ಟೀಂ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಅವರು ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಸಿಕ್ಸರ್ ಬಾರಿಸುವ ಕೌಶಲ್ಯಕ್ಕೆ ಮಾರುಹೋಗಿದ್ದಾರೆ. ಅಲ್ಲದೆ, ಜಸ್ಪ್ರೀತ್ ಬುಮ್ರಾ ಅವರನ್ನು ಅತ್ಯಂತ ಕಠಿಣ ಬೌಲರ್ ಎಂದು ಕರೆದಿರುವ ಅವರು, ಸಚಿನ್ ಮತ್ತು ರೋಹಿತ್ ಶರ್ಮಾ ಇಬ್ಬರಿಗೂ ಸಮಾನ ಗೌರವ ನೀಡಿದ್ದಾರೆ.
ಮುಂಬೈ: ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾ ಕಂಡ ಅದ್ಭುತ ಬ್ಯಾಟರ್. 360 ಡಿಗ್ರಿ ಬ್ಯಾಟರ್ ಎಂದೇ ಹೆಸರುವಾಸಿ ಆಗಿರುವ ಸೂರ್ಯ, ಈಗ ಸೂರ್ಯವಂಶಿಯ ಭರ್ಜರಿ ಸಿಕ್ಸರ್ ಸ್ಕಿಲ್‌ಗೆ (Six-hitting Ability) ಮಾರುಹೋಗಿದ್ದಾರೆ.
ಇತ್ತೀಚೆಗೆ ಸೂರ್ಯಕುಮಾರ್ ಯಾದವ್ ಅವರು ಹ್ಯೂಮನ್ಸ್ ಆಫ್ ಬಾಂಬೆ ಯೂಟ್ಯೂಬ್ ಚಾನೆಲ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಯಾವ ಆಟಗಾರನ ಸ್ಕಿಲ್ ಅನ್ನು ನೀವು ಪಡೆದುಕೊಳ್ಳಲು ಬಯಸುತ್ತೀರಿ? ಎಂದು ಕೇಳಲಾಗಿತ್ತು. ಅದಕ್ಕೆ ಉತ್ತರಿಸಿದ ಅವರು.. ನಿಮ್ಮ ಗಮನಕ್ಕೂ ಬಂದಿರಬಹುದು, ವೈಭವ್ ಸೂರ್ಯವಂಶಿ ಎಂಬ ಯುವ ಆಟಗಾರನಿದ್ದಾನೆ. ಆತನಷ್ಟು ಸುಲಭವಾಗಿ ಮತ್ತು ಭರ್ಜರಿಯಾಗಿ ಸಿಕ್ಸರ್ ಬಾರಿಸುವ ಕೌಶಲ್ಯವನ್ನು ನಾನು ಪಡೆದುಕೊಳ್ಳಲು ಬಯಸುತ್ತೇನೆ ಎಂದಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ 9,000ಕ್ಕೂ ಹೆಚ್ಚು ರನ್ ಗಳಿಸಿ, ಮೈದಾನದ ಸುತ್ತಲೂ ವಿಶಿಷ್ಟ ಶಾಟ್‌ಗಳನ್ನು ಬಾರಿಸುವ ಸಾಮರ್ಥ್ಯ ಸೂರ್ಯಕುಮಾರ್ ಅವರದ್ದು. ಇದೀಗ ಅವರ ಬಾಯಿಂದಲೇ ಈ ಮಾತು ಬಂದಿರುವುದು ವೈಭವ್‌ಗೆ ಇರುವ ಪ್ರತಿಭೆಗೆ ಸಾಕ್ಷಿಯಾಗಿದೆ.
ಒಂದೇ ಋತುವಿನಲ್ಲಿ 72 ಸಿಕ್ಸರ್
2025ರ ಐಪಿಎಲ್‌ನಲ್ಲಿ ಪದಾರ್ಪಣೆ ಮಾಡಿದ್ದ ಸೂರ್ಯವಂಶಿ.. ಐಪಿಎಲ್ 2026ರಲ್ಲಿ ಸೂರ್ಯವಂಶಿ ಬ್ಯಾಟಿಂಗ್ ಶಕ್ತಿ ಇಡೀ ಜಗತ್ತನ್ನೇ ಬೆರಗುಗೊಳಿಸಿದೆ. ಈ ಸೀಸನ್‌ನಲ್ಲಿ ಬರೋಬ್ಬರಿ 776 ರನ್ ಬಾರಿಸಿ 'ಆರೆಂಜ್ ಕ್ಯಾಪ್' ಮುಡಿಗೇರಿಸಿಕೊಂಡಿದ್ದಾರೆ. ಒಂದೇ ಐಪಿಎಲ್ ಋತುವಿನಲ್ಲಿ ಬರೋಬ್ಬರಿ 72 ಸಿಕ್ಸರ್ ಬಾರಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಇದೇ ವೇಳೆ ತಮ್ಮ ಕ್ರಿಕೆಟ್ ಜೀವನದಲ್ಲಿ ಎದುರಿಸಿದ ಅತ್ಯಂತ ಕಠಿಣ ಬೌಲರ್ ಯಾರು ಎಂಬ ಪ್ರಶ್ನೆಗೆ ಜಸ್ಪ್ರೀತ್ ಬುಮ್ರಾ ಹೆಸರು ಹೇಳಿದ್ದಾರೆ. ಬುಮ್ರಾ ಪ್ರಸ್ತುತ ನನ್ನ ತಂಡದಲ್ಲೇ ಇದ್ದಾರೆ (ಟೀಮ್ ಇಂಡಿಯಾ ಹಾಗೂ ಮುಂಬೈ ಇಂಡಿಯನ್ಸ್). ಆದರೆ ಅವರನ್ನು ಎದುರಿಸುವುದು ಅತ್ಯಂತ ಕಠಿಣ ಎಂದಿದ್ದಾರೆ.
ಭಾರತ ಕ್ರಿಕೆಟ್‌ನ ದಂತಕಥೆ ಸಚಿನ್ ತೆಂಡೂಲ್ಕರ್ ಮತ್ತು ರೋಹಿತ್ ಶರ್ಮಾ ಅವರಲ್ಲಿ ಯಾರನ್ನು ಆಯ್ಕೆ ಮಾಡುತ್ತೀರಿ ಎಂದಾಗ.. ನಾನು ಸಚಿನ್ ಸರ್ ಆಟ ನೋಡುತ್ತಲೇ ಕ್ರಿಕೆಟ್ ಆಡಲು ಪ್ರಾರಂಭಿಸಿದೆ. ಆದರೆ ರೋಹಿತ್ ಶರ್ಮಾರ ನಾಯಕತ್ವದಲ್ಲಿ ಮತ್ತು ಅವರೊಂದಿಗೆ ಸುದೀರ್ಘ ಕಾಲ ಕ್ರಿಕೆಟ್ ಆಡಿದ್ದೇನೆ. ಹಾಗಾಗಿ ಇಬ್ಬರಿಗೂ ನನ್ನ ಕಡೆಯಿಂದ 50-50 ಗೌರವ ಎಂದು ಜಾಣ್ಮೆಯ ಉತ್ತರ ನೀಡಿದರು.
ಸೂರ್ಯಕುಮಾರ್ ಯಾದವ್ ಮಾರ್ಚ್ 2021ರಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಜುಲೈ 2021 ರಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. '360-ಡಿಗ್ರಿ' ಬ್ಯಾಟಿಂಗ್ ಶೈಲಿಯಿಂದಾಗಿ ಟಿ20 ಕ್ರಿಕೆಟ್‌ನ ಪ್ರಮುಖ ಬ್ಯಾಟರ್ ಆದರು. 2024ರ ಟಿ20 ವಿಶ್ವಕಪ್ ಗೆಲುವಿನ ನಂತರ ರೋಹಿತ್ ಶರ್ಮಾ ಟಿ20 ಮಾದರಿಗೆ ನಿವೃತ್ತಿ ಘೋಷಿಸಿದರು. ಆಗ ಬಿಸಿಸಿಐ (BCCI) ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ತಂಡದ ಖಾಯಂ ನಾಯಕನನ್ನಾಗಿ ಆಯ್ಕೆ ಮಾಡಿತು. ಪ್ರಸ್ತುತ ಟಿ20 ತಂಡದಲ್ಲಿ ತೀವ್ರ ಪೈಪೋಟಿ ಮತ್ತು ಬದಲಾವಣೆಗಳು ನಡೆಯುತ್ತಿವೆ. ಸೂರ್ಯ ಮತ್ತೆ ತಮ್ಮ ಹಳೆಯ ಲಯಕ್ಕೆ ಮರಳುವ ವಿಶ್ವಾದಲ್ಲಿದ್ದಾರೆ.


