ಮಹಾರಾಷ್ಟ್ರದ 47 ವರ್ಷದ ರಮಾಬಾಯಿ ರಣವೀರ್, ಮಗಳ ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳಿಗಾಗಿ ಹಣ ಹೊಂದಿಸಲು ಸೀರೆಯುಟ್ಟು ಮ್ಯಾರಥಾನ್‌ನಲ್ಲಿ ಭಾಗವಹಿಸಿದರು. ಯಾವುದೇ ತರಬೇತಿಯಿಲ್ಲದೆ, ಕೇವಲ ಚಪ್ಪಲಿ ಧರಿಸಿ ಓಡಿದ ಅವರು, ಪ್ರಥಮ ಸ್ಥಾನ ಗಳಿಸಿ 3,000 ರೂ. ಬಹುಮಾನ ಗೆದ್ದರು. ಈ ಸ್ಪೂರ್ತಿದಾಯಕ ಕಥೆ ವೈರಲ್ ಆಗಿ, ಅವರಿಗೆ ದೇಶಾದ್ಯಂತ ನೆರವಿನ ಮಹಾಪೂರವೇ ಹರಿದುಬಂದಿದೆ.

ತಾಯಿಯ ಪ್ರೀತಿ ಮತ್ತು ದೃಢನಿಶ್ಚಯಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ ಎಂಬುದಕ್ಕೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯ 47 ವರ್ಷದ ರಮಾಬಾಯಿ ರಣವೀರ್ ಎಂಬ ಅಪರೂಪದ ತಾಯಿ ಸಾಕ್ಷಿಯಾಗಿದ್ದಾರೆ. ತಲೆಯ ಮೇಲೆ ಯಾವುದೇ ಕ್ರೀಡಾ ತರಬೇತಿಯಿರಲಿಲ್ಲ, ಕಾಲುಗಳಲ್ಲಿ ಕ್ರೀಡಾಪಟುಗಳು ಧರಿಸುವ ಶೂಗಳಿರಲಿಲ್ಲ. ಕೇವಲ ಒಂದು ಸರಳ ಸೀರೆ ಮತ್ತು ಸಾಧಾರಣ ಚಪ್ಪಲಿ ಧರಿಸಿ, ತಮ್ಮಿಬ್ಬರು ಹೆಣ್ಣುಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ರಮಾಬಾಯಿ ಅವರು ಬೀಡ್ ಮ್ಯಾರಥಾನ್‌ನಲ್ಲಿ ಓಡಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಮಗಳ ಅಸಮಾಧಾನ ಮತ್ತು ತಾಯಿಯ ನಿರಾಶೆ!

ರಮಾಬಾಯಿ ಅವರು ಮನೆಗೆಲಸ ಮಾಡಿ ತಿಂಗಳಿಗೆ ಕೇವಲ 9000 ರೂಪಾಯಿ ಸಂಪಾದಿಸುತ್ತಿದ್ದ ಬಡ ಕುಟುಂಬದ ಮಹಿಳೆ. ಅವರ ಕಿರಿಯ ಮಗಳು ಆರತಿ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, MPSC (ಸ್ಪರ್ಧಾತ್ಮಕ ಪರೀಕ್ಷೆ) ತಯಾರಿಗೆ ಬೇಕಾದ ಪುಸ್ತಕಗಳನ್ನು ಖರೀದಿಸಲು ಕಳೆದ ಎರಡು ವಾರಗಳಿಂದ ತಾಯಿಯನ್ನು ಕೇಳುತ್ತಿದ್ದಳು. ಆದರೆ ಆ ಪುಸ್ತಕಗಳ ಬೆಲೆ ೩,೨೦೦ ರೂಪಾಯಿಗಳಾಗಿತ್ತು. ಮನೆ ಖರ್ಚಿನ ನಡುವೆ ಈ ಹಣವನ್ನು ಹೊಂದಿಸಲು ರಮಾಬಾಯಿಯವರಿಂದ ಸಾಧ್ಯವಾಗಲಿಲ್ಲ. ಇದರಿಂದ ಬೇಸರಗೊಂಡ ಮಗಳು ಆರತಿ, ಎಂಟು ದಿನಗಳ ಕಾಲ ತಾಯಿಯೊಂದಿಗೆ ಮಾತನಾಡಲೇ ಇಲ್ಲ. ಇದರಿಂದ ರಮಾಬಾಯಿ ತೀವ್ರ ನಿರಾಶೆಗೊಂಡಿದ್ದರು.

3,000 ರೂಪಾಯಿ ಬಹುಮಾನಕ್ಕಾಗಿ ಮ್ಯಾರಥಾನ್ ಓಟ!

ಆಗ ರಮಾಬಾಯಿಗೆ ಭಾನುವಾರ ನಗರದಲ್ಲಿ ೩ ಕಿಲೋಮೀಟರ್ ಓಟದ ಸ್ಪರ್ಧೆ (ಮ್ಯಾರಥಾನ್) ನಡೆಯುತ್ತಿದೆ ಎಂಬ ವಿಷಯ ತಿಳಿಯಿತು. ಅದರಲ್ಲಿ ಪ್ರಥಮ ಸ್ಥಾನ ಪಡೆದರೆ 3,೦೦೦ ರೂಪಾಯಿ ಬಹುಮಾನ ಸಿಗುತ್ತದೆ ಎಂದು ಗೊತ್ತಾದ ತಕ್ಷಣ, ಮಗಳಿಗೆ ಪುಸ್ತಕ ಕೊಡಿಸುವ ಒಂದೇ ಒಂದು ಉದ್ದೇಶದಿಂದ ಅವರು ಸ್ಪರ್ಧೆಗೆ ನೋಂದಾಯಿಸಿಕೊಂಡರು. ಅನುಭವಸ್ಥ ಯುವ ಓಟಗಾರರ ನಡುವೆ ಸಾಧಾರಣ ಸೀರೆ ಮತ್ತು ಚಪ್ಪಲಿ ಧರಿಸಿ ನಿಂತ ರಮಾಬಾಯಿ, ಮಗಳ ಮುಖವನ್ನು ನೆನೆಸಿಕೊಂಡು ಸಾಧ್ಯವಾದಷ್ಟು ವೇಗವಾಗಿ ಓಡಿದರು. ಅವರ ಓಟದ ಹಿಂದೆ ಮಗಳ ಶಿಕ್ಷಣದ ಕನಸಿತ್ತು. ಅಂತಿಮವಾಗಿ ತಮ್ಮಲ್ಲಿದ್ದ ಎಲ್ಲಾ ಯುವ ಸ್ಪರ್ಧಿಗಳನ್ನು ಹಿಂದಿಕ್ಕಿ ರಮಾಬಾಯಿ ಪ್ರಥಮ ಸ್ಥಾನ ಗಳಿಸಿ ಸೈ ಎನಿಸಿಕೊಂಡರು!

ಹರಿದುಬಂದ ನೆರವಿನ ಹಸ್ತ!

ಈ ಕಥೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಟೀಮ್ ಇಂಡಿಯಾದ ಮಾಜಿ ತರಬೇತುದಾರ ರಾಹುಲ್ ದ್ರಾವಿಡ್ ಈ ಸುದ್ದಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ನಂತರ ರಮಾಬಾಯಿ ರಾತ್ರೋರಾತ್ರಿ ದೇಶಾದ್ಯಂತ ಪ್ರಸಿದ್ಧರಾದರು. ವರದಿ ವೈರಲ್ ಆದ ತಕ್ಷಣ ಬೀಡ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ರಮಾಬಾಯಿಗೆ 5೦,೦೦೦ ರೂಪಾಯಿಗಳ ಚೆಕ್ ನೀಡಿದರು. ಇನ್ನು ಕ್ರಿಕೆಟ್ ದೇವರುಸಚಿನ್ ತೆಂಡೂಲ್ಕರ್ ಅವರ ಸಂಸ್ಥೆಯು ರಮಾಬಾಯಿಯವರ ಶೂ ಸೈಜ್ ಕೇಳಿ, ಅವರಿಗೆ ಒಳ್ಳೆಯ ಶೂಗಳನ್ನು ಕಳುಹಿಸಿಕೊಡುವ ಇಚ್ಛೆ ವ್ಯಕ್ತಪಡಿಸಿತು. ಆರಂಭದಲ್ಲಿ ಬ್ಯಾಂಕ್ ಖಾತೆಯೂ ಇಲ್ಲದಿದ್ದ ರಮಾಬಾಯಿಗೆ ತಕ್ಷಣವೇ ಖಾತೆ ತೆರೆಯಲಾಯಿತು. ದೇಶದ ಮೂಲೆ ಮೂಲೆಗಳಿಂದ ಜನರು ಅವರ ಖಾತೆಗೆ ಹಣ ಕಳುಹಿಸಲು ಪ್ರಾರಂಭಿಸಿದರು. ಕೇವಲ ಒಂದು ವಾರದ ಅವಧಿಯಲ್ಲಿ ಅವರ ಖಾತೆಗೆ 1.5 ಲಕ್ಷ ರೂಪಾಯಿಗೂ ಹೆಚ್ಚು ನೆರವು ಜಮೆಯಾಗಿದೆ.