ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಈಸ್ಟ್ ಝೋನ್ 708 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ. ಇದಕ್ಕೆ ಉತ್ತರವಾಗಿ, ವೈಭವ್ ಸೂರ್ಯವಂಶಿ ಅವರ ಒತ್ತಾಯದ ಮೇರೆಗೆ ಇಶಾನ್ ಕಿಶನ್ ತೆಗೆದುಕೊಂಡ ಯಶಸ್ವಿ ಡಿಆರ್‌ಎಸ್‌ನಿಂದ ಸೌತ್ ಝೋನ್ ಆರಂಭಿಕ ಆಘಾತ ಅನುಭವಿಸಿತು. ಸದ್ಯ ದೇವದತ್ ಪಡಿಕ್ಕಲ್ ಅರ್ಧಶತಕದ ಹೊರತಾಗಿಯೂ ಸೌತ್ ಝೋನ್ ತಂಡವು ಸಂಕಷ್ಟದಲ್ಲಿದೆ.
ಚೆನ್ನೈ: ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಈಸ್ಟ್ ಝೋನ್ ನೀಡಿದ ಬೃಹತ್ ಮೊತ್ತವನ್ನು ಬೆನ್ನತ್ತಿದ ಸೌತ್ ಝೋನ್‌ಗೆ ಆರಂಭದಲ್ಲೇ ಆಘಾತ ಎದುರಾಗಿದೆ. ಈಸ್ಟ್ ಝೋನ್ ಗಳಿಸಿದ 708 ರನ್‌ಗಳ ಬೃಹತ್ ಸ್ಕೋರ್‌ಗೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಸೌತ್ ಝೋನ್, ಆರಂಭಿಕ ಆಟಗಾರ ರಿಕ್ಕಿ ಭುಯಿ ವಿಕೆಟ್ ಕಳೆದುಕೊಂಡಿತು. ಇದಕ್ಕೆ ಕಾರಣರಾದದ್ದು ಉಪನಾಯಕ ವೈಭವ್ ಸೂರ್ಯವಂಶಿ.
ಮುಕೇಶ್ ಕುಮಾರ್ ಬೌಲ್ ಮಾಡಿದ ಆರನೇ ಓವರ್‌ನಲ್ಲಿ ಈ ಘಟನೆ ನಡೆಯಿತು. ಮುಕೇಶ್ ಎಸೆದ ಚೆಂಡು ರಿಕ್ಕಿ ಭುಯಿ ಬ್ಯಾಟ್‌ನ ಅಂಚಿಗೆ ತಾಗಿ ವಿಕೆಟ್ ಕೀಪರ್ ಕುಮಾರ್ ಕುಶಾಗ್ರ ಕೈ ಸೇರಿತ್ತು. ಆದರೆ, ಅಂಪೈರ್ ಔಟ್ ನೀಡಲಿಲ್ಲ. ಆಗ ಸ್ಲಿಪ್‌ನಲ್ಲಿದ್ದ ವೈಭವ್ ಮತ್ತು ವಿಕೆಟ್ ಕೀಪರ್‌ಗೆ ಚೆಂಡು ಬ್ಯಾಟ್‌ಗೆ ತಾಗಿದ್ದು ಖಚಿತವಾಗಿತ್ತು. ಹೀಗಾಗಿ, ಅವರು ನಾಯಕ ಇಶಾನ್ ಕಿಶನ್‌ಗೆ ರಿವ್ಯೂ ತೆಗೆದುಕೊಳ್ಳುವಂತೆ ಒತ್ತಾಯಿಸಿದರು. 'ನೀವು ಧೈರ್ಯವಾಗಿ ರಿವ್ಯೂ ತಗೊಳ್ಳಿ, ನಾನಲ್ವಾ ಹೇಳ್ತಿರೋದು' ಎಂದು ವೈಭವ್ ಸ್ಟಂಪ್ ಮೈಕ್‌ನಲ್ಲಿ ಇಶಾನ್‌ಗೆ ಹೇಳಿದ್ದು ಸ್ಪಷ್ಟವಾಗಿ ಕೇಳಿಸಿತ್ತು. ವೈಭವ್ ಅವರ ಆತ್ಮವಿಶ್ವಾಸದಿಂದ ಇಶಾನ್ ಕಿಶನ್ ಡಿಆರ್‌ಎಸ್ ತೆಗೆದುಕೊಂಡರು. ಅಲ್ಟ್ರಾಎಡ್ಜ್‌ನಲ್ಲಿ ಚೆಂಡು ರಿಕ್ಕಿ ಭುಯಿ ಬ್ಯಾಟ್‌ಗೆ ತಾಗಿದ್ದು ಸ್ಪಷ್ಟವಾಯಿತು. ತಕ್ಷಣ ಅಂಪೈರ್ ತಮ್ಮ ನಿರ್ಧಾರ ಬದಲಿಸಿ ಔಟ್ ಎಂದು ಘೋಷಿಸಿದರು.
ವೈಭವ್ ಸೂರ್ಯವಂಶಿ ಡಿಆರ್‌ಎಸ್ ವಿಡಿಯೋ ವೈರಲ್
ನಂತರ, ದೇವದತ್ ಪಡಿಕ್ಕಲ್ ವಿರುದ್ಧವೂ ವೈಭವ್ ಒತ್ತಾಯದ ಮೇರೆಗೆ ಈಸ್ಟ್ ಝೋನ್ ಮತ್ತೊಂದು ರಿವ್ಯೂ ತೆಗೆದುಕೊಂಡಿತು. ಆದರೆ, ಚೆಂಡು ವಿಕೆಟ್ ಲೈನ್‌ನಿಂದ ಹೊರಗಿದ್ದ ಕಾರಣ, ಈಸ್ಟ್ ಝೋನ್ ತಂಡಕ್ಕೆ ಆ ರಿವ್ಯೂ ನಷ್ಟವಾಯಿತು. ಈ ಪಂದ್ಯದಲ್ಲಿ ಈಸ್ಟ್ ಝೋನ್ ಸಂಪೂರ್ಣ ಹಿಡಿತ ಸಾಧಿಸಿದೆ. ನಾಯಕ ಇಶಾನ್ ಕಿಶನ್ ದ್ವಿಶತಕ (270), ಕುಮಾರ್ ಕುಶಾಗ್ರ ಶತಕ (101) ಹಾಗೂ ವೈಭವ್ ಸೂರ್ಯವಂಶಿ ಅವರ ವೇಗದ 44 ರನ್‌ಗಳ ನೆರವಿನಿಂದ ಈಸ್ಟ್ ಝೋನ್ 708 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.
ಸಂಕಷ್ಟಕ್ಕೆ ಸಿಲುಕಿದ ದಕ್ಷಿಣ ವಲಯ:
ಬರೋಬ್ಬರಿ 708 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ದಕ್ಷಿಣ ವಲಯ ತಂಡವು ಆರಂಭಿಕ ಆಘಾತಕ್ಕೆ ಒಳಗಾಯಿತು. ರಿಕ್ಕಿ ಭುಯಿ ಕೇವಲ ಒಂದು ರನ್ ಗಳಿಸಿ ಮುಕೇಶ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದರೆ, ಮತ್ತೋರ್ವ ಆರಂಭಿಕ ಬ್ಯಾಟರ್ ಎನ್. ಜಗದೀಶನ್ 32 ರನ್ ಗಳಿಸಿ ಶಿಖರ್ ಮೋಹನ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾದರು. ಪಡಿಕ್ಕಲ್ 62 ರನ್ ಗಳಿಸಿ ಮುಕೇಶ್ ಕುಮಾರ್‌ಗೆ ಎರಡನೇ ಬಲಿಯಾದರು. ಇನ್ನುಳಿದಂತೆ ಶೇಕ್ ರಶೀದ್ 27 ಹಾಗೂ ಸ್ಮರಣ್ ರವಿಚಂದ್ರನ್ 23 ರನ್ ಗಳಿಸಿ ಶಮಿಗೆ ವಿಕೆಟ್ ಒಪ್ಪಿಸಿದರು. ಸದ್ಯ ನಾಯಕ ತಿಲಕ್ ವರ್ಮಾ 18 ಹಾಗೂ ಕನ್ನಡಿಗ ಶ್ರೇಯಸ್ ಗೋಪಾಲ್ 2 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಸದ್ಯ ದಕ್ಷಿಣ ವಲಯ ತಂಡವು 56 ಓವರ್ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 176 ರನ್ ಬಾರಿಸಿದ್ದು, ಇನ್ನೂ 532 ರನ್‌ಗಳ ಹಿನ್ನಡೆಯಲ್ಲಿದೆ.


