ಮಂಗಳೂರು ರೈಲ್ವೆ ವಿಭಾಗವನ್ನು ಮೈಸೂರು ವಿಭಾಗಕ್ಕೆ ಸೇರಿಸುವ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಸ್ಪಷ್ಟಪಡಿಸಿದ್ದಾರೆ. ಆಡಳಿತಾತ್ಮಕ ಅನುಕೂಲ, ಕರ್ನಾಟಕದ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ತುಮಕೂರು (ಆ.29): ‘ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿನಿಂತುಕೊಂಡರೂ ಅಷ್ಟೇ’ ಎನ್ನುವ ಮೂಲಕ ‘ಮಂಗಳೂರು ರೈಲ್ವೆ ವಿಭಾಗಕ್ಕೆ ಸಂಬಂಧಿಸಿದಂತೆ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಕೇರಳದಲ್ಲಿ ಎಲ್ಲ ವಿರೋಧ ಪಕ್ಷದವರು ಸಹ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಮಾತನಾಡುವವರು ಮಾತನಾಡಲಿ ನಾನು ಕೆಲಸ ಮಾಡುವವ ಎಂದು ಎಲ್ಲರಿಗೂ ಗೊತ್ತಿದೆ. ಯುಡಿಎಫ್ಓ, ಸಿಪಿಐ, ಸಿಪಿಎಂ ಎಲ್ಲಾ ಪಕ್ಷದವರು ನನ್ನ ವಿರುದ್ಧ ಬಟ್ಟೆ ಬಿಚ್ಚಿ ನಿಂತ್ಕೊಂಡು ನಾನು ರಾಜೀನಾಮೆ ಕೊಡಬೇಕು ಅನ್ನುತ್ತಿದ್ದಾರೆ. ನಾನೇನು‌ ತಪ್ಪು‌ ಮಾಡಿಲ್ಲ. ಭಾರತ ಸರ್ಕಾರದ ಮಂತ್ರಿಯಾಗಿ ಈ ರೀತಿಯಾಗಿರುವ ಅಡಚಡಣೆಗಳನ್ನು‌ ಸರಿಪಡಿಸುವ ಕೆಲಸ‌‌ ಮಾಡಿದ್ದೇನೆ ಎಂದರು.

ಕೇರಳಕ್ಕೆ ಸಂಬಂಧ ಪಟ್ಟಂತೆ ಯಾವುದೇ ಅಪಚಾರ ಮಾಡಿಲ್ಲ ಎಂದ ಸೋಮಣ್ಣ, ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಮಸ್ಯೆಗೆ ಪರಿಹಾರ‌ ಕಂಡುಕೊಂಡಿದ್ದೇವೆ. ಮೈಸೂರು ವಿಭಾಗಕ್ಕೆ ಸೇರಿಸಿ ಇತಿಶ್ರೀ ಹಾಡಿದ್ದೇನೆ‌. ರೈಲ್ವೆ ಇಲಾಖೆಯಲ್ಲಿ‌ ಸ್ಥಳೀಯರಿಗೆ ಅವಕಾಶ ಸಿಗುತ್ತದೆ ಎಂದ ಅವರು, ಕೇರಳದಲ್ಲಿ 20 ಮೀನು‌ಗಾರಿಕಾ ಬಂದರು‌ ಇವೆ. ಅದರಲ್ಲಿ 17 ಅಧಿಕೃತವಾಗಿವೆ. ಕೇರಳ ಬಜೆಟ್ ಇದಕ್ಕಾಗಿ ಹೆಚ್ಚಿನ ಆದ್ಯತೆ ಕೊಟ್ಟಿದೆ. ನಿಮ್ಮ ರಾಜ್ಯದ್ದು ನೀವು ಏನೂ‌ ಬೇಕಾದರೂ ಮಾಡಿ. ಕರ್ನಾಟಕದಲ್ಲಿ ಇರೋದು‌ ಒಂದೇ ಬಂದರು. ಅದು ಮಂಗಳೂರು‌ ಬಂದರು. ಅದಕ್ಕೆ ಸರಕು -ಆಮದು ರಫ್ತುಗೆ ಅನುಕೂಲ‌ ಮಾಡಿದ್ದೇವೆ ಎಂದರು.

ಮಂಗಳೂರು ಎಜುಕೇಷನ್ ಹಬ್‌ ಇದೆ. ಆಡಳಿತ ವ್ಯವಸ್ಥೆ 350 ಕಿ.ಮೀ. ದೂರದಲ್ಲಿತ್ತು. ಅದನ್ನು ಕರ್ನಾಟಕದವರೇ ಉಸ್ತುವಾರಿ ನೋಡಲು ಭಾರತ ಸರ್ಕಾರ ಅನುಮತಿ‌ ಕೊಟ್ಟಿದೆ. ಪಾಲಕ್ಕಾಡ್ ವಿಭಾಗದ 85ರಷ್ಟು ಭಾಗ ಕರ್ನಾಟಕದಲ್ಲಿ‌ ಇತ್ತು. ಹಿಂದೆ ಇದೇ ರೀತಿ ಸೇಲಂ ಇತ್ತು. ಬದಲಾವಣೆ ಆಯ್ತು ಎಂದರು.

ಇದು 25 ವರ್ಷಗಳಿಂದ ನಡೆದ ಹೋರಾಟ

25 ವರ್ಷಗಳಿಂದ ಇದರ ಹೋರಾಟ ಇತ್ತು. ಹಿಂದೆ ಹಲವು‌‌ ಮಂತ್ರಿಗಳು ತುಂಬಾ ಪ್ರಯತ್ನ ಮಾಡಿದ್ದಾರೆ. ನಾನು‌ ಮಂತ್ರಿ ಆಗಿರುವುದರಿಂದ ಅದರ ಬಗ್ಗೆ ಸಂಪೂರ್ಣ ಮಾಹಿತಿ ಇತ್ತು. ಅಲ್ಲಿನ‌ ಲೋಕಸಭಾ ಸದಸ್ಯರಾದ ಕ್ಯಾ.ಬ್ರಿಜೇಶ್‌ ಚೌಟಾ ಅವರು ನನ್ನನ್ನು ಭೇಟಿ‌ ಮಾಡಿ ಇದಕ್ಕೆ ಒಂದು‌ ರೂಪ‌ ಕೊಡಬೇಕು ಅಂತಾ ಕೋರಿ ಕೊಂಡಿದ್ದರು. ಈ‌ ಹಿಂದೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಕೂಡ ಪ್ರಯತ್ನ ಮಾಡಿದ್ದರು‌. ಮೂರು‌ ಜನ ಜನರಲ್ ಮ್ಯಾನೇಜರ್‌ಗಳನ್ನು ಸ್ಥಳಕ್ಕೆ ಕರೆದುಕೊಂಡು‌ ಹೋದ ಏಕೈಕ ಮಂತ್ರಿ ಇದ್ದರೆ ಅದು ನಾನು ಎಂದ ಸೋಮಣ್ಣ, ಈ ಬಗ್ಗೆ ಸಾಧಕ‌ ಭಾದಕಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಅಧಿಕಾರಿಗಳು‌ ಕೆಲಸ‌ ಮಾಡಿದ್ದಾರೆ. ಇದರಲ್ಲಿ ಯಾವುದೇ ಫೆವರಿಸಂ ಇಲ್ಲ ಎಂದರು.

ಮಂಗಳೂರು ವಿಭಾಗ ಮಾಡಬೇಕು‌ ಅಂತಾ ಆಸೆ‌‌ ಇತ್ತು. ಪಾಲಕ್ಕಾಡ್ ಹಾಗೂ‌ ಮಂಗಳೂರಿನ‌ ನಡುವೆ 350 ಕಿ.ಲೋ ಅಂತರವಿತ್ತು. ಮೈಸೂರು ಹಾಗೂ ಪಾಲಕ್ಕಾಡ್‌ಗೆ 80-100 ಕಿ.ಮೀ. ಆಗುತ್ತೆ. ಹಾಗಾಗಿ ತಾಂತ್ರಿಕವಾಗಿ ಅಧಿಕಾರಿಗಳು ಜೊತೆ ಚರ್ಚೆ ಮಾಡಲಾಗಿದೆ. ಇದರ ಲಾಭ‌‌ ಹಾಗೂ ನಷ್ಟದ ಕುರಿತು ಒಂದು ವರ್ಷದ ನಂತರ ಚರ್ಚೆ ಮಾಡೋಣ. ವಿಶೇಷವಾಗಿ ಇದರ ಬಗ್ಗೆ ಜನಸಾಮಾನ್ಯರಿಗೆ ಎಲ್ಲೂವು ಗೊತ್ತಿದೆ ಎಂದರು.