ಭಾರತದ ಖ್ಯಾತ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಇತ್ತೀಚೆಗೆ ಮೆಟ್ರೋದಲ್ಲಿ ಪ್ರಯಾಣಿಸಿದ ಫೋಟೋ ವೈರಲ್ ಆಗಿದೆ. ಈ ಲೇಖನವು ಅವರ ಸರಳ ಜೀವನಶೈಲಿ, 'ಮೈಸೂರು ಎಕ್ಸ್‌ಪ್ರೆಸ್' ಆಗಿ ಅವರ ಅಪ್ರತಿಮ ಕ್ರಿಕೆಟ್ ಸಾಧನೆಗಳು ಮತ್ತು ಕನ್ನಡದ ಮೇಲಿನ ಅವರ ಅಪಾರ ಪ್ರೀತಿಯನ್ನು ವಿವರಿಸುತ್ತದೆ.

- ಸುದರ್ಶನ್, ಏಷ್ಯಾನೆಟ್ ಸುವರ್ಣ ನ್ಯೂಸ್

ಮೆಟ್ರೋ ರೈಲಿನ ಒಂದು ಮೂಲೆಯಲ್ಲಿ ಸೊಂಟಕ್ಕೆ ಕೈ ಇಟ್ಟು, ತಲೆ ತಗ್ಗಿಸಿ ಹಾಡು ಕೇಳುತ್ತಾ ನಿಂತ ಒಬ್ಬ ವ್ಯಕ್ತಿ. ಅವರನ್ನು ಅಷ್ಟು ಇಷ್ಟು ಬಲ್ಲ ನಾನು ಖಡಾ ಖಂಡಿತವಾಗಿ ಹೇಳಬಲ್ಲೆ, ಅವರು ಕೇಳುತ್ತಿದ್ದದ್ದು ಡಾ.ರಾಜ್ ಕುಮಾರ್ ಅವರ ಎವರ್ ಗ್ರೀನ್ ಹಾಡುಗಳನ್ನೇ. ಕಾರಣ, ಅವರು ವರನಟನ ಪರಮ ಭಕ್ತ.

ಮೆಟ್ರೋ ರೈಲಿನಲ್ಲಿ ನಿಂತಿದ್ದ ಅವರನ್ನು ನೋಡಿದವರಿಗೆ ಅಚ್ಚರಿ.. ಇವರು ಅವರೇ ಅಲ್ಲವೇ ಎಂಬ ಕೌತುಕ..

ಹೌದು.. ಅದು ಅವರೇ. 551 ಅಂತರಾಷ್ಟ್ರೀಯ ವಿಕೆಟ್’ಗಳ ಸರದಾರ. ಭಾರತ ಪರ 4 ವಿಶ್ವಕಪ್‌ಗಳಲ್ಲಿ ಆಡಿದ್ದ ಹಮ್ಮೀರ. ಭಾರತದ ಮೊಟ್ಟ ಮೊದಲ genuine fast bowler. 90ರ ದಶಕದ ಸಿಡಿಲಮರಿ ಸನತ್ ಜಯಸೂರ್ಯನ ಗುಂಡಿಗೆಯನ್ನೇ ನಡುಗಿಸಿದ್ದ ಮೈಸೂರು ಎಕ್ಸ್’ಪ್ರೆಸ್ ಜಾವಗಲ್ ಶ್ರೀನಾಥ್..

ಇತ್ತೀಚೆಗೆ ಶ್ರೀನಾಥ್ ಅವರು ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ನೋಡಿದವರು ಅಚ್ಚರಿ ಪಡುತ್ತಿದ್ದಾರೆ.

ಆದರೆ, ಶ್ರೀನಾಥ್ ಅವರನ್ನು ಹತ್ತಿರದಿಂದ ಬಲ್ಲವರಿಗೆ ಇದು ಖಂಡಿತಾ ಅಚ್ಚರಿಯಲ್ಲ. ಕಾರಣ, ಅವರಿರುವುದೇ ಹಾಗೆ. ಕ್ರಿಕೆಟ್ ಪಂದ್ಯಗಳನ್ನು ಮುಗಿಸಿ ಬೆಂಗಳೂರಿಗೆ ಬಂದಿಳಿದು ಮೈಸೂರಿಗೆ ತೆರಳಬೇಕೆಂದರೆ ಈಗಲೂ ರೈಲನ್ನೋ, ಕೆ.ಎಸ್.ಆರ್.ಟಿ.ಸಿ ಬಸ್ಸನ್ನೋ ಹತ್ತಿ ಬಿಡುತ್ತಾರೆ. ಮೈಸೂರಿಗೆ ಬಂದಾಗಲೆಲ್ಲಾ ಹಳೆಯ ಸ್ನೇಹಿತರನ್ನು ತಪ್ಪದೇ ಭೇಟಿಯಾಗುತ್ತಾರೆ. ಕಾಲೇಜು ದಿನಗಳಲ್ಲಿ ಓಡಾಡುತ್ತಿದ್ದ ಜಾಗಗಳಲ್ಲಿ ಈಗಲೂ ಓಡಾಡುತ್ತಾರೆ.. ಕೈಯಲ್ಲಿ ನಂದಿನಿ ಹಾಲಿನ ಪ್ಯಾಕೆಟ್ ಹಿಡಿದು ಸಾಮಾನ್ಯರಲ್ಲೇ ಸಾಮಾನ್ಯರಂತೆ ಕಾಣಿಸಿಕೊಳ್ಳುತ್ತಾರೆ. ಸರಳತೆ ಅವರಿಗೆ ಶೋಕಿಯಲ್ಲ, ಅದು ಅವರ ಜೀವನಶೈಲಿ.. ಸೋಷಿಯಲ್ ಮೀಡಿಯಾ ಇಲ್ಲದ ದಿನಗಳಿಂದಲೂ ಜಾವಗಲ್ ಶ್ರೀನಾಥ್ ಅವರು ಇರುವುದೇ ಹಾಗೆ..

ಕನ್ನಡದ ರಾಯಭಾರಿ.. ಕರ್ನಾಟಕದ ಹೆಮ್ಮೆ.. ಗಂಡ ಭೇರುಂಡ ಲಾಂಛನದ ಗರ್ವ ನಮ್ಮ ಜಾವಗಲ್ ಶ್ರೀನಾಥ್.

ಅವರು ನಮ್ಮ ಬಾಲ್ಯದ emotion.., ಅವರೆಂದರೆ perfection.., ಅವರೆಂದರೆ celebration.. ಜನ್ಮಭೂಮಿ ಹಾಸನ ಜಿಲ್ಲೆಯ ಅರಸೀಕೆರೆಯ ಜಾವಗಲ್. ಕರ್ಮಭೂಮಿ ಮೈಸೂರು. 80ರ ದಶಕದ ಕೊನೆಯ ಭಾಗ. ಬೆಂಗಳೂರು ಹುಡುಗರಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ವೆಂಕಟೇಶ್ ಪ್ರಸಾದ್ ಪ್ರವರ್ಧಮಾನಕ್ಕೆ ಬಂದಿದ್ದ ಸಮಯ. ಕ್ರಿಕೆಟ್ ಸಿಟಿ ಹುಡುಗರ ಆಟ ಎಂಬಂತಿದ್ದ ಸಮಯದಲ್ಲಿ ಕರ್ನಾಟಕ ಕ್ರಿಕೆಟ್’ನ ಕಣ್ಣುಗಳನ್ನು ಸೂಜಿಗಲ್ಲಿನಂತೆ ಸೆಳೆದು ಬಿಟ್ಟಿದ್ದ ಮೈಸೂರಿನ ನೀಳಕಾಯದ ಹುಡುಗ. ಬೆಂಗಳೂರಿನಲ್ಲಿ ಅವನ ಬೌಲಿಂಗ್ ವೇಗದ ಬಗ್ಗೆಯೇ ಮಾತು.

‘‘ಅವನೇನು ಅಂಥಾ ಬೌಲರಾ..? ಇಂಥಾ ಅದೆಷ್ಟು ಮಂದಿಯನ್ನು ನೋಡಿಲ್ಲ ನಾನು’’ ಎಂದಿದ್ದರಂತೆ ಭಾರತ ಪರ ಆಡಿದ್ದ ಕರ್ನಾಟಕದ ಒಬ್ಬ ದಿಗ್ಗಜ.

ಆ ಕಡೆಯಿಂದ ಬಂದ ಉತ್ತರ.. ‘‘ಒಮ್ಮೆ ಅವನ ವಿರುದ್ಧ ಆಡಿ ನೋಡಿ’’ ಕೆಲ ದಿನಗಳ ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಆ ದಿಗ್ಗಜನಿಗೆ ಮೈಸೂರು ಹುಡುಗ ಶ್ರೀನಾಥ್ ಎದುರಾಗಿಯೇ ಬಿಟ್ಟರು. ‘ಇವನೇನು ಮಹಾ’ ಎಂದಿದ್ದವರ ತಲೆಯಿಂದ ರಕ್ತ ಸುರಿದಿತ್ತು ಆ ದಿನ. ಒಂದೇ ಒಂದು ಬೌನ್ಸರ್ ಮೂಲಕ ಆ ದಿಗ್ಗಜನಿಗೆ ತಮ್ಮ ಪರಿಚಯ ಮಾಡಿಸಿದ್ದರು ಜಾವಗಲ್ ಶ್ರೀನಾಥ್.

ರಣಜಿ ಪದಾರ್ಪಣೆಯ ಇನ್ನಿಂಗ್ಸ್’ನಲ್ಲೇ ಹ್ಯಾಟ್ರಿಕ್ ಸಾಧನೆಯೊಂದಿಗೆ 5 ವಿಕೆಟ್ ಪಡೆದಿದ್ದ ಶ್ರೀನಾಥ್ 1990ರಲ್ಲಿ ಭಾರತ ತಂಡಕ್ಕೆ ಕಾಲಿಟ್ಟು ವೇಗದ ಬೌಲಿಂಗ್ ಜವಾಬ್ದಾರಿಗೆ ಹೆಗಲಾದವರು. ಪಾಕಿಸ್ತಾನದ ಬೆಂಕಿ ವಕಾರ್ ಯೂನಿಸ್, ದಕ್ಷಿಣ ಆಫ್ರಿಕಾದ ಕಿಡಿ ಕಿಚ್ಚು ಅಲನ್ ಡೊನಾಲ್ಡ್, ವೆಸ್ಟ್ ಇಂಡೀಸ್’ನ ಸಿಡಿಲು ಕರ್ಟ್ಲಿ ಆ್ಯಂಬ್ರೊಸ್’ರಂತಹ ಭಯಾನಕ ವೇಗಿಗಳ ವಿಧ್ವಂಸಕ ದಾಳಿಗೆ 90ರ ದಶಕ ಸಾಕ್ಷಿಯಾಗಿತ್ತು.

ನೆನಪಿರಲಿ.. ಇವರಿಗೆಲ್ಲಾ ಹೆಗಲಿಗೆ ಹೆಗಲು ಕೊಡಲು ಸಮರ್ಥ ಜೊತೆಗಾರರು ತಂಡದಲ್ಲಿದ್ದರು. Amidst it all, One bowler from India who stood tall & carried his team more than any of these legends alone. ಅವರು ಮೈಸೂರು ಎಕ್ಸ್’ಪ್ರೆಸ್, ನಮ್ಮ ಹೆಮ್ಮೆಯ ಕನ್ನಡಿಗ ಜಾವಗಲ್ ಶ್ರೀನಾಥ್..! The great ಕಪಿಲ್ ದೇವ್ ಮೈದಾನದಲ್ಲಿ ಗಿಡಗಳನ್ನು ನೆಟ್ಟರೆ ಜಹೀರ್ ಖಾನ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಅವರಂತವರು ಹಣ್ಣುಗಳನ್ನು ನೀಡುವ ಮರಕ್ಕೆ ಆಸರೆಯಾದವರು. ಇವರ ಮಧ್ಯೆ ಕ್ರಿಕೆಟ್ ಮೈದಾನದಲ್ಲಿ ವೇಗದ ಬೌಲಿಂಗ್ ಎಂದು ಕರೆಯಲ್ಪಡುವ ಆ ಮರದ ರಕ್ಷಣೆಗೆ ಅವಿರತವಾಗಿ ಶ್ರಮಿಸಿದ ಒಬ್ಬ ಕಾವಲುಗಾರ ಯಾರಾದರೂ ಇದ್ದರೆ ನಿಸ್ಸಂದೇಹವಾಗಿ ಅದು ಜಾವಗಲ್ ಶ್ರೀನಾಥ್.

ವೇಗದ ಬೌಲಿಂಗ್’ಗೆ ಯಾವ ಸತ್ವವೂ ಇಲ್ಲದ ಕಾಲದಲ್ಲಿ. ಭಾರತದ ಪಿಚ್’ಗಳಲ್ಲಿ ವಿಕೆಟ್’ಗಳನ್ನು ಪಡೆಯುವುವೇ ದುಸ್ತರ ಎಂಬ ಸಮಯದಲ್ಲಿ ಸಮುದ್ರದ ಅಲೆಗಳ ವಿರುದ್ಧ ಈಜಿದವರು ಶ್ರೀನಾಥ್. ಭಾರತ ತಂಡಕ್ಕಾಗಿ ಅವರದ್ದು ಸಾಟಿಯಿಲ್ಲದ ಸಮರ್ಪಣಾ ಮನೋಭಾವ. ಸಾಮಾನ್ಯವಾಗಿ ಟೆಸ್ಟ್ ಕ್ರಿಕೆಟ್’ನಲ್ಲಿ ವೇಗದ ಬೌಲರ್’ಗಳು ಸುದೀರ್ಘ ಸ್ಪೆಲ್’ಗಳನ್ನು ಮಾಡುವುದು ತುಂಬಾ ಅಪರೂಪ. ಶ್ರೀನಾಥ್ 90-95 mph ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದ ಎಕ್ಸ್’ಪ್ರೆಸ್ ಫಾಸ್ಟ್ ಬೌಲರ್. ಹೀಗಿದ್ದರೂ ಇಡೀ ಬೌಲಿಂಗ್ ಲೈನಪ್’ನಲ್ಲಿ ಅತೀ ಹೆಚ್ಚು ಓವರ್’ಗಳನ್ನು ಮಾಡುತ್ತಿದ್ದವರು ಅವರೇ. ಇಂತಹ heavy workload ಮಧ್ಯೆ ಗಾಯಗಳು ಸಹಜ.

1996-97ರ ಸೀಸನ್’ನಲ್ಲಿ ಜಾವಗಲ್ ಶ್ರೀನಾಥ್ ಭುಜದ ಗಾಯಕ್ಕೊಳಗಾಗುತ್ತಾರೆ. ಅವರನ್ನು ಕಾಡಿದ್ದು Rotator cuff injury.. 1997ರ ಮಾರ್ಚ್ ಹೊತ್ತಿಗೆ ಗಾಯ 2nd stage ತಲುಪುವ ಮೊದಲು ಆ ಸೀಸನ್’ನ 9 ಟೆಸ್ಟ್ ಮ್ಯಾಚ್’ಗಳಲ್ಲಿ 429 ಓವರ್ ಬೌಲಿಂಗ್ ಮಾಡುತ್ತಾರೆ. ಆ 9 ಟೆಸ್ಟ್’ಗಳಲ್ಲಿ 46 ವಿಕೆಟ್’ಗಳನ್ನು ಪಡೆದಿದ್ದ ಶ್ರೀನಾಥ್ ತಮ್ಮ ಫಾರ್ಮ್’ನ ಉತ್ತುಂಗದಲ್ಲಿದ್ದ ಸಮಯವದು. ಗಾಯ ಅದೆಷ್ಟು ಗಂಭೀರವಾಗಿ ಕಾಡಿತು ಎಂದರೆ ಮತ್ತೆಂದೂ ಬೌಲಿಂಗ್ ಮಾಡಲು ಸಾಧ್ಯವೇ ಇಲ್ಲ ಎಂಬಂಥಾ ಸ್ಥಿತಿ. ಮುಂದಿನ ದಿನಗಳಲ್ಲಿ ಗಾಯದಿಂದ ಚೇತರಿಸಿಕೊಂಡು ಕ್ರಿಕೆಟ್ ಮೈದಾನಕ್ಕೆ ಮರಳಿದರೂ ಬೌಲಿಂಗ್’ನಲ್ಲಿ ಹಿಂದಿನ ಎಕ್ಸ್’ಪ್ರೆಸ್ ವೇಗ ಇರಲಿಲ್ಲ. ಭಾರತ ತಂಡದ ಪರ ಪಂದ್ಯಗಳಿಲ್ಲದ ವೇಳೆ ಕರ್ನಾಟಕ ತಂಡಕ್ಕೆ ಮರಳಿ ರಣಜಿ ಟ್ರೋಫಿಗಳನ್ನು ಗೆದ್ದು ಕೊಟ್ಟದ್ದನ್ನು ಕರ್ನಾಟಕ ಕ್ರಿಕೆಟ್ ಎಂದಿಗೂ ಮರೆಯದು.

ನನಗಿನ್ನೂ ನೆನಪಿದೆ..

2010ರಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಜಾವಗಲ್ ಶ್ರೀನಾಥ್, ಚುನಾವಣೆ ಗೆದ್ದ ಮರುದಿನವೇ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬರುತ್ತಾರೆ. ಶ್ರೀನಾಥ್ ಬಂದಿದ್ದಾರೆ ಎಂಬ ಸುದ್ದಿ ಕೇಳಿ ಅಲ್ಲಿಗೆ ಹೋಗಿದ್ದೆ. ಅಲ್ಲಿ ಕರ್ನಾಟಕ ರಣಜಿ ತಂಡ ಅಭ್ಯಾಸ ನಡೆಸುತ್ತಿತ್ತು. ಮೈದಾನಕ್ಕಿಳಿದವರೇ ಒಂದೆರಡು ಓವರ್ ಬೌಲಿಂಗ್ ಮಾಡುತ್ತಾರೆ. ನಂತರ ಇಡೀ ತಂಡವನ್ನು ಕರೆದು ಒಂದು ಮಾತು ಹೇಳುತ್ತಾರೆ.

‘‘ಇನ್ನು ಮುಂದೆ ಮೈದಾನದಲ್ಲಿ, ಡ್ರೆಸ್ಸಿಂಗ್ ರೂಮ್’ನಲ್ಲಿ ನೀವೆಲ್ಲಾ ಕನ್ನಡದಲ್ಲೇ ಮಾತನಾಡಬೇಕು’’ ಮಾತೃಭಾಷೆಯ ಬಗ್ಗೆ ಜಾವಗಲ್ ಶ್ರೀನಾಥ್ ಅವರಿಗೆ ಅಷ್ಟೊಂದು ಪ್ರೀತಿ, ಅಭಿಮಾನ.

ಸೋಮವಾರವಾದ ಇಂದು ಅವರ ಜನ್ಮದಿನ..

Happy Birthday ಮೈಸೂರು ಎಕ್ಸ್’ಪ್ರೆಸ್