ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಗೆ ಎರಡನೇ ಆಡಳಿತ ಭಾಷೆಯ ಸ್ಥಾನಮಾನ ನೀಡಲಾಗಿದೆ. ಕರಾವಳಿ ಅಭಿವೃದ್ಧಿಗಾಗಿ 32,611 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಹೆಸರು ಬದಲಾವಣೆಗೂ ಚಿಂತನೆ ನಡೆಸಲಾಗಿದೆ.
ಮಂಗಳೂರು: ರಾಜ್ಯ ಕರಾವಳಿಯ ಮಹಾನಗರಿ ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಗೆ ಎರಡನೇ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ಘೋಷಿಸಲಾಗಿದೆ. ಈ ಮೂಲಕ ತುಳು ಭಾಷಿಕರ ಹಲವು ದಶಕಗಳ ಹೋರಾಟ ಹಾಗೂ ಬಹುದಿನಗಳ ನಿರೀಕ್ಷೆಗೆ ಕೊನೆಗೂ ಕರಾವಳಿ ನೆಲದಲ್ಲೇ ಕಾಣಿಕೆ ಲಭಿಸಿದೆ.
ಡಿಕೆಶಿ ಮುಖ್ಯಮಂತ್ರಿಯಾದ ಬಳಿಕ ಬೆಂಗಳೂರಿನಿಂದ ಹೊರಗೆ ನಡೆದ ಮೊದಲ ಸಂಪುಟ ಸಭೆಯಲ್ಲಿ ಮಂಗಳೂರು ಹಾಗೂ ಕರಾವಳಿಯ ಅಭಿವೃದ್ಧಿಗೆ ಹಲವು ವಿಶೇಷ ಯೋಜನೆಗಳನ್ನು ಘೋಷಿಸಲಾಗಿದೆ. ಕರಾವಳಿ-ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ- 2026, 150 ಎಕರೆ ಪ್ರದೇಶದಲ್ಲಿ ಮೀನುಗಾರಿಕೆ ಪಾರ್ಕ್ ನಿರ್ಮಾಣ ಸೇರಿದಂತೆ ಕರಾವಳಿಯ ಅಭಿವೃದ್ಧಿಗಾಗಿ 32,611 ಕೋಟಿ ರು.ವೆಚ್ಚದ ಯೋಜನೆಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಸಂಪುಟದಲ್ಲಿ ಒಟ್ಟು 61 ಅಜೆಂಡಾಗಳ ಬಗ್ಗೆ ಚರ್ಚೆಯಾಗಿದ್ದು, ಐದು ಅಜೆಂಡಾ ರಾಜ್ಯದ್ದು ಬಿಟ್ಟರೆ, ಬೇರೆ ಎಲ್ಲ ಅಜೆಂಡಾ ಕರಾವಳಿಗೆ ಮೀಸಲಾಗಿತ್ತು.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಿಎಂ ಡಿ.ಕೆ.ಶಿವಕುಮಾರ್, ಅಭಿವೃದ್ಧಿಗಾಗಿ 32,611 ಕೋಟಿ ರು.ವೆಚ್ಚದ ಯೋಜನೆಗಳಿಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇದರಲ್ಲಿ 16,000 ಕೋಟಿ ರು.ಗ್ರಾಮೀಣಾಭಿವೃದ್ಧಿ ಯೋಜನೆಯಾಗಿದ್ದು, ಉಳಿದ ಮೊತ್ತ ಕರಾವಳಿ ಜಿಲ್ಲೆಗಳಿಗೆ ಸಂಬಂಧಿಸಿದೆ ಎಂದರು.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳು ಭಾಷೆ ಎರಡನೇ ಆಡಳಿತ ಭಾಷೆಯಾಗಿ ಘೋಷಣೆಯಾಗಬೇಕು ಎನ್ನುವ ಬೇಡಿಕೆ ಬಹಳ ದಿನಗಳದ್ದು. ಅದನ್ನೀಗ ಸಾಕಾರಗೊಳಿಸಿದ್ದೇವೆ. ದಕ್ಷಿಣ ಕನ್ನಡದ ಹೆಸರನ್ನು ‘ಮಂಗಳೂರು’ ಎಂದು ಬದಲಿಸುವ ಬಗ್ಗೆ ಜನಾಭಿಪ್ರಾಯ ಪಡೆದು ತೀರ್ಮಾನಿಸಲಾಗುವುದು. ಈ ಸಂಬಂಧ ಕರಡು ಅಧಿಸೂಚನೆ ಹೊರಡಿಸಿ ಒಂದು ತಿಂಗಳ ಅವಧಿ ನೀಡಿ, ಜನರ ಭಾವನೆ, ಜನರ ಅಭಿಪ್ರಾಯ ಪಡೆದು ತೀರ್ಮಾನಿಸಲಾಗುವುದು ಎಂದರು.
ಕರಾವಳಿ-ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ-2026ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಈವರೆಗಿನ ಎಲ್ಲ ನೀತಿಗಳಿಗಿಂತ ಭಿನ್ನವಾದ ನೀತಿ ಇದಾಗಲಿದೆ. ಅಲ್ಲದೆ, ಈ ಭಾಗದ ಮೀನುಗಾರಿಕೆಗೆ ಸಂಬಂಧಿಸಿದಂತೆ ಫಿಶರೀಸ್, ಬ್ಲೂ ಎಕಾನಮಿ ಯುನಿವರ್ಸಿಟಿಯನ್ನು ಸ್ಥಾಪಿಸಲಾಗುವುದು ಎಂದರು.
10-12 ಕಡೆ ಸಚಿವ ಸಂಪುಟ ಸಭೆ:
ಇತರ ಜಿಲ್ಲೆಗಳಲ್ಲೂ ಸಚಿವ ಸಂಪುಟ ಸಭೆ ನಡೆಸುವಿರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಮುಂದಿನ 15 ತಿಂಗಳ ಅವಧಿಯಲ್ಲಿ 10- 12 ಸ್ಥಳಗಳಲ್ಲಿ ಸಚಿವ ಸಂಪುಟ ಸಭೆ ನಡೆಸುವ ಉದ್ದೇಶವಿದೆ. ಎಲ್ಲಿ ಸಾಮರ್ಥ್ಯವಿದೆ, ಅಗತ್ಯವಿದೆ ಅಂತಹ ಕಡೆಗಳಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗುವುದು. ‘ಸಮಗ್ರ ಕರ್ನಾಟಕ, ಸಮೃದ್ಧ ಕರ್ನಾಟಕ’ವಾಗಿಸುವುದು ನಮ್ಮ ಗುರಿ ಎಂದು ಅವರು ವಿವರಿಸಿದರು.
ಏನೆಲ್ಲಾ ಸಿಗಲಿದೆ? ಈ 11 ಪಾಯಿಂಟ್
1. 500 ಕೋಟಿ ರು. ವೆಚ್ಚದಲ್ಲಿ ಕರಾವಳಿ ಮಲೆನಾಡು ಪ್ರವಾಸೋದ್ಯಮ ನೀತಿ ಅನುಷ್ಠಾನ
2. ಮಂಗಳೂರು ಬಳಿಯ ಗುರುಪುರದಲ್ಲಿ 125 ಕೋಟಿ ರು. ವೆಚ್ಚದಲ್ಲಿ ಪ್ರತ್ಯೇಕ ಪ್ರವಾಸಿ ನಗರ
3. ಮಂಗಳೂರು ಸಮೀಪ ‘ಮರೈನ್ ಬ್ಲೂ ಎಕಾನಮಿ’ ವಿಶ್ವವಿದ್ಯಾಲಯ ಸ್ಥಾಪನೆಗೆ ನಿರ್ಧಾರ
4. ಪುತ್ತೂರಿನಲ್ಲಿ 549 ಕೋಟಿ ರು. ವೆಚ್ಚದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಪ್ರಾರಂಭ
5. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದ 12 ದ್ವೀಪಗಳು ಜಾಗತಿಕ ಪ್ರವಾಸಿ ತಾಣ
6. ಮಂಗಳೂರಿನ ಲೈಟ್ ಹೌಸ್ ಸುತ್ತ 1.5 ಎಕರೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ
7. ಮಂಗಳೂರಿನ ಕೋಡಿಕಲ್‌ನಲ್ಲಿ ರಿವರ್‌ಫ್ರಂಟ್ ವೆಲ್‌ನೆಸ್ ರೆಸಾರ್ಟ್ ಸ್ಥಾಪನೆ
8. ಸುರತ್ಕಲ್ ಬಳಿ ತಿರುಪತಿ ವೆಂಕಟೇಶ್ವರ ದೇಗುಲ, ಕಲ್ಯಾಣ ಮಂಟಪ
9. ಕಾರವಾರ ವಿಮಾನ ನಿಲ್ದಾಣ ಅಭಿವೃದ್ಧಿ ವೆಚ್ಚದ 98 ಕೋಟಿ ರು.ನಿಂದ 250 ಕೋಟಿ ರು.ಗೆ
10. ಗುರುಪುರ- ನೇತ್ರಾವತಿ ನದಿಗಳಲ್ಲಿ ಮಂಗಳೂರು ಜಲ ಮೆಟ್ರೋ ಯೋಜನೆ ಜಾರಿ
11. ಮಂಗಳೂರಲ್ಲಿ ಹಾಳಾಗಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸಲು 400 ಕೋಟಿ ರು.
ಸಂಪುಟ ಸಭೆಯ ಪ್ರಮುಖ ತೀರ್ಮಾನಗಳು:
ಕರಾವಳಿ ಸ್ಪೆಷಲ್
1. ತುಳುವಿಗೆ 2ನೇ ರಾಜ್ಯಭಾಷೆ ಸ್ಥಾನಮಾನ ನೀಡಿಕೆ.
2. ದಕ್ಷಿಣ ಕನ್ನಡ ಜಿಲ್ಲೆಗೆ ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡುವ ಪ್ರಸ್ತಾವ ಸಂಬಂಧ ಸಾರ್ವಜನಿಕರಿಂದ ಒಂದು ತಿಂಗಳ ಕಾಲ ಅಭಿಪ್ರಾಯ ಸಂಗ್ರಹಿಸಲು ಕರಡು ಅಧಿಸೂಚನೆ ಹೊರಡಿಸಲು ನಿರ್ಧಾರ.
3. ಸುರತ್ಕಲ್ ಸಮೀಪದ ಬಡಗ ಎಕ್ಕಾರಿನಲ್ಲಿ ದೇವಾಲಯ ನಿರ್ಮಾಣಕ್ಕೆ 10 ಎಕರೆ ಭೂಮಿ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ)ಗೆ ಮಂಜೂರು.
4. ಮಂಗಳೂರಿನ ಎಕ್ಕೂರಿನಲ್ಲಿ ₹30 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಮೀನುಗಾರಿಕೆ ಮಾರುಕಟ್ಟೆ ನಿರ್ಮಾಣ.
5. 500 ಕೋಟಿ ರು. ವೆಚ್ಚದ ಕರಾವಳಿ-ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ -2026 ಘೋಷಣೆ.
6. ಕರಾವಳಿ ಅಭಿವೃದ್ಧಿಗೆ ₹32,611 ಕೋಟಿ ಮೊತ್ತದ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ. ಈ ಪೈಕಿ, ಗ್ರಾಮೀಣಾಭಿವೃದ್ಧಿಗೆ ₹16,000 ಕೋಟಿ ಮೀಸಲು.
ರಾಜ್ಯ ವ್ಯಾಪಿ
1. ಸಿಎಂ ಗ್ರಾಮೀಣ ರಸ್ತೆ ಯೋಜನೆಯಡಿ 15 ಸಾವಿರ ಕಿ.ಮೀ.ರಸ್ತೆ ನಿರ್ಮಾಣಕ್ಕೆ (ಗ್ರಾಮೀಣ ಭಾಗದ ರಸ್ತೆಗಳು) 1000 ಕೋಟಿ ರು. ಆಡಳಿತಾತ್ಮಕ ಅನುಮೋದನೆ. ಇದರಲ್ಲಿ ಒಳಚರಂಡಿಗೆ 6 ಸಾವಿರ ಕೋಟಿ ರು.ಮೀಸಲು.
2. ಗ್ರಾ.ಪಂ. ಚುನಾವಣೆ ಹಿನ್ನೆಲೆಯಲ್ಲಿ ಬ್ಯಾಲೆಟ್ ಬಾಕ್ಸ್ ಖರೀದಿಗೆ ₹151 ಕೋಟಿ ಅನುಮೋದನೆ.
3. ಗ್ರಾಮ ಗ್ರಂಥಾಲಯಗಳಿಗೆ ಕಂಪ್ಯೂಟರ್ ಖರೀದಿಗೆ ತಲಾ 4 ಲಕ್ಷ ರು.ನಂತೆ 263.96 ಕೋಟಿ ರು.ಮಂಜೂರು.
4. ಕರ್ನಾಟಕ ಅರಣ್ಯ ಇಲಾಖೆ (ಸೇವೆಗಳು)(ನೇಮಕಾತಿ) ತಿದ್ದುಪಡಿ ನಿಯಮಗಳು-2026ರಂತೆ ಅರಣ್ಯ ರಕ್ಷಕ ಮತ್ತು ಅರಣ್ಯ ವೀಕ್ಷಕರ ನೇಮಕದಲ್ಲಿ ಅರಣ್ಯ ಬುಡಕಟ್ಟು ಜನಾಂಗ ಸೇರ್ಪಡೆಗೆ ವೃಂದ ನೇಮಕಾತಿ ನಿಯಮಕ್ಕೆ ತಿದ್ದುಪಡಿ. ಹಲಸರು, ಸಿದ್ದಿ, ಕುಡಿಯ, ಬೆಟ್ಟಕುರುಬ ಮತ್ತು ಪಣಿಯನ್ ಪಂಗಡಗಳಿಗೆ ಈ ವಿಶೇಷ ಪ್ರಾತಿನಿಧ್ಯ ವಿಸ್ತರಣೆ.
5. ಕರ್ನಾಟಕ ಸುಸ್ಥಿರ ದತ್ತಾಂಶ ಕೇಂದ್ರ ನೀತಿ-2026-31ರನ್ವಯ ದತ್ತಾಂಶ ಕೇಂದ್ರ ಘಟಕ, ಪಾರ್ಕ್, ಕೇಬಲ್ ಲ್ಯಾಂಡಿಂಗ್ ಸ್ಟೇಷನ್, ಸಬ್‌ಮರೈನ್ ಕೇಬಲ್ ಆಪರೇಟರ್, ಶೈಕ್ಷಣಿಕ ವಲಯಕ್ಕೆ ಬೆಂಬಲ.


