ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳೂರಿನ ಮೀನುಗಾರಿಕಾ ಧಕ್ಕೆಗೆ ದಿಢೀರ್ ಭೇಟಿ ನೀಡಿದಾಗ ಅಧಿಕಾರಿಗಳು ವ್ಯಾಪಾರ ವಹಿವಾಟು ಬಂದ್ ಮಾಡಿಸಿದ್ದರು. ಇದರಿಂದ ತೀವ್ರ ಆಕ್ರೋಶಗೊಂಡ ಅವರು, ಸಾರ್ವಜನಿಕರ ಬದುಕಿಗೆ ತೊಂದರೆ ನೀಡಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಈ ಆದೇಶ ನೀಡಿದ ಅಧಿಕಾರಿಯನ್ನು ಅಮಾನತು ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.
ಮಂಗಳೂರು: ಕರಾವಳಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಶುಕ್ರವಾರ ಬೆಳ್ಳಂಬೆಳಗ್ಗೆ ಮಂಗಳೂರಿನ ಹಳೆ ಬಂದರು ಬಳಿಯ ಮೀನುಗಾರಿಕಾ ಪ್ರದೇಶ ಧಕ್ಕೆಗೆ ದಿಢೀರ್ ಭೇಟಿ ನೀಡಿದ ವೇಳೆ ಹೈಡ್ರಾಮಾವೇ ನಡೆದಿದೆ. ಸಿಎಂ ಬರುತ್ತಾರೆ ಎಂಬ ವಿಷಯ ತಿಳಿದ ಅಧಿಕಾರಿಗಳು ಮೀನುಗಾರಿಕೆ ಹಾಗೂ ವ್ಯಾಪಾರ ವಹಿವಾಟಿಗೆ ಸಂಪೂರ್ಣ ನಿಷೇಧ ಹೇರಿದ್ದರು. ಈ ವಿಷಯ ತಿಳಿದ ಸಿಎಂ ಡಿಕೆಶಿ ಸ್ಥಳದಲ್ಲೇ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಮಾರ್ಕೆಟ್ ಬಂದ್ ಮಾಡಲು ಆದೇಶಿಸಿದ ಅಧಿಕಾರಿಯನ್ನು ಅಮಾನತು ಮಾಡಲು ಸೂಚನೆ ನೀಡಿದ ಘಟನೆ ನಡೆಯಿತು.
ಜಿಲ್ಲಾಧಿಕಾರಿಗೆ ಸ್ಥಳದಲ್ಲೇ ಕ್ಲಾಸ್ ತೆಗೆದುಕೊಂಡ ಸಿಎಂ:
ತಮ್ಮ ಭೇಟಿಯ ಕಾರಣಕ್ಕೆ ಧಕ್ಕೆಯ ವಹಿವಾಟು ಬಂದ್ ಆಗಿರುವುದನ್ನು ಗಮನಿಸಿದ ಸಿಎಂ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮಿಷನರ್ ಅವರನ್ನು ಸ್ಥಳಕ್ಕೆ ಕರೆಸಿ ತೀವ್ರ ತರಾಟೆಗೆ ತೆಗೆದುಕೊಂಡರು. "ನಾನು ಇಲ್ಲಿಗೆ ಬಂದಿದ್ದೇ ಮೀನುಗಾರರ ದೈನಂದಿನ ವ್ಯಾಪಾರ-ವಹಿವಾಟು ಹಾಗೂ ಅವರ ಶ್ರಮವನ್ನು ಕಣ್ಣಾರೆ ನೋಡಲು. ಸಾರ್ವಜನಿಕರ ಬದುಕಿಗೆ ತೊಂದರೆ ಕೊಟ್ಟು ಈ ರೀತಿ ಬಂದ್ ಮಾಡಿಸಲು ನಿಮಗೆ ಅಧಿಕಾರ ಕೊಟ್ಟವರು ಯಾರು? ನಾನು ಯಾರಿಗೂ ವ್ಯಾಪಾರ ಬಂದ್ ಮಾಡಲು ಹೇಳಿಲ್ಲ. ನಿಮಗೆ ಮೀನು ವ್ಯಾಪಾರ ಬಂದ್ ಮಾಡಿಸೋಕೆ ಯಾರು ಹೇಳಿದ್ದು? ನಾನು ಮೀನು ವ್ಯಾಪಾರ ನೋಡಲು ಇಲ್ಲಿಗೆ ಬಂದಿದ್ದು ಎಂದು ಸರಿಯಾಗಿ ಕ್ಲಾಸ್ ತೆಗೆದುಕೊಂಡರು.
ಆದೇಶಿಸಿದ ಅಧಿಕಾರಿಯನ್ನು ಸಸ್ಪೆಂಡ್ ಮಾಡಲು ಸೂಚನೆ:
ಅಧಿಕಾರಿಗಳ ಅತಿಯಾದ ಭದ್ರತಾ ನಿರ್ಧಾರಕ್ಕೆ ಗರಂ ಆದ ಸಿಎಂ "ನನ್ನ ಭದ್ರತೆಯ ನೆಪದಲ್ಲಿ ಜನರ ಹೊಟ್ಟೆಪಾಡಿಗೆ ಕಲ್ಲು ಹಾಕುವ ಈ ಭದ್ರತೆ ಯಾರಿಗೆ ಬೇಕು? ಯಾವನಾದ್ರು ಆರ್ಡರ್ ಮಾಡಿದ್ರೆ ಅವನನ್ನ ಸಸ್ಪೆಂಡ್ ಮಾಡಿ. ಇವರ ಸೆಕ್ಯೂರಿಟಿ ಯಾವನಿಗೆ ಬೇಕು? ಅಂತಹ ಅಧಿಕಾರಿಯನ್ನು ಇಂದೇ ಅಮಾನತು ಮಾಡಿ ಎಂದು ಜಿಲ್ಲಾಧಿಕಾರಿಗೆ ಸ್ಥಳದಲ್ಲೇ ಸಾರ್ವಜನಿಕವಾಗಿ ಆದೇಶಿಸಿದರು. ತಕ್ಷಣವೇ ಧಕ್ಕೆಯ ವ್ಯಾಪಾರ ಚಟುವಟಿಕೆಗಳನ್ನು ಪುನರಾರಂಭಿಸುವಂತೆ ಸೂಚಿಸಿ, ಮೀನುಗಾರರ ಬಳಿ ತೆರಳಿ ಅವರ ಕುಂದುಕೊರತೆಗಳನ್ನು ಆಲಿಸಿದರು.
ಮಂಗಳೂರು ಮೀನುಗಾರಿಕಾ ಬಂದರು ಭೇಟಿ ಬೆನ್ನಲ್ಲೇ ಸಿಎಂ ಚಾಯ್ ಪೇ ಚರ್ಚಾ!
ಮಂಗಳೂರು ಮೀನುಗಾರಿಕಾ ಬಂದರು ಭೇಟಿ ನೀಡಿದ ಬಳಿಕ ಮಂಗಳೂರಿನ ತಾಜ್ ಮಹಲ್ ಹೊಟೇಲ್ ನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಹಾರ ಸೇವಿಸಿದರು. ಸಚಿವ ಖಾದರ್, ಐವನ್ ಡಿಸೋಜಾ, ಜಿಲ್ಲಾಧ್ಯಕ್ಷ ಪದ್ಮರಾಜ್ ಸೇರಿ ಹಲವು ನಾಯಕರು ಈ ವೇಳೆ ಭಾಗಿಯಾಗಿದ್ದರು. ಬನ್ಸ್, ತುಪ್ಪ ದೋಸೆ, ಕಾಶಿ ಹಲ್ವಾ, ಹಲ್ವಾ, ಇಡ್ಲಿ, ವಡ ಸೇವಿಸಿದ ಸಿಎಂ ಡಿಕೆಶಿ ಬಳಿಕ ಮೀನುಗಾರಿಕಾ ಬಂದರು ಭೇಟಿಯ ಬಗ್ಗೆ ಚಾ ಕುಡಿಯುತ್ತಾ ಚರ್ಚೆ ನಡೆಸಿದರು. ಬಳಿಕ ತಾವೇ ಸ್ವತಃ ಹೊಟೇಲ್ ಬಿಲ್ ಕೊಟ್ಟು ಅಲ್ಲಿಂದ ತೆರಳಿದರು.


