ಮಹೇಂದ್ರ ಸಿಂಗ್ ಧೋನಿ ಮತ್ತು ಸುರೇಶ್ ರೈನಾ ಅವರ ಸ್ನೇಹದ ದ್ಯೋತಕವಾಗಿ, ಇಬ್ಬರೂ ಒಂದೇ ದಿನ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು. ತನ್ನ ನಿವೃತ್ತಿ ಘೋಷಣೆಯ ನಂತರ ರೈನಾ ಕೂಡ ನಿವೃತ್ತರಾದ ವಿಷಯ ತಿಳಿದು ಧೋನಿಗೆ ಆಶ್ಚರ್ಯವಾಗಿತ್ತು, ಆ ನಂತರ ಇಬ್ಬರೂ ಭಾವುಕರಾಗಿ ಅಪ್ಪಿಕೊಂಡು ಅತ್ತಿದ್ದರು ಎಂಬುದನ್ನು ರೈನಾ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಭಾರತೀಯ ಕ್ರಿಕೆಟ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಮತ್ತು ಸುರೇಶ್ ರೈನಾ ನಡುವಿನ ಸ್ನೇಹ ಎಲ್ಲರಿಗೂ ಗೊತ್ತಿರುವಂಥದ್ದೇ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಒಂದು ದಶಕಕ್ಕೂ ಹೆಚ್ಚು ಕಾಲ ಇವರಿಬ್ಬರು ಒಟ್ಟಿಗೆ ಆಡಿದ್ದಾರೆ. ಅಷ್ಟೇ ಅಲ್ಲ, ಭಾರತ ತಂಡದಲ್ಲೂ ಧೋನಿ ನಾಯಕತ್ವದಲ್ಲಿ ರೈನಾ ಅನೇಕ ಪಂದ್ಯಗಳನ್ನು ಆಡಿದ್ದಾರೆ.
ಧೋನಿ-ರೈನಾ ಒಟ್ಟಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ:
ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಲವು ಬಾರಿ ಚಾಂಪಿಯನ್ ಆದಾಗ, ಧೋನಿಯ ನಂಬಿಕಸ್ಥ ಆಟಗಾರನಾಗಿದ್ದು ಇದೇ ಸುರೇಶ್ ರೈನಾ. ಒಟ್ಟಿಗೆ ಆಡಿದ ಈ ಆಟಗಾರರು, ತಮ್ಮ ನಿವೃತ್ತಿಯನ್ನೂ ಒಂದೇ ದಿನ ಘೋಷಿಸಿದ್ದು ವಿಶೇಷ. 2020ರ ಆಗಸ್ಟ್ 15ರಂದು ರಾತ್ರಿ 7:29ಕ್ಕೆ ಧೋನಿ ಇನ್‌ಸ್ಟಾಗ್ರಾಂನಲ್ಲಿ ದಿಢೀರ್ ಅಂತ ತಮ್ಮ ನಿವೃತ್ತಿ ಪ್ರಕಟಿಸಿದರು. ಅದರ ಬೆನ್ನಲ್ಲೇ ರೈನಾ ಕೂಡ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದರು.
ಈ ಘಟನೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ದೊಡ್ಡ ನಿರಾಸೆ ಮೂಡಿಸಿತ್ತು. ಇಬ್ಬರು ಶ್ರೇಷ್ಠ ಆಟಗಾರರು ಒಂದೇ ದಿನ ಆಟ ನಿಲ್ಲಿಸಿದ್ದರು. ನಿವೃತ್ತಿ ಘೋಷಿಸುವಾಗ ಇಬ್ಬರೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೊತೆಗಿದ್ದರು. ಕೊರೊನಾ ಸಮಯವಾದ್ದರಿಂದ, ಸಿಎಸ್‌ಕೆ ಬಯೋ-ಬಬಲ್‌ನಲ್ಲಿದ್ದುಕೊಂಡು ಐಪಿಎಲ್ ಆಡಲು ಯುಎಇಗೆ ಹೊರಡಲು ಸಿದ್ಧರಾಗಿದ್ದರು. ಆಗಲೇ ಧೋನಿ ಮತ್ತು ರೈನಾ ನಿವೃತ್ತಿ ಘೋಷಿಸಿದ್ದು. ತಾನು ನಿವೃತ್ತಿ ಘೋಷಿಸಿದ ಬೆನ್ನಲ್ಲೇ ರೈನಾ ಕೂಡ ನಿವೃತ್ತಿ ಪಡೆದ ವಿಷಯ ತಿಳಿದು ಧೋನಿಗೆ ಶಾಕ್ ಆಗಿತ್ತು. ಈ ವಿಚಾರವನ್ನು ಆಕಾಶ್ ಚೋಪ್ರ ಜೊತೆಗಿನ ಸಂದರ್ಶನವೊಂದರಲ್ಲಿ ರೈನಾ ಅವರೇ ಹೇಳಿಕೊಂಡಿದ್ದಾರೆ.
ರೈನಾ ನಿವೃತ್ತಿ ಸುದ್ದಿ ಕೇಳಿ ಧೋನಿ ಶಾಕ್:
"ನಾನು ನಿವೃತ್ತಿ ಘೋಷಿಸಿ ಚೆನ್ನೈ ಸೂಪರ್ ಕಿಂಗ್ಸ್ ಡ್ರೆಸ್ಸಿಂಗ್ ರೂಮಿಗೆ ಹೋದೆ. ಎಲ್ಲವೂ ಮುಗಿಯಿತು ಎಂದು ಹೇಳಿದಾಗ ಧೋನಿಗೆ ಆಶ್ಚರ್ಯವಾಯಿತು. 'ನೀನು ಇದೇನು ಮಾಡಿದೆ?' ಅನ್ನೋದೇ ಅವರ ಮೊದಲ ಪ್ರತಿಕ್ರಿಯೆಯಾಗಿತ್ತು" ಎಂದು ರೈನಾ ನೆನಪಿಸಿಕೊಂಡರು. "ಅದಾದ ನಂತರದ ಕ್ಷಣಗಳು ಬಹಳ ಭಾವುಕವಾಗಿದ್ದವು. ನಾವಿಬ್ಬರೂ ಅಪ್ಪಿಕೊಂಡು ಅತ್ತೆವು. ಆ ರಾತ್ರಿ ಪೂರ್ತಿ ನಮ್ಮ ಕ್ರಿಕೆಟ್ ಬದುಕು ಮತ್ತು ಸ್ನೇಹದ ಬಗ್ಗೆ ಮಾತನಾಡುತ್ತಾ ಕುಳಿತಿದ್ದೆವು, ಪಾರ್ಟಿ ಮಾಡಿದೆವು" ಎಂದರು ರೈನಾ.
ಕ್ರಿಕೆಟ್ ರೈನಾಗೆ ಜೀವವಾಗಿತ್ತು. ಆದರೆ ಕೋವಿಡ್ ಸಮಯದಲ್ಲಿ ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯಲು ಅವರು ಬಯಸಿದ್ದರು. ಧೋನಿ ಇಲ್ಲದ ತಂಡದಲ್ಲಿ ಆಡುವುದರಲ್ಲಿ ಅರ್ಥವಿಲ್ಲ ಎನಿಸಿದ್ದೂ ಕೂಡ ರೈನಾ ನಿವೃತ್ತಿಗೆ ಒಂದು ಕಾರಣವಾಯಿತು.
"ಭಾರತ ತಂಡದಲ್ಲಿ ಆಡುವಾಗ ಧೋನಿ ನನಗೋಸ್ಕರ ತಮ್ಮ ಬ್ಯಾಟಿಂಗ್ ಕ್ರಮಾಂಕವನ್ನು ಬಿಟ್ಟುಕೊಟ್ಟು ಕೆಳಗೆ ಆಡುತ್ತಿದ್ದರು. ಯುವರಾಜ್ ಸಿಂಗ್ ಮತ್ತು ನನ್ನನ್ನು ಬ್ಯಾಟಿಂಗ್‌ಗೆ ಕಳುಹಿಸಿ, ತಾವೇ ಹಿಂದೆ ಸರಿಯುತ್ತಿದ್ದ ನಾಯಕ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದರು. ಸೌರವ್ ಗಂಗೂಲಿ ನಾಯಕರಾಗಿದ್ದಾಗ ಓಪನಿಂಗ್ ಆಯ್ಕೆ ಮಾಡಿಕೊಂಡಂತೆ, ಧೋನಿಗೂ ಟಾಪ್ ಆರ್ಡರ್‌ನಲ್ಲಿ ಬ್ಯಾಟಿಂಗ್ ಮಾಡಬಹುದಿತ್ತು. ಆದರೆ ಅವರು ತಮ್ಮ ತಂಡವನ್ನು ಬೇರೆಯದೇ ರೀತಿಯಲ್ಲಿ ಮುನ್ನಡೆಸಿದರು" ಎಂದು ರೈನಾ ಹೇಳಿದರು.


