ಓಣಂ ಹಬ್ಬದ ಪ್ರಯಾಣಿಕರ ದಟ್ಟಣೆ ನಿಭಾಯಿಸಲು, ದಕ್ಷಿಣ ರೈಲ್ವೆಯು ಮಂಗಳೂರು ಜಂಕ್ಷನ್‌ನಿಂದ ಬೆಂಗಳೂರಿನ SMVT ಟರ್ಮಿನಲ್‌ಗೆ ಏಕಮುಖ ವಿಶೇಷ ಎಕ್ಸ್‌ಪ್ರೆಸ್ ರೈಲು (06072) ಓಡಿಸಲಿದೆ. ಶನಿವಾರ ಮಂಗಳೂರಿನಿಂದ ಹೊರಟು, ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಿ, ಭಾನುವಾರ ಮುಂಜಾನೆ ಬೆಂಗಳೂರು ತಲುಪಲಿದೆ.

ಮಂಗಳೂರು (ಆ.29): ಓಣಂ ಹಬ್ಬದ ಹಿನ್ನೆಲೆಯಲ್ಲಿ ರೈಲು ಪ್ರಯಾಣಿಕರ ಹೆಚ್ಚುವರಿ ಜನದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ದಕ್ಷಿಣ ರೈಲ್ವೆಯು ಮಂಗಳೂರು ಜಂಕ್ಷನ್‌ನಿಂದ ಬೆಂಗಳೂರಿನ ಸರ್.ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ ನಡುವೆ ಏಕಮುಖ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲಿದೆ.

ರೈಲು ಸಂಖ್ಯೆ 06072 ಮಂಗಳೂರು ಜಂಕ್ಷನ್–ಎಸ್‌ಎಂವಿಟಿ ಬೆಂಗಳೂರು ಏಕಮುಖ ಎಕ್ಸ್‌ಪ್ರೆಸ್ ವಿಶೇಷ ರೈಲು ಶನಿವಾರ ಬೆಳಗ್ಗೆ 11.15ಕ್ಕೆ ಮಂಗಳೂರು ಜಂಕ್ಷನ್‌ನಿಂದ ಪ್ರಯಾಣ ಆರಂಭಿಸಲಿದೆ. ಓಣಂ ಹಬ್ಬದ ಸಂದರ್ಭದಲ್ಲಿ ಕೇರಳ ಹಾಗೂ ಕರ್ನಾಟಕದ ವಿವಿಧ ಭಾಗಗಳಿಗೆ ತೆರಳುವ ಮತ್ತು ಮರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಈ ವಿಶೇಷ ರೈಲು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಿದೆ.

ಮಂಗಳೂರು ಜಂಕ್ಷನ್‌ನಿಂದ ಹೊರಡುವ ರೈಲು ಕಾಸರಗೋಡು, ಕಾಞಂಗಾಡ್, ನೀಲೇಶ್ವರ, ಕಣ್ಣೂರು, ತಲಶ್ಶೇರಿ, ವಡಕರ, ಕೋಝಿಕ್ಕೋಡ್, ಶೋರನೂರು ಜಂಕ್ಷನ್, ತಿರೂರು, ಪಾಲಕ್ಕಾಡ್ ಜಂಕ್ಷನ್, ಪೋದನೂರು ಜಂಕ್ಷನ್, ತಿರುಪ್ಪೂರು, ಈರೋಡ್ ಜಂಕ್ಷನ್, ಸೇಲಂ ಜಂಕ್ಷನ್, ಬಂಗಾರಪೇಟೆ ಜಂಕ್ಷನ್ ಹಾಗೂ ಕೃಷ್ಣರಾಜಪುರಂ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ನಿಗದಿತ ವೇಳಾಪಟ್ಟಿಯಂತೆ ಭಾನುವಾರ ಮುಂಜಾನೆ 4 ಗಂಟೆಗೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರನ್ನು ತಲುಪಲಿದೆ.