ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಅಭಿವೃದ್ಧಿಗೆ ಸಂಬಂಧಿಸಿದಂತೆ ಒಟ್ಟು 61 ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಮೀನುಗಾರಿಕಾ ಕಾಲೇಜನ್ನು ವಿಶ್ವವಿದ್ಯಾಲಯವಾಗಿ ಪರಿವರ್ತಿಸುವುದು, ಜಲ ಮೆಟ್ರೋ, ಮಂಗಳೂರು ಐ ನಿರ್ಮಾಣ ಹಾಗೂ ವಿವಿಧ ಧಾರ್ಮಿಕ ಕೇಂದ್ರಗಳಿಗೆ ಅನುದಾನ ಸೇರಿದಂತೆ ಹಲವು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
ಮಂಗಳೂರು: ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಶುಕ್ರವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಟ್ಟು 61 ವಿಷಯಗಳ ಮೇಲೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ. ಈ ಪೈಕಿ, ಐದು ಅಜೆಂಡಾ ರಾಜ್ಯದ್ದು ಬಿಟ್ಟರೆ, ಬೇರೆ ಎಲ್ಲ ಅಜೆಂಡಾ ಕರಾವಳಿಗೆ ಮೀಸಲು ಎಂಬುದು ವಿಶೇಷ.
ಮಂಗಳೂರು ಮೀನುಗಾರಿಕಾ ಕಾಲೇಜನ್ನು ವಿಶ್ವವಿದ್ಯಾಲಯವಾಗಿ ಪರಿವರ್ತಿಸಲು ಉದ್ದೇಶಿಸಲಾಗಿದ್ದು, ವಿದ್ಯಾರ್ಥಿಗಳ ಸಂಖ್ಯೆಯನ್ನು 60ರಿಂದ 200ಕ್ಕೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಕರಾವಳಿ ಮೀನುಗಾರಿಕೆಯ ಆರ್ಥಿಕ ಚಟುವಟಿಕೆಯನ್ನು ಇನ್ನಷ್ಟು ವಿಸ್ತರಿಸಲು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಕರಾವಳಿಯನ್ನು ವಿಶೇಷ ಸಮುದ್ರ ವಲಯ (ಎಸ್‌ಎಂಝಡ್) ಎಂದು ಅಧಿಸೂಚನೆಗೆ ತೀರ್ಮಾನಿಸಲಾಗಿದೆ.
ಜೊತೆಗೆ, ಉಡುಪಿಯ ಕಾರ್ಕಳದಲ್ಲಿ ಶಿಲ್ಪಕಲಾ ಕ್ಲಸ್ಟರ್ ನಿರ್ಮಾಣಕ್ಕೆ ₹20 ಕೋಟಿ, ಗುರುಪುರ-ನೇತ್ರಾವತಿ ನದಿಗಳಲ್ಲಿ ಮಂಗಳೂರು ಜಲ ಮೆಟ್ರೋ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಸಂತ ಲಾರೆನ್ಸ್ ಚರ್ಚ್ ಅತ್ತೂರು, ಶ್ರೀನಾರಾಯಣಗುರು ಧರ್ಮಸಂಘಂ ಟ್ರಸ್ಟ್ ಶಿವಗಿರಿ ಕೇರಳ ಇದರಡಿ ಗುರುಧರ್ಮ ಪ್ರಚಾರಣಾ ಸಭಾ, ಶ್ರೀಗುರುಬ್ರಹ್ಮ ಮುಗೇರ್ಕಳ ದೇವಸ್ಥಾನ ಪಡುಬೆಳ್ಳೆ, ಕರಾವಳಿ ಲೇಖಕಿಯರ ವಾಚಕಿಯರ ಸಂಘಗಳಿಗೆ ಭೂಮಿ ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗಿದೆ.
ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ₹5 ಕೋಟಿ
ಇತಿಹಾಸ ಪ್ರಸಿದ್ಧ ದೇವಾಲಯಗಳಾದ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ₹5 ಕೋಟಿ, ಒಡಿಯೂರು ಮಠ, ಶ್ರೀಧಾಮ ಮಾಣಿಲ ಮಠ, ಕಾಳಿಕಾಂಬ ಆಂಜನೇಯ ಸ್ವಾಮಿ ದೇವಸ್ಥಾನ ಕುಕ್ಕಾಜೆ, ಕಾಣಿಯೂರು ಚಾಮುಂಡೇಶ್ವರಿ ಕ್ಷೇತ್ರ ಕನ್ಯಾನ, ಪಿಳ್ಳಿ ಚಾಮುಂಡಿ ದೈವಸ್ಥಾನ ಕೊಂಡಾಣ, ಶ್ರೀರಾಮ ಕ್ಷೇತ್ರ ಕನ್ಯಾಡಿ, ಕೇಮಾರು ಮಠಗಳಿಗೆ ತಲಾ ₹1 ಕೋಟಿ ನೀಡಲು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಇದೇ ವೇಳೆ, ಕರಾವಳಿಯ ಒಟ್ಟು 11 ಮಸೀದಿ ಹಾಗೂ ಚರ್ಚ್‌ಗಳಿಗೆ ಅನುದಾನ ಮಂಜೂರು ಮಾಡಲಾಗಿದೆ. ಮಂಗಳೂರು, ಉಡುಪಿಯಲ್ಲಿ ಫಿಶರೀಸ್ ಪಾರ್ಕ್‌ಗೆ ಜಾಗ ನೀಡಲು ತೀರ್ಮಾನಿಸಲಾಗಿದೆ. ಜೊತೆಗೆ, ಕಂಬಳಕ್ಕೆ ನೀಡುತ್ತಿದ್ದ ₹40 ಲಕ್ಷ ಮೊತ್ತವನ್ನು ₹1 ಕೋಟಿಗೆ ಏರಿಕೆ ಮಾಡಲಾಗಿದೆ.
ಮಂಗಳೂರು ಐ ನಿರ್ಮಾಣಕ್ಕೆ ಕ್ರಮ
ಮಂಗಳೂರಿನ ಕದ್ರಿ ಪಾರ್ಕ್ ಬಳಿ 5 ಎಕರೆ ಜಾಗದಲ್ಲಿ ‘ಮಂಗಳೂರು ಐ’ ನಿರ್ಮಾಣಕ್ಕೆ ಕ್ರಮ, ಗುರುಪುರದಲ್ಲಿ ಪ್ರತ್ಯೇಕ ಪ್ರವಾಸಿ ನಗರ ನಿರ್ಮಾಣ, ಮಂಗಳೂರಿನ ಎಕ್ಕೂರಿನಲ್ಲಿ ₹30 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸಗಟು ಮೀನು ಮಾರುಕಟ್ಟೆ ನಿರ್ಮಾಣ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆಗಳ ಘಟಕಗಳನ್ನು ಮಂಗಳೂರಿನಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ಪುತ್ತೂರು ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ₹549.79 ಕೋಟಿ, ಕರಾವಳಿ ಪ್ರವಾಸೋದ್ಯಮ ದೂರಗಾಮಿ ಯೋಜನೆಗೆ ಅನುಮೋದನೆ, ಕರಾವಳಿಯ ದ.ಕ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಟ್ಟು 12 ದ್ವೀಪಗಳ ಅಭಿವೃದ್ಧಿಗೆ ಕ್ರಮ, ಮಂಗಳೂರು ಲೈಟ್‌ಹೌಸ್ ಪ್ರವಾಸೋದ್ಯಮ ಮತ್ತು ಆತಿಥ್ಯ ಮೂಲಸೌಕರ್ಯ ಅಭಿವೃದ್ಧಿ, ಕರಾವಳಿ ವಲಯ ನಿರ್ವಹಣಾ ಯೋಜನೆ (ಸಿಝಡ್‌ಎಂಪಿ) 2019ರ ಪರಿಷ್ಕರಣೆ, ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಆರು ಪ್ರಮುಖ ಸೇತುವೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.
ದ.ಕ.ದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಅನುಮೋದನೆ, ಮಂಕಿ ಬಂದರಿನಲ್ಲಿ ಬಹುಪಯೋಗಿ ಬಂದರು ಮತ್ತು ಹಡಗು ನಿರ್ಮಾಣ ಕೇಂದ್ರ ಅಭಿವೃದ್ಧಿ, ಗಂಗೊಳ್ಳಿಯಲ್ಲಿ ಹಡಗು ನಿರ್ಮಾಣ ಅಂಗಳ ಅಭಿವೃದ್ಧಿಗೆ ₹322 ಕೋಟಿ, ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಉನ್ನತೀಕರಣ, ಮಂಗಳೂರಿನ ಮಂಗಳಾ ಕ್ರೀಡಾಂಗಣ ಅಭಿವೃದ್ಧಿಗೆ ₹20 ಕೋಟಿ, ಉಡುಪಿ ಜಿಲ್ಲಾ ಕ್ರೀಡಾಂಗಣಕ್ಕೆ ₹10 ಕೋಟಿ ನೀಡಲು ತೀರ್ಮಾನಿಸಲಾಗಿದೆ. ಜೊತೆಗೆ, ಕರ್ನಾಟಕ ಕಡಲ ಜೈವಿಕ ತಂತ್ರಜ್ಞಾನ ನೀತಿ 2026-31ಕ್ಕೂ ಅನುಮೋದನೆ ನೀಡಲಾಗಿದೆ.


