ಮಹಿಳಾ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ, ಅತ್ಯಂತ ಯಶಸ್ವಿ ತಂಡವಾದ ಭಾರತವು ಥಾಯ್ಲೆಂಡ್ ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇತ್ತೀಚಿನ ಕಳಪೆ ಫಾರ್ಮ್‌ನಿಂದ ಬಳಲುತ್ತಿರುವ ಭಾರತ ತಂಡಕ್ಕೆ ಈ ಪಂದ್ಯವು ನಿರ್ಣಾಯಕವಾಗಿದ್ದು, ಮತ್ತೊಂದೆಡೆ ಮೊದಲ ಪಂದ್ಯ ಗೆದ್ದಿರುವ ಥಾಯ್ಲೆಂಡ್ ಆತ್ಮವಿಶ್ವಾಸದಲ್ಲಿದೆ.
ದುಬೈ(ಯುಎಇ): ಮಹಿಳಾ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ಭಾರತ, ಭಾನುವಾರ ಥಾಯ್ಲೆಂಡ್ ವಿರುದ್ಧ ಆಡುವ ಮೂಲಕ ಈ ಬಾರಿ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿದೆ. ಈ ಬಾರಿ ಟಿ20 ಮಾದರಿಯಲ್ಲಿ ಟೂರ್ನಿ ನಡಯಲಿದ್ದು, ಎಲ್ಲಾ ಪಂದ್ಯಗಳು ದುಬೈನಲ್ಲಿ ನಡೆಯಲಿವೆ.
2004ರಿಂದ 2024ರ ವರೆಗಿನ 9 ಆವೃತ್ತಿಗಳಲ್ಲಿ ಭಾರತ 7ರಲ್ಲಿ ಚಾಂಪಿಯನ್ ಆಗಿದ್ದು, ಕಳೆದ ಬಾರಿ ರನ್ನರ್-ಅಪ್ ಆಗಿತ್ತು. ಈ ಬಾರಿಯೂ ತಂಡವನ್ನು ಹರ್ಮನ್‌ಪ್ರೀತ್ ಕೌರ್ ಮುನ್ನಡೆಸಲಿದ್ದಾರೆ. ಥಾಯ್ಲೆಂಡ್ ವಿರುದ್ಧ ಭಾರತಕ್ಕೆ ಕಠಿಣ ಸವಾಲು ಎದುರಾಗುವ ಸಾಧ್ಯತೆ ಕಡಿಮೆಯಿದ್ದರೂ, ಟೂರ್ನಿಯ ಇತರ ಪಂದ್ಯಗಳಲ್ಲಿ ತಂಡ ಸುಧಾರಿತ ಆಟ ಪ್ರದರ್ಶಿಸಬೇಕಾದ ಅನಿವಾರ್ಯತೆ ಎದುರಾಗಲಿದೆ.
ಟಿ20 ವಿಶ್ವಕಪ್‌ನಲ್ಲಿ ಗ್ರೂಪ್ ಹಂತದಲ್ಲೇ ಹೊರಬಿದ್ದಿದ್ದ ಭಾರತ
ಇತ್ತೀಚೆಗೆ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಗುಂಪು ಹಂತದಲ್ಲೇ ಹೊರಬಿದ್ದಿತ್ತು. ಅಲ್ಲದೆ ಈ ವರ್ಷ ತಂಡ ಆಡಿರುವ 16 ಟಿ20 ಪಂದ್ಯಗಳ ಪೈಕಿ 9ರಲ್ಲಿ ಸೋತಿದೆ. ಇದು ತಂಡದ ಸದ್ಯದ ಪರಿಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ. ಹೀಗಾಗಿಯೇ ಭಾರತ ಚುಟುಕು ಕ್ರಿಕೆಟ್ ಮಾದರಿಯಲ್ಲಿ ಸುಧಾರಿತ ಮತ್ತು ಸ್ಥಿರ ಪ್ರದರ್ಶನ ನೀಡಬೇಕಿದೆ.
ತಂಡದಲ್ಲಿ ಸ್ಮೃತಿ ಮಂಧನಾ, ರಿಚಾ ಘೋಷ್, ಶಫಾಲಿ ವರ್ಮಾ, ಪ್ರತಿಕಾ ರಾವಲ್ ಸೇರಿ ಪ್ರಮುಖ ಬ್ಯಾಟರ್‌ಗಳಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ರೇಣುಕಾ ಸಿಂಗ್, ಅರುಂಧತಿ ರೆಡ್ಡಿ, ಶ್ರೀ ಚರಣಿ, ಕ್ರಾಂತಿ ಗೌಡ್, ನಂದನಿ ಶರ್ಮಾ ಸೇರಿ ಹಲವು ಪ್ರತಿಭಾವಂತರಿದ್ದಾರೆ. ದೀಪ್ತಿ ಶರ್ಮಾ ಹಾಗೂ ರಾಧಾ ಯಾದವ್ ಆಲ್ರೌಂಡ್ ಆಟ ತಂಡಕ್ಕೆ ನಿರ್ಣಾಯಕ ಎನಿಸಿಕೊಳ್ಳಲಿದೆ.
ಮತ್ತೊಂದೆಡೆ ಥಾಯ್ಲೆಂಡ್ ತಂಡಕ್ಕೆ ನರುಮೋಲ್ ಚೈವೈ ನಾಯಕತ್ವ ವಹಿಸಲಿದ್ದಾರೆ. ತಂಡ ಆರಂಭಿಕ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ ರೋಚಕ ಗೆಲುವು ಸಾಧಿಸಿದ್ದು, ಈಗ ಭಾರತಕ್ಕೆ ಆಘಾತ ನೀಡಿ ಗೆಲ್ಲುವ ಕಾತರದಲ್ಲಿದೆ.
ಪಂದ್ಯ ಆರಂಭ: ರಾತ್ರಿ 8 ಗಂಟೆಗೆ
ನೇರಪ್ರಸಾರ: ಸೋನಿ ಸ್ಪೋರ್ಟ್ಸ್, ಸೋನಿ ಲೈವ್
ಹಾಂಕಾಂಗ್ ವಿರುದ್ಧ ಥಾಯ್ಲೆಂಡ್‌ಗೆ ಜಯ
ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಶುಕ್ರವಾರ ಹಾಂಗಾಂಕ್ ವಿರುದ್ಧ ಥಾಯ್ಲೆಂಡ್ 6 ರನ್‌ಗಳ ರೋಚಕ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಥಾಯ್ಲೆಂಡ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 120 ರನ್ ಗಳಿಸಿತು. ನಾಯಕಿ ನರುಮೋಲ್ ಚೈವೈ 43 ರನ್ ಗಳಿಸಿದರು. ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಹಾಂಕಾಂಗ್ 7 ವಿಕೆಟ್ ನಷ್ಟದಲ್ಲಿ 114 ರನ್ ಗಳಿಸಿ ಸೋಲೊಪ್ಪಿಕೊಂಡಿತು.


