ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಹ ಮಾಲೀಕರಾಗಲು ಎಂ.ಎಸ್. ಧೋನಿ ಬಯಸಿದ್ದು, ಷೇರುಗಳ ವಿಚಾರವಾಗಿ ಫ್ರಾಂಚೈಸಿ ಜೊತೆ ತಿಕ್ಕಾಟ ನಡೆದಿದೆ ಎಂದು ವರದಿಯಾಗಿದೆ. ನಿವೃತ್ತಿ ನಂತರ ಹೆಚ್ಚಿನ ಷೇರು ನೀಡುವುದಾಗಿ ಸಿಎಸ್‌ಕೆ ಮಾತು ತಪ್ಪಿತೇ ಮತ್ತು ಇದು ಧೋನಿಯ ಮುಂದಿನ ಆಟದ ಮೇಲೆ ಪರಿಣಾಮ ಬೀರುವುದೇ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾದಾಗಿನಿಂದ ಹಿಡಿದು ಇಲ್ಲಿಯವರೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಐಕಾನ್ ಆಗಿ ಬೆಳೆದು ನಿಂತಿರುವ ಮಹೇಂದ್ರ ಸಿಂಗ್ ಧೋನಿ, ಸಿಎಸ್‌ಕೆ ಫ್ರಾಂಚೈಸಿಯ ಸಹ ಮಾಲೀಕರಾಗಲು ಒಲವು ತೋರಿರುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಹೀಗಿರುವಾಗಲೇ ಧೋನಿಗೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮೋಸ ಮಾಡಿತಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.

ವಿಕೆಟ್ ಕೀಪರ್ ಬ್ಯಾಟರ್, ಕ್ಯಾಪ್ಟನ್ ಕೂಲ್ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದು ಬೀಗಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಮುಂಬೈ ಜತೆ ಜಂಟಿ ಅತಿಹೆಚ್ಚು ಐಪಿಎಲ್ ಟ್ರೋಫಿ ಗೆದ್ದ ತಂಡ ಎನ್ನುವ ಖ್ಯಾತಿಗೆ ಚೆನ್ನೈ ಸೂಪರ್ ಕಿಂಗ್ಸ್ ಪಾತ್ರವಾಗಿದೆ. ಐಪಿಎಲ್‌ ನಿವೃತ್ತಿಯ ಹೊಸ್ತಿಲಲ್ಲಿರುವ ಧೋನಿಯನ್ನು ಕ್ರಿಕೆಟ್ ಮೈದಾನದಲ್ಲಿ ಕಣ್ತುಂಬಿಕೊಳ್ಳಲು ಈಗಲೂ ಸಿಎಸ್‌ಕೆ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿರುವಾಗಲೇ, ಇದೀಗ ಸಿಎಸ್‌ಕೆ ಫ್ರಾಂಚೈಸಿ ಹಾಗೂ ಧೋನಿ ನಡುವೆ ಷೇರಿನ ವಿಚಾರದಲ್ಲಿ ತಿಕ್ಕಾಟ ಶುರುವಾಗಿದೆ ಎಂದು ವರದಿಯಾಗಿದೆ.

ಏನಿದು ಧೋನಿ-ಸಿಎಸ್‌ಕೆ ನಡುವಿನ ತಿಕ್ಕಾಟ

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಅವಿಭಾಜ್ಯ ಅಂಗವೆನಿಸಿರುವ ಎಂ.ಎಸ್‌.ಧೋನಿ, ಫ್ರಾಂಚೈಸಿಯ ಸಹ ಮಾಲಿಕನಾಗಲು ಇಚ್ಛಿಸಿದ್ದು, ತಂಡದಲ್ಲಿ ಶೇ.25ರಷ್ಟು ಪಾಲು ಕೇಳಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಧೋನಿಯ ಪ್ರಸ್ತಾಪಕ್ಕೆ ಒಪ್ಪದ ಸಿಎಸ್‌ಕೆ, ಆರಂಭದಲ್ಲಿ ಶೇ.3ರಷ್ಟು ಪಾಲು ನೀಡುವುದಾಗಿ ತಿಳಿಸಿತು ಎನ್ನಲಾಗಿದೆ. ಬಹಳಷ್ಟು ಮಾತುಕತೆ ಬಳಿಕ ಧೋನಿ ಶೇ.18ರಷ್ಟು ಪಾಲು ನೀಡಿ ಎಂದು ಸಿಎಸ್‌ಕೆ ಮಾಲಿಕರಾದ ಇಂಡಿಯಾ ಸಿಮೆಂಟ್ಸ್‌ ಸಂಸ್ಥೆಯನ್ನು ಕೇಳಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಇದಕ್ಕೆ ಒಪ್ಪದ ಮಾಲಿಕರು, ಗರಿಷ್ಠ ಶೇ.5ರಷ್ಟು ಪಾಲು ಕೊಡಲು ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ. ಧೋನಿ ಹಾಗೂ ಸಿಎಸ್‌ಕೆ ನಡುವಿನ ಮಾತುಕತೆ ಫಲ ನೀಡಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ನಂಬಿಸಿ ಧೋನಿಗೆ ಮೋಸ ಮಾಡಿತಾ ಸಿಎಸ್‌ಕೆ ಫ್ರಾಂಚೈಸಿ:

ನೆಟ್ಟಿಗರೊಬ್ಬರ ಸೋಷಿಯಲ್ ಮೀಡಿಯಾ ಪೋಸ್ಟ್ ಪ್ರಕಾರ, ಮಹೇಂದ್ರ ಸಿಂಗ್ ಧೋನಿ 2023ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಐದನೇ ಬಾರಿಗೆ ಐಪಿಎಲ್ ಟ್ರೋಫಿ ಗೆಲ್ಲುತ್ತಿದ್ದಂತೆಯೇ, ಐಪಿಎಲ್‌ಗೆ ವಿದಾಯ ಹೇಳಲು ತೀರ್ಮಾನಿಸಿದ್ದರಂತೆ. ಆದರೆ ಸಿಎಸ್‌ಕೆ ಮ್ಯಾನೇಜ್‌ಮೆಂಟ್, ಮಾರ್ಕೆಟಿಂಗ್ ಟೀಮ್ ಹಾಗೂ ಮೀಡಿಯಾ ಟೀಮ್‌, ಧೋನಿಗೆ ಇನ್ನೂ 2-3 ವರ್ಷ ಐಪಿಎಲ್ ಆಡಲು ಒತ್ತಡ ಹೇರಿದರಂತೆ. ಒಂದು ವೇಳೆ ಇನ್ನೂ ಎರಡು ಮೂರು ವರ್ಷ ಸಿಎಸ್‌ಕೆ ಪರ ಐಪಿಎಲ್ ಆಡಿದರೇ, ನಿವೃತ್ತಿ ಬಳಿಕ ನಿಮಗೆ ಸಿಎಸ್‌ಕೆ ತಂಡದ 30-35 ಸ್ಟೇಕ್ಸ್‌(ಷೇರು)ಗಳನ್ನು ನೀಡುವುದಾಗಿ ಮಾತು ಕೊಟ್ಟಿತ್ತಂತೆ. ಆದರೆ ಈ ಸಂಬಂಧ ಯಾವುದೇ ಅಧಿಕೃತ ಒಪ್ಪಂದವಾಗಿರಲಿಲ್ಲವಂತೆ. ಇದೀಗ ಧೋನಿ ಸಿಎಸ್‌ಕೆ ಪರ ಕಳೆದು ಮೂರು ವರ್ಷ ಐಪಿಎಲ್ ಆಡಿದ ಬಳಿಕವೂ ಧೋನಿ ಬಯಸಿದಷ್ಟು ಸ್ಟೇಕ್ ನೀಡಲು ಸಿಎಸ್‌ಕೆ ಫ್ರಾಂಚೈಸಿ ಒಪ್ಪುತ್ತಿಲ್ಲ ಎನ್ನಲಾಗಿದ್ದು, ಐದು ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕನಿಗೆ ಚೆನ್ನೈ ಫ್ರಾಂಚೈಸಿ ಮೋಸ ಮಾಡಿತಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.

2027ರ ಐಪಿಎಲ್ ಆಡ್ತಾರಾ ಎಂ ಎಸ್ ಧೋನಿ?

ಅಂದಹಾಗೆ ಮಹೇಂದ್ರ ಸಿಂಗ್ ಧೋನಿ 2020ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರೂ, ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಮೈದಾನಕ್ಕಿಳಿಯುತ್ತಲೇ ಬಂದಿದ್ದಾರೆ. ಸಿಎಸ್‌ಕೆ ಫ್ರಾಂಚೈಸಿಯು ಧೋನಿಯನ್ನು 2025ರ ಐಪಿಎಲ್ ಹರಾಜಿಗೂ ಮುನ್ನ 4 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿದೆ. ಆದರೆ ಇತ್ತೀಚಿಗಿನ ಬೆಳವಣಿಗೆಯನ್ನು ಗಮನಿಸಿದಾಗ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಧೋನಿ ಸಿಎಸ್‌ಕೆ ಪರ ಕಣಕ್ಕಿಳಿಯುತ್ತಾರಾ ಎನ್ನುವ ಪ್ರಶ್ನೆ ಇದೀಗ ಕಾಡಲಾರಂಭಿಸಿದೆ.