ಐಪಿಎಲ್‌ನಲ್ಲಿ ಅವಕಾಶ ವಂಚಿತರಾಗಿದ್ದ ಆ ಸ್ಪಿನ್ನರ್ ಇಂಗ್ಲೆಂಡ್ ಕೌಂಟಿ ಕ್ರಿಕೆಟ್‌ನಲ್ಲಿ ತಮ್ಮ ಸ್ಪಿನ್ ಜಾದು ಪ್ರದರ್ಶಿಸಿದ್ದಾರೆ. ಗ್ಲೌಸೆಸ್ಟರ್‌ಶೈರ್ ಪರ ಆಡಿ, ಡರ್ಬಿಶೈರ್ ವಿರುದ್ಧ 20 ರನ್‌ಗಳಿಗೆ 5 ವಿಕೆಟ್ ಕಬಳಿಸಿ ತಮ್ಮ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಭಾರತೀಯ ಕ್ರಿಕೆಟ್‌ನಲ್ಲಿ ಅಪಾರ ಪ್ರತಿಭೆಯಿದ್ದರೂ ಸರಿಯಾದ ಅವಕಾಶ ಸಿಗದೆ ಹೊರಗುಳಿಯುವ ಆಟಗಾರರ ಸಾಲು ದೊಡ್ಡದಿದೆ. ಆ ಪಟ್ಟಿಯಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಹೆಸರು ಎಡಗೈ ಚತುರ ಸ್ಪಿನ್ನರ್ ಆರ್. ಸಾಯಿ ಕಿಶೋರ್. ಐಪಿಎಲ್‌ನಲ್ಲಿ ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದರೂ ಹಲವು ಬಾರಿ ಪ್ಲೇಯಿಂಗ್ ಇಲೆವೆನ್‌ನಿಂದ ಹೊರಗುಳಿದು ಬೆಂಚ್‌ಗೆ ಸೀಮಿತವಾಗಿದ್ದ ಈ ಯುವ ತಾರೆ, ಇದೀಗ ಇಂಗ್ಲೆಂಡ್ ನೆಲದಲ್ಲಿ ತಮ್ಮ ರೌದ್ರಾವತಾರ ಪ್ರದರ್ಶಿಸಿದ್ದಾರೆ. ಕೌಂಟಿ ಕ್ರಿಕೆಟ್‌ನಲ್ಲಿ ಎದುರಾಳಿ ಬ್ಯಾಟರ್‌ಗಳಿಗೆ ನಡುಕ ಹುಟ್ಟಿಸಿರುವ ಸಾಯಿ ಕಿಶೋರ್, ಕೇವಲ 20 ರನ್‌ಗಳಿಗೆ 5 ವಿಕೆಟ್ ಕಬಳಿಸಿ ಸಂಚಲನ ಸೃಷ್ಟಿಸಿದ್ದಾರೆ.
ಇಂಗ್ಲೆಂಡ್‌ನಲ್ಲಿ ಸಾಯಿ ಕಿಶೋರ್ ಸ್ಪಿನ್ ವಿನಾಶ!
ಪ್ರಸ್ತುತ ಇಂಗ್ಲೆಂಡ್‌ನಲ್ಲಿ ಕೌಂಟಿ ಚಾಂಪಿಯನ್‌ಶಿಪ್‌ನ ಡಿವಿಷನ್ ಟು ಪಂದ್ಯಗಳು ನಡೆಯುತ್ತಿದ್ದು, ಗ್ಲೌಸೆಸ್ಟರ್‌ಶೈರ್ ತಂಡದ ಪರ ಆಡುತ್ತಿರುವ ಆರ್. ಸಾಯಿ ಕಿಶೋರ್ ಎದುರಾಳಿ ಡರ್ಬಿಶೈರ್ ತಂಡದ ಎರಡನೇ ಇನ್ನಿಂಗ್ಸ್ ಅನ್ನು ಸಂಪೂರ್ಣವಾಗಿ ಧೂಳೀಪಟ ಮಾಡಿದ್ದಾರೆ. 319 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಲು ಬಂದ ಡರ್ಬಿಶೈರ್ ತಂಡಕ್ಕೆ ಸಾಯಿ ಕಿಶೋರ್ ಅವರ ತೀಕ್ಷ್ಣ ಸ್ಪಿನ್ ದಾಳಿಯನ್ನು ಎದುರಿಸಲು ಸಾಧ್ಯವಾಗಲೇ ಇಲ್ಲ.
ಸ್ಪೆಲ್‌ನ ಮ್ಯಾಜಿಕ್; ಸಾಯಿ ಕಿಶೋರ್ ತಮ್ಮ ಸಾಲು ಸಾಲು ವಿಕೆಟ್ ಕಬಳಿಸುವ 'W,W,W,W,W' ಅಬ್ಬರದಿಂದ ಕೇವಲ 20 ರನ್ ಬಿಟ್ಟುಕೊಟ್ಟು 5 ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು.
ದೊಡ್ಡ ಗೆಲುವು; ಇವರ ಈ ಮಾರಕ ದಾಳಿಯಿಂದಾಗಿ ಡರ್ಬಿಶೈರ್ ತಂಡ ಕೇವಲ 105 ರನ್‌ಗಳಿಗೆ ಆಲೌಟ್ ಆಯಿತು. ಪರಿಣಾಮವಾಗಿ ಗ್ಲೌಸೆಸ್ಟರ್‌ಶೈರ್ ತಂಡ 213 ರನ್‌ಗಳ ಭಾರಿ ಅಂತರದ ಗೆಲುವು ಸಾಧಿಸಿತು.
ಪಂದ್ಯದ ಪ್ರದರ್ಶನ; ಸಾಯಿ ಕಿಶೋರ್ ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 2 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗಳು ಸೇರಿದಂತೆ ಒಟ್ಟು 79 ರನ್ ನೀಡಿ 7 ವಿಕೆಟ್ ಕಬಳಿಸಿ ಮಿಂಚಿದರು.
ಸತತ ಅದ್ಭುತ ಪ್ರದರ್ಶನ ನೀಡಿದರೂ ಸಿಗದ ಅವಕಾಶ!
ಸಾಯಿ ಕಿಶೋರ್ ಅವರ ಈ ಪ್ರದರ್ಶನವು ಭಾರತೀಯ ಆಯ್ಕೆಗಾರರಿಗೆ ಮತ್ತು ನಾಯಕ ಗಿಲ್‌ಗೆ ನೀಡಿದ ನೇರ ಸಂದೇಶದಂತಿದೆ. 2023-24ರ ರಣಜಿ ಟ್ರೋಫಿ ಋತುವಿನಲ್ಲಿ ತಮಿಳುನಾಡು ಪರ ಆಡುವಾಗ ಸಾಯಿ ಕಿಶೋರ್ ಬರೋಬ್ಬರಿ 53 ವಿಕೆಟ್‌ಗಳನ್ನು ಕಬಳಿಸಿ, ತಾವು ರೆಡ್-ಬಾಲ್ (ಟೆಸ್ಟ್) ಕ್ರಿಕೆಟ್‌ಗೆ ಸಂಪೂರ್ಣ ಸಿದ್ಧರಾಗಿದ್ದೇವೆ ಎಂಬುದನ್ನು ಸಾಬೀತುಪಡಿಸಿದ್ದರು.
ಜಿಟಿಯಲ್ಲೂ ಅದ್ಭುತ ಪ್ರದರ್ಶನ!
ಅಲ್ಲದೆ, ಐಪಿಎಲ್‌ನಲ್ಲಿ ನಾಯಕ ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ಪರ ಆಡುವಾಗಲೂ ಸಿಕ್ಕ ಅವಕಾಶಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಕಳೆದ ಆವೃತ್ತಿಯಲ್ಲಿ ಕೆಲವು ಪಂದ್ಯಗಳನ್ನು ತಪ್ಪಿಸಿಕೊಂಡರೂ, ಇದುವರೆಗೆ ಆಡಿದ 28 ಐಪಿಎಲ್ ಪಂದ್ಯಗಳಲ್ಲಿ 33 ವಿಕೆಟ್‌ಗಳನ್ನು ಕಬಳಿಸಿದ ದಾಖಲೆ ಹೊಂದಿದ್ದಾರೆ. ಆದಾಗ್ಯೂ, ಅವರಿಗೆ ಟೀಮ್ ಇಂಡಿಯಾದಲ್ಲಿ ನಿರಂತರ ಅವಕಾಶಗಳು ಸಿಕ್ಕಿಲ್ಲ.
ಇಂಗ್ಲೆಂಡ್‌ನಲ್ಲಿ ಭಾರತೀಯ ತಾರೆಗಳ ಅಬ್ಬರ!
ಪ್ರಸ್ತುತ ಕೌಂಟಿ ಕ್ರಿಕೆಟ್‌ನಲ್ಲಿ ಭಾರತದ ಹಲವು ಪ್ರಮುಖ ಆಟಗಾರರು ವಿವಿಧ ಕ್ಲಬ್‌ಗಳ ಪರ ಪ್ರತಿನಿಧಿಸುತ್ತಿದ್ದಾರೆ. ಯುಜ್ವೇಂದ್ರ ಚಹಾಲ್, ಮಾನವ್ ಸುತಾರ್, ಕುಲದೀಪ್ ಯಾದವ್, ಅಕಿಬ್ ನಬಿ, ರಾಹುಲ್ ಚಹಾರ್, ಜೈದೇವ್ ಉನದ್ಕತ್ ಹಾಗೂ ಮಯಾಂಕ್ ಅಗರ್ವಾಲ್ ಇಂಗ್ಲೆಂಡ್ ಅಂಗಳದಲ್ಲಿ ಸಕ್ರಿಯರಾಗಿದ್ದಾರೆ.
ಗುಡ್ ಕಂಬ್ಯಾಕ್!
ಯುಜ್ವೇಂದ್ರ ಚಹಾಲ್ ಧಮಾಕಾ; ನಾರ್ಥಾಂಪ್ಟನ್‌ಶೈರ್ ಪರ ಆಡುತ್ತಿರುವ ಚಹಾಲ್, ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಸೇರಿದಂತೆ ಪಂದ್ಯದಲ್ಲ ಒಟ್ಟು 9 ವಿಕೆಟ್‌ಗಳನ್ನು ಕಬಳಿಸಿ ತಮ್ಮ ಚಾಣಾಕ್ಷತನ ಪ್ರದರ್ಶಿಸಿದ್ದಾರೆ. ಮಯಾಂಕ್ ಅಗರ್ವಾಲ್ ಮಿಂಚು; ಡರ್ಹ್ಯಾಮ್ ಪರ ಆಡುತ್ತಿರುವ ಕನ್ನಡಿಗ ಮಯಾಂಕ್ ಅಗರ್ವಾಲ್ (36 ಮತ್ತು 48) ಒಟ್ಟು 84 ರನ್‌ಗಳ ಕಾಣಿಕೆ ನೀಡಿ ತಮ್ಮ ತಂಡಕ್ಕೆ 153 ರನ್‌ಗಳ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ದೇಶೀಯ ಕ್ರಿಕೆಟ್ ಹಾಗೂ ಕೌಂಟಿ ಅಂಗಳದಲ್ಲಿ ಸತತವಾಗಿ ವಿಕೆಟ್ ಬೇಟೆಯಾಡುತ್ತಿರುವ ಸಾಯಿ ಕಿಶೋರ್, ಮುಂಬರುವ ಸರಣಿಗಳಲ್ಲಿ ಟೀಮ್ ಇಂಡಿಯಾಗೆ ಕಮ್‌ಬ್ಯಾಕ್ ಮಾಡುತ್ತಿದ್ದಾರೆ ಎನ್ನಲಾಗಿದೆ.


