ಬಿಗ್ ಬಾಸ್ ಸೀಸನ್ 3ರ ಸ್ಪರ್ಧಿಯಾಗಿದ್ದ ನಟ ಮಾಸ್ಟರ್ ಆನಂದ್, ತಮ್ಮ ಪಯಣದ ಕುರಿತು ಮಾತನಾಡಿದ್ದಾರೆ. ತಾವು ಜಿಮ್ ಏರಿಯಾದಲ್ಲಿ ಮಲಗಿದ್ದಾಗ ತಲೆಯ ಬಳಿ ಹಾವು ಹರಿದುಹೋದ ಭಯಾನಕ ಘಟನೆಯನ್ನು ಮತ್ತು ಆ ಕಾರಣಕ್ಕಾಗಿಯೇ ಬಿಗ್ ಬಾಸ್ ತಂಡ ತಮ್ಮ ಮಲಗುವ ಜಾಗವನ್ನು ಬದಲಾಯಿಸಿದ್ದನ್ನು ಅವರು ಬಹಿರಂಗಪಡಿಸಿದ್ದಾರೆ.
ದೊಡ್ಡವರಾದರೂ ಮಾಸ್ಟರ್ ಆನಂದ್ ಎಂದೇ ಫೇಮಸ್ ಆಗಿರೋ ನಟ ಆನಂದ್ ಬಿಗ್ಬಾಸ್ 3ರ ಸ್ಪರ್ಧಿಯಾಗಿ ಹೋಗಿದ್ದರು. ಇವರ ಆ ಸೀಸನ್ನಲ್ಲಿ ಎರಡನೆಯ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಇದೀಗ ಬಿಗ್ಬಾಸ್ 13ನೇ ಸೀಸನ್ ಶುರುವಾಗಿರುವ ಹಿನ್ನೆಲೆಯಲ್ಲಿ, ತಮ್ಮ Bigg Boss ಪಯಣದ ಕುರಿತು ಮಾತನಾಡಿರುವ ಆನಂದ್ ಅವರು, ಅಂದು ನಡೆದ, ಜೀವನಪೂರ್ತಿ ಮರೆಯದ ಹಾವಿನ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ.
ಟ್ರೋಫಿ ಬೇಡವೆಂದಿದ್ದೆ
ಕಿರಿಕ್ ಕೀರ್ತಿ ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಮಾಸ್ಟರ್ ಆನಂತ್, ಬಿಗ್ಬಾಸ್ ಮನೆಯಲ್ಲಿ ಮಲಗಿದ್ದ ಸಂದರ್ಭಗಲ್ಲಿ ತಲೆ ಹತ್ತಿರ ಹಾವು ಹರಿದುಹೋದ ಭಯಾನಕ ಘಟನೆಯನ್ನು ನೆನಪಿಸಿಕೊಂಡಿದ್ದು, ಭಗವಂತನ ರಕ್ಷಣೆಯಿಂದ ತಾವು ಸೇಫ್ ಆಗಿರುವ ಬಗ್ಗೆ ವಿವರಿಸಿದ್ದಾರೆ. 'ಬಿಗ್ಬಾಸ್ನಲ್ಲಿ 99ನೇ ದಿನವಾಗಿತ್ತು. ಅದು 100 ದಿನಗಳ ಎಪಿಸೋಡ್ ಆಗಿತ್ತು. ಮಾರನೆಯ ದಿನವೇ ಕೊನೆಯ ದಿನವಾಗಿತ್ತು. ಎಲ್ಲರೂ ಮನೆಯಿಂದ ಹೋಗಿ ಕೊನೆಗೆ ಉಳಿದುಕೊಂಡದ್ದರು ಐವರು ಮಾತ್ರ. ಆ ಸಮಯದಲ್ಲಿಯೂ ನಾನು ಮೆಡಿಟೇಷನ್ ಮಾಡುತ್ತಿದ್ದೆ. ಆಗ ನನಗೆ 7 ಬಿಳಿ ಕುದುರೆಗಳು ಓಡಿ ಬಂದು, ಸುತ್ತಲೂ ಗೋಲ್ಡ್ ಡಸ್ಟ್ ಆಯ್ತು. ಆ ರಥದಲ್ಲಿದ್ದ ಸೂರ್ಯ ಭಗವಾನನ ಶಕ್ತಿ ಬಂದು ನನ್ನ ಆಜ್ಞಾ ಚಕ್ರಕ್ಕೆ ಹೊಡೆಯಿತು. ಭಗವಂತ ನನ್ನನ್ನ 90 ದಿನ ಪರೀಕ್ಷಿಸಿ ಗೆಲ್ಲಿಸುತ್ತಿದ್ದಾನೆ ಎನಿಸಿತು ಎಂದು ರೋಚಕ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ಆನಂದ್. ಆದರೆ, ಅಂದು ನಾನು ನನಗೆ ಟ್ರೋಫಿ ಬೇಡ ಎಂದೇ ಹೇಳಿದ್ದೆ. ಅಂದು ಆ ರೀತಿ ಮ್ಯಾನಿಫೆಸ್ಟೇಷನ್ ಮಾಡಿಕೊಂಡಿದ್ದೆ ಎಂದಿರುವ ಆನಂದ್, ಟ್ರೋಫಿ ಮತ್ತು ದುಡ್ಡು ನಿನಗಿಲ್ಲದಿದ್ದರೂ, ಗೆಲುವು ನಿನ್ನದೇ ಎಂದು ಭಗವಂತ ಸೂಚಿಸಿದ್ದ ಎನ್ನುವುದು ಆಚೆಗೆ ಬಂದ ಮೇಲೆ ಅರ್ಥವಾಯ್ತು ಎಂದಿದ್ದಾರೆ.
ತಲೆ ಬಳಿ ಬಂದ ಹಾವು
ಒಂದು ದಿನ ನನಗೆ ನೀವು ಎಂದಿನಂತೆ ಜಿಮ್ ಏರಿಯಾದಲ್ಲಿ ಮಲಗುವಂತಿಲ್ಲ ಎನ್ನುವ ಲೆಟರ್ ಬಂತು. ನಾನು ಆ ಜಾಗದಲ್ಲಿ ಮಲಗುತ್ತಿದ್ದೆ. ಆದರೆ ಯಾಕೆ, ಏನು ಎನ್ನುವ ಪ್ರಶ್ನೆ ಕೇಳುವಂತೆ ಇರಲಿಲ್ಲ. ಕೊನೆಗೆ ಗ್ಲಾಸ್ ಹೌಸ್‌ನ ಕ್ರಿಸ್ಟಲ್ ಏರಿಯಾದಲ್ಲಿ ಮಲಗಲು ಆರಂಭಿಸಿದೆ. ಆದರೆ ಅದು ಯಕ್ಷ ಪ್ರಶ್ನೆಯಾಗಿಯೇ ಉಳಿದಿತ್ತು. ಬಿಗ್ಬಾಸ್ನಿಂದ ಹೊರಕ್ಕೆ ಬಂದ ಮೇಲೆ ಶಾಕಿಂಗ್ ಘಟನೆ ನಡೆದದ್ದು ತಿಳಿಯಿತು. ನಾನು ಮನೆಯಿಂದ ಹೊರಕ್ಕೆ ಬಂದ ಮೇಲೆ ಸುಬ್ಬು ಸರ್ ಹೇಳಿದಾಗಲೇ ನನಗೆ ವಿಷಯ ಗೊತ್ತಾಗಿತ್ತು. ಅದೇನೆಂದರೆ, ನಾನು ಜಿಮ್ ಏರಿಯಾದಲ್ಲಿ ಮಲಗಿದ್ದಾಗ ನನ್ನ ತಲೆ ಹತ್ತಿರವೇ ಒಂದು ಹಾವು ಪಾಸ್ ಆಗಿತ್ತಂತೆ. ಇದನ್ನ ಹೇಳಿದರೆ ಸ್ಪರ್ಧಿಗಳು ಗಾಬರಿಯಾಗ್ತಾರೆ ಎಂಬ ಕಾರಣಕ್ಕೆ ʻಬಿಗ್ ಬಾಸ್ʼ ತಂಡ ತಕ್ಷಣವೇ ಪತ್ರ ಕಳುಹಿಸಿ ನನ್ನನ್ನ ಅಲ್ಲಿಂದ ಬೇರೆಡೆ ಮಲಗುವಂತೆ ಜಾಗ ಬದಲಿಸಿತ್ತು ಎಂದಿದ್ದಾರೆ.
ಇದಕ್ಕೂ ಮೊದಲು ಇನ್ನೊಂದು ಪತ್ರ ಬಂದಿದ್ದ ರೋಚಕ ಘಟನೆಯನ್ನೂ ನೆನಪಿಸಿಕೊಂಡಿದ್ದಾರೆ ಆನಂದ್. ಮನೆಯಲ್ಲಿ ನಾನು ಪ್ರಾಣಾಯಾಮ ಮಾಡುತ್ತಿದ್ದೆ. ಭಸ್ತ್ರಿಕಾ ಪ್ರಾಣಾಯಾಮ ಮಾಡುತ್ತಿದ್ದೆ. ಅದರಲ್ಲಿ ಉಸಿರು ಜೋರಾಗಿ ಎಳೆದು ಹೊರಕ್ಕೆ ಹಾಕಬೇಕು. ಆ ಸೌಂಟ್ ಸದ್ದು ಮೈಕ್‌ನಲ್ಲಿ ಕ್ಯಾಚ್ ಆಗುತ್ತಿತ್ತಂತೆ. ಆದ್ದರಿಂದ ಆ ಪತ್ರದಲ್ಲಿ ನನಗೆ, ಎಲ್ಲರೂ ಮಲಗುವ ಮೊದಲು ಅಥವಾ ಎದ್ದೇಳುವ ಮುನ್ನ ಪ್ರಾಣಾಯಾಮ ಮಾಡಲು ಸೂಚಿಸಲಾಗಿತ್ತು. ಹೀಗಾಗಿ, ಬೆಳಗಿನ ಜಾವ ವ್ಯಾಯಾಮ ಮಾಡಲು ಅನುವಾಗುವಂತೆ ನಾನು ಜಿಮ್ ಮ್ಯಾಟ್ ಹಾಕಿಕೊಂಡು ಮನೆಯ ಆಚೆ ಮಲಗಲು ಪ್ರಾರಂಭಿಸಿದ್ದೆ ಎಂಬುದನ್ನು ನೆನಪಿಸಿಕೊಂಡಿದ್ದಾರೆ.


