ಮಹದಾಯಿ ಯೋಜನೆಗಾಗಿ ಬೆಂಗಳೂರಿನ ಅರಣ್ಯ ಭವನದ ಎದುರು ಧರಣಿ ನಡೆಸಿದ್ದ ರೈತ ಹೋರಾಟಗಾರರ ಮೇಲೆ ಸರ್ಕಾರ ಹೊಸದಾಗಿ ಕೇಸ್ ದಾಖಲಿಸಿದೆ. ಗಲಭೆಕೋರರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವ ಸರ್ಕಾರ, ನೀರಿಗಾಗಿ ಹೋರಾಡಿದ 28 ರೈತರ ಮೇಲೆ ಕೇಸ್ ದಾಖಲಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ: ರೈತ ಹೋರಾಟಗಾರರ ಮೇಲಿನ ಕೇಸ್ ಹಿಂಪಡೆಯುತ್ತೇವೆಂದು ಹೇಳುವ ಸರ್ಕಾರ ಇದೀಗ ಮಹದಾಯಿ ಹೋರಾಟಗಾರರ ಮೇಲೆ ಹೊಸದಾಗಿ ಕೇಸ್ ದಾಖಲಿಸಿದೆ. ರೈತರಿಗೆ ನೋಟಿಸ್ ಬಂದಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದವರ ಕೇಸ್ ಹಿಂಪಡೆಯುವ ಸರ್ಕಾರ, ನಮ್ಮ ಮೇಲೆ ಏಕೆ ಕೇಸ್ ದಾಖಲಿಸಿದೆ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ರೈತರು, ಕನ್ನಡಪರ, ಪೊಲೀಸ್ ಠಾಣೆ ದಾಳಿ ನಡೆಸಿದ ಗಲಭೆಕೋರರ ಮೇಲೆ ದಾಖಲಾಗಿದ್ದ ಕೇಸ್‌ಗಳನ್ನು ಈ ಹಿಂದೆ ವಾಪಸ್ ಪಡೆದಿದೆ. ಆದರೆ, ಕಳೆದ 11 ವರ್ಷದಿಂದ ಹೋರಾಟ ನಡೆಸುತ್ತಿರುವ ಮಹದಾಯಿ ಹೋರಾಟಗಾರರ ಮೇಲೆ ಹದಿನೈದು ದಿನದ ಹಿಂದೆಯಷ್ಟೇ ಮತ್ತೆ ಹೊಸ ಕೇಸ್ ದಾಖಲಿಸಿದೆ.
ಏನಿದು ಕೇಸ್?
ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ 11 ವರ್ಷಗಳಿಂದಲೂ ನಿರಂತರವಾಗಿ ನರಗುಂದ ಹಾಗೂ ನವಲಗುಂದದಲ್ಲಿ ಧರಣಿ ನಡೆಯುತ್ತಿದೆ. ಇಲ್ಲಿನ ಹೋರಾಟಗಾರರು ಆಗಾಗ ಬೆಂಗಳೂರು, ದೆಹಲಿಗಳಲ್ಲಿ ಧರಣಿ ನಡೆಸಿ ಸರ್ಕಾರದ ಗಮನ ಸೆಳೆಯುತ್ತಿದ್ದಾರೆ. ಯೋಜನೆಗೆ ಕೇಂದ್ರ ಸರ್ಕಾರದ ಅರಣ್ಯ ಹಾಗೂ ವನ್ಯಜೀವಿ ಮಂಡಳಿ ಅನುಮತಿ ನೀಡದೆ ಇರುವುದನ್ನು ಖಂಡಿಸಿ 2025ರ ಡಿಸೆಂಬರ್‌ನಲ್ಲಿ ಬೆಂಗಳೂರಿನ ಅರಣ್ಯ ಭವನದ ಎದುರು ಹೋರಾಟಗಾರರು ಧರಣಿ ನಡೆಸಿದ್ದರು. ಆಗ ರೈತರನ್ನು ಸಮಾಧಾನಪಡಿಸಿದ್ದ ಅಲ್ಲಿನ ಅಧಿಕಾರಿಗಳು, ಶೀಘ್ರವೇ ಸಭೆ ನಡೆಸಲಾಗುವುದು. ಅಂದಿನ ಸಭೆಗೆ ರೈತರು ಬಂದು ಮನವಿ ಸಲ್ಲಿಸಬೇಕೆಂದು ತಿಳಿಸಿದ್ದರು. ಅದರಂತೆ ಇಲ್ಲಿನ ಹೋರಾಟಗಾರರು, ಸಭೆ ನಡೆಯುವ ದಿನವೂ ತೆರಳಿ ಉನ್ನತ ಮಟ್ಟದ ಅಧಿಕಾರಿಗಳಿಗೆ ಮನವಿ ಕೂಡ ಸಲ್ಲಿಸಿದ್ದರು. ಅಂದು ನಡೆದ ಸಭೆಯಲ್ಲಿ ಯೋಜನೆಗೆ ಅನುಮತಿಯೇನೂ ಸಿಗಲಿಲ್ಲ. ಆದರೆ ಸಭೆ ನಡೆಸಿ ತೀರ್ಮಾನಿಸುವಂತೆ ಆಗ್ರಹಿಸಿ ಈ ಮೊದಲು ನಡೆಸಿದ್ದ ಧರಣಿಯಿಂದಾಗಿ ರೈತರ ಮೇಲೆ ಕೇಸ್ ದಾಖಲಾಗಿದೆ.
ಎಷ್ಟು ಜನರ ಮೇಲೆ ಕೇಸ್?
ನರಗುಂದ, ನವಲಗುಂದ, ಗದಗ ಸೇರಿದಂತೆ ಈ ಭಾಗದಿಂದ ಅಲ್ಲಿ ಧರಣಿ ನಡೆಸಲು ತೆರಳಿದ್ದ 28 ಜನರ ಮೇಲೆ ಬೆಂಗಳೂರಿನ ಮಡಿವಾಳ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ರೈತ ಸೇನಾ ಕರ್ನಾಟಕದ ಅಧ್ಯಕ್ಷ ವೀರೇಶ ಸೊಬರದಮಠ, ರಮೇಶ, ಮಲ್ಲಣ್ಣ ಅಲಕೇರ್, ಅಶೋಕ ಸತ್ಯಪ್ಪನವರ, ಶರಣಪ್ಪ ಲಕ್ಕುಂಡಿ, ನಿಂಗಪ್ಪ ಹೊನ್ನಗೌಡರ, ಹೇಮಾವತಿ ಗಾಳಿ, ಮಾದೇಗೌಡ್ರ ಬೋವಿ, ಶಿವಪ್ಪ ಸತ್ಯಪ್ಪನವರ ಸೇರಿದಂತೆ 28 ಜನರ ಮೇಲೆ ಕೇಸ್ ದಾಖಲಾಗಿದೆ. ಇವರ ಮೇಲೆ ಸರ್ಕಾರಿ ಕೆಲಸ ಹಾಗೂ ಸಾರ್ವಜನಿಕ ಕೆಲಸಕ್ಕೆ ಅಡ್ಡಿ, ಬೆದರಿಕೆ, ಅಕ್ರಮ ಪ್ರವೇಶ ಸೇರಿದಂತೆ ವಿವಿಧ ಕಲಂಗಳ ಮೇಲೆ ಪ್ರಕರಣ ದಾಖಲಿಸಿದ್ದರಿಂದ ಎಲ್ಲರಿಗೂ ಇದೀಗ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ಪ್ರಕರಣ ಹಿಂಪಡೆಯುವಂತೆ ಒತ್ತಾಯ
ಸರ್ಕಾರ ರೈತರ ಮೇಲೆ ಪ್ರಕರಣ ದಾಖಲಿಸುವುದಿಲ್ಲ ಎಂದು ಹೇಳುತ್ತಲೇ ಮತ್ತೆ ಪ್ರಕರಣ ದಾಖಲಿಸಿದೆ. ಹಳೇಹುಬ್ಬಳ್ಳಿ ಪೊಲೀಸ್ ಠಾಣೆ, ಡಿಜೆ ಹಳ್ಳಿ, ಕೆಜಿ ಹಳ್ಳಿಗಳಲ್ಲಿ ಗಲಭೆಯ ಪ್ರಕರಣವನ್ನು ಸರ್ಕಾರ ಹಿಂಪಡೆದಿದೆ. ಆದರೆ ನೀರಿಗಾಗಿ ನಡೆಸಿದ ಹೋರಾಟಗಾರರ ಕೇಸ್ ದಾಖಲಿಸುತ್ತದೆ ಎಂದರೆ ಎಷ್ಟು ಸರಿ ಎಂದು ಪ್ರಶ್ನಿಸಿರುವ ಹೋರಾಟಗಾರರು, ಈ ಪ್ರಕರಣ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.
ನ್ಯಾಯಯುತ ಬೇಡಿಕೆಯನ್ನಿಟ್ಟುಕೊಂಡು ಹೋರಾಟ
ಮಹದಾಯಿ ಯೋಜನೆ ಜಾರಿಗೆ ವನ್ಯಜೀವಿ ಮಂಡಳಿ ಅನುಮತಿ ನೀಡದಿರುವುದನ್ನು ಖಂಡಿಸಿ ಅರಣ್ಯ ಭವನದ ಎದುರು ಧರಣಿ ನಡೆಸಿದ್ದ 28 ಜನರ ಮೇಲೆ ಕೇಸ್ ದಾಖಲಿಸಿದ್ದು ಸಮನ್ಸ್ ಬಂದಿವೆ. ನ್ಯಾಯಯುತ ಬೇಡಿಕೆಯನ್ನಿಟ್ಟುಕೊಂಡು ಹೋರಾಟ ನಡೆಸಿದ್ದೇವೆ. ಕೇಸ್ ಹಿಂಪಡೆಯಬೇಕು ಎಂದು ರೈತಸೇನಾ ಕರ್ನಾಟಕದ ಅಧ್ಯಕ್ಷ ವೀರೇಶ ಸೊಬರದಮಠ ಆಗ್ರಹಿಸಿದ್ದಾರೆ.


