ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಸೌತ್ ಜೋನ್ ವಿರುದ್ಧ ಅಜೇಯ 111 ರನ್ ಸಿಡಿಸಿದ ಇಶಾನ್ ಕಿಶನ್ ಈಸ್ಟ್ ಜೋನ್ ತಂಡಕ್ಕೆ ಭರ್ಜರಿ ಮುನ್ನಡೆ ತಂದುಕೊಟ್ಟಿದ್ದಾರೆ. ಈ ಸ್ಮರಣೀಯ ಶತಕದ ಬಳಿಕ ಇಶಾನ್ ಗೆಳತಿ ಅದಿತಿ ಹುಂಡಿಯಾ ಬಿಗ್ ಮೆಸೇಜ್ ರವಾನಿಸಿದ್ದಾರೆ.

ಚೆನ್ನೈ: ಟೀಮ್ ಇಂಡಿಯಾದ ಸ್ಪೋಟಕ ಬ್ಯಾಟರ್ ಇಶಾನ್ ಕಿಶನ್ ಕೆಂಪು ಚೆಂಡಿನ ಕ್ರಿಕೆಟ್‌ನಲ್ಲಿ ಮತ್ತೆ ಅಬ್ಬರಿಸುತ್ತಿದ್ದಾರೆ. ಸೌತ್ ಜೋನ್ ವಿರುದ್ಧ ನಡೆಯುತ್ತಿರುವ 2026-27ರ ದುಲೀಪ್ ಟ್ರೋಫಿ ಫೈನಲ್ ಪಂದ್ಯದ ಮೊದಲ ದಿನವೇ ಇಶಾನ್ ಕಿಶನ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಅಮೋಘ ಪ್ರದರ್ಶನದ ಬೆನ್ನಲ್ಲೇ ಅವರ ಗೆಳತಿ ಎನ್ನಲಾದ ಅದಿತಿ ಹುಂಡಿಯಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಂದೇಶ ಈಗ ಭಾರಿ ವೈರಲ್ ಆಗುತ್ತಿದೆ.

ಇಶಾನ್ ಕಿಶನ್ ಶತಕ ಸಿಡಿಸಿ ಬ್ಯಾಟ್ ಎತ್ತಿ ಸಂಭ್ರಮಿಸುತ್ತಿರುವ ಫೋಟೋವನ್ನು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿರುವ ಮಾಡೆಲ್ ಅದಿತಿ ಹುಂಡಿಯಾ, ಎ ಹಂಡ್ರೆಡ್, ಬ್ಯೂಟಿಫುಲ್ಲಿ ಅರ್ನ್ಡ್ (A hundred, beautifully earned) ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಮೂರು ಹಾರ್ಟ್ ಎಮೋಜಿಗಳನ್ನು ಹಾಕುವ ಮೂಲಕ ಇಶಾನ್ ಸಾಧನೆಯನ್ನು ಕೊಂಡಾಡಿದ್ದಾರೆ. ಇವರಿಬ್ಬರು ಕಳೆದ ಕೆಲವು ಸಮಯದಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿದ್ದು, ಈ ಪೋಸ್ಟ್ ಅದಕ್ಕೆ ಪುಷ್ಟಿ ನೀಡುವಂತಿದೆ.

ಮೈದಾನದಲ್ಲಿ ಕಿಶನ್ ಆರ್ಭಟ

ಈಸ್ಟ್ ಜೋನ್ ತಂಡದ ನಾಯಕನಾಗಿ ಜವಾಬ್ದಾರಿ ನಿಭಾಯಿಸುತ್ತಿರುವ ಇಶಾನ್ ಕಿಶನ್, 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅಜೇಯ 111 ರನ್ ಸಿಡಿಸಿದರು. ಈ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಮ್ಮ 10ನೇ ಶತಕ ಪೂರೈಸಿದ ಅವರು, 4,000 ರನ್‌ಗಳ ಮೈಲಿಗಲ್ಲನ್ನೂ ತಲುಪಿದ್ದಾರೆ. ಇಶಾನ್ ಕಿಶನ್ ಅವರ ಈ ಭರ್ಜರಿ ಆಟದಿಂದಾಗಿ ಈಸ್ಟ್ ಜೋನ್ ಮೊದಲ ದಿನದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 385 ರನ್ ಗಳಿಸಿ ಬಲಿಷ್ಠ ಸ್ಥಿತಿಯಲ್ಲಿದೆ.

ಇಶಾನ್ ಕಿಶನ್ ಜೊತೆಗೆ ಕುಮಾರ್ ಕುಶಾಗ್ರ (63*) ಅಮೋಘ ಸಾಥ್ ನೀಡಿದರು. ಇವರಿಬ್ಬರು ಮುರಿಯದ 144 ರನ್‌ಗಳ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ಆರಂಭಿಕರಾದ ಅಭಿಮನ್ಯು ಈಶ್ವರನ್ (72) ಮತ್ತು ಶಿಖರ್ ಮೋಹನ್ (85) ಕೂಡ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಟೀಮ್ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಅವರು ಈಸ್ಟ್ ಜೋನ್ ಬ್ಯಾಟರ್‌ಗಳ ಮುಂದೆ ಮಂಕಾದರು. ಸಿರಾಜ್ 14 ಓವರ್‌ಗಳಲ್ಲಿ ಬರೋಬ್ಬರಿ 96 ರನ್ ನೀಡಿದರೂ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.