15ರ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ದುಲೀಪ್ ಟ್ರೋಫಿಯಲ್ಲಿ ದಾಖಲೆ ಬರೆದು ಸಂಚಲನ ಮೂಡಿಸಿದ್ದಾರೆ. ಮಾಜಿ ಕ್ರಿಕೆಟಿಗ ಶ್ರೀಕಾಂತ್‌ರಿಂದ 'ಸೂಪರ್‌ಸ್ಟಾರ್' ಎಂದು ಹೊಗಳಿಸಿಕೊಂಡಿರುವ ವೈಭವ್, ಇದೀಗ ಕೋಚ್ ಗೌತಮ್ ಗಂಭೀರ್‌ರ ನಿರ್ಧಾರದಿಂದಾಗಿ ಫೈನಲ್ ಪಂದ್ಯದಿಂದ ಹೊರಗುಳಿಯುವ ಆತಂಕದಲ್ಲಿದ್ದಾರೆ.
ಚೆನ್ನೈ: ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ವೈಭವ್ ಸೂರ್ಯವಂಶಿ ಅನ್ನೋ ಹೆಸರು ಹೊಸ ಸೆನ್ಸೇಷನ್ ಆಗಿದೆ. ಈ ಹುಡುಗನ ಆಟ ಇದೆ ಅಂದ್ರೆ ಸಾಕು, ಕ್ರಿಕೆಟ್ ಪ್ರೇಮಿಗಳು ಸ್ಟೇಡಿಯಂಗೆ ಬರ್ತಾರೆ, ಟಿವಿ ಆನ್ ಮಾಡ್ತಾರೆ, ಮೊಬೈಲ್‌ನಲ್ಲೂ ಆತನ ಬ್ಯಾಟಿಂಗ್ ಅಬ್ಬರವನ್ನು ಕಣ್ತುಂಬಿಕೊಳ್ತಾರೆ.
ವೈಭವ್ ಸೂರ್ಯವಂಶಿ ಕಾರಣದಿಂದಾಗಿ, ಈಗ ಜನ ದೇಶೀಯ ಕ್ರಿಕೆಟ್ ಟೂರ್ನಿಯಾದ ದುಲೀಪ್ ಟ್ರೋಫಿಯನ್ನೂ ಹೆಚ್ಚು ಗಮನಿಸಲು ಶುರು ಮಾಡಿದ್ದಾರೆ. ಭಾರತದ ಮಾಜಿ ಆರಂಭಿಕ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್, 15 ವರ್ಷದ ಈ ಯುವ ಪ್ರತಿಭೆಯನ್ನು ಹಾಡಿ ಹೊಗಳಿದ್ದಾರೆ. ಅಷ್ಟೇ ಅಲ್ಲ, ಒಂದು ಇಂಟ್ರೆಸ್ಟಿಂಗ್ ವಿಚಾರವನ್ನೂ ಹಂಚಿಕೊಂಡಿದ್ದಾರೆ. ತಮ್ಮ ಪತ್ನಿ ದುಲೀಪ್ ಟ್ರೋಫಿ ನೋಡುತ್ತಿರುವುದೇ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ನೋಡಲಿಕ್ಕಾಗಿ ಅಂತೆ. "ಆ ಹುಡುಗ ಅದ್ಭುತವಾಗಿ ಆಡುತ್ತಿದ್ದಾನೆ. ಅವನನ್ನು ಸದಾ ಪ್ರೋತ್ಸಾಹಿಸಬೇಕು. ಒಬ್ಬ ಸೂಪರ್‌ಸ್ಟಾರ್ ತಯಾರಾಗುತ್ತಿದ್ದಾನೆ. ಟೆಸ್ಟ್ ಕ್ರಿಕೆಟ್‌ಗೂ ಜೀವ ತುಂಬುವ ಸಾಮರ್ಥ್ಯ ವೈಭವ್‌ಗೆ ಇದೆ. ಅವನು ವಿಶ್ವ ಕ್ರಿಕೆಟ್‌ಗೆ ದೊಡ್ಡ ಆಸ್ತಿ" ಎಂದು ಶ್ರೀಕಾಂತ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
ವೈಭವ್ ಸೂರ್ಯವಂಶಿ ಎಲ್ಲಾ ಮಾದರಿಯಲ್ಲಿ ಮಿಂಚಬಲ್ಲರು:
"ವೈಭವ್‌ಗೆ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ಮಿಂಚುವ ತಾಕತ್ತಿದೆ. ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಮೀಡಿಯಂ ಪೇಸರ್‌ಗಳಿಗೆ ಯಾವುದೇ ಅಂಜಿಕೆ ಇಲ್ಲದೆ ಸ್ಟ್ರೈಟ್ ಸಿಕ್ಸರ್ ಬಾರಿಸುತ್ತಾನೆ. ಬೌಲರ್‌ಗಳನ್ನು ಆಟದ ಗೊಂಬೆಯಂತೆ ಆಡಿಸುತ್ತಾನೆ. ಅವನು ಕ್ರಿಕೆಟ್ ಜಗತ್ತನ್ನು ಆಳುವುದರಲ್ಲಿ ಯಾವುದೇ ಅನುಮಾನವಿಲ್ಲ" ಎಂದು ಶ್ರೀಕಾಂತ್ ಭವಿಷ್ಯ ನುಡಿದಿದ್ದಾರೆ. ಈಸ್ಟ್ ಜೋನ್ ಪರ ಆಡುತ್ತಿರುವ ವೈಭವ್, ಕ್ವಾರ್ಟರ್ ಫೈನಲ್‌ನಲ್ಲಿ 8 ರನ್ ಗಳಿಸಿ ನಿರಾಸೆ ಮೂಡಿಸಿದ್ದರು. ಆದರೆ ಸೆಮಿಫೈನಲ್‌ನಲ್ಲಿ 92 ಮತ್ತು 40 ರನ್‌ಗಳೊಂದಿಗೆ ಅಬ್ಬರಿಸಿದ್ದರು. ಸೆಂಟ್ರಲ್ ಜೋನ್ ವಿರುದ್ಧ ಕೇವಲ 42 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ, ದುಲೀಪ್ ಟ್ರೋಫಿಯ 57 ವರ್ಷಗಳ ಹಳೆಯ ಅತಿ ವೇಗದ ಅರ್ಧಶತಕದ ದಾಖಲೆಯನ್ನು ಮುರಿದರು.
ಗಂಭೀರ್ ಮೇಲೆ ಎಲ್ಲರ ಚಿತ್ತ
ಇದೇ ವೇಳೆ, ಭಾನುವಾರ ಸೌತ್ ಜೋನ್ ವಿರುದ್ಧ ನಡೆಯಲಿರುವ ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಈಸ್ಟ್ ಜೋನ್ ಪರ ವೈಭವ್ ಸೂರ್ಯವಂಶಿ ಆಡುತ್ತಾರಾ ಎಂಬ ಬಗ್ಗೆ ಆತಂಕ ಮೂಡಿದೆ. ವೈಭವ್ ಜೊತೆಗೆ ಇಶಾನ್ ಕಿಶನ್ ಮತ್ತು ತಿಲಕ್ ವರ್ಮಾ ಕೂಡ ಫೈನಲ್ ಆಡುವುದು ಅನುಮಾನವಾಗಿದೆ. ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅನುಮತಿ ನೀಡಿದರೆ ಮಾತ್ರ ಈ ಮೂವರು ಫೈನಲ್‌ನಲ್ಲಿ ಆಡಲು ಸಾಧ್ಯವಾಗುತ್ತದೆ.
ನಾಳೆ ಚೆನ್ನೈನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಸೆಪ್ಟೆಂಬರ್ 9 ಮತ್ತು 10ರಂದು ದೆಹಲಿಯಲ್ಲಿ ಭಾರತೀಯ ಟಿ20 ತಂಡದ ಸಭೆ ಇದೆ. ಕೋಚ್ ಗಂಭೀರ್ ಈ ಮೂವರು ಆಟಗಾರರಿಗೆ ಸಭೆಗೆ ಹಾಜರಾಗಲು ಸೂಚಿಸಿದರೆ, ಅವರು ದುಲೀಪ್ ಟ್ರೋಫಿ ಫೈನಲ್ ಆಡಲು ಸಾಧ್ಯವಾಗುವುದಿಲ್ಲ. ಒಂದು ವೇಳೆ, ಫೈನಲ್ ಆಡಿದ ನಂತರ ಸೆಪ್ಟೆಂಬರ್ 10ರ ಸಂಜೆ ದೆಹಲಿಗೆ ಬಂದು ವರದಿ ಮಾಡಿಕೊಳ್ಳಲು ಅನುಮತಿ ಸಿಕ್ಕರೆ, ವೈಭವ್, ತಿಲಕ್ ಮತ್ತು ಇಶಾನ್ ಕಿಶನ್ ಫೈನಲ್‌ನಲ್ಲಿ ಕಣಕ್ಕಿಳಿಯಬಹುದು.


