ಟಿ20 ನಾಯಕತ್ವ, ತಂಡದಿಂದ ಕೊಕ್ ನೀಡಿದ ಬಳಿಕ ಸೂರ್ಯಕುಮಾರ್ ಯಾದವ್ ಕೆಲ ಪ್ರತಿಕ್ರಿಯೆ ನೀಡಿದ್ದರು. ಆದರೆ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ. ಒಂದೂ ಸರಣಿ ಸೋತಿಲ್ಲ, ಆದರೂ.. ಎಂದು ಮಾತು ಆರಂಭಿಸಿದ್ದಾರೆ.

ಮುಂಬೈ (ಆ.28) ಟಿ20 ವಿಶ್ವಕಪ್ 2026 ಟ್ರೋಫಿ ಗೆದ್ದ ಎರಡು ತಿಂಗಳಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಟೀ ಇಂಡಿಯಾದಿಂದ ಹೊರಬಿದ್ದಿದ್ದರು. ಟಿ20 ನಾಯಕತ್ವ ಮಾತ್ರವಲ್ಲ, ತಂಡದಿಂದಲೇ ಕೊಕ್ ನೀಡಲಾಗಿತ್ತು. ಶ್ರೇಯಸ್ ಅಯ್ಯರ್‌ಗೆ ನಾಯಕತ್ವ ನೀಡಲಾಗಿತ್ತು. ತಂಡದಿಂದ ಹೊರಬಿದ್ದ ಬಳಿಕ ಸೂರ್ಯಕುಮಾರ್ ಯಾದವ್, ಟೀಂ ಇಂಡಿಯಾ, ಶ್ರೇಯಸ್ ಅಯ್ಯರ್‌ಗೆ ಶುಭಕೋರಿ ಸಂದೇಶ ರವಾನಿಸಿದ್ದರು. ಇದೀಗ ಮೊದಲ ಬಾರಿಗೆ ಸೂರ್ಯಕುಮಾರ್ ಮನಬಿಚ್ಚಿ ಮಾತನಾಡಿದ್ದಾರೆ. ಈ ಘೋಷಣೆ ತನಗೆ ಆಘಾತ ತಂದಿತ್ತು ಎಂದಿದ್ದಾರೆ.

ತಂಡ ಅನೌನ್ಸ್ ಆದಾಗ ಆಘಾತ

ಟಿ20 ವಿಶ್ವಕಪ್ ಟೂರ್ನಿ ಗೆದ್ದ ಸಂಭ್ರಮ ಇನ್ನು ಮಾಸಿರಲಿಲ್ಲ. ತಂಡವನ್ನು ಉತ್ತಮವಾಗಿ ಮುನ್ನಡೆಸಿದೆ ಹೆಮ್ಮೆ ಇತ್ತು. 2028ರ ಟಿ20 ವಿಶ್ವಕಪ್ ಟೂರ್ನಿಗೂ ತಂಡವನ್ನು ಮುನ್ನಡೆಸುವ ಆತ್ಮವಿಶ್ವಾಸವಿತ್ತು. ಎಲ್ಲವೂ ಚೆನ್ನಾಗಿತ್ತು.ಆದರೆ ಬಿಸಿಸಿಐ ಟಿ20 ತಂಡ ಪ್ರಕಟಿಸಿದಾಗ ನನ್ನ ನಾಯಕತ್ವ ಮಾತ್ರವಲ್ಲ ತಂಡದಲ್ಲೇ ಇಲ್ಲಾ ಎಂದಾಗ ಆಘಾತವಾಗಿತ್ತು ಎಂದು ಮಾಜಿ ಕ್ರಿಕೆಟಿಗ ಅಕಾಶ್ ಚೋಪ್ರಾ ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ.

ಲಾಸ್ ಎಂಜಲ್ಸ್‌ನ ಒಲಿಂಪಿಕ್ಸ್, 2028ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತಂಡ ಮುನ್ನಡೆಸಿ ಚಾಂಪಿಯನ್ ಆಗೋ ಗುರಿ ಇಟ್ಟುಕೊಂಡಿದ್ದೆ. ನನ್ನ ನಾಯಕತ್ವದಲ್ಲಿ ಟೀಂ ಇಂಡಿಯಾ ಒಂದೇ ಒಂದು ಸರಣಿ ಸೋತಿಲ್ಲ. ಆದರೆ ದಿಢೀರ್ ಈ ಬದಲಾವಣೆ ಯಾಕೆ ಎಂದು ಹಲವು ಬಾರಿ ನನ್ನನ್ನೇ ಪ್ರಶ್ನಿಸಿಕೊಂಡೆ. ಒತ್ತಡದ ಸಂದರ್ಭದಲ್ಲಿ ತಂಡಕ್ಕಾಗಿ ಕೊಡುಗೆ ನೀಡಿದ್ದೇನೆ. ತಂಡವನ್ನು ಮುನ್ನಡೆಸಿದ್ದೇನೆ. ತಕ್ಷಣವೇ ಎಲ್ಲವೂ ಕೈಯಿಂದ ಜಾರಿದ ಅನುಭವಾಯಿತು. ಆದರೆ ನಿರ್ಧಾರವನ್ನು ನಾನು ಗೌರವಿಸಿದೆ. ಸಂಕಷ್ಟದ ಸಮಯದಲ್ಲಿ ನಾನು ಪ್ರತಿ ಬಾರಿ ಮುಗುಳು ನಕ್ಕು ಸುಮ್ಮನಾಗುತ್ತೇನೆ ಎಂದು ಸೂರ್ಯಕುಮಾರ್ ಹೇಳಿದ್ದಾರೆ.

ಶ್ರೇಯಸ್ ಅಯ್ಯರ್ ಉತ್ತಮ ಕ್ರಿಕೆಟಿಗ, ಉತ್ತಮ ನಾಯಕ. ಜೊತೆಯಾಗಿ ಹಲವು ಪಂದ್ಯ ಆಡಿದ್ದೇವೆ. ನಾನು ಶ್ರೇಯಸ್ ಅಯ್ಯರ್‌ಗೆ ಯಾಕೆ ಎಂದು ಯೋಚಿಸಲು ಹೋಗಲಿಲ್ಲ. ಇದು ತಂಡದ ನಿರ್ಧಾರ. ಅಯ್ಯರ್‌ಗೆ ಇದು ಅವಕಾಶ ಎಂದು ನಾನು ಭವಾಸಿದೆ. ಏಷ್ಯಾಕಪ್, ಟಿ20 ವಿಶ್ವಕಪ್ ಸೇರಿದಂತೆ ಎಲ್ಲಾ ಸರಣಿ ಗೆದ್ದು ಸಾಗುತ್ತಿರುವಾಗ ಬದಲಾವಣೆ ನೋವು ತಂದಿದ್ದು ನಿಜ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

ಒಂದು ತಿಂಗಳು ಮನೆಯಲ್ಲೇ ಉಳಿದೆ

ಒಂದು ತಿಂಗಳು ಮನೆಯಲ್ಲೇ ಉಳಿದು ಯೋಚಿಸುತ್ತಾ ಕುಳಿತೆ. ಯಾಕೆ ಹೀಗಾಯಿತು ಅನ್ನೋದಕ್ಕೆ ಉತ್ತರ ಇರಲಿಲ್ಲ. ಟೀಂ ಇಂಡಿಯಾ ಪರ ಪ್ರದರ್ಶನ ನಾಯಕತ್ವ ಉತ್ತಮವಾಗಿತ್ತು. ಆದರೆ ಐಪಿಎಲ್ ಟೂರ್ನಿ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಗೆಳೆಯರು, ಆಪ್ತರು ಬಂದು ಮಾತನಾಡುತ್ತಿದ್ದರು. ಆದರೆ ಅವರು ಹೋದ ಬಳಿಕ ನಾನು, ಪತ್ನಿ ಹಾಗೂ ಮಗಳು ಚರ್ಚಿಸುತ್ತಿದ್ದೆವು. ನೋವಾಗುತ್ತಿತ್ತು. ಪರಿಸ್ಥಿತಿಯನ್ನು ಅರಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.