ಆಕ್ಷನ್, ಡ್ರಾಮಾ, ರೊಮ್ಯಾನ್ಸ್ ಮತ್ತು ಥ್ರಿಲ್ ಎಲ್ಲವೂ ಇದೆ. ಕಥೆಯಲ್ಲಿ ಕ್ರಿಕೆಟ್, ಕುಸ್ತಿ ಮತ್ತು ಓಟದಂತಹ ಕ್ರೀಡೆಗಳಿಗೂ ಪ್ರಮುಖ ಸ್ಥಾನವಿದೆ. ಅಭಿಮಾನಿಗಳನ್ನು ರೋಮಾಂಚನಗೊಳಿಸುವ ಆಕ್ಷನ್ ದೃಶ್ಯಗಳು ಚಿತ್ರದ ಹೈಲೈಟ್ ಆಗಿರಲಿವೆ. ಈ ಪಾತ್ರಕ್ಕಾಗಿ ರಾಮ್ ಚರಣ್ ತಮ್ಮ ದೇಹವನ್ನು ದೊಡ್ಡ ಮಟ್ಟದಲ್ಲಿ ಬದಲಾಯಿಸಿಕೊಂಡಿದ್ದು, ಇದು ಕೂಡ ಸಾಕಷ್ಟು ಗಮನ ಸೆಳೆದಿದೆ. ಬಾಲಿವುಡ್ ನಟಿ ಜಾನ್ವಿ ಕಪೂರ್ ಈ ಚಿತ್ರದ ನಾಯಕಿ.
ಬಾಲಿವುಡ್ ನಟ ದಿವ್ಯೇಂದು ಶರ್ಮಾ, ಜಗಪತಿ ಬಾಬು, ಬೋಮನ್ ಇರಾನಿ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಫಸ್ಟ್ ಲುಕ್ ಮತ್ತು ಟೈಟಲ್ ಗ್ಲಿಂಪ್ಸ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿತ್ತು. ಈ ಚಿತ್ರ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ.


