ಆಹಾರ ಸುರಕ್ಷತೆ ಮತ್ತು ಔಷಧ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ, ತಪ್ಪಿತಸ್ಥರು ಆತ್ಮೀಯರಾಗಿದ್ದರೂ ಬಿಡುವುದಿಲ್ಲ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಎಚ್ಚರಿಸಿದ್ದಾರೆ. ಇದೇ ವೇಳೆ, ಇಸ್ಲಾಂ ಕುರಿತ ಬಸವರಾಜ ರಾಯರೆಡ್ಡಿ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡು, ವಿವಾದ ಸೃಷ್ಟಿಸುವವರನ್ನು ಟೀಕಿಸಿದ್ದಾರೆ.
ಮಂಗಳೂರು(ಸೆ.2): ಆಹಾರ ಸುರಕ್ಷತೆ, ಔಷಧ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ. ಈ ವಿಚಾರದಲ್ಲಿ ಯಾರೇ ಸಿಕ್ಕಿಬಿದ್ದರೂ, ಅವರು ನನ್ನ ಆತ್ಮೀಯರೇ ಇದ್ದರೂ ನಾನು ಬಿಡೋದಿಲ್ಲ ಎಂದು ಆರೋಗ್ಯ ಸಚಿವ ಯುಟಿ ಖಾದರ್ ಎಚ್ಚರಿಸಿದರು.
ಇಂದು ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವರು, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ವತಿಯಿಂದ ಹಲವೆಡೆ ದಾಳಿಯಾಗಿದೆ. ನಾವು ದಾಳಿ ಮಾಡಿ ತಪಾಸಣೆ ಮಾಡೋದು ಅವರ ವ್ಯಾಪಾರ ಬಂದ್ ಮಾಡಲು ಅಲ್ಲ, ಜನರಿಗೆ ಉತ್ತಮ ಆಹಾರ ಕೊಡಿ ಎನ್ನುವುದು ನಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದರು.
ಮಂಗಳೂರಿನಲ್ಲಿ ಬಾರ್ ಕೋಡ್ ದೂರಿನ ಹಿನ್ನೆಲೆಯಲ್ಲಿ ಎರಡು ತಪಾಸಣೆ ಆಗಿದೆ. ಅಲ್ಲಿ ಊಟ ಮಾಡಲು ಬರೋರು ಕೂಡ ನನ್ನ ಆತ್ಮೀಯರೇ ಆಗಿದ್ದಾರೆ. ಹೀಗಾಗಿ ಸ್ವಚ್ಛತೆ, ಗುಣಮಟ್ಟ ಕಾಯ್ದುಕೊಳ್ಳುವಂತೆ ಮನವಿ ಮಾಡಿದರು. ಇದಲ್ಲದೆ ಪಿಜಿ ನಡೆಸುವವರು ಕೂಡ ಪಿಜಿಗೆ ಸೇರಿದವರನ್ನ ಸ್ವಂತ ಮಕ್ಕಳಂತೆ ಕಾಣಬೇಕು. ಉತ್ತಮ ಆಹಾರ ನೀಡಬೇಕು. ಹೋಟೆಲ್‌ಗಳಲ್ಲಿ ಬಾರ್ ಕೋಡ್ ಮಾತ್ರವಲ್ಲ ಆರೋಗ್ಯ ಕಾಪಾಡಲು ಸಲಹೆ ಕೂಡ ಪ್ರಕಟಿಸಲಾಗಿದೆ. ಕ್ಯೂಆರ್ ಕೋಡ್ ಮೂಲಕ ದೂರು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಸಚಿವರು, ದೂರು ಬಂದ ಹಿನ್ನೆಲೆ ಕೆಎಫ್‌ಸಿ ಮೇಲೆ ದಾಳಿ ನಡೆಸಿ ನೋಟಿಸ್ ನೀಡಲಾಗಿದೆ ಎಂದರು.
ಬಸವರಾಜ ರಾಯರೆಡ್ಡಿ ಜ್ಞಾನವುಳ್ಳ, ಪ್ರಾಮಾಣಿಕ ಶಾಸಕ
ಇನ್ನು ಇಸ್ಲಾಂ ಬಗ್ಗೆ ಬಸವರಾಜ ರಾಯರೆಡ್ಡಿ ಹೇಳಿಕೆ ವಿವಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬಸವರಾಜ ರಾಯರೆಡ್ಡಿ ಹಿರಿಯರು, ಜ್ಞಾನವುಳ್ಳ, ಪ್ರಾಮಾಣಿಕ ಶಾಸಕರು. ಅವರು ನನ್ನ ತಂದೆಯ ಕಾಲದಲ್ಲೇ ಶಾಸಕರಾಗಿದ್ದವರು. ಅಂಥ ವ್ಯಕ್ತಿತ್ವಕ್ಕೆ ನಾವು ಗೌರವ ಕೊಡಬೇಕು. ಅವರು ಯಾವುದೇ ಪಕ್ಷದಲ್ಲಿದ್ದರೂ ಗೌರವಿಸಬೇಕು ಎಂದರು.
ಈದ್ ಕಾರ್ಯಕ್ರಮದಲ್ಲಿ ಆ ಮಾತಾಡಿದ್ದಾರೆ
ಅವರು ಈದ್ ಕಾರ್ಯಕ್ರಮಕ್ಕೆ ಹೋದಾಗ ಆ ಮಾತು ಆಡಿದ್ದಾರೆ. ಯಾರನ್ನೋ ನೋಯಿಸಲು ಅಲ್ಲ. ಅವರು ಮುಸ್ಲಿಂ ಧರ್ಮ ಶ್ರೇಷ್ಠ ಎಂದರೂ ಹಿಂದೂ ಧರ್ಮವನ್ನು ಉತ್ತಮವಾಗಿ ಪಾಲಿಸುತ್ತಿದ್ದಾರೆ. ಸಾಮಾನ್ಯವಾಗಿ ಮುಕ್ತ ಮನಸಿನಿಂದ ಸೌಹಾರ್ದತೆಯಿಂದ ಆ ಮಾತು ಹೇಳಿದ್ದಾರೆ. ಅದನ್ನು ವಿರೋಧಿಸುವ ನೀಚ ಮನಸ್ಥಿತಿ ಯಾಕೆ ಬಂತೋ, ಅದೆಲ್ಲ ಬೇಕಿತ್ತಾ? ಜನರ ಮಧ್ಯೆ ಗೊಂದಲ ಸೃಷ್ಟಿಸೋದು ರಾಜಕೀಯ ಮಾಡೋದು ಸರಿಯಲ್ಲ. ಇಂಥ ರಾಜಕೀಯ ಮಾಡೋರು ದೇಶಪ್ರೇಮಿಗಳಲ್ಲ. ಜನರ ಮಧ್ಯೆ ಗೊಂದಲ ಸೃಷ್ಟಿಸೋದು ರಾಜಕೀಯ ಮಾಡೋದು ಸರಿಯಲ್ಲ ಎಂದರು.


