ಡಿ. ಕೆ. ಶಿವಕುಮಾರ್ ಅವರು ಮಂಗಳೂರಿನ ಹಳೆ ಬಂದರಿಗೆ ದಿಢೀರ್ ಭೇಟಿ ನೀಡಿ ಮೀನುಗಾರರ ಸಮಸ್ಯೆಗಳನ್ನು ಆಲಿಸಿದರು. ಬೋಟ್ ಏರಿ ಅಳಿವೆಬಾಗಿಲು ಪರಿಶೀಲಿಸಿದ ಅವರಿಗೆ ಮೀನುಗಾರರು ಬೃಹತ್ ಅಂಜಲ್ ಮೀನನ್ನು ಉಡುಗೊರೆಯಾಗಿ ನೀಡಿದರು. ಕರಾವಳಿ ಮೀನುಗಾರಿಕೆ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದರು.
ಮಂಗಳೂರು: ಕರಾವಳಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಶುಕ್ರವಾರ ಬೆಳ್ಳಂಬೆಳಗ್ಗೆ ಮಂಗಳೂರಿನ ಹಳೆ ಬಂದರು ಬಳಿಯ ಮೀನುಗಾರಿಕಾ ಪ್ರದೇಶ ಧಕ್ಕೆಗೆ ದಿಢೀರ್ ಭೇಟಿ ನೀಡಿ, ಮೀನುಗಾರರ ಕುಂದುಕೊರತೆಗಳನ್ನು ಖುದ್ದಾಗಿ ಆಲಿಸಿದರು. ವಿಧಾನಸಭಾ ಅಧ್ಯಕ್ಷ ಯು. ಟಿ. ಖಾದರ್ ಅವರೊಂದಿಗೆ ಬಂದರಿಗೆ ಆಗಮಿಸಿದ ಮುಖ್ಯಮಂತ್ರಿಗಳು, ಧಕ್ಕೆಯ ಸಂಪೂರ್ಣ ಕಾರ್ಯವೈಖರಿ ಹಾಗೂ ಮೀನುಗಾರರ ದೈನಂದಿನ ಸವಾಲುಗಳನ್ನು ಹತ್ತಿರದಿಂದ ವೀಕ್ಷಿಸಿ ಅವರನ್ನು ಮಾತನಾಡಿಸಿದರು.
ಬೋಟ್ ಏರಿ ಪ್ರಕ್ಷುಬ್ಧ ಅಳಿವೆಬಾಗಿಲು ಪರಿಶೀಲನೆ:
ಮೀನುಗಾರಿಕಾ ಬೋಟ್‌ಗಳು ಸಮುದ್ರದಿಂದ ಸುರಕ್ಷಿತವಾಗಿ ದಡ ಸೇರಲು ಅತ್ಯಂತ ಪ್ರಮುಖವೂ ಹಾಗೂ ಸದಾ ಹೂಳು ತುಂಬಿ ಪ್ರಕ್ಷುಬ್ಧವೂ ಆಗಿರುವ ‘ಅಳಿವೆಬಾಗಿಲು’ ಪ್ರದೇಶದ ನೈಜ ವಸ್ತುಸ್ಥಿತಿಯನ್ನು ಅರಿಯಲು ಸಿಎಂ ಏಕಾಏಕಿ ಮೀನುಗಾರಿಕಾ ಬೋಟ್ ಏರಿ ಸಮುದ್ರದಲ್ಲಿ ಸಂಚರಿಸಿದರು. ಬೋಟ್‌ನಲ್ಲಿ ಪ್ರಯಾಣಿಸುತ್ತಾ ಅಳಿವೆಬಾಗಿಲಿನಲ್ಲಿ ಬೋಟ್‌ಗಳ ಸಂಚಾರಕ್ಕಿರುವ ತಾಂತ್ರಿಕ ಅಡೆತಡೆಗಳು, ಹೂಳೆತ್ತುವ ಅಗತ್ಯತೆ ಮತ್ತು ಆಳಸಮುದ್ರದ ಸಂಕಷ್ಟಗಳ ಬಗ್ಗೆ ಯು. ಟಿ. ಖಾದರ್ ಹಾಗೂ ಸ್ಥಳೀಯ ಮೀನುಗಾರರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.
ಮೀನುಗಾರರ ಉಲ್ಲಾಸ, ಬೃಹತ್ ಅಂಜಲ್ ಮೀನು ಉಡುಗೊರೆ:
ಆಗ ತಾನೇ ಆಳಸಮುದ್ರದಿಂದ ದಡಕ್ಕೆ ಬಂದಿಳಿದ ಬೋಟ್‌ಗಳಲ್ಲಿದ್ದ ತಾಜಾ ಮೀನುಗಳನ್ನು ವೀಕ್ಷಿಸಿದ ಮುಖ್ಯಮಂತ್ರಿಗಳು, ಸ್ವತಃ ಬೋಂಡಾಸ್ ಸೇರಿದಂತೆ ವಿವಿಧ ಜಾತಿಯ ಮೀನುಗಳನ್ನು ಕೈಯಲ್ಲಿ ಹಿಡಿದು ಸಂತಸ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳ ಈ ಆಪ್ತ ನಡೆಗೆ ಧಕ್ಕೆಯಲ್ಲಿದ್ದ ನೂರಾರು ಮೀನುಗಾರರು ಜೈಕಾರ ಕೂಗಿ ಹರ್ಷ ವ್ಯಕ್ತಪಡಿಸಿದರು. ಈ ವೇಳೆ ಮೀನುಗಾರರ ಸಂಘದ ಪ್ರತಿನಿಧಿಗಳು ಸಿಎಂ ಅವರಿಗೆ ಬೃಹತ್ ಗಾತ್ರದ ‘ಅಂಜಲ್’ ಮೀನನ್ನು ಉಡುಗೊರೆಯಾಗಿ ನೀಡಿದರು.
ಧಕ್ಕೆಯ ಉದ್ದಗಲಕ್ಕೂ ನಡೆದು ಪರಿಶೀಲನೆ ನಡೆಸಿದ ಡಿಕೆಶಿ ಮೀನುಗಾರಿಕಾ ವಲಯಕ್ಕೆ ಅಗತ್ಯವಿರುವ ಮೂಲಸೌಕರ್ಯ ಮೇಲ್ದರ್ಜೆಗೇರಿಸುವ ಹಾಗೂ ಅಳಿವೆಬಾಗಿಲು ಸಮಸ್ಯೆ ನಿವಾರಣೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ಸುಂದರ ಫೋಟೋ ಟ್ವೀಟ್ ಮಾಡಿದ ಸಿಎಂ ಡಿಕೆ ಶಿವಕುಮಾರ್
ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮುಖ್ಯಮಂತ್ರಿಗಳು "ಕಡಲ ಮಕ್ಕಳ ರಕ್ಷಣೆಗೆ ಸರ್ಕಾರ ಬದ್ಧ" ಮಂಗಳೂರಿನ ಮೀನುಗಾರಿಕಾ ಬಂದರಿಗೆ ಇಂದು ಭೇಟಿ ನೀಡಿ, ಪ್ರಗತಿಯಲ್ಲಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಯಿತು. ಜೊತೆಗೆ ಮೀನುಗಾರರೊಂದಿಗೆ ಸಂವಾದ ನಡೆಸಿ, ಅವರ ಸಮಸ್ಯೆಗಳು, ಅಗತ್ಯತೆಗಳು ಹಾಗೂ ಜೀವನೋಪಾಯದ ಸ್ಥಿತಿಗತಿಗಳ ಕುರಿತು ಮಾಹಿತಿ ಪಡೆದು, ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಇನ್ನು ಮೀನುಗಾರರು ಪ್ರೀತಿಯಿಂದ ಅಂಜಲ್ ಮೀನನ್ನು ಉಡುಗೊರೆಯಾಗಿ ನೀಡಿದ್ದು ವಿಶೇಷವಾಗಿತ್ತು. ಅವರ ಆತ್ಮೀಯತೆ ಹಾಗೂ ಪ್ರೀತಿಗೆ ಧನ್ಯವಾದಗಳು. ಈ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀ ಯು.ಟಿ. ಖಾದರ್ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಮುಖಂಡರು ಜೊತೆಗಿದ್ದರು ಎಂದು ಬರೆದುಕೊಂಡಿದ್ದಾರೆ.
ಈಗಾಗಲೇ ಸೆ.18ರಂದು ಮಂಗಳೂರಿನಲ್ಲಿ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಮಂಗಳೂರು ಮೀನುಗಾರಿಕಾ ಕಾಲೇಜನ್ನು ವಿಶ್ವವಿದ್ಯಾಲಯವಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ. ಜೊತೆಗೆ ವಿದ್ಯಾರ್ಥಿಗಳ ಸಂಖ್ಯೆಯನ್ನು 60 ರಿಂದ 200ಕ್ಕೆ ಏರಿಸಲು ನಿರ್ಧರಿಸಲಾಗಿದೆ. ಕರಾವಳಿ ಮೀನುಗಾರಿಕೆಯ ಆರ್ಥಿಕ ಚಟುವಟಿಕೆಯನ್ನು ಇನ್ನಷ್ಟು ವಿಸ್ತರಣೆ ಮಾಡಲು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಕರಾವಳಿಯನ್ನು ವಿಶೇಷ ಸಮುದ್ರ ವಲಯ ಎಂದು ಅಧಿಸೂಚನೆಗೆ ತೀರ್ಮಾನಿಸಲಾಗಿದೆ. ಇದರ ಬೆನ್ನಲ್ಲೇ ಸೆ.19ರಂದು ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


