ಕೇಂದ್ರ ಸರ್ಕಾರಕ್ಕೆ ಮತ್ತೊಂದು ಪ್ರತಿಭಟನೆಯ ಎಚ್ಚರಿಕೆಯನ್ನ ಹೋರಾಟಗಾರ ಸೋನಮ್ ವಾಂಗ್ಚುಕ್ ಎಚ್ಚರಿಕೆ ನೀಡಿದ್ದಾರೆ. ಈ ಬಾರಿ ಯಾವ ವಿಚಾರದ ಬಗ್ಗೆ ವಾರ್ನಿಂಗ್ ನೀಡಿದ್ದಾರೆ ಅನ್ನೋದ್ರ ವಿವರ ಇಲ್ಲಿದೆ.
ನವದೆಹಲಿ: ಕೇಂದ್ರ ಸರ್ಕಾರವು ಲಡಾಖ್‌ನಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರ ಅಥವಾ ಮಂಡಳಿಯನ್ನು ಅಸ್ತಿತ್ವಕ್ಕೆ ತರುವ ಮುನ್ನ ಯಾವುದೇ ಮಹತ್ವದ ನಿರ್ಧಾರಗಳನ್ನು ಕೈಗೊಂಡರೆ ಮತ್ತೆ ಬೀದಿಗಿಳಿದು ಬೃಹತ್ ಆಂದೋಲನ ಆರಂಭಿಸಬೇಕಾಗುತ್ತದೆ ಎಂದು ಖ್ಯಾತ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವಾಲಯದ ಉನ್ನತ ಮಟ್ಟದ ಉಪ ಸಮಿತಿ ಜೊತೆ ಲಡಾಖ್ ಮುಖಂಡರ ಸಭೆ ನಡೆದ ಬಳಿಕ ಮಾತನಾಡಿದ ಅವರು.. ಈ ಸಭೆಯ ಫಲಿತಾಂಶ ತಮಗೆ ತೀವ್ರ ನಿರಾಶೆ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದು ಒಂದು ಜೋಕ್ ಎಂದ ವಾಂಗ್ಚುಕ್
ಲಡಾಖ್‌ನ ಲೇಹ್ ಅಪೆಕ್ಸ್ ಬಾಡಿ (LAB) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ (KDA) ಒಕ್ಕೂಟದ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು. ಲಡಾಖ್‌ಗೆ ಚುನಾಯಿತ ಕೇಂದ್ರಾಡಳಿತ ಪ್ರದೇಶದ (UT) ಮಂಡಳಿ, ಅದರ ಅಧಿಕಾರ ವ್ಯಾಪ್ತಿ ಹಾಗೂ ಚೌಕಟ್ಟನ್ನು ಒಳಗೊಂಡ ಅಧಿಕೃತ ಕರಡು ಪ್ರತಿಯನ್ನು ಗೃಹ ಸಚಿವಾಲಯ ಸಭೆಯಲ್ಲಿ ನೀಡಲಿದೆ ಎಂಬ ಭಾರೀ ನಿರೀಕ್ಷೆಯೊಂದಿಗೆ ನಿಯೋಗ ದೆಹಲಿಗೆ ಬಂದಿತ್ತು.
ಕಳೆದ ಮೇ ತಿಂಗಳಲ್ಲಿ ಸಭೆ ನಡೆದು ನಾಲ್ಕು ತಿಂಗಳು ಕಳೆದಿದೆ. ಗೃಹ ಸಚಿವಾಲಯಕ್ಕೆ ಕೆಲಸ ಮಾಡಲು ಸಾಕಷ್ಟು ಸಮಯವಿತ್ತು. ಆದರೆ ಇಂದು ಸಭೆಯಲ್ಲಿ ಯಾವುದೇ ಕರಡು ನೀಡಿಲ್ಲ. ಬದಲಾಗಿ ಮುಂದಿನ ಸಭೆಯಲ್ಲಿ ಚರ್ಚಿಸಬೇಕಾದ ಪ್ರಶ್ನೆಗಳ ಪಟ್ಟಿಯನ್ನು ನಮ್ಮ ಕೈಗಿಟ್ಟಿದ್ದಾರೆ. ಇದು ನೋಡಿದರೆ ಒಂದು ರೀತಿಯ ಜೋಕ್‌ನಂತೆ ಕಾಣುತ್ತದೆ. ಮೇ 22ರ ಸಭೆಯಲ್ಲಿ ಆದ ತೀರ್ಮಾನಗಳನ್ನೇ ಮತ್ತೆ ಪುನರಾವರ್ತಿಸಲಾಗಿದೆಯೇ ಹೊರತು ಯಾವುದೇ ಹೊಸ ಪ್ರಗತಿಯಾಗಿಲ್ಲ ಎಂದು ವಾಂಗ್ಚುಕ್ ಬೇಸರ ವ್ಯಕ್ತಪಡಿಸಿದ್ದಾರೆ.
ಲಡಾಖ್ ಮುಖಂಡರ ಪ್ರಮುಖ ಬೇಡಿಕೆಗಳೇನು?
ಲಡಾಖ್‌ಗೆ ಶಾಸನಸಭೆ, ಸ್ವತಂತ್ರ ಕ್ಷೇತ್ರ ಮರುವಿಂಗಡಣೆ ಮತ್ತು ನೇರ ಚುನಾವಣೆಗಳು ಶೀಘ್ರವೇ ನಡೆಯಬೇಕು. ಸಂಸತ್ತಿನ ಮುಂಬರುವ ಚಳಿಗಾಲದ ಅಧಿವೇಶನದಲ್ಲೇ ಇದಕ್ಕೆ ಪೂರಕವಾದ ಮಸೂದೆ ಮಂಡಿಸಬೇಕು. ಲಡಾಖ್‌ನ ಸ್ಥಳೀಯ ಭೂಮಿ, ಗಣಿಗಾರಿಕೆ, ಸಂಸ್ಕೃತಿ, ಉದ್ಯೋಗ ಮತ್ತು ಪ್ರಾದೇಶಿಕ ಭಾಷೆಗಳಿಗೆ ಸೂಕ್ತ ಸಾಂವಿಧಾನಿಕ ಭದ್ರತೆ ನೀಡಬೇಕು. ಚುನಾಯಿತ ಮಂಡಳಿ ಅಸ್ತಿತ್ವಕ್ಕೆ ಬರುವವರೆಗೂ ಲಡಾಖ್‌ನ ಭೂಮಿ ಹಂಚಿಕೆ ಅಥವಾ ಆಡಳಿತ ವ್ಯವಸ್ಥೆಯನ್ನು ಶಾಶ್ವತವಾಗಿ ಬದಲಾಯಿಸುವ ಯಾವುದೇ ನಿರ್ಧಾರಗಳನ್ನು ಕೇಂದ್ರ ಕೈಗೊಳ್ಳಬಾರದು ಎಂದು ನಿಯೋಗ ಲಿಖಿತವಾಗಿ ತಿಳಿಸಿದೆ. ಲಡಾಖ್ ಗಲಭೆಗೆ ಸಂಬಂಧಿಸಿದಂತೆ ಹೋರಾಟಗಾರರ ಮೇಲಿರುವ ಪ್ರಕರಣಗಳನ್ನು ಹಂತ-ಹಂತವಾಗಿ ಹಿಂಪಡೆಯುವ ಕೇಂದ್ರದ ಪ್ರಸ್ತಾಪವನ್ನು ನಿಯೋಗ ತಿರಸ್ಕರಿಸಿದ್ದು, ಎಲ್ಲಾ ಕೇಸ್‌ಗಳನ್ನು ಏಕಕಾಲಕ್ಕೆ ವಾಪಸ್ ಪಡೆಯಬೇಕು ಎಂದು ಪಟ್ಟು ಹಿಡಿದಿದೆ.
ಸಂತ್ರಸ್ತರಿಗೆ ಪರಿಹಾರ ನೀಡಲು ಕೇಂದ್ರ ಸಮ್ಮತಿ
ಕಳೆದ ವರ್ಷ ಸೆಪ್ಟೆಂಬರ್ 24ರಂದು ಲೇಹ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಗಾಯಗೊಂಡವರಿಗೆ ಮತ್ತು ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಈ ಬಗ್ಗೆ ಶೀಘ್ರವೇ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ ಎಂದು ವಾಂಗ್ಚುಕ್ ಹೇಳಿದ್ದಾರೆ.
ಮುಖ್ಯ ಕಾರ್ಯದರ್ಶಿ ಹೇಳಿದ್ದೇನು?
ವಾಂಗ್ಚುಕ್ ಅವರ ಅಸಮಾಧಾನದ ನಡುವೆಯೂ, ಲಡಾಖ್ ಮುಖ್ಯ ಕಾರ್ಯದರ್ಶಿ ಆಶಿಶ್ ಕುಂದ್ರಾ ಅವರು ಸಭೆಯನ್ನು ಸಕಾರಾತ್ಮಕವಾಗಿ ನೋಡಿದ್ದಾರೆ. ಸಂವಿಧಾನದ 371ನೇ ವಿಧಿಯ ಅಡಿಯಲ್ಲಿ ಲಡಾಖ್‌ಗೆ ವಿಶೇಷ ಆಡಳಿತ ಮಾದರಿಯನ್ನು ರೂಪಿಸುವ ನಿಟ್ಟಿನಲ್ಲಿ ಸಭೆಯಲ್ಲಿ ಸಕಾರಾತ್ಮಕ ವಾತಾವರಣದಲ್ಲಿ ಚರ್ಚೆ ನಡೆದಿದೆ. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವುದೇ ನಮ್ಮ ಗುರಿ ಎಂದು ಅವರು Xನಲ್ಲಿ ಬರೆದುಕೊಂಡಿದ್ದಾರೆ.
ಕೇಂದ್ರದ ಜೊತೆಗಿನ ಮುಂದಿನ ಸುತ್ತಿನ ಮಾತುಕತೆ ಅಕ್ಟೋಬರ್ ಮೊದಲ ವಾರದಲ್ಲಿ ಕಾರ್ಗಿಲ್‌ನಲ್ಲಿ ನಡೆಯುವ ನಿರೀಕ್ಷೆಯಿದೆ. ಪ್ರಜಾಸತ್ತಾತ್ಮಕ ಮಂಡಳಿ ರಚನೆಯಾಗುವ ಮುನ್ನ ಕೇಂದ್ರವೇನಾದರೂ ಅತಿರೇಕದ ನಿರ್ಧಾರಗಳನ್ನು ಕೈಗೊಂಡರೆ ಲಡಾಖ್‌ನಲ್ಲಿ ಮತ್ತೆ ಬೃಹತ್ ಪ್ರತಿಭಟನೆ ಭುಗಿಲೇಳುವುದು ಖಚಿತ ಎಂಬ ಸಂದೇಶ ರವಾನಿಸಿದ್ದಾರೆ.


