ಆ ಯುವ ಆಲ್‌ರೌಂಡರ್ ಗಾಯದಿಂದ ಚೇತರಿಸಿಕೊಂಡು ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಅವರು ಭಾರತೀಯ ತಂಡವನ್ನು ಸೇರಿಕೊಳ್ಳಲಿದ್ದು, ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ತಂಡಕ್ಕೆ ಹೆಚ್ಚಿನ ಬಲ ನೀಡಲಿದ್ದಾರೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ನವದೆಹಲಿಯಲ್ಲಿ ನಡೆಯಲಿರುವ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಅಂತರರಾಷ್ಟ್ರೀಯ ಸರಣಿಗೂ ಮುನ್ನ ಭಾರತೀಯ ಕ್ರಿಕೆಟ್‌ ತಂಡಕ್ಕೆ ದೊಡ್ದ ಸಿಹಿ ಸುದ್ದಿ ಸಿಕ್ಕಿದೆ. ಯುವ ಹಾಗೂ ಧಾಕಡ್ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಫಿಟ್‌ನೆಸ್ ಪರೀಕ್ಷೆಯಲ್ಲಿ ಸಂಪೂರ್ಣ ಉತ್ತೀರ್ಣರಾಗಿದ್ದು, ಬಿಸಿಸಿಐ (BCCI) ವೈದ್ಯಕೀಯ ತಂಡದಿಂದ ಹಸಿರು ನಿಶಾನೆ ಪಡೆದುಕೊಂಡಿದ್ದಾರೆ. ಗುರುವಾರ ದೆಹಲಿಯಲ್ಲಿ ರಾಷ್ಟ್ರೀಯ ತಂಡವನ್ನು ಸೇರಿಕೊಳ್ಳಲಿದ್ದು, ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಗಾಯದ ಸಮಸ್ಯೆ ಮತ್ತು ಸುದೀರ್ಘ ಚೇತರಿಕೆ!

23 ವರ್ಷದ ನಿತೀಶ್ ಅವರು ಜೂನ್ ೨೦೨೬ ರಲ್ಲಿ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯ ವೇಳೆ ಗಾಯಗೊಂಡಿದ್ದರು. ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಮತ್ತೆ ಅಸ್ವಸ್ಥತೆ ಅನುಭವಿಸಿದ ಕಾರಣ, ಅವರಿಗೆ ಸುದೀರ್ಘ ವಿಶ್ರಾಂತಿ ಹಾಗೂ ಪುನರ್ವಸತಿಯ (Rehab) ಅಗತ್ಯವಿತ್ತು. ಈ ಗಾಯದ ಸಮಸ್ಯೆಯಿಂದಾಗಿ ಅವರು ಇಂಗ್ಲೆಂಡ್, ಐರ್ಲೆಂಡ್, ಜಿಂಬಾಬ್ವೆ ಸರಣಿ ಹಾಗೂ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿಯಬೇಕಾಯಿತು.

ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಗ್ರೀನ್ ಸಿಗ್ನಲ್!

ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ (CoE) ತಜ್ಞರು ನಿತೀಶ್ ಅವರ ಚೇತರಿಕೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದರು. ಬುಧವಾರ ನಡೆದ ಅಂತಿಮ ಪಂದ್ಯದ ಸಿಮ್ಯುಲೇಶನ್ ಟೆಸ್ಟ್‌ನಲ್ಲಿ (Match Simulation) ನಿತೀಶ್ ಬೌಲಿಂಗ್ ಹಾಗೂ ಬ್ಯಾಟಿಂಗ್‌ ಎರಡರಲ್ಲೂ ನಿಗದಿತ ನಿಯತಾಂಕಗಳನ್ನು ಯಶಸ್ವಿಯಾಗಿ ತಲುಪಿ ಫಿಟ್ ಎಂದು ಸಾಬೀತುಪಡಿಸಿದ್ದಾರೆ. ಈಗ ಅವರು ದೀರ್ಘ ಸ್ಪೆಲ್‌ಗಳನ್ನು ಬೌಲ್ ಮಾಡಲು ಸಂಪೂರ್ಣ ಅರ್ಹರಾಗಿದ್ದಾರೆ.

ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಭಾರಿ ನೆರವು!

ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ನಿತೀಶ್ ಕುಮಾರ್ ರೆಡ್ಡಿ ಅವರ ಎಂಟ್ರಿ ಭಾರತೀಯ ತಂಡಕ್ಕೆ ಭಾರಿ ಆನೆಬಲ ತಂದಿದೆ. ಕೆಳಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಹಾಗೂ ಶಿಸ್ತುಬದ್ಧ ಮಧ್ಯಮ ವೇಗದ ಬೌಲಿಂಗ್ ಮಾಡುವ ಸಾಮರ್ಥ್ಯ ಇವರಿಗಿದೆ. ಪ್ಲೇಯಿಂಗ್‌ ೧೧ ನಲ್ಲಿ ಸ್ಥಾನಕ್ಕಾಗಿ ಇವರು ಶಿವಂ ದುಬೆ ಅವರೊಂದಿಗೆ ಸ್ಪರ್ಧಿಸಲಿದ್ದರೂ, ಇವರ ಬೌಲಿಂಗ್ ಕೌಶಲ್ಯ ತಂಡಕ್ಕೆ ಹೆಚ್ಚಿನ ಸಮತೋಲನ ನೀಡುತ್ತದೆ.

ಏಷ್ಯನ್ ಗೇಮ್ಸ್ 2026 ಕ್ಕೆ ಪ್ರಮುಖ ಹೆಜ್ಜೆ!

ಅಕ್ಟೋಬರ್ 2024 ರಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ನಿತೀಶ್, ಈಗಾಗಲೇ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಸೆಪ್ಟೆಂಬರ್ 22 ರಿಂದ ಆರಂಭವಾಗಲಿರುವ 2026ರ ಏಷ್ಯನ್ ಕ್ರೀಡಾಕೂಟಕ್ಕೂ ನಿತೀಶ್ ಆಯ್ಕೆಯಾಗಿದ್ದು, ಅಫ್ಘಾನಿಸ್ತಾನ ವಿರುದ್ಧದ ಈ ಟಿ೨೦ ಸರಣಿಯು ಅವರಿಗೆ ಉತ್ತಮ ಅಭ್ಯಾಸ ಹಾಗೂ ಆತ್ಮವಿಶ್ವಾಸ ನೀಡಲಿದೆ.

ಬಲಶಾಲಿಯಾದ ಶ್ರೇಯಸ್ ಅಯ್ಯರ್ ಬಳಗ!

ಅಫ್ಘಾನಿಸ್ತಾನ ವಿರುದ್ಧದ ಸರಣಿಗೆ ಶ್ರೇಯಸ್ ಅಯ್ಯರ್ ನಾಯಕನಾಗಿದ್ದು, ತಿಲಕ್ ವರ್ಮಾ ಉಪನಾಯಕನಾಗಿದ್ದಾರೆ. ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ ಅವರಂತಹ ಯುವ ಪಡೆ ಹಾಗೂ ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಅಕ್ಷರ್ ಪಟೇಲ್ ಅವರಂತಹ ಅನುಭವಿಗಳ ಬಲ ತಂಡಕ್ಕಿದೆ. ನಿತೀಶ್ ಕುಮಾರ್ ರೆಡ್ಡಿ ಅವರ ಮರಳುವಿಕೆಯು ತಂಡದ ಸಂಯೋಜನೆಯನ್ನು ಮತ್ತಷ್ಟು ದೃಢಗೊಳಿಸಿದೆ.