ಆಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿ ಆರಂಭಕ್ಕೂ ಮುನ್ನ, ಸ್ನಾಯು ಸೆಳೆತದ ಕಾರಣದಿಂದಾಗಿ ಟೀಂ ಇಂಡಿಯಾದ ಪ್ರಮುಖ ವೇಗಿ ಹರ್ಷಿತ್ ರಾಣಾ ತಂಡದಿಂದ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ವಿದರ್ಭ ಮೂಲದ ಯುವ ವೇಗಿ ಯಶ್ ಠಾಕೂರ್ ಅವರನ್ನು ಬಿಸಿಸಿಐ ಬದಲಿ ಆಟಗಾರನಾಗಿ ಆಯ್ಕೆ ಮಾಡಿದೆ. ಇದೇ ವೇಳೆ, ವಾಷಿಂಗ್ಟನ್ ಸುಂದರ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಫಿಟ್ನೆಸ್ ಟೆಸ್ಟ್ ಪಾಸ್ ಮಾಡಿದ್ದಾರೆ.

ಬೆಂಗಳೂರು: ಸೆಪ್ಟೆಂಬರ್ 13ರಿಂದ ಆರಂಭವಾಗಲಿರುವ ಆಫ್ಘಾನಿಸ್ತಾನ ಎದುರಿನ ಮೂರು ಪಂದ್ಯಗಳ ಟಿ20 ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ ಬಿಗ್ ಶಾಕ್ ಎದುರಾಗಿದ್ದು, ತಂಡದ ಪ್ರಮುಖ ವೇಗಿ ಹರ್ಷಿತ್ ರಾಣಾ ಹೊರಬಿದ್ದಿದ್ದಾರೆ. ಜುಲೈ 07, 2026ರಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾ ಪರ ಕಣಕ್ಕಿಳಿದಿದ್ದ ಹರ್ಷಿತ್ ರಾಣಾ, ಸದ್ಯ ಸ್ನಾಯು ಸೆಳೆತದಿಂದ ಬಳಲುತ್ತಿದ್ದಾರೆ. ಆಫ್ಘಾನಿಸ್ತಾನ ಎದುರಿನ ಟಿ20 ಸರಣಿಗೂ ಮುನ್ನ ಫಿಟ್ನೆಸ್ ಸಾಬೀತುಪಡಿಸದ ಹಿನ್ನೆಲೆಯಲ್ಲಿ, ತಂಡದಿಂದ ಹೊರಬಿದ್ದಿದ್ದಾರೆ.

'ಹರ್ಷಿತ್ ರಾಣಾ, ಇನ್ನೂ ಸಂಪೂರ್ಣವಾಗಿ ಸ್ನಾಯು ಸೆಳೆತದಿಂದ ಚೇತರಿಸಿಕೊಂಡಿಲ್ಲ. ಅವರು ಸಂಪೂರ್ಣವಾಗಿ ಈ ಗಾಯದ ಸಮಸ್ಯೆಯಿಂದ ಗುಣಮುಖರಾಗಲು ಇನ್ನಷ್ಟು ಸಮಯ ಕಾಯಬೇಕಿದೆ' ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ಪಿಟಿಐ ವರದಿಯಾಗಿದೆ. ಇದೇ ಸೆಪ್ಟೆಂಬರ್ 01ರಂದು ಆಫ್ಘಾನಿಸ್ತಾನ ಎದುರಿನ ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿತ್ತು. ಈ ವೇಳೆ ಹರ್ಷಿತ್ ರಾಣಾಗೂ ಅವಕಾಶ ಕಲ್ಪಿಸಿತ್ತಾದರೂ, ಟಿ20 ಸರಣಿಗೂ ಮುನ್ನ ಅವರು ಫಿಟ್ನೆಸ್ ಟೆಸ್ಟ್ ಪಾಸ್ ಮಾಡಬೇಕು ಎಂದು ಸೂಚಿಸಿತ್ತು. ಆಫ್ಘಾನಿಸ್ತಾನ ಎದುರಿನ ಟಿ20 ಸರಣಿ ಮಾತ್ರವಲ್ಲದೇ ಸೆಪ್ಟೆಂಬರ್ 28ರಿಂದ ಆರಂಭವಾಗಲಿರುವ ಏಷ್ಯನ್ ಗೇಮ್ಸ್ ಟೂರ್ನಿಗೂ ಹರ್ಷಿತ್ ರಾಣಾ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ರಾಣಾ, ಏಷ್ಯನ್ ಗೇಮ್ಸ್‌ಗೂ ಮೊದಲು ಫಿಟ್ನೆಸ್‌ ಟೆಸ್ಟ್ ಕ್ಲಿಯರ್ ಮಾಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

ಬದಲಿ ಆಟಗಾರನಾಗಿ ಯಶ್ ಠಾಕೂರ್‌ಗೆ ಸ್ಥಾನ:

ಇನ್ನು ಆಫ್ಘಾನಿಸ್ತಾನ ಎದುರಿನ ಟಿ20 ಸರಣಿಯಿಂದ ಹರ್ಷಿತ್ ರಾಣಾ ಹೊರಬೀಳುತ್ತಿದ್ದಂತೆಯೇ ಅವರ ಸ್ಥಾನಕ್ಕೆ ಬದಲಿ ಆಟಗಾರನ ಹೆಸರನ್ನು ಬಿಸಿಸಿಐ ಘೋಷಿಸಿದೆ. ಹರ್ಷಿತ್ ರಾಣಾ ಅವರ ಬದಲಿಗೆ ವಿದರ್ಭ ಮೂಲದ 27 ವರ್ಷದ ಯುವ ವೇಗಿ ಯಶ್ ಠಾಕೂರ್ ಅವರನ್ನು ಬಿಸಿಸಿಐ ಬದಲಿ ಆಟಗಾರನಾಗಿ ಭಾರತ ತಂಡಕ್ಕೆ ಸೇರಿಸಿಕೊಂಡಿದೆ. ಯಶ್ ಠಾಕೂರ್, ಇತ್ತೀಚೆಗಷ್ಟೇ, ಜಿಂಬಾಬ್ವೆ ಎದುರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಜಿಂಬಾಬ್ವೆ ಎದುರು ಎರಡು ಪಂದ್ಯಗಳನ್ನಾಡಿದ್ದ ಯಶ್ ಠಾಕೂರ್ 4 ವಿಕೆಟ್ ಕಬಳಿಸಿ ಮಿಂಚಿದ್ದರು. ಇನ್ನು ಯಶ್ ಠಾಕೂರ್ ಇದುವರೆಗೂ 50 ಸಯ್ಯದ್ ಮುಷ್ತಾಕ್ ಅಲಿ ಟಿ20 ಪಂದ್ಯಗಳನ್ನಾಡಿದ್ದು, 81 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದಾರೆ.

ಫಿಟ್ನೆಸ್‌ ಟೆಸ್ಟ್ ಕ್ಲಿಯರ್ ಮಾಡಿದ ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್:

ಇನ್ನು ಸ್ನಾಯು ಸೆಳೆತದಿಂದ ಬಳಲುತ್ತಿದ್ದ ಸ್ಪಿನ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಹಾಗೂ ವೇಗದ ಬೌಲಿಂಗ್ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಇಬ್ಬರೂ ಕೂಡಾ ಇದೀಗ ಫಿಟ್ನೆಸ್ ಟೆಸ್ಟ್ ಪಾಸ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಇಬ್ಬರೂ ಕೂಡಾ ಆಫ್ಘಾನಿಸ್ತಾನ ಎದುರಿನ ಟಿ20 ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಅವರಿಗೂ ಸಹ ಬಿಸಿಸಿಐ ಫಿಟ್ನೆಸ್ ಟೆಸ್ಟ್‌ ಪಾಸ್ ಮಾಡಲು ಸೂಚಿಸಿತ್ತು.

ಆಫ್ಘಾನಿಸ್ತಾನ ಎದುರಿನ ಸರಣಿಗೆ ಭಾರತ ತಂಡ ಹೀಗಿದೆ:

ಶ್ರೇಯಸ್ ಅಯ್ಯರ್(ನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಇಶಾನ್ ಕಿಶನ್(ವಿಕೆಟ್ ಕೀಪರ್), ತಿಲಕ್ ವರ್ಮಾ(ಉಪನಾಯಕ), ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯಿ, ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ಯಶ್ ಠಾಕೂರ್.