ಸಾಲ ತೀರಿಸಲು ಸ್ಮಶಾನದ ಹೆಣವನ್ನು ಸುಟ್ಟು ತನ್ನದೇ ಸಾವಿನ ನಾಟಕವಾಡಿದ್ದ ಕೋಲಾರದ ಅರುಣ್ ರೆಡ್ಡಿ, 11 ವರ್ಷಗಳ ನಂತರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಆಧಾರ್ ಕಾರ್ಡ್ ಸುಳಿವು ಮತ್ತು ಪೊಲೀಸರ ಚಾಣಾಕ್ಷತನದಿಂದಾಗಿ 'ದೃಶ್ಯಂ' ಶೈಲಿಯ ನಾಟಕ ಬಯಲಾಗಿದ್ದು, ಆರೋಪಿ ಈಗ ಜೈಲು ಪಾಲಾಗಿದ್ದಾನೆ.

ಅದು 2015ನೇ ಇಸವಿ. ಕೋಲಾರದ ಕೆ.ಜಿ.ಎಫ್ ವ್ಯಾಪ್ತಿಯಲ್ಲಿ ಸುಟ್ಟು ಕರಕಲಾಗಿದ್ದ ಒಂದು ಹೆಣ ಸಿಗುತ್ತದೆ. ಅದರ ಪಕ್ಕದಲ್ಲೇ ಆಧಾರ್ ಕಾರ್ಡ್, ಮೊಬೈಲ್ ಮತ್ತು ಚಪ್ಪಲಿ ಇರುತ್ತದೆ. ಅದನ್ನು ನೋಡಿ ಅರುಣ್ ಕುಮಾರ್ ರೆಡ್ಡಿ ಎಂಬುವವರ ತಂದೆ ನಾರಾಯಣ ಅವರು, ಇದು ನನ್ನ ಮಗನೇ ಎಂದು ಕಣ್ಣೀರಿಟ್ಟು ಅಂತ್ಯಕ್ರಿಯೆಯನ್ನೂ ಮಾಡುತ್ತಾರೆ. ಅಲ್ಲಿಗೆ ಆ ಕಥೆ ಮುಗಿಯಿತು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, 11 ವರ್ಷಗಳ ನಂತರ ಈಗ ಬಯಲಾಗಿರುವ ಸತ್ಯ ಇಡೀ ಪೊಲೀಸ್ ಇಲಾಖೆಯನ್ನೇ ಬೆಚ್ಚಿಬೀಳಿಸಿದೆ!

ಸಾಲ ತೀರಿಸಲು ಸಾವಿನ ನಾಟಕ

ಕೋಲಾರ ಜಿಲ್ಲೆಯ ಕ್ಯಾಸಂಬಳ್ಳಿಯ ನಿವಾಸಿಯಾಗಿದ್ದ ಅರುಣ್ ಕುಮಾರ್ ರೆಡ್ಡಿಗೆ ಸಾಲದ ಬಾಧೆ ವಿಪರೀತವಾಗಿತ್ತು. ಸ್ನೇಹಿತರಿಂದ ಸಾಕಷ್ಟು ಹಣ ಸಾಲ ಪಡೆದಿದ್ದ ಅರುಣ್, ಅದನ್ನು ತೀರಿಸಲಾಗದೆ ಕಂಗಾಲಾಗಿದ್ದ. ಜೊತೆಗೆ ತನ್ನ ಹೆಸರಿನಲ್ಲಿದ್ದ ಇನ್ಶೂರೆನ್ಸ್ ಹಣವನ್ನು ಪಡೆಯುವ ದುರಾಸೆಯೂ ಇವನಿಗಿತ್ತು. ಈ ಎರಡೂ ಸಮಸ್ಯೆಗಳಿಗೆ ಅವನು ಕಂಡುಕೊಂಡ ದಾರಿ - ತನ್ನದೇ ಸಾವಿನ ನಾಟಕವಾಡುವುದು!

'ದೃಶ್ಯಂ' ಸಿನಿಮಾ ಮಾದರಿಯ ಸ್ಕೆಚ್

ಈ ಕಿಲಾಡಿ ಅರುಣ್ ರೆಡ್ಡಿಗೆ ಸಿನಿಮಾ ನೋಡಿ ಸ್ಫೂರ್ತಿ ಸಿಕ್ಕಿತ್ತು. 2015ರ ಫೆಬ್ರವರಿ 9ರಂದು ಈತ ಒಂದು ಭಯಾನಕ ಸ್ಕೆಚ್ ಹಾಕಿದ. ಮೊದಲು ಸ್ಮಶಾನಕ್ಕೆ ಹೋಗಿ ಅಲ್ಲಿ ಹೂಳಲಾಗಿದ್ದ ಅಪರಿಚಿತ ಹೆಣವೊಂದನ್ನು ಅಗೆದು ಹೊರತೆಗೆದ. ಅದನ್ನು ಚೀಲದಲ್ಲಿ ತುಂಬಿಕೊಂಡು ತನ್ನ ಬೈಕ್‌ನಲ್ಲಿ ತೇಕಲ್-ಕ್ಯಾಸಂಬಳ್ಳಿ ಮುಖ್ಯರಸ್ತೆಯ ನೀಲಗಿರಿ ತೋಪಿಗೆ ತಂದ. ಹೆಣದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ. ಪೊಲೀಸರು ತಪ್ಪು ದಾರಿಗೆ ತುಳಿಯಲಿ ಎಂದು ತನ್ನ ಆಧಾರ್ ಕಾರ್ಡ್, ಮೊಬೈಲ್ ಫೋನ್, ಸಿಮ್ ಕಾರ್ಡ್, ಚಪ್ಪಲಿ ಮತ್ತು ಬೈಕ್ ಅನ್ನು ಆ ಸುಟ್ಟ ಹೆಣದ ಪಕ್ಕದಲ್ಲೇ ಹಾಕಿ ಪರಾರಿಯಾದ.

ಆರಂಭದಲ್ಲಿ ಪೊಲೀಸರು ಇದೊಂದು ಕೊಲೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಅರುಣ್ ತಂದೆ ಕೂಡ ಅದು ತನ್ನ ಮಗನೆಂದೇ ನಂಬಿ ಅಂತ್ಯಕ್ರಿಯೆ ಮಾಡಿದ್ದರು. ತನಿಖೆ ಮುಂದುವರಿದಾಗ ಅರುಣ್ ಸ್ನೇಹಿತರಿಂದ ಈತ ಬದುಕಿರುವ ಬಗ್ಗೆ ಪೊಲೀಸರಿಗೆ ಸಣ್ಣ ಸುಳಿವು ಸಿಕ್ಕಿತು. ಕೂಡಲೇ ಎಚ್ಚೆತ್ತ ಪೊಲೀಸರು ಆ ಸುಟ್ಟ ದೇಹದ DNA ಪರೀಕ್ಷೆ ನಡೆಸಿದಾಗ ಅದು ಅರುಣ್ ದೇಹವೇ ಅಲ್ಲ ಎನ್ನುವುದು ಸಾಬೀತಾಯಿತು! ಅರುಣ್‌ನನ್ನು ಪೊಲೀಸರು ಆಗಲೇ ಬಂಧಿಸಿದ್ದರು. ಆದರೆ ಜಾಮಿನಿನ ಮೇಲೆ ಹೊರಬಂದ ಈತ ಮತ್ತೆ ನಾಪತ್ತೆಯಾಗಿಬಿಟ್ಟಿದ್ದ.

ಜಾಮಿನಿನ ಮೇಲೆ ಬಂದ ನಂತರ ಅರುಣ್ ರೆಡ್ಡಿ ತನ್ನ ಹಳೆಯ ಬದುಕನ್ನು ಸಂಪೂರ್ಣವಾಗಿ ಮರೆತುಬಿಟ್ಟಿದ್ದ. ತನ್ನ ಕುಟುಂಬದವರನ್ನು ಸಂಪರ್ಕಿಸುವ ಗೋಜಿಗೆ ಹೋಗಲೇ ಇಲ್ಲ. ಚೆನ್ನೈಗೆ ಪರಾರಿಯಾದ ಈತ, ಅಲ್ಲಿ ಬೇರೆಯೇ ಹೆಸರಿನಲ್ಲಿ ಜೀವನ ಆರಂಭಿಸಿದ್ದ. ಅಚ್ಚರಿಯೆಂದರೆ ಅಲ್ಲಿ ಮದುವೆಯಾಗಿ ಮಕ್ಕಳನ್ನೂ ಮಾಡಿಕೊಂಡಿದ್ದ! ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಅರುಣ್‌ನ ಈ ಕರಾಳ ಹಳೆಯ ಬದುಕಿನ ಬಗ್ಗೆ ಆತನ ಪತ್ನಿಗೆ ಕಿಂಚಿತ್ತೂ ಸುಳಿವಿರಲಿಲ್ಲ.

11 ವರ್ಷಗಳ ಕಾಲ ಪೊಲೀಸರ ಕಣ್ಣಿಗೆ ಮಣ್ಣೆರಚಿದ್ದ ಅರುಣ್ ಸಿಕ್ಕಿಬಿದ್ದಿದ್ದು ತನ್ನದೇ ಒಂದು ಸಣ್ಣ ತಪ್ಪಿನಿಂದ. ಹಳೆಯ ಕೇಸ್‌ಗಳನ್ನು ಪರಿಶೀಲಿಸುವಾಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಕೇಸ್ ಅನ್ನು ಮತ್ತೆ ಕೆದಕಲು ಸೂಚಿಸಿದರು. ಕ್ಯಾಸಂಬಳ್ಳಿ ಪೊಲೀಸರಾದ ಹೆಡ್ ಕಾನ್ಸ್ಟೆಬಲ್ ಚಂದ್ರಶೇಖರ್ ಮತ್ತು ಕಾನ್ಸ್ಟೆಬಲ್ ಧನ್ ಸಿಂಗ್ ಅವರು ಅರುಣ್ ಆಧಾರ್ ವಿವರಗಳನ್ನು ಟ್ರ್ಯಾಕ್ ಮಾಡಲು ಶುರು ಮಾಡಿದರು. ಈ ವೇಳೆ ಅರುಣ್ ತನ್ನ ಆಧಾರ್ ಕಾರ್ಡ್ ಬಳಸಿ ಚೆನ್ನೈನಲ್ಲಿ ಹೊಸ ಸಿಮ್ ಕಾರ್ಡ್ ಖರೀದಿಸಿರುವುದು ಪತ್ತೆಯಾಯಿತು. ಅವನ ಲೊಕೇಶನ್ ಮೇಲೆ ನಿಗಾ ಇಟ್ಟ ಪೊಲೀಸರು ಈ ಬಾರಿ ಯಾವುದೇ ತಪ್ಪು ಮಾಡದೆ ಚೆನ್ನೈಗೆ ತೆರಳಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊನೆಗಾಲ

11 ವರ್ಷಗಳ ಕಾಲ ಸಾವಿನ ನಾಟಕವಾಡಿ ಸುಳ್ಳು ಸಾಕ್ಷ್ಯ ಸೃಷ್ಟಿಸಿ, ಪೊಲೀಸರನ್ನೇ ದಿಕ್ಕು ತಪ್ಪಿಸಿದ್ದ ಅರುಣ್ ರೆಡ್ಡಿ ಈಗ ನ್ಯಾಯಾಂಗ ಬಂಧನದಲ್ಲಿದ್ದಾನೆ. ಮಗ ಸತ್ತೇ ಹೋದ ಎಂದುಕೊಂಡಿದ್ದ ತಂದೆ ಮತ್ತು ಪತಿಯ ಹಳೆಯ ಜೀವನವೇ ಗೊತ್ತಿಲ್ಲದ ಚೆನ್ನೈನ ಪತ್ನಿ ಇಬ್ಬರೂ ಈ ಸತ್ಯ ಕೇಳಿ ಶಾಕ್ ಆಗಿದ್ದಾರೆ. ಸಾಲ ಮತ್ತು ಇನ್ಶೂರೆನ್ಸ್ ಹಣಕ್ಕಾಗಿ ಮನುಷ್ಯ ಎಷ್ಟು ಕೆಳಮಟ್ಟಕ್ಕೆ ಇಳಿಯಬಹುದು ಎಂಬುದಕ್ಕೆ ಈ ಅರುಣ್ ರೆಡ್ಡಿ ಕಥೆಯೇ ಸಾಕ್ಷಿ. ಸಿನಿಮಾ ನೋಡಿ ಕ್ರೈಮ್ ಮಾಡಬಹುದು, ಆದರೆ ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಈ ರೋಚಕ ಕಥೆಯ ನೀತಿ.