ಬೆಂಗಳೂರಿನಲ್ಲಿ ಮೊಬೈಲ್ ರೀಲ್ಸ್ ನೋಡುವ ವಿಚಾರಕ್ಕೆ ನಡೆದ ಜಗಳದಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಬಿಯರ್ ಬಾಟಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ. ನಂತರ ಆತ ಕೂಡ ಆತ್ಮಹತ್ಯೆಗೆ ಶರಣಾಗಿದ್ದು, ಈ ದುರಂತ ಘಟನೆ ಎಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದಾವಣಗೆರೆ ಮೂಲದ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡನೇ ಹೆಂಡತಿಯನ್ನು ಕೊಲೆಗೈದಿರುವ ಘಟನೆ ರಾಜಧಾನಿ ಬೆಂಗಳೂರಿನ ಎಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೆಂಡತಿಯನ್ನು ಕೊಲೆಗೈದ ಬಳಿಕ ಪತಿಯೂ ಸಾವಿಗೆ ಶರಣಾಗಿದ್ದಾನೆ.

ರೀಲ್ಸ್ ಗಲಾಟೆ: ಬೆಂಗಳೂರಿನಲ್ಲಿ ದಂಪತಿಯ ದಾರುಣ ಅಂತ್ಯ

ಮೃತ ದುರ್ವೈವಿಗಳನ್ನು ಶೃತಿ (30), ರಾಘವೇಂದ್ರ (36) ಎಂದು ಗುರುತಿಸಲಾಗಿದೆ. ರೀಲ್ಸ್ ನೋಡುವ ವಿಚಾರಕ್ಕೆ ತಡರಾತ್ರಿ ಪತಿ ಮತ್ತು ಪತ್ನಿ ಮಧ್ಯೆ ಗಲಾಟೆ ಶುರುವಾಗಿದ್ದು, ಈ ಸಂದರ್ಭದಲ್ಲಿ ಕೋಪದ ಕೈಗೆ ಬುದ್ದಿ ಕೊಟ್ಟ ಪತಿ, ಬಿಯರ್ ಬಾಟೆಲ್‌ನಿಂದ ಹೆಂಡತಿಯ ತಲೆಗೆ ಹೊಡೆದು ಕೊಲೆಗೈದಿರುವ ಆರೋಪ ಕೇಳಿ ಬಂದಿದೆ. ಹೆಂಡತಿಯನ್ನು ಕೊಲೆಗೈದ ಬಳಿಕ ಪತಿಯೂ ಕೂಡ ನೇಣಿಗೆ ಶರಣಾಗಿದ್ದಾನೆ.

ಘಟನೆ ಸಂಬಂಧ ಹೆಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲಿಸರು ಮೃತದೇಹಗಳ ಮರಣೋತ್ತರ ಪರೀಕ್ಷಗೆ ರವಾನೆ ಮಾಡಿದ್ದಾರೆ. ಮೃತ ದಂಪತಿ ಮೂಲತಃ ದಾವಣಗೆರೆ ಮೂಲದವರು ಎಂದು ತಿಳಿದು ಬಂದಿದ್ದು, ಪತಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದರೆ, ಪತ್ನಿ ಸ್ಥಳೀಯ ಅಪಾರ್ಟ್‌ಮೆಂಟ್‌ನಲ್ಲಿ ಮನೆಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದರು.

ಇನ್ನು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಕ್ಕಳನ್ನು ಅಜ್ಜನ ಮನೆಯಲ್ಲಿ ಬಿಟ್ಟಿದ್ದ ದಂಪತಿ ಬೆಂಗಳೂರಿಗೆ ಬಂದು HAL ಪೊಲೀಸ್ ಠಾಣೆ ವ್ಯಾಪ್ತಿಯ ವಿಭೂತಿಪುರದಲ್ಲಿ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರು. ಈ ಹಿಂದೆಯೂ ದಂಪತಿ ನಡುವೆ ಮೊಬೈಲ್ ನೋಡುವ ವಿಚಾರಕ್ಕೆ ಗಲಾಟೆ ನಡೆದಿತ್ತು ಎನ್ನಲಾಗಿದ್ದು, ನಿನ್ನೆ ತಡರಾತ್ರಿ ಕೂಡ ಪತ್ನಿ ಮೊಬೈಲ್ ನಲ್ಲಿ ರೀಲ್ಸ್ ನೋಡುತ್ತಿದ್ದನ್ನು ಪ್ರಶ್ನಿಸಿದ್ದ ಪತಿ, ಯಾವಾಗಲೂ ಮೊಬೈಲ್ ನಲ್ಲಿ ರೀಲ್ಸ್ ನೋಡ್ತಿಯಾ ಅಂತ ಬಿಯರ್ ಬಾಟಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.