ಟೆಸ್ಟ್ ಕ್ರಿಕೆಟ್‌ನಲ್ಲಿ ಸಹಭಾಗಿತ್ವದ ಮಹತ್ವವನ್ನು ವಿವರಿಸುವ ಈ ಲೇಖನ, ಇತಿಹಾಸದ ಕೆಲವು ಶ್ರೇಷ್ಠ ಬ್ಯಾಟಿಂಗ್ ಜೋಡಿಗಳನ್ನು ಪರಿಚಯಿಸುತ್ತದೆ. ಸಚಿನ್-ದ್ರಾವಿಡ್, ಸಂಗಕ್ಕಾರ-ಜಯವರ್ಧನೆ, ಹೇಡನ್-ಪಾಂಟಿಂಗ್ ಸೇರಿದಂತೆ ವಿಶ್ವದಾಖಲೆ ನಿರ್ಮಿಸಿದ ಜೋಡಿಗಳ ಸಾಧನೆ ಮತ್ತು ಅವರ ಅಂಕಿಅಂಶಗಳ ವಿವರ ಇಲ್ಲಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ವೈಯಕ್ತಿಕ ಶತಕಗಳು ಹಾಗೂ ಸಾಧನೆಗಳಿಗೆ ಎಷ್ಟು ಪ್ರಾಮುಖ್ಯತೆ ಇದೆಯೋ, ಇಬ್ಬರು ಬ್ಯಾಟರ್‌ಗಳು ಕ್ರೀಸ್‌ನಲ್ಲಿ ನಿಂತು ನೀಡುವ ಸಹಭಾಗಿತ್ವಕ್ಕೂ ಅಷ್ಟೇ ಮಹತ್ವವಿದೆ. ದೀರ್ಘಾವಧಿಯ ಪಂದ್ಯಗಳಲ್ಲಿ ಎದುರಾಳಿ ಬೌಲರ್‌ಗಳನ್ನು ನಿರಾಶೆಗೊಳಿಸಿ, ತಂಡದ ಗೆಲುವಿಗೆ ಬಲವಾದ ಅಡಿಪಾಯ ಹಾಕಿದ ಇತಿಹಾಸದ ಕೆಲವು ಅಪರೂಪದ ಜೋಡಿಗಳ ವಿವರ ಇಲ್ಲಿದೆ:

ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ (ಭಾರತ)!

ಭಾರತೀಯ ಕ್ರಿಕೆಟ್‌ನ 'ದಿ ವಾಲ್' ರಾಹುಲ್ ದ್ರಾವಿಡ್ ಮತ್ತು 'ಕ್ರಿಕೆಟ್ ದೇವರು' ಸಚಿನ್ ತೆಂಡೂಲ್ಕರ್ ಜೋಡಿ ಮೈದಾನಕ್ಕೆ ಇಳಿದರೆ ಎದುರಾಳಿ ಬೌಲರ್‌ಗಳಿಗೆ ಬೆವರಿಳಿಯುತ್ತಿತ್ತು. 1996 ರಿಂದ 2012ರ ನಡುವೆ ಈ ಜೋಡಿ ಟೆಸ್ಟ್ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಪಾಲುದಾರಿಕೆಯನ್ನು ಹೊಂದಿತ್ತು. ದ್ರಾವಿಡ್ ಅವರ ರಕ್ಷಣಾತ್ಮಕ ಆಟ ಹಾಗೂ ಸಚಿನ್ ಅವರ ಕ್ಲಾಸಿಕ್ ದಾಳಿ ಪರಸ್ಪರ ಪೂರಕವಾಗಿದ್ದವು. ಒಟ್ಟು 143 ಇನ್ನಿಂಗ್ಸ್‌ಗಳಲ್ಲಿ 50.51 ರ ಸರಾಸರಿಯಲ್ಲಿ 6,929 ರನ್‌ಗಳನ್ನು ಕಲೆಹಾಕಿದ ಇವರು, ೨೦ ಶತಕ ಮತ್ತು ೨೯ ಅರ್ಧಶತಕಗಳ ಸಹಭಾಗಿತ್ವ ನೀಡಿದ್ದಾರೆ. ಇವರ ಅತ್ಯುತ್ತಮ ಪಾಲುದಾರಿಕೆ 249 ರನ್.

ಮಹೇಲ ಜಯವರ್ಧನೆ ಮತ್ತು ಕುಮಾರ್ ಸಂಗಕ್ಕಾರ (ಶ್ರೀಲಂಕಾ)!

ಶ್ರೀಲಂಕಾ ಕ್ರಿಕೆಟ್‌ನ ಎರಡು ಪ್ರಮುಖ ಆಧಾರಸ್ತಂಭಗಳಾದ ಜಯವರ್ಧನೆ ಮತ್ತು ಸಂಗಕ್ಕಾರ, ಬ್ಯಾಟಿಂಗ್ ಕಲೆಯನ್ನು ಅತ್ಯಂತ ಸರಳಗೊಳಿಸಿದವರು. 2000 ರಿಂದ 2014 ರ ಅವಧಿಯಲ್ಲಿ 120 ಇನ್ನಿಂಗ್ಸ್‌ಗಳಲ್ಲಿ 56.50 ರ ಸರಾಸರಿಯಲ್ಲಿ 6,554 ರನ್‌ಗಳನ್ನು ಕಲೆಹಾಕಿದ್ದಾರೆ. ಇವರು ಟೆಸ್ಟ್‌ನಲ್ಲಿ 19 ಶತಕ ಹಾಗೂ 27 ಅರ್ಧಶತಕದ ಸಹಭಾಗಿತ್ವ ಹೊಂದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಇವರು ಗಳಿಸಿದ 624 ರನ್‌ಗಳ ಮಹಾನ್ ಪಾಲುದಾರಿಕೆಯು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್‌ಗಳ ಪಾಲುದಾರಿಕೆಯ ವಿಶ್ವದಾಖಲೆಯಾಗಿ ಉಳಿದಿದೆ.

ಗೋರ್ಡನ್ ಗ್ರೀನಿಡ್ಜ್ ಮತ್ತು ಡೆಸ್ಮಂಡ್ ಹೇನ್ಸ್ (ವೆಸ್ಟ್ ಇಂಡೀಸ್)!

1970 ಮತ್ತು 80ರ ದಶಕದಲ್ಲಿ ಕೆರಿಬಿಯನ್ ತಂಡದ ಪ್ರಾಬಲ್ಯಕ್ಕೆ ಇವರ ಆರಂಭಿಕ ಆಟವೇ ಪ್ರಮುಖ ಕಾರಣ. 1978 ರಿಂದ 1991 ರ ನಡುವೆ ವಿಶ್ವದ ಅತ್ಯಂತ ಭೀಕರ ವೇಗದ ಬೌಲಿಂಗ್ ಪಡೆಯನ್ನು ಇವರು ಎದುರಿಸಿದರು. 148 ಇನ್ನಿಂಗ್ಸ್‌ಗಳಲ್ಲಿ 47.31ರ ಸರಾಸರಿಯಲ್ಲಿ 6,482 ರನ್ ಗಳಿಸಿದ ಈ ಜೋಡಿ, 16 ಶತಕ ಹಾಗೂ 26 ಅರ್ಧಶತಕದ ಪಾಲುದಾರಿಕೆಗಳನ್ನು ಹಂಚಿಕೊಂಡಿದೆ. ಇವರ ಗರಿಷ್ಠ ಪಾಲುದಾರಿಕೆ 298 ರನ್.

ಮ್ಯಾಥ್ಯೂ ಹೇಡನ್ ಮತ್ತು ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ)!

12ನೇ ಶತಮಾನದ ಆರಂಭದಲ್ಲಿ ಆಸ್ಟ್ರೇಲಿಯಾ ತಂಡ ವಿಶ್ವ ಕ್ರಿಕೆಟ್ ಏಕಚಕ್ರಾಧಿಪತ್ಯ ಸಾಧಿಸಲು ಈ ಜೋಡಿ ಪ್ರಮುಖ ಕಾರಣ. 2001 ರಿಂದ 2009ರ ನಡುವೆ ಕೇವಲ 76 ಇನ್ನಿಂಗ್ಸ್‌ಗಳಲ್ಲಿ 67.11ರ ಅಸಾಧಾರಣ ಸರಾಸರಿಯಲ್ಲಿ 4,765 ರನ್ ಬಾರಿಸಿದ್ದಾರೆ. ಅತ್ಯಂತ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 16 ಶತಕ ಹಾಗೂ 22 ಅರ್ಧಶತಕದ ಪಾಲುದಾರಿಕೆ ನೀಡಿದ ಇವರ ಗರಿಷ್ಠ ಸಹಭಾಗಿತ್ವ 272 ರನ್.

ಜ್ಯಾಕ್ ಹಾಬ್ಸ್ ಮತ್ತು ಹರ್ಬರ್ಟ್ ಸಟ್ಕ್ಲಿಫ್ (ಇಂಗ್ಲೆಂಡ್)!

ಟೆಸ್ಟ್ ಇತಿಹಾಸದ ಅತ್ಯಂತ ಅಪರೂಪದ ಹಾಗೂ ಅಪಾಯಕಾರಿ ಆರಂಭಿಕ ಜೋಡಿ ಎಂದರೆ ಇಂಗ್ಲೆಂಡ್‌ನ ಹಾಬ್ಸ್ ಮತ್ತು ಸಟ್ಕ್ಲಿಫ್. 1924ರಿಂದ 1930ರ ಅವಧಿಯಲ್ಲಿ, ಯಾವುದೇ ರಕ್ಷಣಾತ್ಮಕ ಕವರ್‌ಗಳಿಲ್ಲದ ಕಠಿಣ ಪಿಚ್‌ಗಳಲ್ಲಿ ಬ್ಯಾಟಿಂಗ್ ಮಾಡಿದ ಇವರು ಕೇವಲ 39 ಇನ್ನಿಂಗ್ಸ್‌ಗಳಲ್ಲಿ 87.86ರ ನಂಬಲಸಾಧ್ಯ ಸರಾಸರಿಯಲ್ಲಿ 3,339 ರನ್ ಗಳಿಸಿದರು! ಇವರು ಪ್ರತಿ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಶತಕದ ಪಾಲುದಾರಿಕೆ (ಒಟ್ಟು 15 ಶತಕ, 11 ಅರ್ಧಶತಕ) ನೀಡಿದ ದಾಖಲೆ ಹೊಂದಿದ್ದಾರೆ.